ಬರ ಪರಿಹಾರ ಬಿಡುಗಡೆಗೆ ಚುನಾವಣಾ ಆಯೋಗದ ಅನುಮತಿ ಕೋರಲಾಗಿದೆ: ಜೈಶಂಕರ್

2 years ago

ಬೆಂಗಳೂರು: ಕರ್ನಾಟಕದ ಬರಗಾಲ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲು ಆರ್ಥಿಕ ನೆರವು ಬಿಡುಗಡೆಗೆ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಅನುಮತಿ ಕೋರಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಪ್ರಸಾದ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಚುನಾವಣಾ ಆಯೋಗ ಆರ್ಥಿಕ ನೆರವು ಬಿಡುಗಡೆ ಮಾಡಲು ಅನುಮತಿ ನೀಡಿದ ಕೂಡಲೇ ಕರ್ನಾಟಕ ಸೇರಿದಂತೆ ಬರಗಾಲದಿಂದ ತತ್ತರಿಸಿರುವ ರಾಜ್ಯಗಳಲ್ಲಿ ಪರಿಹಾರ ಕೈಗೊಳ್ಳಲು ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದರು.

ಪರಿಹಾರ ಬಿಡುಗಡೆ ಮಾಡಲು ಅದರದ್ದೇ ಆದ ನೀತಿನಿಯಮಗಳಿವೆ. ನಾವು ಚುನಾವಣಾ ಆಯೋಗಕ್ಕೆ ಅನುಮತಿ ನೀಡಬೇಕೆಂದು ಮನವಿ ಮಾಡಿದ್ದೇವೆ. ಚೆಂಡು ಆಯೋಗದ ಅಂಗಳದಲ್ಲಿದೆ. ಕರ್ನಾಟಕ ಮಾತ್ರವಲ್ಲದೇ ಅನೇಕ ರಾಜ್ಯಗಳು ಬರ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿವೆ ಎಂದರು.

ಪ್ರಾಕೃತಿಕ ವಿಕೋಪ ನಿಧಿ ಅಡಿಯಲ್ಲಿ ಆರ್ಥಿಕ ನೆರವು ನೀಡಲು ತಮ್ಮದೇ ಆದ ನಿಯಮಗಳಿವೆ. ಆ ನಿಯಮಗಳ ಅನುಸಾರವಾಗಿಯೇ ಕೇಂದ್ರ ಸರ್ಕಾರ ನೆರವು ನೀಡಬೇಕಾಗುತ್ತದೆ. ಇದರಲ್ಲಿ ರಾಜ್ಯ ರಾಜ್ಯಗಳ ನಡುವೆ ತಾರತಮ್ಯ ಮಾಡುವ ಪ್ರಶ್ನೆಯ ಉದ್ಭವಿಸುವುದಿಲ್ಲ. ಯಾವ ರಾಜ್ಯಗಳಿಗೂ ನಾವು ತಾರತಮ್ಯ ಎಸಗದೆ ಕಾನೂನಿನಡಿ ಎಷ್ಟು ಬಿಡುಗಡೆ ಮಾಡಬೇಕೋ ಅಷ್ಟು ಹಣವನ್ನು ಬಿಡುಗಡೆ ಮಾಡಿದ್ದೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲೇ ಬಿಜೆಪಿ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ವಂತ ಬಲದ ಮೇಲೆ ಅಧಿಕಾರ ಹಿಡಿದಿದೆ. ಈ ಬಾರಿಯೂ ದೇಶಾದ್ಯಂತ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ ಕಂಡುಕೊಳ್ಳುತ್ತಿದ್ದು, ಬಿಜೆಪಿ ಸುಲಭವಾಗಿ 400ರ ಗಡಿ ದಾಟಲಿದೆ ಎಂದರು.

Leave a Reply