ಬಹು ಸಂಸ್ಕೃತಿಯ ಭಾರತ ದೇಶದಲ್ಲಿ ಬಹುತ್ವವನ್ನು ದಿನದಿಂದ ದಿನಕ್ಕೆ ಆಡಳಿತಾತ್ಮಕವಾದ ಕಾನೂನುಗಳ ಮೂಲಕ ದಮನಗೊಳಿಸುತ್ತಾ ಏಕ ವ್ಯಕ್ತಿ, ಏಕ ಸಂಸ್ಕೃತಿಯ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಾ ಬಂದಿರುವಂತಹ ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿರವರ ನೇತೃತ್ವದ ಸರ್ಕಾರ ಒಂದು ಚುನಾವಣೆ, ಒಂದು ದೇಶ ಎಂಬ ಹೊಸದೊಂದು ಆಸ್ತ್ರದ ಮೂಲಕ ಸರ್ವಾಧಿಕಾರಿ ವ್ಯವಸ್ಥೆಯತ್ತ ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ.
ಈಗಾಗಲೇ ಪ್ರತಿಯೊಂದು ವಿಚಾರದಲ್ಲಿಯೂ ಒಂದು ದೇಶ ಒಂದು ಕಾನೂನು, ಒಂದು ದೇಶ ಒಂದು ಕಾರ್ಡ್ ಎಂಬ ಮಾತುಗಳನ್ನಾಡಿ ಒಂದು ದೇಶ ಒಂದು ಭಾಷೆ ಎಂಬ ನೀತಿಯನ್ನು ಹಿಂದಿಯನ್ನು ಹೇರುವುದರ ಮೂಲಕ ಪರೋಕ್ಷವಾಗಿ ಜಾರಿಗೆ ತರುತ್ತಿದ್ದಾರೆ.
ಲೋಕಸಭೆಯಲ್ಲಿ ತಮಗೆ ಬಹುಮತವಿದೆ ಎಂಬ ಕಾರಣದಿಂದ ರಾಜ್ಯಸಭೆಯಲ್ಲಿ ಬಹುಮತವನ್ನು ಪಡೆದುಕೊಳ್ಳಲು ತಂತ್ರಗಾರಿಕೆಯನ್ನು ಬಲ್ಲವರಾಗಿರುವುದರಿಂದ ಅನೇಕ ತಿದ್ದುಪಡಿಗಳನ್ನು ತಂದು ಅವುಗಳನ್ನು ಅನುಮೋದಿಸಿಕೊಂಡು ಕಾನೂನಾಗಿ ಪರಿವರ್ತಿಸಿ ಆಡಳಿತ ವ್ಯವಸ್ಥೆಯನ್ನು ತಮ್ಮ ಗುಪ್ತ ಕಾರ್ಯಸೂಚಿಯ ಪ್ರಕಾರವೇ ನಡೆಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ದೇಶದಲ್ಲಿ ರಾಷ್ಟ್ರಪತಿ ವ್ಯವಸ್ಥೆಯ ಆಡಳಿತವೂ ಜಾರಿಗೆ ಬಂದರು ಅಚ್ಚರಿ ಇಲ್ಲ.
ಇವರು ಮಾಡುವ ಎಲ್ಲಾ ಕಾನೂನುಗಳಿಗೆ ಬೆಂಬಲವನ್ನು ನೀಡುತ್ತಾ ರಾಷ್ಟ್ರದ ಜನರ ಮನಸ್ಸಿನಲ್ಲಿ ಅದು ಸತ್ಯವೆನ್ನುವ ರೀತಿಯಲ್ಲಿ ಸುದ್ದಿ ಮಾಡುತ್ತಿರುವ ಆನೇಕ ಸುದ್ದಿ ಮಾಧ್ಯಮಗಳು ಪರೋಕ್ಷವಾಗಿ ಇವರ ವಕ್ತಾರರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಒಂದು ದೇಶ ಒಂದು ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಒಪ್ಪುವಂತದಲ್ಲ. ಈ ದೇಶದಲ್ಲಿ ಅನೇಕ ರಾಜ್ಯಗಳಿದ್ದು, ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದಂತಹ ಸಂಸ್ಕೃತಿ, ಆಚಾರ-ವಿಚಾರ ಹಿನ್ನೆಲೆ, ಭೌಗೋಳಿಕ, ಸಾಮಾಜಿಕ, ರಾಜಕೀಯ ಸಮಸ್ಯೆಗಳಿವೆ ಮತ್ತು ಇತಿಹಾಸವಿದೆ. ರಾಜ್ಯದ ಚುನಾವಣೆಯ ಸಂದರ್ಭದಲ್ಲಿ ಪ್ರಾದೇಶಿಕ ವಿಚಾರಗಳು ಮತ್ತು ಪ್ರಾದೇಶಿಕ ನಾಯಕತ್ವ ಪ್ರಮುಖವಾದಂತಹ ಪ್ರಭಾವವನ್ನು ಚುನಾವಣೆಯ ಫಲಿತಾಂಶದ ಮೇಲೆ ಬೀರುತ್ತದೆ. ಲೋಕಸಭೆ ಚುನಾವಣೆಯಲ್ಲಿ ದೇಶದ ಆರ್ಥಿಕ ನೀತಿ, ವಿದೇಶಾಂಗ ನೀತಿ, ಭದ್ರತೆ ಮುಂತಾದಂತಹ ಸಂಗತಿಗಳು ಚರ್ಚಿಸಲ್ಪಡುವ ವಿಚಾರಗಳಾಗುತ್ತದೆ.
ಒಂದು ದೇಶ ಒಂದು ಚುನಾವಣೆ ಎಂದರೆ ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆ ಅವರ ಪ್ರಭಾವಯುತ್ತವಾದ ಪ್ರಚಾರದ ವೈಖರಿಯ ಮುಂದೆ ಪ್ರಾದೇಶಿಕ ವಿಚಾರಗಳು ನಗಣ್ಯವಾಗುತ್ತದೆ. ಪ್ರಾದೇಶಿಕ ನ್ಯಾಯಕತ್ವವು ಸೊರಗುತ್ತದೆ. ಹೀಗಾಗಿ ಏಕ ಪಕ್ಷದ ಆಡಳಿತ ವ್ಯವಸ್ಥೆ ದೇಶದ ತುಂಬೆಲ್ಲಾ ಬೇರು ಬಿಡಲು ಸಾಧ್ಯವಾಗುತ್ತದೆ. ಇಂತಹ ಒಂದು ಕಾರಣದಿಂದಲೇ ಬಿ.ಜೆ.ಪಿ.ಯವರು ಒಂದು ದೇಶ, ಒಂದು ಚುನಾವಣೆ ಎಂಬ ಭ್ರಮೆಯನ್ನು ಜನರಲ್ಲಿ ಹುಟ್ಟಿಸಿ, ಚುನಾವಣೆಯ ಖರ್ಚು ವೆಚ್ಚದ ಮಾತುಗಳನ್ನಾಡುತ್ತಾ ತಮ್ಮ ವಾದವನ್ನು ಒಪ್ಪಿಸುವಂತಹ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಒಂದು ದೇಶ ಒಂದು ಚುನಾವಣೆ ನಡೆಸುವುದರ ಮೂಲಕ ತಮ್ಮ ಗುಪ್ತ ಕಾರ್ಯಸೂಚಿಗಳಾದಂತಹ ಧಾರ್ಮಿಕ ಭಾವನೆಗಳನ್ನು ದೇಶ ರಕ್ಷಣೆಯ ಹೆಸರಿನಲ್ಲಿ ಜನರಲ್ಲಿ ಪ್ರಚೋದಿಸಿ ಇಡೀ ದೇಶಾದ್ಯಂತ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ಪ್ರಾದೇಶಿಕ ಪಕ್ಷಗಳನ್ನು, ಪ್ರಾದೇಶಿಕ ನಾಯಕತ್ವವನ್ನು, ಪ್ರಾದೇಶಿಕ ಆಸ್ಮಿತೆಯನ್ನು, ಪ್ರಾದೇಶಿಕ ಭಾಷೆ, ಸಂಸ್ಕೃತಿ ಇವುಗಳನ್ನು ಕೊಲ್ಲುವಂತಹ ದೊಡ್ಡದಾದಂತಹ ಹುನ್ನಾರವನ್ನು ನಡೆಸುತ್ತಿದ್ದಾರೆ.
ಒಂದು ವೇಳೆ ಒಂದು ದೇಶ ಒಂದು ಚುನಾವಣೆಯೆಂದು ಏಕಕಾಲದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆದು ಬಹುತೇಕ ರಾಜ್ಯಗಳಲ್ಲಿ ರಾಜ್ಯ ವಿಧಾನಸಭೆಯಲ್ಲಿ ಅತಂತ್ರ ಫಲಿತಾಂಶ ಬಂದರೆ ಅಲ್ಲಿ ರಚನೆಯಾಗುವ ಸರ್ಕಾರಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡಿ ವಿಧಾನಸಭೆ ವಿಸರ್ಜನೆಯಾದರೆ ಆಗ ಉಳಿದ ಅವಧಿಯನ್ನು ನಿರ್ವಹಿಸುವವರಾರು?
ಇಂತಹ ಹತ್ತು ಹಲವಾರು ಪ್ರಶ್ನೆಗಳು ಇಲ್ಲಿ ಇರುವುದರಿಂದ ಒಂದು ದೇಶ ಒಂದು ಚುನಾವಣೆ ಎನ್ನುವುದು 1952, 1957 ಮತ್ತು 1962ರ ಅವಧಿಯಲ್ಲಿ ಸಾಧ್ಯವಾಗಿತ್ತು. ನಂತರದ ದಿನಗಳಲ್ಲಿ ದೇಶದ ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಮತ್ತು ಪ್ರಾದೇಶಿಕ ನಾಯಕತ್ವ ಬೆಳೆದ ಮೇಲೆ ರಾಷ್ಟ್ರೀಯ ಪಕ್ಷಗಳು ಇಡೀ ದೇಶದಾದ್ಯಂತ ಎಲ್ಲಾ ರಾಜ್ಯದಲ್ಲೂ ವಿಸ್ತರಿಸಿಕೊಂಡಿಲ್ಲ. ಎಲ್ಲಾ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ನೆರಳಿನಲ್ಲಿ ಅನೇಕ ರಾಜ್ಯದಲ್ಲಿ ತಮ್ಮ ಬೇರನ್ನು ಗಟ್ಟಿಗೊಳಿಸುವ ಪ್ರಯತ್ನದಲ್ಲಿವೆ. ಇದು ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ನಾಯಕತ್ವದ ಬಲವಂತದ ಹೇರಿಕೆಯ ಸಂಗತಿಯಾಗಿರುತ್ತದೆ.
- ಕೆ.ಎಸ್. ನಾಗರಾಜ್, ಬೆಂಗಳೂರು




