ಬೆಂಗಳೂರು: ದೇಶದಲ್ಲಿ ಮಹಿಳಾ ಮೀಸಲಾತಿ ಜಾರಿಯಾದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳ ಪೈಕಿ 74 ಕ್ಷೇತ್ರಗಳಲ್ಲಿ ಮಹಿಳೆಯರೇ ಅಭ್ಯರ್ಥಿಗಳಾಗುತ್ತಾರೆ. ಹೀಗಾಗಿ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಕೆಪಿಸಿಸಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನರನ್ನು ಜಾಗೃತರನ್ನಾಗಿ ಮಾಡಬೇಕಾದರೆ ಮಹಿಳೆಯರು ಜಾಗೃತರಾಗಿರಬೇಕು. ಆಕೆ ನಡೆದರೆ ಕುಟುಂಬ ನಡೆದಂತೆ, ಕುಟುಂಬ ನಡೆದರೆ ಗ್ರಾಮ ನಡೆದಂತೆ, ಸಮಾಜ ಹಾಗೂ ದೇಶ ನಡೆಯುತ್ತದೆ ಎಂದರು.
ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ಕಾಂಗ್ರೆಸ್ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತ್ತು. ರಾಜ್ಯಸಭೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಸಾಧ್ಯವಾಗಲಿಲ್ಲ. ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಪ್ರಣಾಳಿಕೆಯಲ್ಲಿ ಈ ವಿಚಾರ ಪ್ರಸ್ತಾಪಿಸಿವೆ ಎಂದರು.
ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ 224 ಕ್ಷೇತ್ರಗಳ ಪೈಕಿ 74 ಮಹಿಳಾ ಅಭ್ಯರ್ಥಿಗಳು ಬೇಕಾಗುತ್ತಾರೆ. ಈಗ ನಾವು 10-12 ಅಭ್ಯರ್ಥಿಗೆ ಟಿಕೆಟ್ ನೀಡುತ್ತಿದ್ದೇವೆ. ಈ 74 ಅಭ್ಯರ್ಥಿಗಳನ್ನು ಯಾರು ತಯಾರು ಮಾಡಬೇಕು? ನನಗೆ ನನ್ನ ಮಗಳು, ಪತ್ನಿಯನ್ನು ಅಭ್ಯರ್ಥಿ ಮಾಡುವುದು ಮುಖ್ಯವಲ್ಲ. ನಿಮ್ಮಂತಹ ಕಾರ್ಯಕರ್ತರು, ಜನಸಾಮಾನ್ಯರು ಪಕ್ಷದ ಅಭ್ಯರ್ಥಿಯಾಗುವ ಮಟ್ಟಕ್ಕೆ ಬೆಳೆಯಬೇಕು. ಆಗ ಮಾತ್ರ ನಾವು ನಿಮಗೆ ಶಕ್ತಿ ನೀಡಿದಂತಾಗುತ್ತದೆ ಎಂದರು.
ಒಂದೇ ದಿನದಲ್ಲಿ ಗಿಡ ಮರವಾಗಿ ಬೆಳೆದು ಹಣ್ಣು ಬಿಡುವುದಿಲ್ಲ. ಇದಕ್ಕೆ ಕಾಲಾವಕಾಶ ಬೇಕು. ಇದಕ್ಕಾಗಿ ನಾನು ‘ನಾ ನಾಯಕಿ’ ಕಾರ್ಯಕ್ರಮ ಮಾಡಿದೆ. ಈ ನಾ ನಾಯಕಿ ಕಾರ್ಯಕ್ರಮಕ್ಕೆ ನೀವೆಲ್ಲರೂ ಹೊಸ ರೂಪ ನೀಡಬೇಕು. ಇಂದು ಮಹಿಳಾ ದಿನಾಚರಣೆ ಆಚರಿಸುತ್ತಿದ್ದೀರಿ. ಈ ಹಬ್ಬದಲ್ಲಿ ಸ್ವಯಂಪ್ರೇರಿತರಾಗಿ ಮಹಿಳೆಯರನ್ನು ಕರೆ ತರಬೇಕು ಎಂದರು.
ಕಾಂಗ್ರೆಸಿಗರ ಪಾಲಿಗೆ ಪಕ್ಷದ ಕಚೇರಿ ದೇವಾಲಯವಿದ್ದಂತೆ. ಇಲ್ಲಿಗೆ ಜನರನ್ನು ಕರೆತರಬೇಕು. ನೀವು ವೇಗವಾಗಿ ಸಾಗಬೇಕಾದರೆ ಒಬ್ಬರೇ ಸಾಗಿ, ನೀವು ದೂರ ಕ್ರಮಿಸಬೇಕಾದರೆ ಒಟ್ಟಾಗಿ ಸಾಗಿ ಎಂದು ನಾನು ಹೇಳುತ್ತಿರುತ್ತೇನೆ. ನಾನು ಒಬ್ಬನೇ ಪಾದಯಾತ್ರೆ ಮಾಡಲು ಸಾಧ್ಯವೇ? ಹತ್ತಾರು ಜನ ಸೇರಿದ್ದಕ್ಕೆ ಅಲ್ಲವೇ ದೂರದ ಪಾದಯಾತ್ರೆ ಮಾಡಲು ಸಾಧ್ಯವಾಗಿದ್ದು. ಅವರು ಬಂದರೆ ನಮ್ಮ ಸ್ಥಾನ ಏನಾಗುತ್ತದೆಯೋ ಎಂಬ ಅಳುಕು ಬೇಡ. ನಿಮ್ಮ ಹಣೆಬರಹವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ. ಎಲ್ಲಿ ಭಕ್ತಿ ಇರುತ್ತದೆಯೋ ಅಲ್ಲಿ ಭಗವಂತ ಇರುತ್ತಾನೆ. ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ ಇರುತ್ತದೆ. ಶ್ರಮಪಟ್ಟು ಸಂಘಟನೆ ಮಾಡಿ ಎಂದರು.
ನಮ್ಮ ಸಮಾಜ ಸೇವೆ ಮಾಡುವವರನ್ನು ಸ್ಮರಿಸುತ್ತದೆ. ನಮ್ಮಲ್ಲಿ ರಾಮನ ತಂದೆ ದಶರಥ ಮಹರಾಜನಿಗಿಂತ, ರಾಮನ ಭಂಟ ಹನುಮಂತನ ದೇವಾಲಯಗಳು ಹೆಚ್ಚಾಗಿವೆ. ಮಹಿಳೆ ಎಂದರೆ ತ್ಯಾಗ. ತ್ಯಾಗದ ಮನೋಭಾವದಲ್ಲಿ ನೀವು ಶ್ರಮಿಸಿ. ಇದಕ್ಕೆ ಸೂಕ್ತ ಉದಾಹರಣೆ ನಮ್ಮ ನಾಯಕಿ ಸೋನಿಯಾ ಗಾಂಧಿ. ಅವರು ದೇಶಕ್ಕಾಗಿ ತನ್ನ ಪತಿ, ಅತ್ತೆಯನ್ನು ಕಳೆದುಕೊಂಡರು. ಪಕ್ಷ ಮುಳುಗಿಹೋಗುತ್ತಿದೆ ಎಂಬ ಸಂದರ್ಭದಲ್ಲಿ ನಾವು ಬಲವಂತವಾಗಿ ಅವರಿಗೆ ಪಕ್ಷದ ಜವಾಬ್ದಾರಿ ನೀಡಿದೆವು. ಸಂಕಷ್ಟದ ಸಮಯದಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಂಡರು. ಕೊನೆಗೆ ದೇಶದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸುವ ಸಂದರ್ಭದಲ್ಲಿ ತ್ಯಾಗ ಮಾಡಿದರು ಎಂದರು.
ರಾಜೀವ್ ಗಾಂಧಿ ಅವರು ಸತ್ತಾಗಲೂ ತ್ಯಾಗ ಮಾಡಿ ನರಸಿಂಹರಾವ್ ಅವರನ್ನು ಪ್ರಧಾನಿ ಮಾಡಿದರು. ನಂತರ ಯುಪಿಎ ಸರ್ಕಾರದ ಅವಧಿಯಲ್ಲಿ ಬಿಜೆಪಿ ನಾಯಕಿಯರಾದ ಉಮಾ ಭಾರತಿ, ಸುಷ್ಮಾ ಸ್ವರಾಜ್ ಅವರು ತಲೆ ಬೋಳಿಸಿಕೊಳ್ಳುತ್ತೇವೆ ಎಂದು ಸವಾಲು ಹಾಕಿದಾಗ, ಈ ದೇಶಕ್ಕೆ ಆರ್ಥಿಕ ತಜ್ಞರ ಅಗತ್ಯವಿದೆ ಎಂದು ಮನಮೋಹನ್ ಸಿಂಗ್ ಅವರಿಗೆ ತಮ್ಮ ಬಳಿಗೆ ಬಂದ ಹುದ್ದೆಯನ್ನು ತ್ಯಾಗ ಮಾಡಿದರು. ನಾವು ಒಂದು ಪಂಚಾಯ್ತಿ ಅಧ್ಯಕ್ಷ ಸ್ಥಾನ ಬಿಡುತ್ತೇವಾ? ಎಂದರು.
ಇದೇ ಮೇ 20ರಂದು ಸರ್ಕಾರದ ಎರಡು ವರ್ಷಗಳ ಸಂಭ್ರಮಾಚರಣೆ ನಡೆಯಲಿದ್ದು, ರಾಜ್ಯದೆಲ್ಲೆಡೆ ಇದನ್ನು ಹಬ್ಬದಂತೆ ಸಂಭ್ರಮಾಚರಣೆ ಮಾಡಬೇಕು. ಎಲ್ಲಾ ಗ್ರಾಮಗಳಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮನೆ ಮುಂದೆ ರಂಗೋಲೆ ಸ್ಪರ್ಧೆ ನಡೆಸಬೇಕು. ಅತ್ಯುತ್ತಮವಾಗಿ ರಂಗೋಲಿ ಹಾಕಿದವರಿಗೆ ಬಹುಮಾನ ನೀಡಲಾಗುವುದು. ಸರ್ಕಾರದ ವಿರುದ್ಧ ಯಾರು ಎಷ್ಟಾದರೂ ಧಿಕ್ಕಾರ ಕೂಗಲಿ, ಕುಣಿಯಲಿ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಹಣಕಾಸಿನ ವಿಚಾರ ಚರ್ಚೆ ಮಾಡುತ್ತೇನೆ ಎಂದರು.




