ನಾ ಹೇಳಲಿರುವುದು ಕಟ್ಟುಕಥೆಗಳಲ್ಲ, ಯುವಜನರ ಕಾಡುವ ವ್ಯಥೆಗಳು

4 years ago

ಅಪ್ಪ ನೆಟ್ಟ ಆಲದ ಮರ

ಬಾಲ್ಯದ ಹೊಸ್ತಿಲು ದಾಟುತ್ತಿದ್ದೇವೆಂಬ ಅರಿವೇ ಇಲ್ಲದಂತೆ ಕಿಶೋರಾವಸ್ಥೆಯನ್ನು ಮಕ್ಕಳಾದವರು ಮೈಮೇಲೆಳೆದುಕೊಂಡಾಗ ಮನೆಯ ದೊಡ್ಡವರೋ ಬಲಿಯುತ್ತಿರುವ ಎಳೆಯ ಮೈಯಲ್ಲಿ ಮೊಳೆಯುತ್ತಿರುವ ಆಸೆಗಳನ್ನು ಕಾಣುವುದಿಲ್ಲ. ನಮ್ಮ ಹುಡುಗ ಅಥವಾ ಹುಡುಗಿ ಯಜ್ಞನಾರಾಯಣ ನೀಡಿದ ಪಾಯಸದಿಂದಲೋ, ಪರಮೇಶ್ವರನು ನೀಡಿದ ಮಾವಿನ ಹಣ್ಣಿಂದಲೋ ಹುಟ್ಟಿ ಬಂದಿದ್ದು, ಗೋವಿಂದೇತಿ ಸದಾ ಧ್ಯಾನಂ, ಸದಾ ಎನ್ನ ನಾಲಿಗೆಯಲಿ ಬರಲಿ ರಾಮನಾಮ ಎಂದೇ ಇರುವ ಆಧ್ಯಾತ್ಮಿಕ ಸಮಾಜಕೊಳದಲ್ಲಿ ಅರಳುತ್ತಿರುವ ಶುದ್ಧಾತ್ಮದ ತಾವರೆಯೆಂದೋ, ದಿವ್ಯಾತ್ಮ, ಪುಣ್ಯಾತ್ಮ ಮತ್ತು ಮಹಾತ್ಮರ ಸತ್ಸಂಗವೀ ನಮ್ಮ ಸಮಾಜವೆಂಬಂತೆ, ತಾವು ತಮ್ಮನ್ನು ವಂಚಿಸಿಕೊಂಡ, ತಾವು ನಿರಾಸೆಯಿಂದ ಹೊಸಕಿಕೊಂಡ ಆಸೆಗಳನ್ನೆಲ್ಲಾ ಮರೆಸಲು ಯತ್ನಿಸಿದ ನೀತಿಕಥೆಗಳನ್ನೇ ಹೇಳುತ್ತಿರುತ್ತಾರೆ. ಅಥವಾ ಅಂತಹುದೇ ಕಥೆಗಳ ಉನ್ಮತ್ತತೆಯಲ್ಲಿ ಘಮಲೊಡೆಯುತ್ತಿರುತ್ತಾರೆ.

ತಾವು ಕಾಣುತ್ತಿರುವ ದೂರದರ್ಶನಗಳೊಳಗಿನ ದುರ್ದಶನಗಳನ್ನೇ ಅವರೂ ಪಡೆಯುತ್ತಿದ್ದಾರೆ, ನಾವೆಂದೋ ಅಲ್ಲಲ್ಲಿ ಕದ್ದು ಮುಚ್ಚಿ, ನಾಲಗೆಯೊಣಗಿಸಿಕೊಳ್ಳುತ್ತಾ, ಮೈ ಬಿಸಿಯೇರಿಸಿಕೊಳ್ಳುತ್ತಾ ಪುಸ್ತಕದಲ್ಲಿ ನೋಡಿದ ರಮಣೀಯ ರಂಗುಗಳನ್ನು ಇನ್ನೂ ಮುಂದುವರಿದ ಪೀಳಿಗೆಯ ಈ ಮಕ್ಕಳು ತಮ್ಮ ಅಂಗೈಯಲ್ಲೇ ಮೊಬೈಲ್ ಎಂಬ ಮಾಯದ ಕನ್ನಡಿಯಲ್ಲಿ ಕಂಡುಬಿಡುವಂತಹ ಮಾಯಾವಿಗಳು ಎಂಬ ಜ್ಞಾನೋದಯವು ಪುರಾತನದ ವೃಕ್ಷಗಳ ಕೆಳಗೆ ಆಗುವುದೇ ಇಲ್ಲ.

ವಿಕಾಸವೇ ಕಾಲಧರ್ಮ. ಕಾಲಧರ್ಮದ ಮೂಲಗುಣವನ್ನು ಮರೆತಿರುವ ಯಾರಿಗಾದರೂ ತಾವು ಹಿಂದಿನವರಿಗಿಂತ ಬೌದ್ಧಿಕವಾಗಿ ವಿಕಾಸವಾಗಿರುವೆವು ಎಂದು ಅನ್ನಿಸುವುದೇ ಇಲ್ಲ. ಆಗಲೇ ಧರ್ಮ, ಪರಂಪರೆ, ಸನಾತನ ನಡಾವಳಿಗಳೆಂಬ ಚಲಿಸದ ನದಿ, ಚೌಕಟ್ಟಿನೊಳಗಿನ ಆಕಾಶ, ಬೆಳೆಯದ ವೃಕ್ಷ, ಅರಳದ ಹೂವುಗಳು ಶಾಸನಗಳಾಗಿ ಕಲ್ಲೆದೆಗಳ ಮೇಲೆ ಕೊರೆದಿರುತ್ತವೆ. ಅವರು ಅದನ್ನು ಓದುತ್ತಲೇ ತಮ್ಮ ಒಳಗಿನ ದನಿಯನ್ನು ಕೇಳಲಾಗದಷ್ಟು ಕಿವುಡರಾಗುತ್ತಾರೆ. ತಮ್ಮೊಳಗಣ ಆಸೆ ಆಕಾಂಕ್ಷೆಗಳ ಸಹಜ ಕೂಸುಗಳ ಅಳುವಿಗೆ ಕಟುಕರಾಗುತ್ತಾರೆ. ತಮ್ಮದ್ದು ಮತ್ತು ಲೋಕದ್ದು ಈ ಎರಡರ ಸೆಳೆದೆಳೆದ ಬಿದಿರಿನ ಗಳಗಳ ನಡುವೆ ಕಟ್ಟಿಸಿಕೊಂಡು ಎತ್ತಲಿಗೆ ಮೀಟಿ ಚಿಮ್ಮುವರೋ ಅವರಿಗೇ ತಿಳಿಯದಂತಿರುತ್ತಾರೆ. ಒಮ್ಮೊಮ್ಮೆ ಯಾವುದೋ ಒಂದು ಕಡೆ ಚಿಮ್ಮಿಕೊಂಡು ಒಗೆದು ಮೊಗೆದುಕೊಳ್ಳುತ್ತಾರೆ. ಎರಡೂ ಕಟ್ಟುಗಳೂ ಅತಿಬಿಗಿಯಾಗಿರುವಾಗ್ಗೆ ಜೀವನವೇ ಅಲ್ಲಿ ಮುಗಿದುಹೋಗುತ್ತದೆ.

ಹೀಗೆಂದು ನನ್ನ ಯುವಗೆಳೆಯನೊಬ್ಬ ತನ್ನ ಕ್ರೈಸಿಸ್ ಅನ್ನು ನನ್ನ ಕಣ್ಣಿಗೆ ಕಾಣಿಸಿದ್ದು.
ನನಗರ್ಥವಾಗದಂತಹ ಸಾಫ್ಟ್ವೇರ್ ಕಂಪನಿಯಲ್ಲಿ ಅವನು ಉದ್ಯೋಗಿ. ಪ್ರಗತಿಪರ ನಿಲುವುಗಳ ಕಡೆಗೆ ಒಲವು. ರಂಗಭೂಮಿ ಚಟುವಟಿಕೆಗಳ ಕಡೆ ಅಪಾರ ಸೆಳವು. ತಾನೊಬ್ಬ ನಟನಾಗಬೇಕೆಂದು ಬಾಲ್ಯ, ಕಿಶೋರ, ಹದಿ ಹರೆಯದ ಪ್ರಾಯದ ಅವಸ್ಥೆಗಳಲ್ಲಿ ಆಸ್ಥೆಯಿಂದಲೇ ಅವಸ್ಥೆ ಬಿದ್ದವ. ಅಪ್ಪ ಅಮ್ಮ ಅಪ್ಪಣೆ ಕೊಟ್ಟಾಗ ಅಂಕದ ಪರದೆಯ ಮುಂದೆ ಹೋದವ. ನೀನಾಸಂಗೋ, ರಂಗಾಯಣಕ್ಕೋ, ಕನಿಷ್ಠಪಕ್ಷ ನನ್ನಂತವನ ಸೀಮಿತ ವ್ಯಾಪ್ತಿಯ ರಾಜಮಾರ್ಗ ರಂಗತಂಡಕ್ಕೆ ಕಾಲಿಡಲೂ ಬಿಡದೇ ಇಂಜಿನಿಯರಿಂಗ್‌ಗೆ ಹೋದ. “ಯಾಕೋ?” ಅಂದ್ರೆ “ನಮ್ಮಪ್ಪ ಅಮ್ಮಗೆ ಇವೆಲ್ಲಾ ಅರ್ಥವಾಗಲ್ಲ ಮಾಸ್ಟರ್. ಅವರಿಗೆ ಮೊದಲು ಲೈಫಲ್ಲಿ ಸೆಟ್ಲ್ ಆಗಿಬಿಡಬೇಕು” ಎಂದ. ಯಾವುದನ್ನು ನಿಲ್ಲದೇ ಹರಿಯುವ ಲೈಫ್ ನಲ್ಲಿ ಸೆಟ್ಲ್ ಅಂತಾರೋ ನನಗಂತೂ ಗೊತ್ತಿಲ್ಲದ ಕಾರಣದಿಂದ ಇಂತಹ ಮುರುಕಲು ಗ್ರಾಮಾಫೋನ್‌ನ ಸ್ಟಕ್ ಲೈನ್ ಗಳಿಗೆ ನಾನು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ.

ಆ ಹುಡುಗ ದೇವರು ದಿಂಡರು ನಂಬುವುದಿಲ್ಲ. ಆದರೆ ಪ್ರತಿ ಶನಿವಾರ ಶನಿಮಹಾತ್ಮನ ದೇವಸ್ಥಾನವನ್ನು ತಪ್ಪಿಸುವುದಿಲ್ಲ. ಕಂದಾಚಾರ ಮೌಢ್ಯಗಳನ್ನು ಒಪ್ಪುವುದಿಲ್ಲ. ಶನಿವಾರ ಮಾಂಸ ತಿನ್ನುವುದಿಲ್ಲ. ಪಕ್ಕಾ ನಾಸ್ತಿಕನಾಗಿ ಮಾತಾಡುತ್ತಾನೆ. ಮನೆಯಲ್ಲಿ ಸತ್ಯನಾರಾಯಣನ ಪೂಜೆ ಮಾಡಿಸುತ್ತಾನೆ. “ಯಾಕೋ?” ಅಂದರೆ, “ಇರುವವರು ಒಬ್ಬಳು ತಂಗಿ, ನಾನೊಬ್ಬ ಮಗ. ನಾನೂ ಅಪ್ಪ ಅಮ್ಮನ ಮಾತು ಕೇಳದೇ ಹೋದರೆ ಸುಮ್ಮನೆ ನೊಂದ್ಕೋತಾರೆ. ನಾನಲ್ಲದೇ ಅವರನ್ನು ಯಾರು ಪ್ರೀತಿಸಬೇಕು?” ಅನ್ನುತ್ತಾನೆ.

“ಅಲ್ಲಯ್ಯಾ, ಅವರನ್ನು ಪ್ರೀತಿಸು, ಆರಾಧಿಸು, ಅವರಿಗೆ ಸ್ಪಂದಿಸು. ಆದರೆ, ಅವರಿಗೆ ನಿನ್ನ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡು. ನಿನಗೂ ನಿನ್ನದೇ ಆದ ಒಲವಿದೆ, ನಿಲುವಿದೆ, ದೃಷ್ಟಿಯಿದೆ, ಗುರಿಯಿದೆ, ಅದಕ್ಕೆ ನಿನ್ನದೇ ಆದ ದಾರಿಯಿದೆ ಎಂಬುದನ್ನು ಸ್ಪಷ್ಟಪಡಿಸು. ಅವರನ್ನು ಪ್ರೀತಿಸುವುದಕ್ಕೂ, ನಿನ್ನ ನಿಲುವು ಒಲವುಗಳನ್ನು ನೀನು ಅಭಿವ್ಯಕ್ತಪಡಿಸಲಿಕ್ಕೂ ವ್ಯತ್ಯಾಸವಿದೆ. ನೀನು ಅವರ ನಿಲುವು ಮತ್ತು ಒಲವುಗಳಿಗೆ ಸ್ಪಂದಿಸುವುದಷ್ಟೇ ನಿನ್ನ ಕರ್ತವ್ಯವೆಂದುಕೊಂಡರೆ, ನಿನ್ನದೇ ಆದ ವಿಚಾರಗಳಿಗೆ ಸ್ಪಂದಿಸುವವರು ಯಾರು? ಅದರ ಪೋಷಣೆ ಮಾಡುವವರು ಯಾರು? ನಾವು ಬೇರೆಯವರಿಗೆ ಸ್ಪಂದಿಸುವುದಷ್ಟೇ ನಮ್ಮ ಕರ್ತವ್ಯ ಮತ್ತು ಗುರಿಯನ್ನಿರಿಸಿಕೊಂಡರೆ ನಮ್ಮತನದ ಶೋಷಣೆ ಅದು” ಎಂದೆ.

“ಬಿಡಿ ಮಾಸ್ಟರ್. ಅವೆಲ್ಲಾ ಅವರಿಗೆ ಅರ್ಥವಾಗುವುದಿಲ್ಲ. ಪಾಪ ಅವರು ಒಂದು ಥರಾ ಬೆಳೆದು ಬಂದುಬಿಟ್ಟಿರುವವರು” ಎನ್ನುತ್ತಾನೆ. ಈ ಮಧ್ಯೆ ಅವನ ಸಹೋದ್ಯೋಗಿಯನ್ನು ಪ್ರೀತಿಸಿದ. ಇಬ್ಬರ ಗೆಳೆತನ ಮತ್ತು ಒಲವು ಗಾಢವಾಯ್ತು. ಇಬ್ಬರೂ ಜೀವನಪೂರ್ತಿ ಒಂದಾಗಿ ಬಾಳಲು ನಿರ್ಧರಿಸಿದರು. ಆಕೆ ತನ್ನ ಪೋಷಕರಿಗೆ ಹೇಳಲು, ಇವನೂ ತನ್ನ ಪೋಷಕರಿಗೆ ತಿಳಿಸಿದ.
ತಂದೆ ತಾಯಿ ಮೊದಲು ಕೇಳಿದ್ದು ಜಾತಿ. ಅದರಲ್ಲಿ ಫೇಲ್ ಆದರು. ನೀನು ಜಾತಿ ಬಿಟ್ಟು ಮದುವೆಯಾದರೆ ನಿನ್ನ ತಂಗಿಗೆ ಯಾರು ಗಂಡು ಬರುತ್ತಾರೆ ಎಂದ ತಂದೆ ತಾಯಿಗಳಿಬ್ಬರೂ ಅತ್ತು, ಗೋಳಾಡಿದರು. ಕನಿಷ್ಠಪಕ್ಷ ತಂಗಿಗೆ ಮದುವೆ ಮಾಡಿಬಿಟ್ಟರೆ ತಾನೊಲಿದ ಸಂಗಾತಿಯ ತಾನು ವರಿಸಬಹುದು ಎಂದು ಅವಳಿಗೊಂದು ಗಂಡು ನೋಡಲು ಶತಾಯಗತಾಯ ಪ್ರಯತ್ನ ಮಾಡಿದ. ಅವಳಿಗೆ ಯಾವುದೊಂದೂ ಗಂಡು ಒಲಿಯಲಿಲ್ಲ. ಅವರೊಪ್ಪಿದರೆ ಇವಳೊಪ್ಪಲಿಲ್ಲ. ಈತ ಪ್ರೀತಿಸಿದ ಹುಡುಗಿಯ ಮನೆಯಲ್ಲಿ ಒತ್ತಡವು ಹೆಚ್ಚುತ್ತಿತ್ತು. ಈ ನಮ್ಮ ಹುಡುಗ ತನ್ನ ಮನೆಯಲ್ಲಿ ತಾನು ಮದುವೆಯಾಗಿ ತನ್ನ ತಂಗಿಗೆ ಮದುವೆ ಮಾಡುವುದಾಗಿ ಎಷ್ಟೆಲ್ಲಾ ಕೇಳಿಕೊಂಡರೂ, ಅತ್ತು ಸುರಿದರೂ ಪೋಷಕರು ಪಟ್ಟು ಬಿಡಲಿಲ್ಲ. ಅವನಿಗೂ ಅವರ ಪಟ್ಟಿನಿಂದ ಬಿಡಿಸಿಕೊಳ್ಳಲು ಸಣ್ಣವನಿಂದಲೂ ಕಲಿತೇ ಇರಲಿಲ್ಲವಲ್ಲ! ಅವರಿಗೂ ಇವನು ಸ್ವಲ್ಪ ಹೇಳಿದ ಮಾತು ಕೇಳದಿದ್ದರೂ ಬರಸಿಡಿಲು ಬಡಿದಂತಾಗಿ ಬುಡ ಕಡಿದ ಬಾಳೆಕಂಬವಾಗಿ ಉರುಳಿಬೀಳುತ್ತಿದ್ದರು. ಬಿಪಿ ಏರುತ್ತಿತ್ತು. ಶುಗರ್ ಲೋ ಆಗುತ್ತಿತ್ತು. ಆಸ್ಪತ್ರೆಯಲ್ಲಿ ಅವರನ್ನು ಸೂಕ್ಷ್ಮವಾಗಿ ನೋಡಿಕೊಂಡು ಮನೆಗೆ ಮರಳಿ ತರಬೇಕಿತ್ತು.

ಎರಡು ವರ್ಷಗಳೇ ಕಳೆದವು. ಈತ ಪ್ರೀತಿಸಿದ ಹುಡುಗಿ ತನ್ನ ಕ್ಷಮಿಸೆಂದು ಹೇಳಿ ತನ್ನ ಪೋಷಕರನುಮೋದಿತ ವಿವಾಹಕ್ಕೆ ಆಮಂತ್ರಣ ಪತ್ರಿಕೆ ಅವನ ಕೈಗೆ ನೀಡಿದಳು. ಇಷ್ಟು ದಿನ ತನ್ನ ವಿಚಾರಗಳನ್ನು, ಒಲವು, ನಿಲುವುಗಳನ್ನು ಬಿಟ್ಟುಕೊಟ್ಟಂತೇ ಪ್ರೀತಿಯನ್ನೂ ಅಷ್ಟು ಸುಲಭವಾಗಿ ಬಿಟ್ಟುಕೊಡಲಾಗಲಿಲ್ಲ. ಆದರೆ ತನ್ನ ಪ್ರೀತಿ ತನ್ನ ಕೈಬಿಟ್ಟಾಗಿತ್ತು. ಯಾವಾಗಲಾದರೊಮ್ಮೆ ಅಪರೂಪಕ್ಕೆ ಕಂಪನಿ ಸೇಕ್ ಎಂದು ಕುಡಿಯುತ್ತಿದ್ದವನು ಇಂದು ಯಾವ ಕಂಪನಿಗೂ ಕಾಯದೇ ಒಬ್ಬನೇ ಅಳುತ್ತಾ ಕುಡಿಯುತ್ತಾ ನೋವನ್ನು ನೆಂಜಿಕೊಳ್ಳುವಾಗ ಆಗಾಗ ಅವನಿಗೆ “ಬಿಡು ಮಗಾ, ಪರವಾಗಿಲ್ಲ ಬಿಡು. ನಿನ್ನ ಬದುಕಿನ ನಾಯಕ ನೀನು. ನಿನ್ನ ಬದುಕಿಗೆ ನೀನೇ ದಿಕ್ಕು. ನೊಂದ್ಕೋಬೇಡ. ಬಿಟ್ಟಾಕು” ಅನ್ನೋ ಧೈರ್ಯ ಹೇಳುವ ಕಂಪನಿಯಲ್ಲದೇ ಮತ್ತಿನ್ನೇನನ್ನು ಕೊಟ್ಟೇನು?

ಒಂದು ಮಧ್ಯಾಹ್ನ ಅವನು ಕಂಪನಿಯಲ್ಲಿರುವಾಗಲೇ ಫೋನ್ ಬಂತು ತಂಗಿಯಿಂದ. ಮಾಲೊಂದರ ಬಳಿ ಕಾಯುತ್ತಿರುವಳೆಂದು ಹೇಳಿ ತುರ್ತಾಗಿ ಬರ ಹೇಳಿದಳು. ಇವನು ಗಾಬರಿಗೊಂಡು ಓಡಿದ. ಮನೆಯಲ್ಲಿ ಮದುವೆಯ ವಿಷಯಗಳ ಬಗ್ಗೆ, ತನ್ನ ಪ್ರೇಮಾಲಾಪದ ಬಗ್ಗೆ ಅವಳು ಬೇಸರಗೊಂಡಿದ್ದು, ಇನ್ನಾವ ಆತುರದ ನಿರ್ಧಾರ ತೆಗೆದುಕೊಂಡಾಳೋ ಎಂದು ಒಳಗೆ ಅಳುತ್ತಲೇ ಸಿಗ್ನಲ್‌ಗಳನ್ನೂ ದಾಟಿ ಗಾಡಿ ಓಡಿಸಿದ್ದ.

ಅವಳು ತನ್ನ ರಿಜಿಸ್ಟರ್ಡ್ ಗಂಡನ ಜೊತೆ ನಿಂತಿದ್ದಳು. ಲೆಕ್ಕಹಾಕದಷ್ಟು ಎಷ್ಟೋ ಕಾಲದ ಮುನ್ನವೇ ಪ್ರೀತಿ ಮಾಡಿದ್ದ ಹುಡುಗನೊಂದಿಗೆ ಮೂರು ತಿಂಗಳ ಮುನ್ನವೇ ಸಬ್‌ರಿಜಿಸ್ಟ್ರಾರ್ ಆಫೀಸಿನಲ್ಲಿ ದಾಖಲು ಮಾಡಿದ್ದು, ಈ ದಿನದವರೆಗೂ ಸುಳಿವೇ ಕೊಡದಿದ್ದ ಹುಡುಗಿ ಇಂದು ಮದುವೆ ಮಾಡಿಕೊಂಡು ನಿಂತಿದ್ದಳು. “ಯಾಕಮ್ಮಾ ಹೀಗೆ ಮಾಡಿದೆ?” ಅಂದರೆ, “ನೀವು ಕಿತ್ತಾಟಕ್ಕೆ, ನಿಮ್ಮ ಜಾತಿ ಪ್ರತಿಷ್ಠೆಗಳಿಗೆ ನಾನು ನನ್ನ ಜೀವನ ಹಾಳು ಮಾಡಿಕೊಳ್ಳಲಾ?” ಎಂದು ಕೇಳಿದಳು.

ಪೋಷಕರ ವಿಧೇಯ ನನ್ನ ಯುವ ಪ್ರೇಮಿಯ ಮಬ್ಬಾದ ಬೆಳಕಿನಲ್ಲಿ, ಗಾಜಿನ ಬಾಟಲು, ಲೋಟಗಳ ಸದ್ದುಗಳಲ್ಲಿ ಕಣ್ಣೊರೆಸಿಕೊಳುತ್ತಿದ್ದಾನೆ. ಅವನ ಕಥೆಯನ್ನು ಪದೇ ಪದೇ ಕೇಳುತ್ತಾ ನಾನು ಅವನಿಗೆ ಕಂಪನಿ ಕೊಡುತ್ತಿದ್ದೇನೆ. ವಿಷ, ಹಗ್ಗ, ಎತ್ತರದ ಸ್ಥಳಗಳ ಗುರಿ ಮುಟ್ಟದಿರುವಂತೆ ಕಾಯುವ ಗುರುವಾಗಿ ಬೋಧನೆಗಳನ್ನು ನೀಡುತ್ತಿದ್ದೇನೆ.

ನಾ ಹೇಳಲಿರುವುದು ಕಟ್ಟುಕಥೆಗಳಲ್ಲ. ಯುವಜನರ ಕಾಡುವ ವ್ಯಥೆಗಳು.

– ಯೋಗೇಶ್ ಮಾಸ್ಟರ್, ರಂಗಕರ್ಮಿ

Leave a Reply