50 ಲಕ್ಷ ಹೊಸ ಮತದಾರರ ಜೊತೆ ಪ್ರಧಾನಿ ಮೋದಿ ಸಂವಾದ

3 years ago

PM Modi interacts with 50 lakh new voters

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಬೇಕೆಂದು ಪಣತೊಟ್ಟಿರುವ
ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಯುವ ಮತದಾರರನ್ನು ತಮ್ಮತ್ತ ಸೆಳೆಯಲು ಪ್ರಯತ್ನ ನಡೆಸಿದ್ದಾರೆ.
ಹೊಸದಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುವ ಜನರೊಂದಿಗೆ ಸಂವಾದ ನಡೆಸಲು ತೀರ್ಮಾನಿಸಿರುವ ಪ್ರಧಾನಿ ಮೋದಿ ಅವರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ರಾಜ್ಯದ 50 ಲಕ್ಷ ಮತದಾರರೊಂದಿಗೆ ಗುರುವಾರ ಬೆಳಿಗ್ಗೆ 9.30ಕ್ಕೆ ವರ್ಚುವಲ್ ಆಗಿ ಸಂವಾದ ನಡೆಸಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ನಮ್ಮ ರಾಜ್ಯದ 50 ಲಕ್ಷ ಬೂತ್ ಕಾರ್ಯಕರ್ತರ ಜತೆ ಸಂವಾದ ನಡೆಸಲಿದ್ದಾರೆ. ಡಿಜಿಟಲ್ ಮೂಲಕ 58,112 ಬೂತ್‍ಗಳಲ್ಲಿ 1680 ಜಿ.ಪಂ. ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. 650 ಎಲ್ಇಡಿ ಪರದೆಗಳ ಅಳವಡಿಕೆ ಮಾಡಲಾಗುತ್ತದೆ. 24 ಲಕ್ಷ ಕಾರ್ಯಕರ್ತರಿಗೆ ಮೋದಿ ಆಪ್‍ನ ಲಿಂಕ್ ಕಳುಹಿಸಿಲಾಗುತ್ತದೆ. ಈ ಆಪ್ ಮೂಲಕವೂ ಮೋದಿಯವರ ಸಂವಾದ ವೀಕ್ಷಣೆ ಮಾಡಲಿದ್ದಾರೆ.

ಬೂತ್‍ಗಳಲ್ಲಿ ಟಿವಿಗಳು ಹಾಗೂ ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಸಲಾಗುವುದು. ಈ ಸಂವಾದಕ್ಕಾಗಿ ಈಗಾಗಲೇ 24 ಲಕ್ಷ ಕಾರ್ಯಕರ್ತರು ಮೋದಿ ಆಪ್ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಹೊಸ ತಂತ್ರಜ್ಞಾನ ಬಳಸಿಕೊಂಡು ಇದೇ ಮೊದಲ ಬಾರಿಗೆ ನೇರ ಸಂವಾದ ಏರ್ಪಡಿಸಲಾಗಿದ್ದು, ಬೂತ್ ಮಟ್ಟದಲ್ಲಿ 58 ಸಾವಿರ ಸ್ಥಳಗಳಲ್ಲಿ ಈ ಆಪ್‍ಗಳ ಮುಖಾಂತರ ಕಾರ್ಯಕರ್ತರು ಸಂವಾದ ವೀಕ್ಷಿಸಲಿದ್ದಾರೆ ಎಂದು ತಿಳಿಸಿದರು.

ಎಲ್ ಇಡಿ ಸ್ಕ್ರೀನ್ ಇರುವ ಕಡೆ ಸುಮಾರು 58 ಸಾವಿರ ಕಾರ್ಯಕರ್ತರು ಹಾಗೂ ಬೂತ್‍ಗಳಲ್ಲಿ 200 ಕಾರ್ಯಕರ್ತರನ್ನು ಈ ಕಾರ್ಯಕ್ರಮಕ್ಕಾಗಿ ಸಂಯೋಜಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಾವಿರ ನಮೋ ಆಪ್ ಡೌನ್‍ಲೋಡ್ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳ 15 ಕಡೆ ಪ್ರಧಾನಿ ಮೋದಿ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂದು ಹೇಳಿದರು.

ಮೋದಿಯವರು 17 ಕಡೆ ಕಾರ್ಯಕರ್ತರ ಜತೆ ನೇರ ಸಂವಾದವನ್ನೂ ನಡೆಸಲಿದ್ದಾರೆ. ನರೇಂದ್ರ ಮೋದಿ ಕರ್ನಾಟಕ ದಂಡಯಾತ್ರೆಗೆ ಅಖಾಡ ರೆಡಿಯಾಗಿದೆ. ರಾಜ್ಯದಲ್ಲಿ ನರೇಂದ್ರ ಮೋದಿಯಿಂದ 20ಕ್ಕೂ ಹೆಚ್ಚು ರೋಡ್ ಶೋ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

Leave a Reply