ಮುಜರಾಯಿ ಇಲಾಖೆ ಮಹತ್ವ ಹೆಚ್ಚಿಸಿದ ರಾಮಲಿಂಗಾರೆಡ್ಡಿ

2 years ago

ಕರ್ನಾಟಕ ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಒಂದು ಗಾಂಭೀರ್ಯವನ್ನು ಹಾಗೂ ಘನತೆಯನ್ನು ತಂದು ಕೊಟ್ಟಿರುವುದು ರಾಮಲಿಂಗಾರೆಡ್ಡಿರವರು. ಇವರು ಈ ಖಾತೆಯನ್ನು ವಹಿಸಿಕೊಂಡ ಮೇಲೆ ಅನೇಕ ರೀತಿಯ ಹೊಸ ಹೊಸ ಕಾರ್ಯಕ್ರಮಗಳನ್ನು ನೀಡಿ ಅರ್ಚಕರಿಗೆ ಮತ್ತು ಭಕ್ತರಿಗೆ ಹಾಗೂ ದೇವಾಲಯದ ಸಿಬ್ಬಂದಿಯವರಿಗೆ ಸಾಕಷ್ಟು ರೀತಿಯ ಉತ್ತಮವಾದ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಅವರೆಲ್ಲರ ಬದುಕಿಗೆ ಪೂರಕವಾದಂತಹ ವಾತಾವರಣವನ್ನು ನಿರ್ಮಾಣ ಮಾಡಿರುತ್ತಾರೆ.

ಈಗಾಗಲೇ ಅರ್ಚಕರಿಗೆ ಅವರ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಯೋಜನೆ, ಅವರ ಮರಣದ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ಆರ್ಥಿಕ ನೆರವು, ಅವರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹದ ಧನ ಮುಂತಾದವುಗಳನ್ನ ನೀಡುವುದರ ಮೂಲಕ ಈ ಖಾತೆಯನ್ನು ನಿರ್ವಹಿಸಿದವರು ಯಾರೂ ಗಮನಹರಿಸದ ಸಂಗತಿಗಳ ಕಡೆ ತಮ್ಮ ಗಮನವನ್ನು ಹರಿಸಿ ಅವರುಗಳಿಗೆ ನೆರವನ್ನ ಒದಗಿಸಿರುವುದು ಇವರ ಮಾನವೀಯ ಗುಣಗಳ ಸಾಕ್ಷಿಯಾಗಿರುತ್ತದೆ.

ಇದೇ ತಿಂಗಳ 22ರಂದು ಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಕರ್ನಾಟಕದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ವಿಶೇಷವಾದ ಪೂಜೆಯನ್ನ ಏರ್ಪಡಿಸುವುದರ ಮೂಲಕ ನಮ್ಮ ಸರ್ಕಾರದ ಧಾರ್ಮಿಕ ಶ್ರದ್ಧೆಯನ್ನು ಮತ್ತು ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ನಮ್ಮ ಪಕ್ಷಕ್ಕೆ ಇರುವ ಬದ್ಧತೆಯನ್ನು ಎತ್ತಿ ಹಿಡಿದಿದ್ದಾರೆ.

ಅನಾವಶ್ಯಕವಾಗಿ ಪದೇಪದೇ ಕೆಲವು ವ್ಯಕ್ತಿಗಳು ಇಲಾಖೆಯಲ್ಲಿನ ದೇವಾಲಯದ ಹುಂಡಿಯ ಹಣ ಅನ್ಯ ಧರ್ಮದ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂಬ ಹುಸಿ ಆರೋಪವನ್ನು ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡುತ್ತಲೇ ಇದ್ದಾರೆ. ಇವರುಗಳಿಗೆ ಸರಿಯಾದ ಉತ್ತರ ಎಂಬಂತೆ ಈಗ ಮಾನ್ಯ ಸಚಿವರು ಹೊಸದಾಗಿ ಆದೇಶವನ್ನು ಹೊರಡಿಸಿ ಇವುಗಳಿಗೆ ಮಂಗಳವನ್ನು ಹಾಡಿದ್ದಾರೆ.

ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆಯಲ್ಲಿನ ಆಯಾ ದೇವಾಲಯದ ಹುಂಡಿಯ ಹಣವನ್ನು ಆಯಾ ದೇವಾಲಯದ ಅಭಿವೃದ್ಧಿಗೆ ಬಳಸಬೇಕೆಂಬ ಇವರ ಆದೇಶ ಸಾಂದರ್ಭಿಕವಾಗಿರುತ್ತದೆ.

ಹಿಂದೂಗಳ ಗುತ್ತಿಗೆಯನ್ನು ಪಡೆದವರು ನಾವೇ ಎಂಬ ರೀತಿಯಲ್ಲಿ ಅಬ್ಬರಿಸುತ್ತಿದ್ದ ಬಿಜೆಪಿ ಸರ್ಕಾರದಲ್ಲಿ ನಿರ್ವಹಿಸಿದ ಸಚಿವರುಗಳಿಗೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗದ ಅನೇಕ ಕಾರ್ಯಕ್ರಮಗಳನ್ನು ರಾಮಲಿಂಗಾರೆಡ್ಡಿಯವರು ರೂಪಿಸುವುದರ ಮೂಲಕ ಕರ್ನಾಟಕದ ಇತಿಹಾಸದಲ್ಲಿ ಮುಜರಾಯಿ ಇಲಾಖೆಗೆ ಇರುವಂತಹ ಮಹತ್ವವನ್ನು ಎಲ್ಲರಿಗೂ ತೋರಿಸಿಕೊಟ್ಟಿದ್ದಾರೆ.

ಕೇವಲ ಮಾತನಾಡದೆ ಕಾರ್ಯಕ್ರಮಗಳ ಮೂಲಕ ಯೋಜನೆಗಳ ಮೂಲಕ ತಮ್ಮ ಕಾರ್ಯ ದಕ್ಷತೆಯನ್ನು ಸದಾ ಪ್ರದರ್ಶಿಸುತ್ತಿರುವ ರಾಮಲಿಂಗರೆಡ್ಡಿರವರು ನಿಜಕ್ಕೂ ಅನೇಕ ಸಚಿವರುಗಳಿಗೆ ಮಾದರಿಯಾಗಿದ್ದಾರೆ ಮತ್ತು ಅನುಕರಣೀಯವಾಗಿದ್ದಾರೆ.

ಮುಜರಾಯಿ ಇಲಾಖೆಯ ಜೊತೆಗೆ ಸಾರಿಗೆ ಸಚಿವ ಖಾತೆಯನ್ನು ನಿರ್ವಹಿಸುತ್ತಾ ಇಲಾಖೆಯಲ್ಲೂ ಸಹ ಚಾಲಕರ ಮತ್ತು ನಿರ್ವಾಹಕರ ವಿಚಾರದಲ್ಲಿ ಇವರು ತೋರುತ್ತಿರುವ ವಿಶ್ವಾಸ ಮೆಚ್ಚುವಂಥದ್ದು. ಶಕ್ತಿ ಯೋಜನೆಯ ಅನುಷ್ಠಾನದ ಮೂಲಕ ರಾಜ್ಯ ಸರ್ಕಾರದ ಸಾಧನೆಯನ್ನು ಸಾಕ್ಷಿ ಸಾಕ್ಷಿಕರಿಸುತ್ತಾ ಹೊಸದಾಗಿ ಅನೇಕ ಭಾಗಗಳಿಗೆ ಬಸ್ ಸೌಲಭ್ಯವನ್ನು ಕಲ್ಪಿಸಿ ಕೊಡುತ್ತಾ ಸಾವಿರಾರು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತಾ ಸಾರಿಗೆ ಇಲಾಖೆಯನ್ನು ಸಹ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಅನೇಕ ಪ್ರಶಸ್ತಿಗಳನ್ನ ಗಳಿಸುವುದರ ಮೂಲಕ ಮತ್ತೊಮ್ಮೆ ತಾವು ಅತ್ಯುತ್ತಮವಾದ ಸಾರಿಗೆ ಸಚಿವರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ನಮ್ಮ ಸರ್ಕಾರ ಕೇವಲ ಒಂದು ಧರ್ಮದ ಪರವಾದಂತಹ ಸರ್ಕಾರ, ಹಿಂದುಗಳ ವಿರೋಧಿ ಎನ್ನುವ ಬಿಜೆಪಿಯವರ ಮತ್ತು ಅವರ ಬೆಂಬಲಿಗರ ಟೀಕೆ ಟಿಪ್ಪಣಿಗಳಿಗೆ ರಾಮಲಿಂಗಾರೆಡ್ಡಿಯವರು ಮುಜರಾಯಿ ಇಲಾಖೆಯಲ್ಲಿ ತಂದಿರುವ ಮಹತ್ವದ ಕಾರ್ಯಕ್ರಮಗಳನ್ನು ಓದಿ ಅರ್ಥೈಸಿಕೊಂಡರೆ ಮತ್ತು ಅದರ ಉಪಯೋಗವನ್ನು ಪಡೆಯುತ್ತಿರುವವರು ಆತ್ಮಸಾಕ್ಷಿಯಿಂದ ಮಾತನಾಡಿದರೆ ಈ ಸರ್ಕಾರ ಎಲ್ಲರ ಪರ ಇರುವಂತಹ ಸರ್ಕಾರ ಎಂಬುದು ಆಗ ಅರಿವಾಗುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply