ನೀರು ಬಿಡುವುದಿಲ್ಲ ಎನ್ನುವುದು ಉದ್ಧಟತನದ ಹೇಳಿಕೆ: ಬಸವರಾಜ ಬೊಮ್ಮಾಯಿ

3 years ago

ಬೆಳಗಾವಿ: ಮಹಾರಾಷ್ಟ್ರ-ಕರ್ನಾಟಕ ನಡುವೆ ಗಡಿ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ ಮಹಾರಾಷ್ಟ್ರ ನಾಯಕರು ಕರ್ನಾಟಕಕ್ಕೆ ನೀರು ಬಿಡಲು ಯೋಚಿಸಬೇಕಾಗುತ್ತದೆ ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ನದಿಗಳು ಮೂರ್ನಾಲ್ಕು ರಾಜ್ಯಗಳಲ್ಲಿ ಹರಿಯುತ್ತವೆ. ಹೀಗಾಗಿ ಎಲ್ಲರೂ ಅಂತಾರಾಜ್ಯ ನದಿಗಳು ಮತ್ತು ಅಂತಾರಾಜ್ಯ ಜಲ ವಿವಾದ ಕಾಯ್ದೆಯಡಿಯಲ್ಲಿ ಕಾರ್ಯನಿರ್ವಹಿಸಬೇಕಿದೆ. ಇಂತಹ ಉದ್ಧಟತನ ಮಾತುಗಳಿಂದ ಏನೂ ಪ್ರಯೋಜನವಿಲ್ಲ. ಇದೆಲ್ಲಾ ರಾಜಕೀಯ ಪ್ರೇರಿತ ಹೇಳಿಕೆಗಳು ಎಂದರು.

ಅವರು ಚೈನಾ ತರ ಬಂದರೆ, ನಮ್ಮ ಕನ್ನಡಿಗರು ಅದನ್ನು ಭಾರತೀಯ ಸೇನೆಯಂತೆ ಹಿಮ್ಮೆಟ್ಟಿಸುತ್ತಾರೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿಕೆಗೆ ತಿರುಗೇಟು ನೀಡಿದರು.

ಇಂತಹ ಉದ್ಧಟತನ ಹೇಳಿಕೆ ಕೊಟ್ಟರೆ ಪ್ರಯೋಜನವೂ ಇಲ್ಲ. ರಾಜಕೀಯದ ಸಲುವಾಗಿ ಅವರು ಈ ರೀತಿ ಮಾತಾಡಿದ್ದಾರೆ. ಅದನ್ನು ಕಾರ್ಯಗತ ಮಾಡಲು ಸಾಧ್ಯವಿಲ್ಲ. ಒಂದು ರಾಜ್ಯ ಇನ್ನೊಂದು ರಾಜ್ಯಗಳ ಸಂಬಂಧ ಇದ್ದೇ ಇರುತ್ತದೆ ಎಂದರು

ಗಡಿ ವಿವಾದ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ತನ್ನ ನಿಲುವನ್ನು ಗಟ್ಟಿಯಾಗಿ ಮಂಡಿಸಲಿದೆ. ನಮ್ಮ ವಕೀಲರು ಇದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆಸಿದ್ದಾರೆ ಎಂದು ಹೇಳಿದರು

ಸಂಪುಟ ಸರ್ಜರಿ: ಸಚಿವ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡುತ್ತೇನೆ. ಎಲ್ಲಾ ಬೆಳವಣಿಗೆಗಳ ಬಗ್ಗೆ ವರಿಷ್ಠರಿಗೆ ತಿಳಿಸಿ ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ. ಈ ಬಾರಿ ಪಕ್ಷದ ಹೈಕಮಾಂಡ್ ತೀರ್ಮಾನವನ್ನು ನೀಡಲಿದೆ ಎಂಬ ವಿಶ್ವಾಸ ತಮಗಿದೆ ಎಂದರು.

ಮಾಜಿ ಸಚಿವರಾದ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರು ನಿನ್ನೆ ತಮ್ಮನ್ನು ಭೇಟಿಯಾಗಿದ್ದರು. ಸಂಪುಟ ವಿಸ್ತರಿಸುವ ಬಗ್ಗೆ ಕೇಳಿದ್ದರು. ಆಗ ನಾನು ದೆಹಲಿಗೆ ಹೋದಾಗ ಸಂಪುಟ ವಿಸ್ತರಣೆ ಬಗ್ಗೆ ಮಾಡಿರುವ ಚರ್ಚೆ, ವಿವರಗಳನ್ನು ಅವರಿಗೆ ನೀಡಿದ್ದೇನೆ. ಈಗ ಮತ್ತೆ ದೆಹಲಿಗೆ ಭೇಟಿ ನೀಡಿ ಎಲ್ಲ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತಂದು ಸಂಪುಟ ವಿಸ್ತರಣೆ ಬಗ್ಗೆ ಸೂಕ್ತ ತೀರ್ಮಾನ ಮಾಡುವಂತೆ ಕೋರುತ್ತೇನೆ ಎಂದರು.

ರಾಜ್ಯದಲ್ಲಿ ಅವಧಿಗೆ ಮುನ್ನ ವಿಧಾನಸಭಾ ಚುನಾವಣೆ ನಡೆಸುವ ಪ್ರಸ್ತಾವನೆ ಇಲ್ಲ. ಈ  ಸಂಬಂಧ ಪಕ್ಷದ ವರಿಷ್ಠರೊಂದಿಗೆ ತಾವು ಯಾವುದೇ ಚರ್ಚೆ ಮಾಡಿಲ್ಲ. ಅವಧಿಗೆ ಮುನ್ನವೇ ಚುನಾವಣೆ ನಡೆಸುವ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

Leave a Reply