ವ್ಯಾಮೋಹಗಳ ಬ್ಲೇಡು ವ್ಯಾಖ್ಯಾನಗಳು

4 years ago

ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ವ್ಯಾಖ್ಯಾನಗಳನ್ನು ಒಳಗೊಂಡು, ತಮ್ಮ ತಮ್ಮ ಧೋರಣೆ ಮತ್ತು ಹಿತಾಸಕ್ತಿಗಳಿಗೆ ತಕ್ಕಂತೆ ಅತ್ಯಂತ ಹಿಂಡಿ ಹಿಪ್ಪೆ ಮಾಡಿ ತಿರುಚಲಾಗಿರುವ ದೇವರು, ಧರ್ಮ, ಶ್ರದ್ಧಾ-ನಂಬುಗೆ, ಹೆಸರಿಸಲಾಗುವ ಸಂಬಂಧಗಳು, ರಾಷ್ಟ್ರೀಯತೆಗಳಂತಹ ಅಪವ್ಯಾಖ್ಯಾನಗಳಿಗೆ ಒಳಗಾಗಿರುವ ಪರಿಕಲ್ಪನೆಗಳಲ್ಲಿ ಮತ್ತೊಂದು ವಿಷಯವೆಂದರೆ ಪ್ರೀತಿ.

ಯಾವುದು ನೈಸರ್ಗಿಕವಲ್ಲವೋ ಅವುಗಳನ್ನು ವೈಜ್ಞಾನಿಕವಾಗಿ ಪ್ರಯೋಗಕ್ಕೆ ಒಳಪಡಿಸಲಾಗುವುದಿಲ್ಲ ಮತ್ತು ವಿಶ್ವಸಮಾಜದಲ್ಲಿ ಏಕಾಭಿಪ್ರಾಯವಾಗಿ ಸ್ವೀಕರಿಸಲಾಗುವುದಿಲ್ಲ. ಅದೇ ಮೇಲೆ ಹೇಳಿರುವ ಎಲ್ಲಾ ವಿಷಯಗಳಲ್ಲಿನ ಸಮಸ್ಯೆ! ಹಾಗೆಯೇ ಅದೇ ಅದರ ಸಹಜ ಲಕ್ಷಣವೂ ಕೂಡ.

ಒಂದು ತಾಯಿಯ ದೂರಿದು.  “ಅವಳು ಎಷ್ಟು ಚೆನ್ನಾಗಿ ನಾನು ಹೇಳುವುದನ್ನೆಲ್ಲಾ ಕೇಳುತ್ತಿದ್ದಳು. ಹಾಕಿದ ಗೆರೆಯನ್ನು ದಾಟುತ್ತಿರಲಿಲ್ಲ. ನಮ್ಮ ನೋವುಗಳನ್ನು ಕೇಳುತ್ತಿದ್ದಳು. ಎಷ್ಟು ಜಾಣೆಯಾಗಿದ್ದಳು. ಅವನ್ಯಾವನೋ ಬಂದ ವಿಲ್ಹನ್. ಅವನ ಮುಖ ನೋಡಿದರೆ ರೌಡಿ ಇದ್ದಂಗಿದ್ದಾನೆ. ಅವನಿಗೆ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇದೆ. ಅಯೋಗ್ಯ. ಅಂಥವನು ಬಂದ ಕೂಡಲೇ ಪ್ರೀತಿಸ್ತೀನಿ. ಮದುವೆ ಆಗ್ತೀನಿ ಅಂತ ಹೇಳ್ತಿದ್ದಾಳೆ. ಹೆತ್ತು ಹೊತ್ತು ಸಾಕಿ ಸಲಹಿ ವಿದ್ಯಾಭ್ಯಾಸ ಕೊಟ್ಟು, ಇಷ್ಟರ ಮಟ್ಟಿಗೆ ಬದುಕಲ್ಲಿ ತಂದಿರಿಸಿದ ನಮಗಿಂತ, ಅವನ್ಯಾವನೋ ಪರಿಚಯ ಆದ ವರ್ಷದಲ್ಲಿ ಹಿಂದೆ ಓಡಿ ಹೋಗಲು ಸಿದ್ಧವಾಗಿದ್ದಾಳೆ” ಎಂದು ಅಳುವ ತಾಯಿಯ ಮತ್ತು ತಂದೆಯ ಗೋಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಅಲ್ಲಿ ಆಗಿರುವುದೇನು ಎಂದು ನಾನು ಅರ್ಥ ಮಾಡಿಸಲಾರೆ. ನಾನು ಹೇಳಿದರೂ ಅದನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಆ ತಂದೆ ತಾಯಿಯರಿಗಿರುವುದಿಲ್ಲ.

ಆ ಹುಡುಗಿಯೊಂದಿಗೆ ಮಾತಾಡಿದೆ. “ನೀನು ಅವರು ಹೇಳುವುದನ್ನೆಲ್ಲಾ ಕೇಳುತ್ತಿದ್ದೆ. ಹಾಕಿದ ಗೆರೆಯನ್ನು ದಾಟುತ್ತಿರಲಿಲ್ಲವಂತೆ. ಈಗ್ಯಾಕೆ ಹೀಗೆ ಮಾಡುತ್ತಿದ್ದೀಯಮ್ಮಾ?”

“ಅವರು ಹೇಳುವುದನ್ನೆಲ್ಲಾ ಕೇಳದೇ ವಿಧಿಯಿರಲಿಲ್ಲ. ಅವರು ಹಾಕಿದ ಗೆರೆಯನ್ನು ದಾಟಿದರೆ ಕೊಂದೇ ಬಿಡುತ್ತಿದ್ದರು. ಇನ್ನೆಷ್ಟು ದಿನ ನಾನು ಅವರ ಗೆರೆಗಳಲ್ಲೇ ಬದುಕುವುದು?” ಎಂದಳು ಮಗಳು.

“ಅವರು ನಿನ್ನ ಹೆತ್ತಿದ್ದಾರೆ, ಹೊತ್ತಿದ್ದಾರೆ, ನಿನ್ನ ಇದುವರೆಗೂ ಬೆಳೆಸಿದ್ದಾರೆ. ನೀನು ಹೀಗೆ ಅವರಿಗೆ ಮೋಸ ಮಾಡಬಹುದೇನಮ್ಮಾ?”

“ಪ್ರಕೃತಿಯಲ್ಲಿ ಎಲ್ಲಾ ಪ್ರಾಣಿ ಪಕ್ಷಿಗಳೂ ಅವುಗಳಿಗೆ ತಕ್ಕಂತೆ ತಮ್ಮತಮ್ಮ ಮರಿಗಳನ್ನು ನೋಡಿಕೊಳ್ಳುತ್ತವೆ. ಮನುಷ್ಯರೂ ಹಾಗೇ. ನಾನು ಮೋಸ ಹೇಗೆ ಮಾಡಿದೆ? ನನ್ನನ್ನು ನೋಡಿಕೊಳ್ಳುವುದು ಎಂದರೆ ಬಿಸಿನಸ್ಸೇ? ಇನ್‌ವೆಸ್ಟ್ಮೆಂಟೇ? ಅವರು ಹಾಕಿರುವ ಬಂಡವಾಳವನ್ನು ನಾನು ಎತ್ತಿಕೊಂಡು ಓಡಿಹೋಗುತ್ತಿದ್ದೇನೆಯೇ? ನಾನು ಅವರಿಗೆ ಅವರ ನಿರೀಕ್ಷೆಗೆ ತಕ್ಕಂತೆ ರಿಟರ್ನ್ಸ್ ಕೊಡಲಿಲ್ಲಾಂದ್ರೆ ಅದು ಮೋಸವೇ?”

“ಅವನು ಸರಿ ಇಲ್ಲ ಅಂತ ಅವರು ಹೇಳ್ತಿದ್ದಾರೆ.”

“ಅವನು ಸರಿ ಇಲ್ಲ ಅಂತ ಅನ್ನೋಕೆ ಅವರು ಯಾರು? ನನಗೆಲ್ಲಾ ಸರಿಯಾಗೇ ಕಾಣಿಸ್ತಿದೆ!”

“ನೀನು ಇವರಲ್ಲಿ ಇಲ್ಲದಿರುವುದನ್ನು ಅವನಲ್ಲಿ ಏನು ಕಂಡೆ?”

“ಪ್ರೀತಿ!”

“ಪ್ರೀತಿ ಎಂದರೆ ಏನಮ್ಮಾ?” ಅಂದರೆ ಆಕೆಗೆ ಕೊಂಚ ಗೊಂದಲವಾಯಿತು. ಆದರೂ ಸ್ವಲ್ಪ ಸಾವರಿಸಿಕೊಂಡು “ಅವನು ನನಗೆ ತುಂಬಾ ಇಷ್ಟ ಸಾರ್. ನನ್ನ ಮನಸ್ಸು ತುಂಬಾ ಅವನೇ ತುಂಬಿಕೊಂಡಿದ್ದಾನೆ. ಅವನಿಗೆ ನನ್ನ ಹೃದಯ ಕೊಟ್ಟುಬಿಟ್ಟಿದ್ದೇನೆ. ಬಾಳಿದರೆ, ಬದುಕಿದರೆ ಅವನ ಜೊತೆಗೇ ಅಂತ ನಾನು ನಿರ್ಧಾರ ಮಾಡಿಕೊಂಡುಬಿಟ್ಟಿದ್ದೇನೆ” ಎಂದಳು.

“ಸುಮ್ಮನೆ ಬ್ಲೇಡ್ ಹಾಕಬೇಡಮ್ಮಾ!!” ಎಂದ ನನ್ನ ಮಾತಿಗೆ ಅವಳಲ್ಲಿ ಸಮಾಧಾನವಿರಲಿಲ್ಲ. ಉತ್ತರಿಸಲಿಲ್ಲ.

ಅವಳ ತಂದೆ ತಾಯಿ ಹಾಕಿದ್ದೂ ಬ್ಲೇಡೇ. ಆದರೆ ಮಗಳದ್ದು ಸೂಪರ್ ಬ್ಲೇಡು!!

ಸಾಮಾನ್ಯವಾಗಿ ಎಲ್ಲಿ ವಿಷಯವನ್ನು ತಾರ್ಕಿಕವಾಗಿ ಮಂಡಿಸಲಾಗುವುದಿಲ್ಲವೋ, ಪ್ರಾಯೋಗಿಕವಾಗಿ ನಿರೂಪಿಸಲಾಗುವುದಿಲ್ಲವೋ, ಆಗ ಈ ಬಗೆಯ ಸೂಪರ್‌ಸ್ಟಿಶಿಯಸ್‌ಗೆ ಮೊರೆ ಹೋಗಿಬಿಡುತ್ತಾರೆ.

ತಾಯಿ ತಂದೆ ಇಬ್ಬರೂ ಕಣ್ಣಿಗೆ ಕಾಣೋ ದೇವರು ಎಂಬಂತಹ ಭಾವನಾತ್ಮಕ ಕಟ್ಟುವಿಕೆಯಂತಹುದೇ ಈ ಹೃದಯ, ಬಾಳು, ಬಿಟ್ಟು ಇರಲಾಗದು ಎಂಬಂತಹ ಪ್ರೇಮಿಗಳ ಹಲುಬುವಿಕೆ.

ಖಲೀಲ್ ಗಿಬ್ರಾನನ ಒಂದು ಕಥೆ. ಯಾರೋ ಒಬ್ಬಾತನ ಮಗಳು ಅವನಿಷ್ಟಕ್ಕೆ ವಿರುದ್ಧವಾಗಿ ಯಾರೋ ಒಬ್ಬನೊಂದಿಗೆ ಓಡಿ ಹೋಗುವಾಗ ಹಡುಗು ಮುಳುಗಿ ಆ ಪ್ರೇಮಿಗಳು ಸಾಯುತ್ತಾರೆ. ಆ ಹೆಣ್ಣು ಮಗಳ ತಂದೆ ದಡದಲ್ಲಿ ರೋಧಿಸುತ್ತಿರುತ್ತಾನೆ. “ಅಯ್ಯೋ, ನಾನು ಶಪಿಸಿದ್ದು ಈ ರೀತಿಯಲ್ಲಿ ನಿಜವಾಗಿ ಹೋಯಿತೇ” ಎಂದು ಗೋಳಿಡುವ ಅವನ ಅಳುವಿನಲ್ಲಿ ಗಿಬ್ರಾನ್ ತನ್ನ ಮಾತು ನಿಜವಾದ ಅಹಂಕಾರ ಗುರುತಿಸುತ್ತಾನೆ.

ಹೆತ್ತುಹೊತ್ತು ಸಾಕಿ ಸಲಹುವ ಪ್ಲೇಟು ಹಾಕುವ ತಂದೆ ತಾಯಿಗಳ ಬ್ಲೇಡೂ ಮತ್ತು ಹೃದಯ ಹಾಗೂ ಮನಸ್ಸುಗಳನ್ನು ಒಬ್ಬರಿಗೊಬ್ಬರು ಅರ್ಪಿಸಿಕೊಂಡಿದ್ದೇವೆನ್ನುವ ಪ್ರೇಮಿಗಳ ಬ್ಲೇಡೂ ಕತ್ತರಿಸಿ ಹಾಕಲಾಗದ ಪಾಶವೆಂದರೆ ಅದು ವ್ಯಾಮೋಹ. ವ್ಯಾಮೋಹವನ್ನೇ ಪ್ರೀತಿಯೆಂದು ಎರಡೂ ಪಾರ್ಟಿಯವರು ಕರೆಯುತ್ತಿರುವುದು.

ಒಂದು ವಿಧವಾ ತಾಯಿ ತನ್ನ ಮಗನೊಂದಿಗೆ ಜಗಳವಾಡುತ್ತಿದ್ದಳು. “ಇತ್ತೀಚೆಗೆ ಬಂದ ಅವಳ ಸೆರಗು ಹಿಡ್ಕೊಂಡು ಓಡಾಡುತ್ತಿದ್ದೀಯ. ನೀನು ಒಂದು ಹೊತ್ತೂ ಹಸಿವು ಬೀಳದಂತೆ ಇಷ್ಟೂ ವರ್ಷಗಳೂ ನೋಡಿಕೊಂಡ ನಾನು ನಿನ್ನ ಕಣ್ಣಿಗೆ ಕಾಣಿಸದೇ ಹೋದೆನೇ?” ಎಂದು ಆಕೆಯ ದೂರು.

“ನೀನೊಂದರ ಹಸಿವನ್ನು ಇಷ್ಟು ಕಾಲವೂ ತೀರಿಸುತ್ತಿದ್ದೆ. ನೀನೇ ನನ್ನ ಎಲ್ಲಾ ಹಸಿವುಗಳನ್ನೂ ತೀರಿಸಲಾಗುವುದಿಲ್ಲ!!” ಮಗ ಉತ್ತರಿಸಿದ್ದನ್ನು ತಾಯಿ ಸಹಿಸದೇ ಹೋದಳು.

“ನಿನಗೆ ಅದೇ ದೊಡ್ಡದಾಗಿ ಹೋಯ್ತಾ? ಅಂತಹ ಹಸಿವುಗಳನ್ನೆಲ್ಲಾ ತಡೆದುಕೊಂಡು ನಿನ್ನ ನೋಡಿಕೊಂಡ ನನ್ನ ತ್ಯಾಗ ನಿನಗೆ ಕಾಣಿಸುತ್ತಿಲ್ಲವಾ?”

“ನೀನು ತ್ಯಾಗವೆಂದು ಏನನ್ನು ಕರೆಯುತ್ತಿದ್ದೀಯೋ ಅದು ಅಸೂಯೆಯಾಗಿಯೂ ರೂಪಾಂತರಗೊಳ್ಳಬಲ್ಲದೇ?” ಎಂಬರ್ಥದಲ್ಲಿ ಆಡಿದ ಆ ಮಗನ ಮಾತುಗಳನ್ನು ಎಲ್ಲಾ ತ್ಯಾಗಮಯಿಗಳೂ ಆಲಿಸಲೇ ಬೇಕು.

ತ್ಯಾಗ, ಪ್ರೇಮ, ವಾತ್ಸಲ್ಯ ಬಂಡವಾಳಶಾಹಿಗಳದ್ದಾಗಬಾರದೇನೋ. ಹಾಗಾಗುವುದನ್ನೇ ವ್ಯಾಮೋಹವೆನ್ನಬಹುದೇನೋ!

ಒಟ್ಟಾರೆ ಹದಿಹರಯದವರು ಅದೆಂತದ್ದೋ ಸೆಳೆತ, ಹೃದಯ, ಭಾವನೆ ಇತ್ಯಾದಿ ಕಲ್ಪನೆಗಳ ಬಗ್ಗೆ ಮಾತಾಡತೊಡಗುವಾಗ, ಪೋಷಕರು ಮತ್ತು ಪ್ರೇಮಿಗಳು, ಈ ಎರಡೂ ಪಕ್ಷದವರು ಗಂಭೀರವಾಗಿ ಹಾಕುವ ಬ್ಲೇಡುಗಳನ್ನು ನೋಡಿ ನಗಲಾಗದು, ಗಂಭೀರವಾಗಿಯೇ ವಿಚಾರವನ್ನು ಹೇಳಲು ಪ್ರಯತ್ನಿಸಿದರೆ ಕೇಳಲಾರರು. ಇಬ್ಬರೂ ಯಾರೊಬ್ಬರ ಮಾತುಗಳನ್ನು ಕೇಳಿದರೂ, ಒಪ್ಪಿದರೂ ತಾವು ಸೋತೆವೆಂಬ ಕೀಳರಿಮೆಯಲ್ಲಿ ಸಾಯದಿರಲು ಯತ್ನಿಸುತ್ತಾರೆ. ಈ ಬ್ಲೇಡುಗಳ ಗಂಭೀರ ಮೊನಚುಗಳು ಎರಡೂ ಪಕ್ಷದವರ ಕುತ್ತಿಗೆಗಳನ್ನು ಕೊಯ್ದ ಉದಾಹರಣೆಗಳು ನಮ್ಮ ಸಮಾಜದ ಇತಿಹಾಸದಲ್ಲಿಯೂ ಇವೆ, ಇವತ್ತೂ ಅಲ್ಲೆಲ್ಲೋ ನಡೆಯುತ್ತಿವೆ, ನಾಳೆ ಮತ್ತೆ ನ್ಯೂಸ್ ಪೇಪರಿನಲ್ಲೂ ನೋಡೇ ನೋಡುತ್ತೇವೆ.

  • ಯೋಗೇಶ್ ಮಾಸ್ಟರ್, ರಂಗಕರ್ಮಿ

One Response

  1. ಈ ತರದ ಚಿಕಿತ್ಸಕ ಗುಣದಿಂದ ಮಾತ್ರ ಯುವ ಮನಸ್ಸನ್ನು ಅರಿಯಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಈ ಬರಹ ಹೊಸ ಪ್ರಕಾರವಷ್ಟೆ ಅಲ್ಲ, ಪ್ರಜ್ಞಾಕೇಂದ್ರವೂ ಆಗುತ್ತದೆ.

Leave a Reply