ರಾಜ್ಯ ವಿಧಾನಸಭೆಯ ಚುನಾವಣೆಗೆ ಭರ್ಜರಿ ರಂಗು: ಎಲ್ಲ ಪಕ್ಷಗಳಿಂದ ಮತಬೇಟೆ

3 years ago

State assembly elections in full swing: All parties vying for votes

ಬೆಂಗಳೂರು: ರಾಜ್ಯ ವಿಧಾನಸಭೆಯ ಚುನಾವಣೆಗೆ ಭರ್ಜರಿ ರಂಗು ಬಂದಿದೆ. ಪ್ರಚಾರದ ಅಖಾಡದಲ್ಲಿ ಘಟಾನುಘಟಿ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಬೇಟೆಯಲ್ಲಿ ತೊಡಗುವ ಮೂಲಕ ಪ್ರತಿಪಕ್ಷಗಳಿಗೆ ಸೆಡ್ಡು ಹೊಡೆದಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪರ ಕೇಂದ್ರ ಗೃಹ ಸಚಿವ ಅಮಿತ್ ಷಾ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಹಲವಾರು ಕೇಂದ್ರ ಮಂತ್ರಿಗಳು ಮತ್ತು ಹಿರಿಯ ನಾಯಕರು ರಾಜ್ಯದ ವಿವಿಧಡೆ ಬಿಜೆಪಿ ಅಭ್ಯರ್ಥಿಗಳ ಪರ ಭರಾಟೆ ಪ್ರಚಾರ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿಗಳ ಪರ ಎಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೇರಿದಂತೆ ಪ್ರಮುಖ ನಾಯಕರು ಅಬ್ಬರದ ಪ್ರಚಾರ ನಡೆಸಿದರು. ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಮಾಜಿ ಪ್ರಧಾನಿ ದೇವೇಗೌಡ ತಮ್ಮ ವಯೋಸಹಜ ಅನಾರೋಗ್ಯವನ್ನು ಲೇಕ್ಕಿಸದೆ ಹಳೆ ಮೈಸೂರು ಪ್ರದೇಶದ ಹಲವು ಕ್ಷೇತ್ರಗಳಲ್ಲಿ ಪ್ರಚಾರ ಮತ್ತು ರೋಡ್ ಶೋ ನಡೆಸಿದರು. ವಿವಿಧೆಡೆ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಬಿರುಬಿಸಿಲನ್ನೂ ಲೆಕ್ಕಿಸದೆ ಬಿರುಸಿನ ಪ್ರಚಾರ ನಡೆಸಿದ್ದಾರೆ. ಪ್ರಚಾರದ ಕಾವು ತೀವ್ರತೆ ಪಡೆದುಕೊಂಡಿದೆ.

ದೀದಿ ಪ್ರಚಾರ: ಇನ್ನೂ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ತೆಲಗಾಂಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಇಬ್ಬರು ಮುಖ್ಯಮಂತ್ರಿಗಳು ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಾರೆ. ನಮ್ಮ ಪಕ್ಷದ ಕಾರ್ಯಕರ್ತರೇ ನಮ್ಮ ಪ್ರಚಾರಕರು. ನಮ್ಮ ಕಾರ್ಯಕರ್ತರ ಶಕ್ತಿ ಮುಂದೆ ಯಾವ ಅಂತರರಾಷ್ಟ್ರೀಯ ವರ್ಚಸ್ಸುಳ್ಳ ನಾಯಕರ ಅವಶ್ಯಕತೆ ಇಲ್ಲ ಎಂದರು.

ರಾಷ್ಟ್ರೀಯ ನಾಯಕರನ್ನು ಪ್ರಚಾರಕ್ಕೆ ಕರೆಸಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಬದಲು, ಅದೇ ಹಣವನ್ನು ನಾಲ್ಕಾರು ಅಭ್ಯರ್ಥಿಗಳ ಖರ್ಚಿಗೆ ನೀಡಬಹುದು. ಇಂದು ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಜೆಡಿಎಸ್ ಗೆ ಮರಳಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯಿಂದ ಇನ್ನಷ್ಟು ಮುಖಂಡರು ಬರಲಿದ್ದಾರೆ. ಇನ್ನೊಂದು ವಾರದಲ್ಲಿ ಹಲವರು ಜೆಡಿಎಸ್ ಗೆ ಸೇರ್ಪಡೆ ಆಗುತ್ತಾರೆ ಎಂದು ಹೇಳಿದರು.

ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಹೆಚ್ಚು ಸ್ಥಾನಗಳನ್ನು ಜೆಡಿಎಸ್ ಗೆಲ್ಲುತ್ತದೆ. ಚುನಾವಣಾ ಪೂರ್ವ ಸಮೀಕ್ಷೆಗಳು ನಿಜವಾಗುವುದಿಲ್ಲ. ನಾವು ಯಾರಿಗೂ ಹಣ ಕೊಟ್ಟು ಸರ್ವೆ ಮಾಡಿಸಿಲ್ಲ. ಅದರ ಅವಶ್ಯಕತೆ ನಮಗೆ ಇಲ್ಲ. ಜನರ ಬೆಂಬಲದ ಆಧಾರದಲ್ಲಿ ನಮಗೆ ಬಹುಮತ ಬರುತ್ತೆ ಅಂತ ಹೆಳುತ್ತಿದ್ದೇವೆ. ಈ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದು, ಅದಕ್ಕೆ ಹಣದ ಬಲ ಕಡಿಮೆ ಆಗಬಹುದು. ರಾಷ್ಟ್ರೀಯ ಪಕ್ಷಗಳಿಗೆ ಇದ್ದ ಹಣ ಬಲ ನಮ್ಮ ಪಕ್ಷಕ್ಕೆ ಇದ್ದರೆ 140 ಸ್ಥಾನ ಗೆಲ್ಲುತ್ತೇವೆ ಎಂದು ಘೋಷಣೆ ಮಾಡುತ್ತಿದ್ದೆ. ಆದರೂ ಈಗ 123 ಸ್ಥಾನ ಗೆಲ್ಲುವ ನಂಬಿಕೆ ಇದೆ ಎಂದರು.

ನಾನು 106 ಕ್ಷೇತ್ರದಲ್ಲಿ ಜನರ ಭೇಟಿ ಮಾಡಿದ್ದೇನೆ. ನಿತ್ಯ ಒಂದೊಂದು ಕ್ಷೇತ್ರದಲ್ಲಿ 50-60 ಹಳ್ಳಿ ಸುತ್ತಿದ್ದೇನೆ. ಜನರ ಸಂಪರ್ಕದಲ್ಲಿ ಇದ್ದೇನೆ. ಪಂಚರತ್ನ, ಜನತಾ ಜಲಧಾರೆ ಯಶಸ್ವಿಯಾಗಿದೆ. ನನ್ನ ರೋಡ್ ಶೋಗೆ ಜನ ಸ್ಪಂದನೆ ಸಿಕ್ಕಿದೆ. ನಮಗೆ ಜನರೇ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.

ಪ್ರಿಯಾಂಕಾ ಸಂಚಲನ: ನಿನ್ನೆ ಮೈಸೂರು ಮತ್ತು ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಪ್ರಿಯಾಂಕ ಗಾಂಧಿ ಇಂದು ಬೆಳಗ್ಗೆ ಮೈಸೂರಿನ ಮೈಲಾರಿ ಹೋಟೆಲ್ ನಲ್ಲಿ ದೋಸೆ ಸವಿದರು. ಪಕ್ಷದ ಮುಖಂಡರೊಂದಿಗೆ ಹೋಟೆಲ್ಲಿಗೆ ತೆರಳಿದ ಅವರು ಅಲ್ಲಿ ತಾವೇ ದೋಸೆ ತಯಾರಿಸಿದರು. ನಂತರ ಹೋಟೆಲ್ಲಿನಲ್ಲಿ ಇದ್ಧ ಮಕ್ಕಳೊಂದಿಗೆ ಬೆರೆತು ತಿಂಡಿಯ ರುಚಿ ಸವಿದರು. ಇದಾದ ಬಳಿಕ ಅವರು ಚಿಕ್ಕಮಗಳೂರಿಗೆ ತೆರಳಿ, ಶೃಂಗೇರಿ ಶಾರದಾಂಬೆಗೆ ಪೂಜೆ ಸಲ್ಲಿಸಿದರು. ಬಳಿಕ ಅವರು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.

ನಮ್ಮ ಅಜ್ಜಿ ಇಂದಿರಾಗಾಂಧಿ ಅವರ ಕಷ್ಟಕರ ಸಮಯದಲ್ಲಿ ಈ ಜಿಲ್ಲೆಯ ಜನರು ಆಶೀರ್ವಾದ ಮಾಡಿದ್ದರು. ಈ ಚುನಾವಣೆಯಲ್ಲಿ ಕರ್ನಾಟಕದ ಜನರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂಬ ಪೂರ್ಣ ವಿಶ್ವಾಸ ಇದೆ ಎಂದು ಹೇಳಿದರು.

ಬಾಳೆಹೊನ್ನೂರಿನ ಕಲಾರಂಗ ಮೈದಾನದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಮೂರುವರೆ ವರ್ಷದಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಪ್ರತಿಯೊಂದು ವಿಚಾರದಲ್ಲೂ ಜನರ ವಿಶ್ವಾಸಕ್ಕೆ ಭಂಗ ತಂದಿದೆ. ಜನರ ಸಮಸ್ಯೆಗಳನ್ನು ಆಲಿಸಿಲ್ಲ. ಸರ್ಕಾರ ಲೂಟಿಯಲ್ಲಿ ತೊಡಗಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರವು ₹ 1.5ಲಕ್ಷ ಲಕ್ಷ ಕೋಟಿ ಹಣ ಲೂಟಿ ಮಾಡಿದೆ. ಹೀಗೆ ಜಿಎಸ್‌ಟಿ ಹೊರೆ ಹೊರಿಸಿದೆ. ಸುಳ್ಳು ಹೇಳುವ ಮತ್ತು ಲೂಟಿ ಮಾಡುವ ಇಂಥ ಸರ್ಕಾರ ನಿಮಗೆ ಬೇಕೆ ಎಂದು ಪ್ರಶ್ನಿಸಿದರು.

Leave a Reply