ಶಾಲಾಕಾಲೇಜುಗಳ ಸುತ್ತಮುತ್ತ ಮದ್ಯದಂಗಡಿಗಳ ತೆರವಿಗೆ ಸೂಚನೆ

1 year ago

ಬೆಂಗಳೂರು: ಶಾಲಾ ಕಾಲೇಜುಗಳ ಸಮೀಪದಲ್ಲಿ ಮದ್ಯಪಾನ ಮತ್ತು ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಅಷ್ಟೇ ಅಲ್ಲ ಶಾಲಾಕಾಲೇಜುಗಳ ಸಮೀಪದಲ್ಲಿ ತಂಬಾಕು ಉತ್ಪನ್ನಗಳು ಮತ್ತು ಮದ್ಯ ಮಾರಾಟ ಮಾಡುವಂತಿಲ್ಲ.

ತಂಬಾಕು ಉತ್ಪನ್ನಗಳ ಮಾರಾಟದ ವಿರುದ್ಧ ಸಮರ ಸಾರಿರುವ ಅಧಿಕಾರಿಗಳು ಶಾಲಾಕಾಲೇಜುಗಳ ಸಮೀಪದಲ್ಲಿರುವ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಕಾಲಕಾಲಕ್ಕೆ ತಪಾಸಣೆ ನಡೆಸಿ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಮದ್ಯ ಮಾರಾಟ ವಿಷಯದಲ್ಲಿ ಇಂತಹ ಕ್ರಮಗಳು ನಡೆಯುತ್ತಿಲ್ಲ ಎಂಬ ಆಕ್ಷೇಪವಿದೆ. 

ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ಪಾಲಕರಲ್ಲಿ ವ್ಯಸನ ಮುಕ್ತಗೊಳಿಸುವ ಬಗ್ಗೆ ಜಾಗೃತಿ ಮೂಡಿಸಲು ಹೈಕೋರ್ಟ್ ನ ಬಾಲ ನ್ಯಾಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು ಕೆಲ ಕಠಿಣ ಕ್ರಮ ಜರುಗಿಸುವ ತೀರ್ಮಾನಕ್ಕೆ ಬರಲಾಗಿದೆ.

ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಕುರಿತು ಮಕ್ಕಳು ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸಲು ಕ್ರಿಯಾ ಯೋಜನೆ ರೂಪಿಸಲು ಸಮನ್ವಯ ಸಾಧಿಸುವಂತೆ ತಿಳಿಸಲಾಗಿದೆ. ಜೊತೆಗೆ ಶಾಲಾಕಾಲೇಜುಗಳ ಅಕ್ಕ ಪಕ್ಕದಲ್ಲಿ ಬಾರ್ ಅಥವಾ ಮದ್ಯದ ಅಂಗಡಿಗಳು ಇದ್ದಲ್ಲಿ ಅವುಗಳನ್ನು ತಕ್ಷಣ ಮುಚ್ಚಿಸುವಂತೆ ಅಬಕಾರಿ ಇಲಾಖೆಗೆ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಆಯುಕ್ತರು ಶಿಕ್ಷಣ ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಬಾಲ ನ್ಯಾಯ ಸಮಿತಿಯಲ್ಲಿ ಪ್ರಸ್ತಾಪಿಸಿರುವ ವಿಷಯಗಳಂತೆ, ಶಾಲಾಕಾಲೇಜುಗಳ ಸಮೀಪ ಮದ್ಯದಂಗಡಿಗಳಿದ್ದು ಅವುಗಳಿಂದ ವಿದ್ಯಾಭ್ಯಾಸ ಹಾಗೂ ನಿರ್ವಹಣೆಗೆ ತೊಂದರೆಯುಂಟಾಗುತ್ತಿದ್ದಲ್ಲಿ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ಅಬಕಾರಿ ಇಲಾಖೆಗೆ ದೂರು ಸಲ್ಲಿಸಲು ತಿಳಿಸಬೇಕು ಎಂದು ಹೇಳಿದ್ದಾರೆ.

ಇದರನ್ವಯ ಶಿಕ್ಷಣ ಸಂಸ್ಥೆಗಳ ಬಳಿ ಮದ್ಯದಂಗಡಿಗಳಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ನಿರ್ವಹಣೆಗೆ ತೊಂದರೆಯುಂಟಾಗುತ್ತಿದ್ದಲ್ಲಿ ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆಗಳು ಅಬಕಾರಿ ಇಲಾಖೆಗೆ ದೂರು ಸಲ್ಲಿಸುವಂತೆ ಪ್ರೌಢ ಶಿಕ್ಷಣ ನಿರ್ದೇಶಕರು ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚಿಸಿದ್ದಾರೆ.

Leave a Reply