ರುಕ್ಸಾನ ವಿಚಾರದಲ್ಲಿ ಮೌನವಾಗಿರುವ ಪ್ರತಿಪಕ್ಷ ಸಂಘ ಪರಿವಾರದ ಅಜೆಂಡದ ಕೈಗೊಂಬೆಯಂತಾಗಿದೆ: ಎಸ್ ಡಿಪಿಐ

2 years ago

ಧಾರವಾಡ: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಹುಬ್ಬಳ್ಳಿ ಯಲ್ಲಿ ನಡೆದಿರುವ ನೇಹಾ  ಹಾಗೂ ಮೈಸೂರಿನ ರುಕ್ಸಾನ ಎಂಬ ಮಹಿಳೆಯರಿಬ್ಬರ  ಕೊಲೆ ಖಂಡನೀಯ. ಮಹಿಳೆಯರ ಮೇಲಿನ ದೌರ್ಜನ್ಯಗಳ ವಿಚಾರಣೆಗೆ ಪ್ರತ್ಯೇಕ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಲು ಆಗ್ರಹ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಗೆ ಬೆಂಬಲ ನೀಡಬೇಕು? ಎಂಬ ಪಕ್ಷದ ನಿಲುವಿನ ಕುರಿತು ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಫ್ಸರ್ ಕೊಡ್ಲಿಪೇಟೆ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಹುಬ್ಬಳ್ಳಿ ಯಲ್ಲಿ ನಡೆದಿರುವ ನೇಹಾ ಕೊಲೆ ಹಾಗೂ ಮೈಸೂರಿನ ರುಕ್ಸಾನ ಎಂಬ ಮಹಿಳೆಯರಿಬ್ಬರ  ಕೊಲೆಯನ್ನು ಎಸ್ ಡಿಪಿಐ ತೀವ್ರವಾಗಿ ಖಂಡಿಸುತ್ತದೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ವಿಚಾರಣೆಗೆ ಪ್ರತ್ಯೇಕ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಿ ಆರೋಪಿಗಳಿಗೆ ಗರಿಷ್ಠ ಶಿಕ್ಷೆ ಆಗುವಂತೆ ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್ ಗೆ ಒಪ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಅಪರಾಧ ಕೃತ್ಯಗಳನ್ನು ಧರ್ಮಾಧಾರಿತವಾಗಿ ವಿಂಗಡಿಸಿ ನಡೆಸುವ ಕಾರ್ಯಾಚರಣೆಯು ಸಂವಿಧಾನ ವಿರೋಧಿಯಾಗಿದ್ದು ಮಹಿಳೆಯರಿಗೆ ಮಾಡುವ ಅನ್ಯಾಯವಾಗಿದೆ.

ಕೊಲೆ ಆರೋಪಿಯನ್ನ ಒಂದು ಗಂಟೆಯೊಳಗೆ ಬಂಧಿಸಿರುವ ಹುಬ್ಬಳ್ಳಿ-ಧಾರವಾಡ ಪೋಲಿಸರ ಕಾರ್ಯ ಶ್ಲಾಘನೀಯ ಅದೇ ರೀತಿ ರುಕ್ಸಾನ ಕೊಲೆ ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ರುಕ್ಸಾನ ವಿಚಾರದಲ್ಲಿ ಮೌನವಾಗಿರುವ ಸರಕಾರ, ಸಂಘ ಪರಿವಾರದ ಅಜೆಂಡದ ಕೈಗೊಂಬೆಯಂತಾಗಿ ನೇಹಾಳ ವಿಚಾರವನ್ನು ಮಾತ್ರ ಗಂಭೀರವಾಗಿ ಪರಿಗಣಿಸುತ್ತಿರುವುದು ಖಂಡನೀಯ.ಮಾಧ್ಯಮಗಳು ಕೂಡ ಇದಕ್ಕೆ ಕುಮ್ಮಕ್ಕು ನೀಡುತ್ತಾ ತಮ್ಮ ಪತ್ರಿಕಾ ಧರ್ಮಕ್ಕೆ ಅಪಚಾರವೆಸಗುತ್ತಿವೆ. ಅಪರಾಧ ಕೃತ್ಯಗಳನ್ನು ರಾಜಕೀಯಕ್ಕೆ ಬಳಸಿ,ಸಮಾಜದಲ್ಲಿ ಅರಾಜಕತೆ ಸೃಷ್ಟಿಸಿ ಮತ ಬ್ಯಾಂಕನ್ನು ಭದ್ರಪಡಿಸಲು ಯತ್ನಿಸುತ್ತಿರುವ ಸಂಘ ಪರಿವಾರವನ್ನು ಹದ್ದುಬಸ್ತಿನಲ್ಲಿಟ್ಟು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಆರೋಪಿಗಳೀರ್ವರನ್ನೂ ಸೂಕ್ತ ವಿಚಾರ ನಡೆಸಿ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಂತ್ರಸ್ತರೀರ್ವರಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಜಕೀಯ ಲಾಭಕ್ಕಾಗಿ ಇಂದು ಹುಬ್ಬಳ್ಳಿಯ ನೇಹಾ ಮನೆಗೆ ಭೇಟಿ ನೀಡುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ರುಕ್ಸಾನಾ ಮತ್ತು ಧರ್ಮಸ್ಥಳ ದಲ್ಲಿ ರೇಪ್ ಆಗಿ ಕೊಲೆಯಾದ ಸೌಜನ್ಯ ಳ ಮನೆಗೆ ಭೇಟಿ ಯಾಕೆ ನೀಡಿಲ್ಲ ಅದರಲ್ಲಿ ನಿಮಗೆ ರಾಜಕೀಯ ಲಾಭ ಇಲ್ಲವೇ? ಎಂದು ಕುಟುಕಿದರು.

ಯುಪಿಎಸ್‌ಸಿ ಪರೀಕ್ಷೆ ಕುರಿತು ಎಲ್ಲೂ ಕೋಚಿಂಗ್ ಪಡೆಯದೆ ಯೂಟ್ಯೂಬ್ ನಲ್ಲಿ ಮಾಹಿತಿ ಸಂಗ್ರಹಿಸಿ,ರಾಜ್ಯಕ್ಕೆ ಮೊದಲನೇ ರ್‍ಯಾಂಕ್ ಬಂದಿರುವ ಧಾರವಾಡ ಜಿಲ್ಲೆಯ ವಿಜೇತಾ, ಸ್ಪರ್ಧಾತ್ಮಕ ಪರೀಕ್ಷೆ ಬರೆದ ಸ್ನೇಹಿತೆಯರ ಬಳಿ ಮಾರ್ಗದರ್ಶನ ಪಡೆದು ಐಎಎಸ್ ಮಾಡುವ ಕನಸು ಹೊಂದಿದ್ದು ಗುರಿಯನ್ನು ಸಾಧಿಸಿ ತೋರಿಸಿದ್ದಾರೆ ಎಂದು ಅವರಿಗೆ ಶುಭ ಹಾರೈಸಿದರು.

ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ದೃಷ್ಟಿಯಿಂದ ಪಕ್ಷವು ತನ್ನ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸದಿರಲು ತೀರ್ಮಾನಿಸಿದ್ದು, ರಾಜ್ಯಾದ್ಯಂತ ಯಾವ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂಬ ಬಗ್ಗೆ ಲೋಕಸಭಾ ಕ್ಷೇತ್ರವಾರು ಕಾರ್ಯಕರ್ತರ ಸಮಾವೇಶವನ್ನು ನಡೆಸಿ ಅಭಿಪ್ರಾಯವನ್ನು ಸಂಗ್ರಹಿಸಲಾಗುತಿದ್ದು ಇನ್ನಷ್ಟೇ ಅಂತಿಮ ತೀರ್ಮಾನವಾಗಬೇಕಿದೆ ಎಂದರು.

ಜಿಲ್ಲಾಧ್ಯಕ್ಷರಾದ ಸಲೀಂ ಅರಲಿಕಟ್ಟಿ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ಗುಲಾಮಿ ರಾಜಕೀಯದಿಂದ ಮುಕ್ತಿ ಪಡೆಯಲು ಚಿಂತಿಸಿ ಘನತೆಯ ರಾಜಕೀಯಕ್ಕಾಗಿ  ಎಸ್ ಡಿ ಪಿ ಐ ಪಕ್ಷವನ್ನು ಬಲಪಡಿಸುವ ಅವಶ್ಯಕತೆ ಇದೆ ಎಂದು ಹೇಳಿದ ಅವರು ಮುಂದಿನ ತಿಂಗಳು 7ನೇ ತಾರೀಖಿನಂದು ನಡೆಯುವ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮತಚಲಾವಣೆಯ ಪರ್ಸೆಂಟೇಜ್ ಅನ್ನು ಹೆಚ್ಚಿಸಲು ಕಾರ್ಯತಂತ್ರ ರೂಪಿಸುವ ಸಲುವಾಗಿ ಕ್ಷೇತ್ರವಾರು ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಸುಹೇಲ್ ಇಂಗಳಗಿ, ಕೋಶಾಧಿಕಾರಿ ಮಲೀಕ ಕಳಸ ಹಾಗೂ ಜಿಲ್ಲಾ ಸದಸ್ಯರುಗಳಾದ ಇಸ್ಮಾಯಿಲ್ ನಾಲಬಂದ, ಅಬ್ದುಲ್ ಜಬ್ಬಾರ್ ಲಷ್ಕರ್, ಇಮಾಮ ಧಾರವಾಡ, ಮಕ್ತುಮ್ ಸಾಬ್ ಹೊಸಮನಿ, ವಾರ್ಡಿನ ಅಧ್ಯಕ್ಷರು, ಕಾರ್ಯದರ್ಶಿಗಳು, ಬ್ರಾಂಚಿನ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತಿ ಇದ್ದರು.

Leave a Reply