ಬೆಂಗಳೂರು: ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮುಂಬೈಗೆ ಸೇರಿತ್ತು ಎಂದು ಬೆಳಗಾವಿ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿರುವ ಹೇಳಿಕೆ ಇದೀಗ ತೀವ್ರ ವಿವಾದ ಸೃಷ್ಟಿಸಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೆಬ್ಬಾಳ್ಕರ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವ ಸಚಿವರಿಗೆ ಮುಖ್ಯಮಂತ್ರಿ ಕರೆದು ಬುದ್ದಿ ಹೇಳಲಿ ಎಂದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಎಂದೋ ಮುಗಿದು ಹೋಗಿರುವ ವಿಷಯ. ಅದನ್ನು ಮತ್ತೆ ಮತ್ತೆ ಕೆಣಕುವ ಅಗತ್ಯ ಏನಿದೆ? ಬಹುಶಃ ಅವರಿಗೆ ಮಹಾರಾಷ್ಟ್ರದ ವ್ಯಾಮೋಹದಿಂದ ಹೊರಬರಲು ಸಾಧ್ಯವಿಲ್ಲ, ನೆರೆ ರಾಜ್ಯದ ಮೇಲೆ ಅವರಿಗೆ ವ್ಯಾಮೋಹ ಜಾಸ್ತಿ ಅಂತ ಕಾಣುತ್ತದೆ ಎಂದು ಕಿಡಿಕಾರಿದರು.
ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಸಚಿವರೇ ಇಂತಹ ಅನಗತ್ಯ, ವಿವಾದಾಸ್ಪದ ವಿಷಯಗಳನ್ನು ಮಾತಾಡಿದರೆ ಹೇಗೆ? ಸಿಎಂ ಅವರಿಗೆ ಮಂತ್ರಿಗಳ ಮೇಲೆ ಹಿಡಿತ ಇದ್ದರೆ ಅವರನ್ನು ಕರೆದು ಸರಿಯಾಗಿ ಬುದ್ದಿ ಹೇಳಬೇಕು ಎಂದರು.
ಹೆಬ್ಬಾಳ್ಕರ್ ಆರೂವರೆ ಕೋಟಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಆಪಾದಿಸಿರುವ ಮಾಜಿ ಸಚಿವ ಡಾ.ಅಶ್ವಥ್ ನಾರಾಯಣ, ಓಟಿನ ರಾಜಕಾರಣಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿರುವುದು ವಿಷಾದಕರ ಎಂದರು.
ಕಾಶ್ಮೀರ ಕೂಡ ಪಾಕಿಸ್ತಾನಕ್ಕೆ ಸೇರಿದ್ದು ಅಂತ ಕಾಂಗ್ರೆಸ್ನವರು ಹೇಳುತ್ತಾರೆ. ಅದೇ ರೀತಿಯ ಉದ್ಧಟತನದ ಹೇಳಿಕೆ ನೀಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಚಿವ ಸಂಪುಟದಿಂದ ಹೊರಗೆ ಇಡಬೇಕು. ಇವರ ಹೇಳಿಕೆಯನ್ನು ಮರಾಠಿಗರಾಗಲಿ, ಕನ್ನಡಿಗರಾಗಲಿ ಬೆಂಬಲಿಸಲ್ಲ ಎಂದರು.
ಈ ನಡುವೆ ಸಚಿವೆ ಹೆಬ್ಬಾಳ್ಕರ್ ಬೆಂಬಲಕ್ಕೆ ಧಾವಿಸಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಈ ವಿಚಾರದಲ್ಲಿ ಗೊಂದಲ ಸೃಷ್ಟಿಸಬಾರದು. ಅವರು ಯಾವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಹಿಂದೆ ನಿಜಾಮರ ಕಾಲದಲ್ಲಿ ಬಳ್ಳಾರಿ ಸೇರಿ ಕೆಲ ಜಿಲ್ಲೆಗಳು ಹೈದರಾಬಾದ್ ನಲ್ಲಿದ್ದವು. ವಿಜಯಪುರ, ಬೆಳಗಾವಿ, ಕಾರವಾರ ಮುಂಬೈ ರಾಜ್ಯದಲ್ಲಿತ್ತು. ಈ ಅರ್ಥದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ರಾಜ್ಯಗಳ ಪುನರ್ ವಿಂಗಡಣೆ ಬಳಿಕ ಎಲ್ಲವೂ ಸರಿಹೋಗಿದೆ. ರಾಜ್ಯಗಳ ಗಡಿ ವಿಚಾರದಲ್ಲಿ ನಮಗೆ ಮಹಾಜನ್ ವರದಿ ಅಂತಿಮ. ಈ ಹಿಂದೆ ಇತಿಹಾಸದಲ್ಲಿ ಇರುವುದನ್ನು ಹೆಬ್ಬಾಳ್ಕರ್ ಹೇಳಿದ್ದಾರೆ. ರಾಜ್ಯ ಪುನರ್ ವಿಂಗಡಣೆ ಆದ ಮೇಲೆ ಎಲ್ಲವೂ ಬದಲಾಗಿದೆ. ಈ ವಿಚಾರದಲ್ಲಿ ನಮ್ಮ ರಾಜ್ಯದ ನಿಲುವು ಕೂಡ ಬಹಳ ಸ್ಪಷ್ಟವಾಗಿದೆ ಎಂದರು.




