ರಾಜ್ಯದ ಬರಪೀಡಿತ ಪ್ರದೇಶದಲ್ಲಿ ಬಿಜೆಪಿ ತಂಡಗಳ ಪ್ರವಾಸ

2 years ago

#Tour #BJP# teams #drought #areas #state KEA #illegal #exam

ಬೆಂಗಳೂರು: ರಾಜ್ಯದ ಬರಪೀಡಿತ ಪ್ರದೇಶದಲ್ಲಿ ಬಿಜೆಪಿ ತಂಡಗಳು ಪ್ರವಾಸ ಮಾಡಲಿದ್ದು, ಸಂತ್ರಸ್ತರಿಗೆ ಸಾಂತ್ವನ ಹೇಳುವ ಜೊತೆಗೆ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಗಮನಿಸಿ‌ ಅದನ್ನು ಸರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲು ನಿರ್ಧರಿಸಿದೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ವಿಧಾನಪರಿಷತ್ ಸದಸ್ಯ ರವಿಕುಮಾರ್ ಬಿಜೆಪಿ ನಾಯಕರು 17 ತಂಡಗಳಲ್ಲಿ ನವೆಂಬರ್ 3 ರಿಂದ 10ರ ವರೆಗೆ  ಬರಪೀಡಿತ ಪ್ರದೇಶಗಳಲ್ಲಿ ಅಧ್ಯಯನ ಪ್ರವಾಸ ಮಾಡಲಿವೆ ಎಂದರು.

ರಾಜ್ಯಾದ್ಯಂತ ಬರ ತೀವ್ರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು, ಉತ್ತರ ಕರ್ನಾಟಕದಿಂದ ದೊಡ್ಡ ಪ್ರಮಾಣದಲ್ಲಿ ಗುಳೆ ಹೋಗುತ್ತಿದ್ದಾರೆ. ಬೆಂಗಳೂರು, ಮುಂಬೈ ಸೇರಿ ಎಲ್ಲಿ ಉದ್ಯೋಗ ಸಿಗುತ್ತದೆಯೋ ಅಲ್ಲಿಗೆ ಗುಳೆ ಹೋಗುತ್ತಿದ್ದಾರೆ. ಆದರೆ ಸರ್ಕಾರ, ಸಿಎಂ, ಡಿಸಿಎಂ, ಸಚಿವರು ಡಿನ್ನರ್ ಪಾರ್ಟಿಯಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಬಿಜೆಪಿ 17 ತಂಡ ರಚಿಸಿದ್ದು, ಬರ ಅಧ್ಯಯನ ಪ್ರವಾಸ ನಡೆಸಲಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಸಿ ಟಿ ರವಿ, ಶಾಸಕ ಅರವಿಂದ ಬೆಲ್ಲದ್, ಮಾಜಿ ಸಚಿವ ಬಿ ಶ್ರೀರಾಮುಲು, ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ, ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಡಿಸಿಎಂ ಆರ್‌ ಅಶೋಕ್, ಮಾಜಿ ಸಭಾನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಸಿಎಂ ಡಿ.ವಿ ಸದಾನಂದಗೌಡ ಸೇರಿದಂತೆ ಅನೇಕರ ನೇತೃತ್ವದ ತಂಡಗಳು ಬರ ಪ್ರವಾಸ ಮಾಡಲಿವೆ ಎಂದರು.

ಪ್ರತೀ ತಂಡ ಎರಡು ಜಿಲ್ಲೆಗಳಿಗೆ ಭೇಟಿ ನೀಡಿ ಬರ ಸ್ಥಿತಿಗತಿ ವೀಕ್ಷಣೆ ಮಾಡಲಿವೆ. ನಂತರ ಅಧ್ಯಯನ ವರದಿಯನ್ನ ಸರ್ಕಾರದ ಗಮನಕ್ಕೆ ತರಲಿದ್ದೇವೆ. ಮುಂಬರಲಿರುವ ಚಳಿಗಾಲದ ಅಧಿವೇಶನದ ವೇಳೆ ಸದನದಲ್ಲಿ ಚರ್ಚೆಗೆ ಅವಕಾಶ ಕೇಳಲಿದ್ದೇವೆ ಎಂದರು.

ಸರ್ಕಾರ ಇನ್ನೂ ಕಲೆಕ್ಷನ್ ನಿಲ್ಲಿಸಿಲ್ಲ. ವರ್ಗಾವಣೆ ದಂಧೆ ನಿಲ್ಲಿಸಿಲ್ಲ. ಕೆಇಎ ನಡೆಸುತ್ತಿರೋ ಎಫ್ಡಿಎ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಕೆಲವೆಡೆ ಒಂದು ಗಂಟೆ ಹೆಚ್ಚುವರಿ ಪರೀಕ್ಷೆಗೆ ಅವಕಾಶ ನೀಡಿದ್ದಾರೆ. 9 ಜನ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಆರ್.ಡಿ ಪಾಟೀಲ್ ಯಾಕೆ ಇನ್ನೂ ಬಂಧನ ಆಗಿಲ್ಲ. ಸರ್ಕಾರದ ಹಸ್ತಕ್ಷೇಪ ಇದರಲ್ಲಿ ಇದೆ. ಕೂಡಲೇ ಇದರ ತನಿಖೆ ನಡೆಸಬೇಕು. ಆರ್ ಡಿ ಪಾಟೀಲ್ ಬಂಧನ ಆಗಬೇಕೆಂದು ಒತ್ತಾಯಿಸಿ ಯಾದಗಿರಿ, ಕಲಬುರಗಿಯಲ್ಲಿ ಹೋರಾಟ ಮಾಡಲಾಗುವುದು. ಬುಧವಾರ ಪ್ರತಿಭಟನೆ ನಡೆಯಲಿದೆ ಎಂದರು.

Leave a Reply