ಜನರ ಅನೇಕ ಗಂಭೀರ ಸಮಸ್ಯೆಗಳನ್ನು ಸರ್ಕಾರಗಳು ಗಮನಿಸುತ್ತಲೇ ಇಲ್ಲ

3 years ago

ಎರಡು ದಿನದ ಹಿಂದೆಯಷ್ಟೇ ಬೆಂಗಳೂರು ನಗರದಲ್ಲಿ ಹೈಟೆನ್ಷನ್ ವಿದ್ಯುತ್ ಕಂಬಿಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಇಂತಹ ಬಲಿಗಳು ಕಳೆದ ಹಲವಾರು ವರ್ಷದಲ್ಲಿ ಹತ್ತಾರು ಬಾರಿಯಾಗಿದೆ. ಮತ್ತೊಂದು ಗಂಭೀರವಾದ ಸಮಸ್ಯೆ ಎಂದರೆ ದೊಡ್ಡ ಮೋರಿ ಪಕ್ಕದ ನಿವೇಶನದಾರರ ಬದುಕಿನ ಪ್ರಶ್ನೆ. ಮತ್ತೊಂದು ಗಂಭೀರವಾದ ಸಮಸ್ಯೆ ಎಂದರೆ ನಗರದ ಜನರಿಗೆ ಅವರ ಸ್ಥಿರಾಸ್ತಿಗಳಿಗೆ ಸೂಕ್ತವಾದ ದಾಖಲೆಗಳನ್ನು ನೀಡದಿರುವುದು.

ಸರ್ಕಾರಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಸತ್ತವರ ಸ್ಮಾರಕಗಳು, ಪ್ರತಿಮೆಗಳನ್ನು ನಿರ್ಮಾಣ ಮಾಡಲು ಅದೆಷ್ಟು ಉತ್ಸಾಹವಿದೆಯೋ? ಇಲ್ಲ ಪ್ರೀತಿಗಿಂತ ಬರಿಯ ಓಟಿನ ಲೆಕ್ಕಚಾರವಷ್ಟೆ. ಆದರೆ ಬೆಂಗಳೂರು ನಗರದಲ್ಲಿ ಸಾವಿರಾರು ನಿವೇಶನದಾರರು, ಬಿಡಿಎ, ಗೃಹಮಂಡಳಿ, ಖಾಸಗಿ ಗೃಹ ಮಂಡಳಿ ಸಂಸ್ಥೆಗಳು ಹಾಗೂ ರೆವಿನ್ಯೂ ನಿವೇಶನದಾರರು ಹೈಟೆನ್ಷನ್ ವೈರಿನ ಅಡಿಯಲ್ಲಿ ತಮ್ಮ ನಿವೇಶನಗಳನ್ನು ಹೊಂದಿದ್ದಾರೆ. ಹಣವುಳ್ಳ ಶ್ರೀಮಂತರು ಮತ್ತು ಕೆಲವು ಸಂಸ್ಥೆಯವರು 220 ಮತ್ತು 61 ಕೆ.ವಿ ಅಧಿಕ ವಿದ್ಯುತ್ ಪ್ರಸರಣ ತಂತಿಗಳನ್ನು ಎತ್ತರಕ್ಕೆ ಏರಿಸಿಕೊಂಡಿದ್ದಾರೆ. ಇಲ್ಲವೇ ಭೂ ಗರ್ಭದಲ್ಲಿ ಅಡಗಿಸಿದ್ದಾರೆ. ಕಾಸು ಇಲ್ಲದ ಜನ ಹೇಗೋ ಒಂದಷ್ಟು ಹಣವನ್ನು ಹೊಂಚಿ ಇದರ ಆಡಿಯಲ್ಲಿ ಮನೆಗಳನ್ನು ಕಟ್ಟಿಕೊಂಡು ಬದುಕುತ್ತಾ ಮೇಲಿಂದ ಮೇಲೆ ಅವರ ಮಕ್ಕಳು ಅಥವಾ ಅವರು ವಿದ್ಯುತ್ ಅಪಘಾತಗಳಿಗೆ ಬಲಿಯಾಗಿ ಮಸಣದ ಹಾದಿಯನ್ನು ಹಿಡಿಯುತ್ತಿದ್ದಾರೆ. ಯಾವುದೇ ಸರ್ಕಾರಕ್ಕೂ ಸಹ ಜನವಸತಿ ಪ್ರದೇಶಗಳಲ್ಲಿ ಹಾದು ಹೋಗುತ್ತಿರುವ ಅಧಿಕ ವಿದ್ಯುತ್ ಪ್ರಸರಣ ತಂತಿಗಳನ್ನು ಎತ್ತರಕ್ಕೆ ಏರಿಸುವ ಅಥವಾ ಭೂ ಗರ್ಭದಲ್ಲಿ ಅಡಗಿಸುವ ಯೋಜನೆಯನ್ನು ರೂಪಿಸಲು ಆಸಕ್ತಿ ಇಲ್ಲ. ಇಂತಹ ನಿವೇಶನಗಳನ್ನು ಹೊಂದಿರುವವರು ಬಡವರು ತಾನೇ? ಬಡವರ ಮನೆಯ ಮಕ್ಕಳ ಜೀವಗಳಿಗೆ ಬೆಲೆ ಎಲ್ಲಿದೇ? ನಗರದ ಯಾವ ಪ್ರತಿನಿಧಿಗೂ ಇಂತಹ ವಿಚಾರದಲ್ಲಿ ಆಸಕ್ತಿ ಇಲ್ಲ. ಕಾರಣ ಇವರ ಸಂಬಂಧಿಕರಾರು ಇಂತಹ ನಿವೇಶನಗಳ ಮಾಲೀಕರಲ್ಲ ಎನಿಸುತ್ತದೆ.

ಮದ್ರಾಸಿನಲ್ಲಿರುವ ಹಸಿರು ಪೀಠ 2016ರಲ್ಲಿ ಒಂದು ಆದೇಶವನ್ನು ಹೊರಡಿಸುತ್ತದೆ. ಅದರ ಪ್ರಕಾರ ಬೆಂಗಳೂರು ನಗರದಲ್ಲಿ ಇರುವ ನಿವೇಶನದಾರರು ಪ್ರಥಮ ಹಂತದ ಮೋರಿಗಳ ಪಕ್ಕದಲ್ಲಿ ಇದ್ದರೆ 150 ಅಡಿಗಳ ಜಾಗವನ್ನು ಬಿಟ್ಟು ಕಟ್ಟಬೇಕು. ಎರಡನೇ ಹಂತದ ಮೋರಿಗಳ ಪಕ್ಕದಲ್ಲಿದ್ದರೆ 75 ಅಡಿ ಜಾಗವನ್ನು ಬಿಟ್ಟು ಕಟ್ಟಬೇಕು. ಮೂರನೇ ಹಂತದ ಮೋರಿಯ ಪಕ್ಕದಲ್ಲಿದ್ದರೆ 45 ಅಡಿಗಳನ್ನು ಬಿಟ್ಟು ಕಟ್ಟಬೇಕು.

2016ಕ್ಕೂ ಮುನ್ನ ಸ್ವಾತಂತ್ರ್ಯ ಪೂರ್ವದಿಂದಲೂ ನಂತರ ಹೌಸಿಂಗ್ ಬೋರ್ಡ್, ಬಿಡಿಎ, ಬಿ.ಬಿ.ಎಂ.ಪಿ ಮುಂತಾದ ಸಂಸ್ಥೆಗಳಿಂದ ನಿವೇಶನಗಳನ್ನು ಪಡೆದವರು ತಮ್ಮ ಕಟ್ಟಡಗಳಿಗೆ ನಕ್ಷೆಯನ್ನು ಪಡೆದುಕೊಂಡವರು, ಬ್ಯಾಂಕಿನಲ್ಲಿ ಸಾಲವನ್ನು ಪಡೆದುಕೊಂಡವರು ಲಕ್ಷಾಂತರ ನಿವೇಶನದಾರರು ಈ ಆದೇಶದಿಂದ ತಮ್ಮ ನಿವೇಶನದ ಮೌಲ್ಯಗಳನ್ನು ಕಳೆದುಕೊಂಡಿದ್ದಾರೆ. ಇವರಿಗೆ ಬ್ಯಾಂಕಿನಲ್ಲಿ ಸಾಲ ಕೊಡುವುದಿಲ್ಲ, ಮನೆ ಕಟ್ಟಲು ನಕ್ಷೆ ಅನುಮತಿ ಕೊಡುವುದಿಲ್ಲ, ಮಾರಾಟ ಮಾಡಿದರೆ ಕೊಳ್ಳುವವರು ಗತಿ ಇಲ್ಲ. ಹೀಗಾಗಿ ಇಂತಹ ನಿವೇಶನದಾರರು ಆಸ್ತಿ ಇದ್ದರೂ ಸಹ ಯಾವುದೇ ಪ್ರಯೋಜನಕ್ಕೆ ಬಾರದೆ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಒಂದು ಈ ನಿವೇಶನದಾರರಿಗೆ ಪರಿಹಾರ ಕೊಟ್ಟು ಸರ್ಕಾರವೇ ಇದನ್ನು ಉಳಿಸಿಕೊಂಡು ತೋಟಗಳನ್ನಾಗಿ ಪರಿವರ್ತಿಸಿಕೊಳ್ಳಲಿ. ಇಲ್ಲವೇ ಇವರಿಗೆ ಬದಲಿ ನಿವೇಶನ ನೀಡಲಿ. ಇದು ಸಾಧ್ಯವಾಗದಿದ್ದರೆ ಹಸಿರು ಪೀಠಕ್ಕೆ ಮೇಲ್ಮನವಿಯನ್ನು ಸಲ್ಲಿಸಿ 2016ರ ಮುನ್ನ ಇರುವ ಈ ವ್ಯಾಪ್ತಿಯಲ್ಲಿನ ನಿವೇಶನದಾರರಿಗೆ ಷರತ್ತಿನ ಮೇಲೆ ಸೌಲಭ್ಯಗಳನ್ನು ನೀಡಲಿ.

ನಗರದ ಯಾವ ಚುನಾಯಿತ ಪ್ರತಿನಿಧಿಗಳಿಗೂ ಈ ಜನರ ನೋವು ತಿಳಿದೇ ಇಲ್ಲ. ಮತ್ತೆ ಕಾರಣವೇನೆಂದರೆ ಈ ನಿವೇಶನದಾರರೆಲ್ಲಾ ಬಡವರು ಮತ್ತು ಮಧ್ಯಮ ವರ್ಗದವರು. ಕಾನೂನಿನ ನೆಪವನ್ನು ಹೇಳಿ ಇವರನ್ನು ನಿಯಂತ್ರಿಸುತ್ತಲೇ ಇದ್ದಾರೆ.

ನಗರದಲ್ಲಿ 1995ರಲ್ಲಿ ಅಂದು ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ. ದೇವೇಗೌಡರು ನಗರದ ರೆವಿನ್ಯೂ ನಿವೇಶನದಾರರ ಎಲ್ಲಾ ನಿವೇಶನಗಳನ್ನು ಚದರ ಮೀಟರ್ಗೆ ನೂರು ರೂಪಾಯಿಗಳ ಅಭಿವೃದ್ಧಿ ಶುಲ್ಕವನ್ನು ಪಾವತಿಸಿಕೊಂಡು ‘ಎ’ ಖಾತೆಯನ್ನು ಮಾಡಿಕೊಟ್ಟು ಇಂತಹ ನಿವೇಶನಗಳ ಮಾಲೀಕರಿಗೆ ಬ್ಯಾಂಕಿನ ಸಾಲ ಪಡೆಯಲು, ನಕ್ಷೆ ಪರವಾನಿಗೆಯನ್ನು ಪಡೆಯಲು ಅನುಕೂಲ ಮಾಡಿಕೊಟ್ಟು ಇಂತಹ ಸಾವಿರಾರು ನಿವೇಶನದಾರರ ಬದುಕಿನಲ್ಲಿ ಭದ್ರವಾದಂತಹ ಅಡಿಪಾಯವನ್ನು ಹಾಕಿಕೊಟ್ಟರು. ನಂತರದ ಸರ್ಕಾರಗಳು ರೆವಿನ್ಯೂ ನಿವೇಶನದಾರರಿಗೆ ಅಥವಾ ಭೂ ಪರಿವರ್ತನೆಗೊಂಡ ಬಡಾವಣೆಗಳಲ್ಲಿನ ಬಿಡಿ ನಿವೇಶನಗಳಿಗೆ ‘ಎ’ ಖಾತೆಯನ್ನು ಮಾಡಿಕೊಡಲಿಲ್ಲ. ನಕ್ಷೆ ಮಂಜೂರಾತಿಯನ್ನು ಮಾಡಲಿಲ್ಲ. ಇನ್ನು ಬ್ಯಾಂಕಿನ ಸಾಲವಂತೂ ದೊರೆಯಲಿಲ್ಲ. ಆದರೆ ‘ಬಿ’ ಖಾತೆ ಎಂಬ ಹೆಸರಿನಲ್ಲಿ ತೆರಿಗೆಯನ್ನು ಮಾತ್ರ ತಪ್ಪದೇ ಕಟ್ಟಿಸಿಕೊಳ್ಳುತ್ತಿದ್ದಾರೆ.

ಬಿ.ಬಿ.ಎಂ.ಪಿ.ಯಲ್ಲಿ ಮಧ್ಯವರ್ತಿಗಳ ಮೂಲಕ ಹಣವುಳ್ಳವರು ತುರ್ತಾದಂತಹ ಅಗತ್ಯ ಇರುವವರು, ಲಕ್ಷಾಂತರ ರೂಪಾಯಿಗಳ ಲಂಚವನ್ನು ನೀಡಿ ‘ಎ’ ಖಾತೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರದ ಆದೇಶಗಳು ಮೇಲಿಂದ ಮೇಲೆ ಬರುತ್ತವೆ. ನ್ಯಾಯಾಲಯದಲ್ಲಿನ ಪ್ರಕರಣಗಳ ನೆಪಗಳನ್ನು ಹೇಳಿ ಈ ಸಮಸ್ಯೆಯನ್ನು ಜೀವಂತವಾಗಿಟ್ಟಿದ್ದಾರೆ. ನ್ಯಾಯಾಲಯದಲ್ಲಿ ಇರುವ ಮೊಕದ್ದಮೆಗಳ ತುರ್ತು ಇತ್ಯರ್ಥಕ್ಕೆ ಯಾರಿಗೂ ಆಸಕ್ತಿ ಇಲ್ಲ. ಇಂತಹ ಬಡಾವಣೆಗಳಲ್ಲಿ ಇರುವವರು ಮೇಲೆ ತಿಳಿಸಿದ ಮೂರು ವರ್ಗದವರು ಇರಲಿ, ಸಾಯಲಿ ಇವರನ್ನು ಮತದಾರರ ಪಟ್ಟಿಗೆ ಸೇರಿಸಿಕೊಂಡು ಇವರ ಮತಗಳನ್ನು ಪಡೆದು ಚುನಾಯಿತ ಪ್ರತಿನಿಧಿಗಳು ಸಂತೋಷವಾಗಿದ್ದಾರೆ.

ಬೆಂಗಳೂರು ನಗರದ ಚುನಾಯಿತ ಪ್ರತಿನಿಧಿಗಳಿಗೆ ಇಂತಹ ಅನೇಕ ಸಮಸ್ಯೆಗಳ ಪರಿಚಯವೇ ಇಲ್ಲ. ಧ್ವನಿ ಇಲ್ಲದ ಜನರ ಆಕ್ರೋಶ ತಿಳಿಯುತ್ತಲೇ ಇಲ್ಲ. ಸದ್ಯದಲ್ಲೇ ಚುನಾವಣೆ ಬರುತ್ತಿದೆ. ಇಂತಹ ಸಮಸ್ಯೆಗಳ ಬಗ್ಗೆ ಯಾವುದಾದರೂ ರಾಜಕೀಯ ಪಕ್ಷದವರು ಸಮಸ್ಯೆಯ ಜ್ಞಾನವಿಲ್ಲದಿದ್ದರೆ ಜನರಿಂದ ತಿಳಿದುಕೊಂಡಾದರೂ ಪರಿಹರಿಸುವ ಭರವಸೆಯನ್ನಾದರೂ ನೀಡಿ.

– ಕೆ.ಎಸ್. ನಾಗರಾಜ್, ಬೆಂಗಳೂರು

Leave a Reply