ಪ್ರೀತಿಸುವ ಸಾಮರ್ಥ್ಯ ಇದ್ದವನು ಮಾತ್ರ ಕ್ರಾಂತಿಕಾರಿಯಾಗಬಲ್ಲ! ಜನರ ಒಗ್ಗಟ್ಟು ಮಾತ್ರ ಮಾನವತೆಯನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲದು! ಒಗ್ಗಟ್ಟಿನ ಎದುರು ಮಾತ್ರ ಅನ್ಯಾಯ, ಅಸಮತೆಗಳು ನಡುಗುತ್ತವೆ: ಡಾ ಅಲೀಡಾ ಗುವೇರಾ, ಚೆ ಗುವೆರಾ ಮಗಳು…
20.01.2023, ಸ್ಕೌಟ್ ಅ್ಯಂಡ್ ಗೈಡ್ ಸಭಾಂಗಣ, ಬೆಂಗಳೂರು ಇಲ್ಲಿ ಮಾಡಿದ ಭಾಷಣದ ಕನ್ನಡ ಅನುವಾದ…
ಎಲ್ಲರಿಗೂ ನಮಸ್ಕಾರಗಳು. ನಾನು ಸ್ಪ್ಯಾನಿಶ್ ಭಾಷೆಯಲ್ಲಿ ಮಾತ್ರ ಮಾತನಾಡಬಲ್ಲೆ. ನನಗೆ ಬಹುಭಾಷೆಯ ಚಿಪ್ ಅನ್ನು ನೀಡಲಾಗಿಲ್ಲ. (ಕ್ರಾಂತಿಗೆ, ಒಳಗೊಳ್ಳುವಿಕೆಗೆ, ಸಂವಹನಕ್ಕೆ ಪ್ರಭಾವಿ ಭಾಷೆಗಳನ್ನೇ ಕಲಿಯಬೇಕಿಲ್ಲ ಎಂಬರ್ಥದಲ್ಲಿ) ನಾನು ಬೇರೆ ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಬಹಳ ಹಿಂದಿದ್ದೇನೆ. ಪದಗಳನ್ನು ಪುನರುಚ್ಚರಿಸುವುದರಲ್ಲೂ ನಾನು ಬಹಳ ಹಿಂದಿದ್ದೇನೆ. ಕ್ಲಿಷ್ಟಕರ ಪದಗಳು, ಉದ್ದುದ್ದ ಹೆಸರುಗಳು, ಉದ್ದ ವಾಕ್ಯಗಳನ್ನು ನಾನು ಪುನರುಚ್ಚರಿಸಲಾರೆ. ಹೀಗಾಗಿ ನಾನು ನನ್ನನ್ನೇ ಹಲವು ಬಾರಿ ಪ್ರಶ್ನೆ ಮಾಡಿದ್ದಿದೆ. “ನಾನು ಇಷ್ಟೊಂದು ಕ್ಲಿಷ್ಟಕರ ಪದಗಳನ್ನು ಬಳಸುವ ಮೆಡಿಕಲ್ ಸೈನ್ಸ್ ಅನ್ನು ಹೇಗೆ ಕಲಿತೆ? ಅದು ಹೇಗೆ ಕಷ್ಟದ ಉದ್ದುದ್ದ ವೈದ್ಯಕೀಯ ಹೆಸರುಗಳನ್ನು ಅರ್ಥ ಮಾಡಿಕೊಂಡೆ ?” ಎಂದು ನನಗೆ ನಾನೇ ಹಾಕುವ ಪ್ರಶ್ನೆಗೆ ನಾನೇ ಆಶ್ಚರ್ಯಚಕಿತಳಾಗಿದ್ದೇನೆ.
ಇವತ್ತು ಕರ್ನಾಟಕದಲ್ಲಿ ಕ್ರಾಂತಿಕಾರಿ ಚೆಗುವೆರಾರ ಸಿಗಾರ್ ವಿಷಯ ಚರ್ಚೆ ಆಗುತ್ತಿತ್ತು. ವಾಸ್ತವವಾಗಿ ನನ್ನ ತಂದೆ ಚೆಗುವೇರ ಅವರು ವೈದ್ಯರಾಗಿದ್ದು, ಅವರಿಗೆ ಅಸ್ತಮಾ ಇತ್ತು ಎನ್ನುವುದು ನಿಜ. ಹಾಗಾಗಿ ಹೆಚ್ಚು ತಂಬಾಕು ಸೇದಬೇಡಿ ಎಂದು ಚೆಗುವೆರಾ ಅವರಿಗೆ ವೈದ್ಯರು ಹೇಳಿದ್ದರು. ಚೆ ಗುವೆರಾ ಅವರು ಇನ್ಮುಂದೆ ಹೆಚ್ಚು ಸಿಗಾರ್ ಸೇದುವಂತಿಲ್ಲ ಎಂದು ವೈದ್ಯರು ಸಲಹೆ ನೀಡಿದ್ದಾರೆ ಎನ್ನುವುದು ತಂಬಾಕು ಕಾರ್ಮಿಕರಿಗೆ ತಿಳಿಯುತ್ತದೆ. ಇದರಿಂದ ಆತಂಕಿತರಾದ ತಂಬಾಕು ಉದ್ಯಮದ ಮುಗ್ದ ಕಾರ್ಮಿಕರು ನನ್ನ ತಂದೆಯಾದ ಚೆಗೆವಾರರನ್ನು ಭೇಟಿಯಾಗುತ್ತಾರೆ. “ನೀವು ಇನ್ಮುಂದೆ ದಿನಕ್ಕೆ ಕೇವಲ ಒಂದೇ ಸಿಗಾರ್ ಸೇದುತ್ತೀರಂತೆ. ನಿಜವೇ ಕಮಾಂಡರ್?” ಎಂದು ಕಾರ್ಮಿಕರು ಮುಗ್ದವಾಗಿ ಚೆ ಗುವೆರಾರನ್ನು ಪ್ರಶ್ನಿಸುತ್ತಾರೆ.
“ಹೌದು. ನಾನು ವೈದ್ಯರ ಸಲಹೆಯಂತೆ ಈ ಶಿಸ್ತನ್ನು ಅಳವಡಿಸಿಕೊಳ್ಳಬೇಕಿದೆ” ಎಂದು ಚೆ ಗುವೆರಾ ಉತ್ತರ ನೀಡುತ್ತಾರೆ. ಆಗ ಮುಗ್ದ ತಂಬಾಕು ಕಾರ್ಮಿಕರು ಒಂದು ಅಡಿಯಷ್ಟು ಉದ್ದದ ತಂಬಾಕು ಸಿಗಾರ್ ಅನ್ನು ಸಿದ್ದಪಡಿಸಿ ಚೆಗವೇರರವರಿಗೆ ನೀಡಿ “ಈಗ ನೀವು ವೈದ್ಯರ ಸಲಹೆಯಂತೆ ದಿನವೊಂದಕ್ಕೆ ಒಂದೇ ಸಿಗಾರ್ ಬಳಸಬಹುದು” ಎನ್ನುತ್ತಾರೆ. ಇದು ನಿಜವಾದ ಕತೆ.
ನನ್ನ ತಂದೆಗೆ ಕವನಗಳೆಂದರೆ ಬಹಳ ಪ್ರೀತಿ. ಕವಿತೆಗಳನ್ನು ಹಾಡುತ್ತಿದ್ದರು ಮತ್ತು ಬರೆಯುತ್ತಿದ್ದರು. ಅವರ ಬರಹಗಳಿಗೆ ಅವರೇ ವಿಮರ್ಶಕರೂ ಆಗಿರುತ್ತಿದ್ದರು. ಹಾಗಾಗಿ ಅವರು ಅವರೇ ಬರೆದ ಕವಿತೆಗಳನ್ನು ಓದುತ್ತಿರಲಿಲ್ಲ. ಆದರೆ ರಾತ್ರಿ ಹೊತ್ತಿನಲ್ಲಿ ನನ್ನ ತಾಯಿಗಾಗಿ ನನ್ನ ತಂದೆ ಚೆ ಗುವೆರಾ ಕವಿತೆಗಳನ್ನು ಓದುತ್ತಿದ್ದರು. ಅಪ್ಪ ಕ್ರಾಂತಿಗಾಗಿ ಕಾಂಗೋಗೆ ಹೊರಡುವಾಗ ನನ್ನ ತಾಯಿಗಾಗಿ ಅವರೇ ವಾಚನ ಮಾಡಿದ ಕವನಗಳನ್ನು ರೆಕಾರ್ಡ್ ಮಾಡಿ ಕೊಟ್ಟು ಹೋಗುತ್ತಿದ್ದರು.
ನಿಜವಾದ ಕ್ರಾಂತಿಯಲ್ಲಿ ಯಾವತ್ತೂ ಕೂಡಾ ಪುರುಷ ಮತ್ತು ಮಹಿಳೆ ಸಮಾನವಾಗಿ ಒಳಗೊಂಡಿರಬೇಕು. ಕ್ರಾಂತಿಯ ಭಾವ ತೀವ್ರತೆಯಲ್ಲೂ ಪುರುಷ ಮತ್ತು ಮಹಿಳೆಯರ ಸಮಾನ ಭಾಗಿದಾರಿಕೆ ಇರಬೇಕು ಎಂದು ತಂದೆ ಚೆಗುವೆರಾ ನಂಬಿದ್ದರು.
ಚೇಗುವೆರಾ ಎಷ್ಟು ಕ್ರಾಂತಿಕಾರಿಯೋ ಅಷ್ಟೆ ರೊಮ್ಯಾಂಟಿಕ್ ಆಗಿದ್ದರು. ಹೇಗೆ ಪ್ರೀತಿಸಬೇಕು ಎಂದು ಅವರು ತಿಳಿದಿದ್ದರು. ಹೇಗೆ ಒಬ್ಬ ವ್ಯಕ್ತಿ ತನ್ನ ಮಗಳು ಮತ್ತು ಪತ್ನಿಯ ಜೊತೆ ಬದುಕುತ್ತಲೇ, ಅವರನ್ನೂ ಕ್ರಾಂತಿಯ ಭಾಗವಾಗಿಸಿಕೊಂಡು ಜಗತ್ತಿಗಾಗಿ ಹೇಗೆ ಹೋರಾಡಬೇಕು ಎಂದು ಚೇಗುವೆರಾ ತಿಳಿಸಿಕೊಟ್ಟರು. ಮನುಕುಲವನ್ನು ಪ್ರೀತಿಸುವ ಸಾಮರ್ಥ್ಯ ಇದ್ದರೆ ಮಾತ್ರ ಆತ ಆಥವಾ ಆಕೆ ಸಮರ್ಥ ವ್ಯಕ್ತಿ ಎಂದೆಣಿಸಿಕೊಳ್ಳಬಹುದು.
ನನ್ನಪ್ಪ ಚೆಗುವೆರಾ ಒಬ್ಬ ಪರಿಪೂರ್ಣ ಕಮ್ಯೂನಿಷ್ಟ್. ನಾನು ಒಮ್ಮೆ ಸ್ಪೇನ್ ನ ಗನಾದ ಯೂನಿವರ್ಸಿಟಿಯಲ್ಲಿದ್ದೆ. ನಾನು ಅಲ್ಲಿ ನಡೆದಿದ್ದ ಸಮ್ಮೇಳನದಲ್ಲಿ ಉಪನ್ಯಾಸ ನೀಡಬೇಕಿತ್ತು. ನಾನು ಆ ಯೂನಿವರ್ಸಿಟಿಯ ಬಾತ್ ರೂಂಗೆ ಹೋದಾಗ ಬಾತ್ ರೂಮ್ ನ ಗೋಡೆಯಲ್ಲಿ ಹೀಗೆ ಬರೆದಿತ್ತು. “ಕ್ರಾಂತಿ ಎಂದರೆ ಬಾಯಲ್ಲಿ ಹೇಳುವುದಲ್ಲ. ಕ್ರಾಂತಿಯೆಂದರೆ ಬದುಕುವುದು. ಕ್ರಾಂತಿಯನ್ನು ಎದೆಯೊಳಗೆ ಇಳಿಸಿಕೊಂಡು ಅದಕ್ಕಾಗಿ ಸಾಯಬೇಕು” ಎಂದು ಬರೆಯಲಾಗಿತ್ತು. ಇದನ್ನು ಒಬ್ಬ ವಿದ್ಯಾರ್ಥಿಯೋ ವಿದ್ಯಾರ್ಥಿನಿಯೋ ಬಾತ್ ರೂಂನ ಗೋಡೆಯಲ್ಲಿ ಬರೆದಿರಬಹುದು. ಇದು ನನ್ನ ಮೇಲೆ ಪರಿಣಾಮ ಬೀರಿತ್ತು. ನಾನು ಸಮ್ಮೇಳನದಲ್ಲಿ ಉಪನ್ಯಾಸ ಕೊಡುವಾಗ ಈ ಬಾತ್ ರೂಂ ಗೋಡೆಯ ಬರಹದ ಬಗ್ಗೆ ಪ್ರಸ್ತಾಪ ಮಾಡಿ, ನನಗೆ ಬಹಳ ಇಷ್ಟವಾದ ಗೋಡೆ ಬರಹ ಇದೆಂದು ಪ್ರಶಂಸೆ ಮಾಡಿದೆ. ಮುಂದಿನ ವರ್ಷ ಇದೇ ವಾಕ್ಯ, ಗೋಡೆ ಬರಹಗಳನ್ನು ಬೇರೆಡೆಯೂ ಕಂಡೆ. ಆದರೆ ಆ ವಾಕ್ಯದ ಕೆಳಗೆ ಚೇ ಎಂದು ಹೆಸರು ಸೇರಿಸಲಾಗಿತ್ತು. ಈ ವಾಕ್ಯವನ್ನು ಚೇ ಹೇಳಿದ್ದಾರೆ ಎಂದು ಬರೆಯಲಾಗಿತ್ತು. ಅದು ಹೇಗೆ ಸಾಧ್ಯ? ಯಾವುದೋ ವಿದ್ಯಾರ್ಥಿ/ವಿದ್ಯಾರ್ಥಿನಿ ಸರಿಯಾಗಿಯೇ ಬರೆದಿರಬಹುದು. ಆದರೆ ಅದು ಚೇ ಹೇಳಿದ್ದಲ್ಲ. ನನ್ನ ತಂದೆ ಚೇ ಯಾವತ್ತೂ ಹಾಗೆ ಹೇಳಿಲ್ಲ. ಏಕಾಏಕಿ ಚೇ ಹೇಳಿದ್ದು ಎಂದು ಎಲ್ಲಾ ಕಡೆ ಹರಡಲಾರಂಬಿಸಿದ್ದು ಹೇಗೆ? ಹಾಗಾಗಿ ನಾವು ಮಾತನಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಸರಿಯಾದುದನ್ನೇ ಹೇಳಿದರೂ ಹೇಗೆ ಹೇಳಬೇಕು ಎಂಬ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಮಾಹಿತಿಗಳ ತಿರುಚುವಿಕೆ ಮತ್ತು ತಪ್ಪಾಗಿ ಪ್ರಸಾರ ಮಾಡುವಿಕೆಯೂ ಈಗಿನ ಮನುಕುಲವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದು.
ಭಾರತ ಮತ್ತು ಕ್ಯೂಬಾ ಭಾವನಾತ್ಮಕವಾಗಿ ದೂರವೇನಿಲ್ಲ. ಭಾರತದ ಪುರುಷರು ಮತ್ತು ಮಹಿಳೆಯರು ಕ್ಯೂಬಾ ಜೊತೆ ಒಗ್ಗಟ್ಟು ಪ್ರದರ್ಶನ ಮಾಡಿದ್ದರು. ಈಗಲೂ ಜೊತೆಯಲ್ಲೇ ಇದ್ದೇವೆ. ಇದೇ ಭಾರತ-ಕ್ಯೂಬಾ ಸೌಂದರ್ಯ. “ಭಾರತ-ಕ್ಯೂಬಾ ಭಾವನಾತ್ಮಕ ಒಗ್ಗಟ್ಟು” ಎನ್ನುವುದು ಮಾನವತೆಯ ಸೌಂದರ್ಯವಾಗಿದೆ ಎಂದು ನಾನು ನಂಬಿದ್ದೇನೆ. ಯಾವಾಗೆಲ್ಲ ನಾವು ಒಗ್ಗಟ್ಟು ಪ್ರದರ್ಶನ ಮಾಡುತ್ತೆವೆಯೋ ಆಗ ಜಗತ್ತಿಗೆ ಏನು ಬೇಕೋ ಅದನ್ನು ನಾವು ಒದಗಿಸಿಕೊಡಬಹುದು. ಜನರ ಒಗ್ಗಟ್ಟು ಮಾತ್ರ ಜನರ ಮಾನವತೆಯನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲದು. ಮನುಷ್ಯತ್ವವನ್ನು ಬೆಳೆಸಲು ಮತ್ತು ಮುಂದಿನ ಪೀಳಿಗೆಗೆ ದಾಟಿಸಲು ನಾವು ಜನರನ್ನು ಒಗ್ಗೂಡಿಸಬೇಕಿದೆ. ಮನುಷ್ಯತ್ವಕ್ಕಾಗಿ ಒಗ್ಗಟ್ಟು ಅನ್ನೋದೇ ನಮ್ಮ ದೊಡ್ಡ ಅಸ್ತ್ರವಾಗಬೇಕಿದೆ. ಜನರ ಸಮಸ್ಯೆಗಳನ್ನು ಜನರು ಪರಸ್ಪರ ಹಂಚಿಕೊಳ್ಳುವ ಮೂಲಕ ಬಗೆಹರಿಸಿಕೊಳ್ಳಬೇಕು. ಯಾವ ಪ್ರದೇಶದ ಯಾವ ಸಮಸ್ಯೆಯೂ ತನಗೆ ಸಂಬಂಧಿಸಿದ್ದಲ್ಲ ಎಂದು ಯಾರೂ ಹೇಳದಂತಹ ಪರಿಸ್ಥಿತಿ ಇರಬೇಕು.
ಎರಡು ವರ್ಷ ಕೊರೋನಾ ಸಾಂಕ್ರಮಿಕ ರೋಗದಿಂದ ನಾವುಗಳು ಬಳಲಿದ್ವಿ. ಕ್ಯೂಬಾ ಆಗ ಆರ್ಥಿಕತೆಯಿಂದಲೂ ಬಳಲಿತ್ತು. ನಾವು ಆಗ ಜನರ ಬದುಕನ್ನು ರಕ್ಷಣೆ ಮಾಡಲೇಬೇಕಿತ್ತು. ಅದನ್ನು ಮಾಡಿದೆವು ಕೂಡ. ಗಂಭೀರ ಆರ್ಥಿಕ ಸಮಸ್ಯೆ ಎದುರಾದಾಗಲೂ ಅದನ್ನು ನಿಭಾಯಿಸಿದೆವು. ನಾವು ಹಲವರಿಂದ ಆರ್ಥಿಕ ನಿರ್ಬಂಧಗಳಿಗೂ ಒಳಗಾಗಿದ್ವಿ.
ನಾವು ಬಹಿಷ್ಕಾರದ ಬಗ್ಗೆ ಸುಲಭವಾಗಿ ಮಾತಾಡಬಹುದು. ಆದರೆ ಬದುಕು ಎನ್ನುವುದು ಅಷ್ಟು ಸುಲಭವಲ್ಲ. ಉದಾಹರಣೆಗೆ ನಾನು ಮಕ್ಕಳ ತಜ್ಞೆ. ನಾನು ಹಲವು ಗಂಭೀರ ಕಾಯಿಲೆಗಳ ರೋಗಿಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಕೋವಿಡ್ ಸಮಯದಲ್ಲಿ ನನ್ನ ದೇಶ ಇನ್ನಿಲ್ಲದಂತೆ ನಲುಗಿದೆ. ನಮ್ಮಲ್ಲಿದ್ದ ಎಲ್ಲಾ ಅನುದಾನವನ್ನು ನಾವು ನಾಗರಿಕರಿಗಾಗಿ ಬಳಸಿದ್ದೇವೆ. ಜಗತ್ತಿನ ದುರಂತ ಏನೆಂದರೆ ಎಲ್ಲಾ ಜೀವರಕ್ಷಕ ಔಷಧಿಗಳ ಪೇಟೆಂಟ್ ಅಮೇರಿಕಾದ ಬಳಿ ಇದೆ. ನಾವು ಹಣ ಕೊಟ್ಟರೂ ಅಮೇರಿಕಾ ನಮಗೆ ಔಷಧಿಗಳನ್ನು ಕೊಡುವುದಿಲ್ಲ. ಬೇರೆ ಯಾರಾದರೂ ಕೊಂಡು, ಅವರ ಬಳಿ ನಾವು ಕೊಂಡರೆ ಅವರಿಗೂ ಅಮೇರಿಕಾ ತೊಂದರೆ ಕೊಡುತ್ತದೆ. ಅದಕ್ಕೆ ನಾವು ಉಪಾಯವಾಗಿ ಕನಿಷ್ಠ ಐದು ದೇಶದ ಕೈದಾಟಿದ ಮೇಲೆ ಅವರಿಂದ ನಾವು ಔಷಧಿ ಕೊಳ್ಳುವ ವ್ಯವಸ್ಥೆ ಮಾಡಿದೆವು. ಆಗ ಔಷದಿಯ ಬೆಲೆ ಐದು ಪಟ್ಟು ಹೆಚ್ಚಾಗುತ್ತದೆ. ಇದೆಲ್ಲಾ ಆದ ಮೇಲೂ ನಾವು ನಮ್ಮ ಜನರಿಗೆ ಸಂಪೂರ್ಣ ಉಚಿತವಾದ ವೈದ್ಯಕೀಯ ಸೌಲಭ್ಯ ಕೊಡುತ್ತೇವೆ.
ನಮ್ಮ ವಿಜ್ಞಾನಿಗಳು ಕಡಿಮೆಯೇನಲ್ಲ, ಪುಟ್ಟ ರಾಷ್ಟ್ರವಾದ ಕ್ಯೂಬಾದಲ್ಲಿ ಒಟ್ಟು ಐದು ಬಗೆಯ ಕೋವಿಡ್ ವ್ಯಾಕ್ಸಿನ್ ಗಳನ್ನು ಕಂಡುಹಿಡಿದರು. ಆದರೆ ಅದಕ್ಕೆ ಬೇಕಾದ ಸಿರಿಂಜ್ ಗಳ ಮೇಲೂ ಅಮೇರಿಕಾ ನಿರ್ಬಂಧ ಹೇರಿತ್ತು. ಕಡೆಗೆ ನಾವು ನೇಸಲ್ ವ್ಯಾಕ್ಸಿನ್ ಕಂಡುಹಿಡಿದೆವು. ಮೂಗಿನ ಹೊಳ್ಳೆಗಳ ಮೂಲಕ ವ್ಯಾಕ್ಸಿನ್ ಅನ್ನು ಜನರಿಗೆ ನೀಡಿ ಯಶಸ್ಸು ಗಳಿಸಿದೆವು. ಹಾಗಾಗಿ ನಾವು ಉಳಿದವರಂತೆ ತೋಳುಗಳಿಗೆ ಇಂಜೆಕ್ಷನ್ ತೆಗೆದುಕೊಂಡಿಲ್ಲ. ಕ್ಯೂಬಾ ಈಗ ಹೊಸತೊಂದು ವ್ಯಾಕ್ಸಿನ್ ಕಂಡುಹಿಡಿದಿದೆ. ಅದರ ಹೆಸರು ಮಾಂಬಿಸ್ಸಾ ವ್ಯಾಕ್ಸಿನ್. ಅದನ್ನೂ ಕೂಡಾ ಮೂಗಿನ ಮೂಲಕ ಕೊಡಲಾಗುತ್ತದೆ. ಹಾಗಾಗಿ ನಮಗೆ ಅಮೇರಿಕಾದ ಸಿರೀಂಜು ಅಗತ್ಯವೇ ಇಲ್ಲ.
ಕ್ಯೂಬಾದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ. ಕ್ಯೂಬಾದಲ್ಲಿ ಚರ್ಮದ ಬಣ್ಣದ ಬಗೆಗಿನ ತಾರತಮ್ಯಗಳು ಇಲ್ಲ. ಯಾವ ಧರ್ಮದ ಹೆಚ್ಚುಗಾರಿಕೆಗಳೂ ಕ್ಯೂಬಾದಲ್ಲಿ ಇಲ್ಲ. ಸಿದ್ದಾಂತದ ಬಗ್ಗೆಯೂ ಮುಕ್ತವಾದ ಹಕ್ಕುಗಳು ಇವೆ. ಕ್ಯೂಬಾದಲ್ಲಿ ನಾಗರಿಕನೊಬ್ಬ ಆತನ ಹಕ್ಕುಗಳನ್ನು ಮುಕ್ತವಾಗಿ ಪಡೆಯುವ ವಾತಾವರಣ ಇದೆ. ಕೋವಿಡ್ ಕಾಲದಲ್ಲೂ ಇಂತಹ ಒಂದು ಒಗ್ಗಟ್ಟನ್ನು ಕ್ಯೂಬಾ ಹೊಂದಿತ್ತು. ಆ ಒಗ್ಗಟ್ಟಿಗೆ ನಾವು ಅಭಾರಿಯಾಗಿದ್ದೇವೆ
ಇಂತಹ ಒಗ್ಗಟ್ಟಿನ ಕಾರಣದಿಂದಲೇ ಕ್ಯೂಬಾವು ಅಪಾಯಕಾರಿ ಸಾಂಕ್ರಮಿಕ ಕೊರೋನಾ ಬಳಿಕವೂ ಜನರ ಜೀವನಮಟ್ಟವನ್ನು ಸುಧಾರಿಸಲು ಸಾಧ್ಯವಾಯಿತು.
ನಮ್ಮ ಜೊತೆ ಕೇರಳ ತನ್ನ ಸಾಲಿಡಾರಿಟಿಯನ್ನು ತೋರಿಸಿತು. ಕ್ಯೂಬಾ ಒಂದು ದೇಶವಾಗಿ ಕೇರಳದ ಜೊತೆ ಜೊತೆಗೆ ಸಾಗುತ್ತಿದ್ದೇವೆ. ಇದಕ್ಕೆ ನಾವು ಒಗ್ಗಟ್ಟು ಎನ್ನುತ್ತೇವೆ. ಆಯುರ್ವೇದಿಕೆ ಮೆಡಿಸಿನ್ ಗಳನ್ನು ಕ್ಯೂಬಾದಲ್ಲಿ ಅಭಿವೃದ್ದಿಪಡಿಸಲು ಕೇರಳದ ಸಹಕಾರ ನೀಡಿದೆ.
ಕೇರಳ ಮತ್ತು ಕ್ಯೂಬಾದ ಮನೋಧರ್ಮ ಒಂದೇ ಆಗಿದೆ. ಹಾಗಾಗಿ ಕೇರಳ ಮತ್ತು ಕ್ಯೂಬಾದಲ್ಲಿ ಒಂದೇ ರೀತಿಯ ಯೋಜನೆ ಮತ್ತು ಯೋಚನೆಗಳಿವೆ. ಕ್ಯೂಬಾ ಮತ್ತು ಕೇರಳದ ಈ ಸಂಬಂಧದಿಂದ ಜಗತ್ತು ಕಲಿಯುವಂತದ್ದು ಬಹಳ ಇದೆ. ನಾವಿಬ್ಬರೂ ಸಮಾನ ಗುರಿ ಮತ್ತು ಉದ್ದೇಶ ಹೊಂದಿದವರಾಗಿದ್ದೇವೆ. ಕೇರಳ ಮತ್ತು ಕ್ಯೂಬಾದ ನಡುವಿನ ಈ ಒಗ್ಗಟ್ಟಿನ ಸಂಬಂಧದಿಂದಾಗಿ ಎರಡೂ ಕಡೆಯ ಪುರುಷರು ಮತ್ತು ಮಹಿಳೆಯರ ನಡುವೆ ಸಾಮಾಜಿಕ, ಆರ್ಥಿಕ ಸಮಾನತೆ ಬಂದಿದೆ. ಈ ಕಾರಣದಿಂದ ನಾವು ಸಾಲಿಡಾರಿಟಿಯನ್ನು ಹೆಚ್ಚು ಹೆಚ್ಚಾಗಿ ಪ್ರತಿಪಾದಿಸಬೇಕು.
ನಮ್ಮ ಒಗ್ಗಟ್ಟು ಹೇಗಿರಬೇಕು ಎಂದರೆ ನಮ್ಮ ಕೆಟ್ಟ ಶತ್ರು ಕೂಡಾ ನಮಗಾಗಿಯೇ ಬಿಳಿ ಗುಲಾಬಿಯನ್ನು ಬೆಳೆಯುವಂತವನಾಗಬೇಕು. ನಾವು ಸಮಾನ ಉದ್ದೇಶಕ್ಕಾಗಿ ಒಗ್ಗೂಡಿ ಹೋರಾಡಬೇಕಿದೆ. ಜನರು ಒಗ್ಗೂಡಿದರೆ ಅನ್ಯಾಯ, ಅಸಮತೆಗಳು ನಡುಗುತ್ತವೆ. ಹಾಗಾಗಿ ನಾವು ಮನುಷ್ಯತ್ವಕ್ಕಾಗಿಯೇ ಹೊಸ ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸುವ ಹೊಣೆಗಾರಿಕೆಯನ್ನು ಹೊಂದಿದ್ದೇವೆ.
ಎಲ್ಲರೂ ಜೊತೆಯಾಗಿರೋಣಾ…
ಕನ್ನಡಕ್ಕೆ ಅನುವಾದ : ನವೀನ್ ಸೂರಿಂಜೆ
(ಡಾ ಅಲೀಡಾ ಗೆವೇರಾ ಮಾತುಗಳನ್ನು ಸ್ಪಾನಿಶ್ ಭಾಷೆಯಿಂದ ಇಂಗ್ಲೀಷ್ ಗೆ ಭಾಷಾಂತರಿಸಿದ್ದನ್ನು ಹೇಗಿದೆಯೋ ಹಾಗೇ ಕನ್ನಡ ಅನುವಾದ ಮಾಡಲಾಗಿದೆ. ಕೆಲ ಪದಗಳು, ವಾಕ್ಯಗಳು ಹೊಂದಿಕೆ ಆಗದೇ ಇದ್ದಾಗ ಅರ್ಥ ವ್ಯತ್ಯಾಸ ಆಗದಂತೆ ಸಮಾನ ಪದ/ ವಾಕ್ಯ ರಚಿಸಲಾಗಿದೆ – ನವೀನ್ ಸೂರಿಂಜೆ)



