ಬೆಂಗಳೂರು: ರಾಜ್ಯದಲ್ಲಿ ಮುಕ್ತ ಹಾಗೂ ಶಾಂತಿಯುತ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿರುವ ಚುನಾವಣಾ ಆಯೋಗ 80 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವವರು ಮತ್ತು ಅಂಗವಿಕಲರಿಗೆ ಏಪ್ರಿಲ್ 29ರಿಂದ ಮೇ 6ರವರೆಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ , 80 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾಗಿರುವ 80,250 ಮಂದಿ ಹಾಗೂ 19,279 ಅಂಗವಿಕಲರು ಮನೆಯಿಂದಲೇ ಮತದಾನ ಮಾಡಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರ ಮನೆಗಳಿಗೆ ತೆರಳಿ ಮತಪತ್ರದ ಮೂಲಕ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದರು.
ಏ.29 ರಿಂದ ಮೇ6ರ ಅವಧಿಯಲ್ಲಿ ಪ್ರತೀ ಮತದಾರರ ಮನೆಗೆ ಎರಡು ಬಾರಿ ಚುನಾವಣಾ ಸಿಬ್ಬಂದಿ ಭೇಟಿ ನೀಡುವರು. ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲೇ ಗೋಪ್ಯವಾಗಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುವುದು. ಚುನಾವಣಾ ಸಿಬ್ಬಂದಿಯ ಭೇಟಿಯ ಮೊದಲು ಸಮಯ ತಿಳಿಸಲಾಗುವುದು. ಎರಡೂ ಬಾರಿ ಮನೆಯಲ್ಲಿರದಿದ್ದರೆ ಪುನಃ ಮತದಾನಕ್ಕೆ ಅವಕಾಶ ಇರುವುದಿಲ್ಲ. ಮನೆಯಿಂದ ಮತ ಚಲಾಯಿಸಲು ನೋಂದಣಿ ಮಾಡಿಸಿಕೊಂಡವರಿಗೆ ಮತಗಟ್ಟೆಗೆ ಬಂದು ಮತದಾನ ಮಾಡಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಈ ಚುನಾವಣೆಯಲ್ಲಿ ಒಟ್ಟು 5.30 ಕೋಟಿ ಮತದಾರರು ಹಕ್ಕು ಚಲಾಯಿಸುವ ಅರ್ಹತೆ ಹೊಂದಿದ್ದಾರೆ. 263 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 58,545 ಮತಗಟ್ಟೆಗಳನ್ನು ಮತದಾನಕ್ಕೆ ಸ್ಥಾಪಿಸಲಾಗಿದೆ ಎಂದರು.
ತನಿಖೆಗೆ ಆದೇಶ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವಸತಿ ಸಚಿವ ವಿ.ಸೋಮಣ್ಣ ಅದೇ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿ (ಆಲೂರು ಮಲ್ಲು) ಅವರಿಗೆ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಆಮಿಶ ಒಡ್ಡಿರುವ ಆರೋಪದ ಕುರಿತು ತನಿಖೆ ನಡೆಸುವಂತೆ ಸ್ಥಳೀಯ ಚುನಾವಣಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಆರೋಪದ ಕುರಿತು ಇಬ್ಬರಿಗೂ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಲಿದ್ದಾರೆ. ಇಬ್ಬರಿಂದಲೂ ಪ್ರತಿಕ್ರಿಯೆ ಪಡೆಯುತ್ತಾರೆ. ಆಡಿಯೊ ತುಣುಕು ನೈಜ ಎಂಬುದು ಸಾಬೀತಾದರೆ ಸೋಮಣ್ಣ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.




