ಗಮನಸೆಳೆವ ಭೂತಾನ್ ಸಿನೆಮಾ  ದಿ ಮಾಂಕ್ ಆಂಡ್ ದಿ ಗನ್

2 years ago

ಮನ ಮೆಚ್ಚಿದ ಸಿನೆಮಾ

ಅಹಿಂಸಾವಾದಿ ಬೌದ್ದಸನ್ಯಾಸಿಗೂ ಹಾಗೂ ಹಿಂಸೆಯ ಪ್ರತೀಕವಾದ ಗನ್ ಗೂ ಎತ್ತನಿಂದೆತ್ತ ಸಂಬಂಧ? ಎನ್ನುವ ಪ್ರಶ್ನೆ ಇಟ್ಟುಕೊಂಡೇ ಈ ಭೂತಾನ್ ದೇಶದ ಸಿನೆಮಾವನ್ನು ಫಿಲಂ ಫೆಸ್ಟಿವಲ್ನಲ್ಲಿ ನೋಡಿದ್ದು.

ಏಷಿಯಾ ಖಂಡದ ಅತ್ಯಂತ ಪುಟ್ಟ ದೇಶ ಭೂತಾನ್ ಬೌದ್ದಧರ್ಮ ಪ್ರಧಾನ ನಾಡು. ಇವತ್ತಿಗೂ ಅಲ್ಲಿ ವಾಂಗ್ ಚುಕ್ ರಾಜಮನೆತನದ ರಾಜಪ್ರಭುತ್ವವಿದೆ. ಜಗದ ಆಧುನಿಕ ಬೆಳವಣಿಗೆಗೆ ತೆರೆದುಕೊಳ್ಳದ ಈ ದೇಶಕ್ಕೆ ಭಾರತದ ಹಾಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು  ಅಳವಡಿಸಬೇಕು ಎಂಬುದು ರಾಜನ ಅಭಿಲಾಷೆ. ಚುನಾವಣೆ ಕುರಿತು ಜನರಲ್ಲಿ ಅರಿವು ಮೂಡಿಸಲು 2006 ರಲ್ಲಿ ಪ್ರಾಯೋಗಿಕವಾಗಿ ಅಣಕು ಮತದಾನದ ವ್ಯವಸ್ಥೆ ಮಾಡಲು ರಾಜ ನಿರ್ಧರಿಸುತ್ತಾನೆ. ವ್ಯಾಪಕವಾಗಿ ಪ್ರಚಾರವನ್ನೂ ಮಾಡಲಾಗುತ್ತದೆ. ಡೆಮಾಕ್ರಸಿಯ ಬಗ್ಗೆ, ಎಲೆಕ್ಷನ್ ಬಗ್ಗೆ ಏನೂ ಅರಿಯದ ಗ್ರಾಮೀಣ ಜನರು ಹೆಚ್ಚಾಗಿ ಈ ಹೊಸ ಬಗೆಯ ಎಲೆಕ್ಷನ್ನಿಗೆ ನಿರುತ್ಸಾಹ ತೋರುತ್ತಾರೆ. ಎಷ್ಟೇ ಪ್ರಚಾರಕೊಟ್ಟು ಅರಿವು ಮೂಡಿಸಿದರೂ 95%  ಜನ ಕೆಂಪು ನೀಲಿ ಬಣ್ಣ ಬಿಟ್ಟು ಹಳದಿ ಬಣ್ಣದ ಲಾಂಚನಕ್ಕೇ ಓಟು ಹಾಕುತ್ತಾರೆ. ಏಕೆಂದರೆ ಅದು ರಾಜನನ್ನು ಸಂಕೇತಿಸುವ ಬಣ್ಣವಾಗಿರುತ್ತದೆ. ರಾಜಪ್ರಭುತ್ವ ದ ಮೇಲೆ ಈ ದೇಶದ ಜನರ ನಂಬಿಕೆ ವಿಶ್ವಾಸ ಅಷ್ಟು ಗಟ್ಟಿಯಾಗಿದೆ.

ರಾಜಪ್ರಭುತ್ವದಲ್ಲಿ ನಂಬಿಕೆಯಿರುವ ದೇಶದಲ್ಲಿ ಚುನಾವಣೆ ಪರ್ವ ಆರಂಭಿಸಿದ್ದರಿಂದಾಗುವ ಅವಗಢಗಳನ್ನು ಎತ್ತಿ ತೋರಿಸುತ್ತಲೇ ಚುನಾವಣಾ ವ್ಯವಸ್ಥೆಯ ಸೈಡ್ ಎಫೆಕ್ಟಗಳನ್ನೂ ಈ ಸಿನೆಮಾ ಮನದಟ್ಟು ಮಾಡಿಸುತ್ತದೆ. ಚುನಾವಣೆಯಲ್ಲಿ ಯಾವುದೋ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವ ಕಾರ್ಯಕರ್ತರು ಮನೆ ಮಡದಿ ಮಕ್ಕಳನ್ನು ನಿರ್ಲಕ್ಷಿಸುವುದು ಹಾಗೂ ಕೌಟುಂಬಿಕ ಸಂಬಂಧಗಳ ನಡುವೆ ಭಿನ್ನಾಭಿಪ್ರಾಯಗಳ ಬಿರುಕು ಮೂಡುವುದೆಲ್ಲಾ ಚುನಾವಣಾ ಪ್ರಕ್ರಿಯೆಯಲ್ಲಿ ಸಹಜವಾಗಿ ನಡೆಯುವಂತಹುದು. ಆದರೆ ಮೊದಲ ಸಲ ಈ ವ್ಯವಸ್ಥೆ ಅಳವಡಿಸಿಕೊಂಡ ಭೂತಾನ್ ಜನರಿಗೆ ಹೇಗೆ ಮತದಾನ ಎನ್ನುವುದು ಸಂಕಷ್ಟ ತಂದೊಡ್ಡುತ್ತದೆ ಎಂಬುದನ್ನು  ಮಾರ್ಮಿಕವಾಗಿ ಚಿತ್ರಿಸಲಾಗಿದೆ.

ಹಳೆಯ ವ್ಯವಸ್ಥೆಯೊಂದು ಹೊಸದಕ್ಕೆ ಬದಲಾವಣೆ ಬಯಸಿದಾಗ ಭಿನ್ನಾಭಿಪ್ರಾಯ ಅನಿವಾರ್ಯ. ಬೌದ್ದ ಧರ್ಮಗುರು ಲಾಮಾ ಗೂ ಈ ಚುನಾವಣಾ ಪ್ರಕ್ರಿಯೆ ಬೇಸರವನ್ನು ತರುತ್ತದೆ. ಚುನಾವಣೆಯ ದಿನದಂದೇ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಅದಕ್ಕಾಗಿ ಎರಡು ಗನ್ ತರಲು ಶಿಷ್ಯನಿಗೆ ಗುರು ಹೇಳುತ್ತಾನೆ.

ರೈತನೊಬ್ಬನ ಬಳಿ ಇಂಗ್ಲೀಷ್ ಪ್ರಭುತ್ವದ ಕಾಲದ ಹಳೆಯ ಗನ್ ಒಂದು ಇದ್ದು ಅದನ್ನು ಕೊಳ್ಳಲು ಅಮೇರಿಕದ ಗನ್ ವ್ಯಾಪಾರಿಯೊಬ್ಬ 15 ಲಕ್ಷಕ್ಕೆ ವ್ಯಾಪಾರ ಕುದುರಿಸುತ್ತಾನೆ. ಹೋಗಿ ಹಣ ತರುವಷ್ಟರಲ್ಲಿ ಲಾಮಾನ ಶಿಷ್ಯ (ಮಾಂಕ್) ಆ ಗನ್ ನ್ನು ರೈತನಿಂದ ಉಚಿತವಾಗಿ ಪಡೆದು ಹೊರಡುತ್ತಾನೆ. ಈ ಸಂಗತಿ ತಿಳಿದ ಗನ್ ವ್ಯಾಪಾರಿ ಮತ್ತು ಆತನ ಸಹವರ್ತಿ ಮಾಂಕ್ ಹಿಂದೆ ಬೀಳುತ್ತಾರೆ. ಗನ್ ಬದಲಾಗಿ ಕೇಳಿದಷ್ಟು ಹಣ ಕೊಡಲೂ ಸಿದ್ದರಾಗುತ್ತಾರೆ. ಅದೆಲ್ಲವನ್ನೂ ನಿರಾಕರಿಸಿ ಎರಡು ಎಕೆ47 ಗನ್ ಕೊಟ್ಟರೆ ಹಳೆಯ ಗನ್ ಕೊಡುವುದಾಗಿ ಮಾಂಕ್ ಬೇಡಿಕೆ ಇಟ್ಟಾಗ ಭಾರತದಿಂದ ಅಕ್ರಮವಾಗಿ ಎಕೆ 47 ಗನ್ ತರಿಸಲಾಗುತ್ತದೆ. ಗನ್ ವ್ಯಾಪಾರಿಯನ್ನು ಹುಡುಕಿಕೊಂಡು ಪೊಲೀಸರೂ ಬರುತ್ತಾರೆ. ಅಣಕು ಚುನಾವಣೆ ಮುಗಿದಿರುತ್ತದೆ. ಬೌದ್ಧ ಗುರು ಲಾಮಾ ರವರ ಧಾರ್ಮಿಕ ಪ್ರಾರ್ಥನೆ ಶುರುವಾಗುತ್ತದೆ. ಇಲ್ಲಿಯವರೆಗೂ ಗುಟ್ಟಾಗಿದ್ದ ಮಾಂಕ್ ಮತ್ತು ಗನ್ ಸಂಬಂಧ ಬಯಲಾಗುತ್ತದೆ.

” ಕೆಟ್ಟದ್ದು, ಹಿಂಸೆಗೆ ಪ್ರಚೋದಿಸುವಂತಹದ್ದು ಇರಲೇಬಾರದು. ಕ್ರೌರ್ಯದ ಸಾಂಕೇತವಾದ ಈ ಗನ್ ನ್ನು  ಸುಟ್ಟು ಹಾಕೋಣ” ಎಂದು ಹೇಳುವ ಲಾಮಾ ಹಳೆಯ ಗನ್ ನ್ನು ತೋಡಿದ ಗುಣಿಯಲ್ಲಿ ಬಿಸಾಕುತ್ತಾನೆ. ಪೊಲೀಸರಿಗೆ ಹೆದರಿದ ಗನ್ ಡೀಲರ್  ” ಧರ್ಮಗುರುಗಳ ಶಸ್ತ್ರವಿನಾಶ ಯಜ್ಞಕ್ಕೆ ಎಕೆ 47 ಗನ್ ಗಳನ್ನು ಆಹುತಿ ಕೊಡುತ್ತೇನೆಂದು” ಹೇಳಿ ಅವುಗಳನ್ನು ಗುಂಡಿಗೆ ಹಾಕಿ ಪೊಲೀಸರಿಂದ ಬಚಾವಾಗುತ್ತಾನೆ. ಪೋಲೀಸ್ ಸಹ ತನ್ನ ಪಿಸ್ತೂಲನ್ನು ಗುಂಡಿಗೆ ಬಿಸಾಕುತ್ತಾನೆ. ಜನರೆಲ್ಲಾ ಸೇರಿ ಮಣ್ಣು ಕಾಂಕ್ರೀಟ್ ಹಾಕಿ ಶಸ್ತ್ರಗಳನ್ನು ದಪನ್ ಮಾಡುತ್ತಾರೆ. ಇದು ಈ ಚಲನಚಿತ್ರದ ಸಂಕ್ಷಿಪ್ತ ಕಥೆ.

ಆದರೆ ಈ ಚಿತ್ರಕಥೆಯ ಮೂಲಕ ನಿರ್ದೇಶಕರಾದ ಪಾವೋ ಚೊಯಾಂಗ್ ದೊರ್ಜಿಯವರು ಹಲವಾರು ಆಯಾಮಗಳನ್ನು ಅನಾವರಣಗೊಳಿಸಿದ್ದಾರೆ. ಬುದ್ದ ಅದೆಷ್ಟೇ ವೈಚಾರಿಕತೆಯನ್ನು ಬೋಧಿಸಿದರೂ ಬೌದ್ದ ಧರ್ಮದಲ್ಲೂ ಮೌಢ್ಯಾಚಾರಗಳು ಇರುವುದನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ. ಆದರೆ ಧಾರ್ಮಿಕ ಆಚರಣೆಯ ನೆಪದಲ್ಲಿ ಹಿಂಸೆಗೆ ಕಾರಣವಾಗುವ ಶಸ್ತ್ರಗಳ ಸಂಹಾರವನ್ನು ಬೌದ್ಧಗುರುವಿನ ಮೂಲಕವೇ ಮಾಡಿಸಿದ್ದು ಈ ಸಿನೆಮಾದ ಹೈಲೈಟ್.

ಇಡೀ ಜಗತ್ತಿನಲ್ಲೇ ಇಂಟರ್ನೆಟ್ ಹಾಗೂ ಟೆಲವಿಜನ್ ಸಂಪರ್ಕ ಸಾಧಿಸಿದ ಕೊಟ್ಟ ಕೊನೆಯ ದೇಶ ಭೂತಾನ್. ಅಲ್ಲಿಯ ಬೌದ್ದಾನುಯಾಯಿಗಳಿಗೆ, ರೈತರಿಗೆ ಹಣದ ಮೇಲೆ ದುರಾಸೆಯೇ ಇಲ್ಲವೆಂಬುದನ್ನು ಗನ್ ಗೆ ಬದಲಾಗಿ ಹಣವನ್ನು ನಿರಾಕರಿಸುವ ರೈತ ಹಾಗೂ ಮಾಂಕ್ ಪಾತ್ರಗಳು ಸಾಬೀತು ಪಡಿಸುತ್ತವೆ. ತನ್ನ ಪಾಡಿಗೆ ತಾನಿದ್ದ ಭೂತಾನ್ ನಾಡಲ್ಲಿ ಚುನಾವಣಾ ವ್ಯವಸ್ಥೆ ಬಂದು ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತದೆ. ಮತಗಳ ನೆಪದಲ್ಲಿ ಜನರನ್ನು ಇಬ್ಬಾಗಿಸುತ್ತದೆ, ಮನಸ್ಸುಗಳನ್ನು ಒಡೆಯುತ್ತದೆ. ಹೀಗೆ.. ಡೆಮಾಕ್ರಸಿಯ ನಕಾರಾತ್ಮಕ ಅಂಶಗಳನ್ನು ಎತ್ತಿ ತೋರಿಸುವುದೇ ಈ ಸಿನೆಮಾದ ಉದ್ದೇಶವಾದಂತಿದೆ.

ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲೂ ಚುನಾವಣಾ ವ್ಯವಸ್ಥೆಯೇ ಕೇಂದ್ರವಾಗಿದ್ದು ರಾಜಕೀಯ ಪ್ರಕ್ಷುಬ್ಧತೆ ಹಾಗೂ ಹಲವಾರು ಬಾರಿ ಅರಾಜಕತೆಗೂ ಕಾರಣವಾಗಿದ್ದಂತೂ ಸುಳ್ಳಲ್ಲ. ಇದು ಭೂತಾನ್ ದೇಶದಲ್ಲಾದ ಘಟನೆಗಳ ಸರಣಿ ಆಗಿದ್ದರೂ ಅದು ಯಾಕೋ ಭಾರತದ ರಾಜಕಾರಣವನ್ನೇ ನೆನಪಿಸುವಂತಿದೆ. ಮತದಾನ ಎನ್ನುವುದು ಇಲ್ಲಿ ಕೇವಲ ಜನಪ್ರತಿನಿಧಿಗಳ ಆಯ್ಕೆಗೆ ಸೀಮಿತವಾಗಿರದೇ ಜಾತಿ ಧರ್ಮಗಳ ಮೇಲಾಟಕ್ಕೂ ಕಾರಣವಾಗಿದೆ. ಪಕ್ಷರಾಜಕಾರಣ ಹದ್ದು ಮೀರಿಹೋಗಿದೆ. ಮತಗಳ ಮೇಲೆ ಮಾತ್ರ ಕಣ್ಣಿಟ್ಟು ಯೋಜನೆಗಳನ್ನು ರೂಪಿಸಲಾಗುತ್ತದೆ. ರಾಜಕೀಯ ಪ್ರೇರಿತ ದ್ವೇಷೋತ್ಪಾದನೆಯಿಂದಾಗಿ ಮನಸುಗಳು ಒಡೆದಿವೆ, ಕುಟುಂಬಗಳ ನೆಮ್ಮದಿ ಹಾಳಾಗಿದೆ, ಸಮುದಾಯಗಳು ಹೊಡೆದಾಡಿವೆ, ಊರೂರುಗಳಲ್ಲಿ ಸೇಡಿನ ಬೀಜಗಳು ಮೊಳೆತಿವೆ. ಎಲ್ಲಾ ಜನರಿಗೆ ಶಾಂತಿ ಹಾಗೂ ನೆಮ್ಮದಿಯ ಬದುಕು ಸಿಗುವುದೇ ಆದರೆ ಭೂತಾನ್ ದೇಶದಲ್ಲಿದ್ದಂತೆ ರಾಜಪ್ರಭುತ್ವವೇ ಇರಲಿ ಎಂದು ಅನ್ನಿಸದೇ ಇರದು.

ಈ ಸಿನೆಮಾದ ನಿರ್ದೇಶಕರು ಎಲ್ಲಿಯೂ ಪ್ರಭುತ್ವವಿರೋಧಿ ಹಾಗೂ ಧಾರ್ಮಿಕ ಮೌಡ್ಯಾಚಾರ ನಿಲುವನ್ನು ಪ್ರಕಟಿಸುವುದಿಲ್ಲ. ರಾಜಪ್ರಭುತ್ವ ಕೈಗೊಂಡ ಚುನಾವಣಾ ವ್ಯವಸ್ಥೆಯ ಅನುಷ್ಠಾನ ಯತ್ನವನ್ನು ವಿಡಂಬಿಸುತ್ತಲೇ ಪ್ರಜಾಪ್ರಭುತ್ವ ವ್ಯವಸ್ಥೆಯ ಹುಳುಕುಗಳನ್ನು ಎತ್ತಿತೋರಿಸುವ ಪ್ರಯತ್ನ ಮಾಡಿದ್ದಾರೆ. ಧಾರ್ಮಿಕ ಗುರುವಿನ ಮೂಲಕ ಅಹಿಂಸಾ ಸಂದೇಶವನ್ನು ಸಾರುತ್ತಾರೆ. ಅರಮನೆ ಮತ್ತು ಗುರುಮನೆಗಳ ಜನಪರ ನಿಲುವನ್ನು ಚಿತ್ರಿಸಿದ್ದಾರೆ.

ಆದರೆ ರಾಜ ಮತ್ತು ಗುರು ಎಲ್ಲಿವರೆಗೂ ಜನಪರವಾದ ನಿಲುವು ಹೊಂದಿರುತ್ತಾರೋ ಅಲ್ಲಿವರೆಗೂ ಈ ರಾಜಪ್ರಭುತ್ವ ವ್ಯವಸ್ಥೆ ಉತ್ತಮ ಎನ್ನಿಸುತ್ತದೆ. ಆದರೆ ಯಾವಾಗ ಆಳುವ ದೊರೆ ಸರ್ವಾಧಿಕಾರಿಯಾಗಿ ಪ್ರಜಾಕಂಟಕನಾಗುತ್ತಾನೋ,? ಯಾವಾಗ ಧಾರ್ಮಿಕ ಗುರುಗಳು ದೇವರು ಹಾಗೂ ಧರ್ಮದ ಹೆಸರಲ್ಲಿ ಕಂದಾಚಾರ ಮೌಢ್ಯಗಳನ್ನು ಬಿತ್ತುತ್ತಾರೋ ಆಗ ಈ ರಾಜಪ್ರಭುತ್ವ ಎನ್ನುವುದೇ ಪ್ರಜಾಪೀಡಕವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಲವಾರು ನ್ಯೂನ್ಯತೆಗಳಿದ್ದರೂ ಪ್ರಜಾಪೀಡಕ ಪ್ರತಿನಿಧಿಗಳನ್ನು ಚುನಾವಣೆಯಲ್ಲಿ ಸೋಲಿಸಿ ಬದಲಾಯಿಸಬಹುದು. ಆದರೆ ಸರ್ವಾಧಿಕಾರಿ ಪ್ರಭುತ್ವದಲ್ಲಿ ಅದು ಸುಲಭಸಾಧ್ಯವಲ್ಲ. ಅದಕ್ಕಾಗಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಸರ್ವಾಧಿಕಾರಿ ಪ್ರಭುತ್ವದತ್ತ ಬದಲಾವಣೆಗೊಳ್ಳುತ್ತಿರುವ ಭಾರತದ ಪ್ರಸ್ತುತ ಆಡಳಿತ ಆತಂಕಕಾರಿಯಾಗಿದೆ. ಹಲವಾರು ನ್ಯೂನ್ಯತೆಗಳಿದ್ದರೂ ಬದಲಾಯಿಸಿಕೊಳ್ಳಬಹುದಾದ ಸಾಧ್ಯತೆಗಳಿರುವ ಜನತಂತ್ರ ವ್ಯವಸ್ಥೆಯೇ ಭಾರತಕ್ಕೆ ಅನಿವಾರ್ಯವಾಗಿದೆ‌. ಹಿಂಸೆಯ ಮೂಲಕವೇ ಶೋಷಕ ಧರ್ಮವನ್ನು ರಕ್ಷಿಸಲು ಬಯಸುವ ಘಾತುಕ ಕೋಮುಶಕ್ತಿಗಳ ಬದಲಾಗಿ ಅಹಿಂಸೆಯನ್ನು ಸಾರುವ ಬೌದ್ದ ಧರ್ಮ ಹಾಗೂ ಶಸ್ತ್ರಾಸ್ತ್ರಗಳ ವಿನಾಶ ಮಾಡುವಂತಹ ಬೌದ್ಧ ಗುರುಗಳು ಭಾರತಕ್ಕೆ ಬೇಕಾಗಿದ್ದಾರೆ.

ಒಟ್ಟಿನ ಮೇಲೆ ಬದಲಾವಣೆ ಹಾಗೂ ಅಹಿಂಸೆಯನ್ನು ಚಿತ್ರಿಸುವ “ದಿ ಮಾಂಕ್ ಆಂಡ್ ದಿ ಗನ್” ಚಲನಚಿತ್ರ ವೀಕ್ಷಕರ ಅರಿವನ್ನು ವಿಸ್ತರಿಸುತ್ತದೆ. “ಮಾಂಕ್ ಇರಲಿ ಗನ್ ತೊಲಗಲಿ” ಎನ್ನುವ ಆಶಯವನ್ನು ಬಿತ್ತರಿಸುತ್ತದೆ.

– ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿ

Leave a Reply