ಬರಡಾದ ರೈತನ ಬಾಳಲ್ಲಿ ಜೀವಜಲ ತುಂಬಿದ ನರೇಗಾ

7 months ago

ಅಂಗೈ ಅಗಲದ ಭೂಮಿಯಲ್ಲಿ ಬೆರಳ ಗಾತ್ರ ನೀರುಕ್ಕುವ ಕೊಳವೆ ಬಾವಿ! ಅದನ್ನೇ ನಂಬಿ ನೆಟ್ಟ ಅಡಿಕೆ ಸಸಿ. ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಹುಲುಸಾಗಿ ಬೆಳೆದು ನಿಂತ ತೋಟ. ಇನ್ನೇನು ಫಲ ಕೋಡಬೇಕು ಅನ್ನುಷ್ಟರಲ್ಲಿ ಕೈಕೊಟ್ಟ ನೀರು! ಇನ್ನೆಲ್ಲಿಯ ನೀರು, ಇನ್ನೆಲಿಯ ಅಡಿಕೆ ಎಂದು ತಲೆ ಮೇಲೆ ಕೈಹೊದ್ದು ಕೂತ ರೈತನ ತಲೆ ಮೇಲೆ ಕೈ ಸವರಿ “ಚಿಂತಿಸಬೇಡ ನಾನಿದ್ದೇನೆ” ಎಂದು ಸಾಂತ್ವನ ಹೇಳಿ ಸಾಕ್ಷಾತ್ ಗಂಗಾ ಮಾತೆಯೇ ತೋಟದಲ್ಲಿ ನೆಲೆ ನಿಲ್ಲುವಂತೆ ಮಾಡಿದ್ದು ಮಾತ್ರ ಮಹಾತ್ಮ ಗಾಂಧಿ ನರೇಗಾ ಯೋಜನೆ!

ಹೌದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ನಾಗನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹನುಮಾಪುರ ಗ್ರಾಮದ ರೈತ ನಿಂಗಯ್ಯ ಬಸಯ್ಯ ಹಿರೇಮಠ ಹಾಗೂ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅವರು ನಿರ್ಮಿ ಸಿಕೊಂಡ ರಿಂಗ್ ಬಾವಿ ಹೀಗೊಂದು ಕಥೆಗೆ ಸಾಕ್ಷಿಯಾಗಿದೆ.

ಏಳೆಂಟು ವರ್ಷಗಳ ಹಿಂದೆ ರೈತ ನಿಂಗಯ್ಯ ತಮ್ಮ ಜಮೀನಿನಲ್ಲಿ ಅಡಿಕೆ ತೋಟ ನಿರ್ಮಿಸುತ್ತಾರೆ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಕೊಳವೆ ಬಾವಿಯಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಪ್ರಮಾಣ ಕುಗ್ಗುತ್ತ ಬರುತ್ತದೆ. ಎಲ್ಲರಿಗೂ ತಿಳಿದಿರುವಂತೆ ಅಡಿಕೆ ಫಸಲು ಬಿಡುವುದೇ ಐದಾರು ವರ್ಷಗಳ ನಂತರ. ಹೀಗೆ ನೀರಿನ ಅಭಾವದಲ್ಲಿಯೇ ಹಠಕ್ಕೆ ಬಿದ್ದು ತೋಟ ಬೆಳೆಸಿದ ರೈತ ನಿಂಗಯ್ಯ ಇನ್ನೇನು ಫಸಲು ಬಂದು ಲಾಭ ಪಡೆಯಬೇಕು ಎನ್ನುವಷ್ಟರಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಅಷ್ಟು ವರ್ಷಕಾಲ ತಪಸ್ಸಿನಂತೆ ಬೆಳೆಸಿದ ತೋಟ ಕಣ್ಮುಂದೆಯೆ ಒಣಗಲಾರಂಭಿಸುತ್ತದೆ. ಪಟ್ಟ ಶ್ರಮವೆಲ್ಲ ವ್ಯರ್ಥವಾಯಿತು ಎಂದು ಕೈಚೆಲ್ಲುವ ಹೊತ್ತಿಗೆ ಭರವಸೆಯ ಬೆಳಕಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆ ನೆರವಿಗೆ ಬರುತ್ತದೆ.

ಗ್ರಾಮ ಪಂಚಾಯತ್ ನಿಂದ ಮನರೇಗಾ ಯೋಜನೆಯಡಿ ರಿಂಗ್ ಬಾವಿ ನಿರ್ಮಿ ಸುವ ಅವಕಾಶವನ್ನು ರೈತ ಬಳಸಿಕೊಳ್ಳುತ್ತಾನೆ. 2024-25ನೇ ಸಾಲಿನಲ್ಲಿ ಅಂದಾಜು 1.50 ಲಕ್ಷ ಅನುದಾನದಲ್ಲಿ 20 ಅಡಿ ಆಳ, 8 ಅಡಿ ಅಗಲ ನಿರ್ಮಿ ಸಬೇಕಿದ್ದ ಬಾವಿಯನ್ನು ತಾನೂ ಒಂದಿಷ್ಟು ಹಣ ಸೇರಿಸಿ 30 ಅಡಿ ಆಳ, 12 ಅಡಿ ಅಗಲದ ರಿಂಗ್ ಬಾವಿಯನ್ನು ನಿರ್ಮಿ ಸಿಕೊಳ್ಳುತ್ತಾನೆ. ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ನಿರಂತರ ಮಾರ್ಗದರ್ಶನ ಮತ್ತು ಸಹಕಾರದಿಂದ ಅಂದುಕೊಂಡದ್ದಕ್ಕಿಂತ ಉತ್ತಮವಾಗಿ ನೀರು ಸಂಗ್ರಹ ಸಾಮರ್ಥ್ಯದ ಬಾವಿ ನಿರ್ಮಾ ಣವಾಗುತ್ತದೆ.

ಅಂದಾಜು 1.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿ ಸಲಾದ ಈ ಕಾಮಗಾರಿಯಲ್ಲಿ 210 ಮಾನವ ದಿನಗಳ ಸೃಜನೆಯೊಂದಿಗೆ 73,246 ರೂಪಾಯಿ ಕೂಲಿ ಮೊತ್ತ ಹಾಗೂ 76,754 ರೂಪಾಯಿ ಸಾಮಗ್ರಿ ಮೊತ್ತವನ್ನು ಪಾವತಿಸಲಾಗುತ್ತದೆ. ಮಳೆಯ ನೀರಿನಿಂದ ಭರಪೂರ ತುಂಬಿ, ಈಡೀ ತೋಟದ ದಾಹವನ್ನು ಇದೊಂದೆ ಬಾವಿ ನೀಗಿಸುತ್ತದೆ. ನೀರಿಲ್ಲದೇ ಒಣಗಿ ಕಳೆಗಟ್ಟಿದ್ದ ತೋಟ ಮತ್ತೇ ಹಸಿರಿನಿಂದ ಚಿಗುರಿ ಕಂಗೊಳಿಸಲು ಆರಂಭಿಸುತ್ತದೆ.

ಯಥೇಚ್ಛ ನೀರಿನ ಸಂಗ್ರಹ ಕಂಡು ಹುರಿದುಂಬಿದ ರೈತ 400 ಸಸಿ ಇದ್ದ ಅಡಿಕೆ ತೋಟಕ್ಕೆ ಮತ್ತೇ 500 ಸಸಿಗಳನ್ನು ಹೆಚ್ಚುವರಿಯಾಗಿ ನೆಡುತ್ತಾನೆ. ಅಂತರ ಬೆಳೆಯಾಗಿ ಕಾಫಿ, ಬಾಳೆ, ಕಾಳು ಮೆಣಸು, ತೆಂಗು, ಲಿಂಬು, ಪಪ್ಪಾಯ, ಮೆಕಡೋಮಿಯಾ, ಲಕ್ಷ್ಮಣ ಫಲ ಸೇರಿದಂತೆ ಹತ್ತಾರು ವೈವಿಧ್ಯಮಯ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯುತ್ತಿದ್ದಾನೆ. ಅಷ್ಟೇ ಅಲ್ಲದೆ ಯೋಜನೆಯಡಿ ಈ ಹಿಂದೆ ನಿರ್ಮಿ ಸಿಕೊಂಡಿದ್ದ ಕೊಟ್ಟಿಗೆ ಮನೆಯಲ್ಲಿ ದನಕರುಗಳನ್ನು ಸಾಕಿ, ಎರೆಹುಳು ತೊಟ್ಟಿ ನಿರ್ಮಿ ಸಿಕೊಂಡು ಸಾವಯವ ಗೊಬ್ಬರ ತಯಾರಿಸಿಕೊಳ್ಳುತ್ತಿದ್ದಾನೆ. ಅಡಿಕೆಯನ್ನು ಹಾಗೇ ಮಾರದೇ ಸಂಸ್ಕರಿಸಿ ಮಾರುವುದರಿಂದ ಅಧಿಕ ಲಾಭ ಗಳಿಸುತ್ತಿದ್ದಾನೆ. ಹೀಗೆ ಹಲವು ಮೂಲಗಳಿಂದ ಲಕ್ಷದ ಲೆಕ್ಕದಲ್ಲಿ ರ್ಥಿಿ ಕವಾಗಿ ಸದೃಢವಾಗುತ್ತಿರುವುದ್ದಲ್ಲದೇ ವಿಭಿನ್ನ ಪ್ರಯೋಗಗಳ ಮೂಲಕ ಸುತ್ತಮುತ್ತಲಿನ ರೈತರಿಗೆ ಮಾದರಿ ಕೃಷಿಕನಾಗಿ ಹೊರಹೊಮ್ಮಿದ್ದಾನೆ.

ಹೀಗೆ ನೀರಿನ ಅಭಾವದಿಂದ ಕೃಷಿ ಚಟುವಟಿಕೆಗೆ ವಿದಾಯ ಹೇಳಹೊರಟ ರೈತನಿಗೆ ಎಂದೂ ಬತ್ತದ ಜಲಮೂಲವನ್ನೇ ಸೃಷ್ಟಿಸಿ ಕೊಡುವ ಮೂಲಕ ಅಸಹಾಯಕ ರೈತನಿಂದ ಅಸಾಧಾರಣ ರೈತನ ವರೆಗೆ ತಂದು ನಿಲ್ಲಿಸಿದ್ದು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಹೆಗ್ಗಳಿಕೆ.

“ನೀರ ಇಲ್ದಂಗ ತೋಟ ಸಾಯಬೇಕಾರ ಉದ್ಯೋಗ ಖಾತರಿ ದೇವ್ರಂಗ ಬಂದು ಕಾಪಾಡೇತಿ. ಈಗ ಎಲ್ಲ ಫಸಲು ಚುಲೊ ಬರಾತಾವು. ಉದ್ಯೋಗ ಖಾತರಿಯಿಂದ ನನ್ನ ಜೀವನ ಹಸನ ಆಗೇತಿ ರೀ ಎನ್ನುತ್ತಾರೆ ಫಲಾನುಭವಿ ರೈತ ನಿಂಗಯ್ಯ ಬಸಯ್ಯ ಹಿರೇಮಠ.

“ಗ್ರಾಮೀಣ ಭಾಗದ ಅಕುಶಲ ಕೂಲಿ ಕಾರ್ಮಿ ಕರಿಗೆ ಉದ್ಯೋಗ ಅವಕಾಶಗಳನ್ನು ನೀಡುವುದು ಮಾತ್ರವಲ್ಲದೆ ದೀರ್ಘ ಬಾಳಿಕೆ ಬರುವ ನೂರಾರು ವೈಯಕ್ತಿಕ ಮತ್ತು ಸಮುದಾಯ ಸೌಲಭ್ಯಗಳನ್ನು ಪಡೆಯಲು ಯೋಜನೆಯಡಿ ಸಾಕಷ್ಟು ಅವಕಾಶಗಳಿದ್ದು, ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು.

– ಕರೀಂ ಅಸದಿ, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಉತ್ತರ ಕನ್ನಡ

Leave a Reply