ಲೋಕಸಭೆ ಚುನಾವಣೆ: ಕರ್ನಾಟಕದ 276 ಅಭ್ಯರ್ಥಿಗಳ ನಾಮಪತ್ರ ಪುರಸ್ಕೃತ

2 years ago

ಬೆಂಗಳೂರು: ಲೋಕಸಭೆಗೆ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ನಾಮಪತ್ರಗಳ ಪರಿಶೀಲನೆ ಪೂರ್ಣಗೊಂಡಿದೆ. ಒಟ್ಟು 276 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 60 ನಾಮಪತ್ರಗಳು ತಿರಸ್ಕೃತಗೊಂಡಿವೆ.

ಬೆಂಗಳೂರು ನಗರದ ಮೂರು ಕ್ಷೇತ್ರ ಸೇರಿದಂತೆ ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳ ಚುನಾವಣೆಗೆ ಮಾರ್ಚ್ 28ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ನಾಮಪತ್ರ ಸಲ್ಲಿಸಲು ಏಪ್ರಿಲ್ 4 ಕೊನೆಯ ದಿನವಾಗಿತ್ತು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಸುರೇಶ್, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಸೇರಿದಂತೆ ಒಟ್ಟು 358 ಅಭ್ಯರ್ಥಿಗಳು 492 ನಾಮಪತ್ರಗಳನ್ನು ಸಲ್ಲಿಸಿದ್ದರು.

ನಾಮಪತ್ರಗಳ ಪರಿಶೀಲನೆ ಕಾರ್ಯ ಮುಕ್ತಾಯಗೊಂಡಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಎಲ್ಲಾ ಅಭ್ಯರ್ಥಿಗಳ ನಾಮಪತ್ರಗಳು ಪುರಸ್ಕೃತಗೊಂಡಿವೆ. ತಿರಸ್ಕೃತಗೊಂಡಿರುವ ನಾಮಪತ್ರಗಳಲ್ಲಿ ಪಕ್ಷೇತರರೇ ಹೆಚ್ಚಾಗಿದ್ದಾರೆ.

ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 8 ಕೊನೆಯ ದಿನ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 10 ಅಭ್ಯರ್ಥಿಗಳ 15 ನಾಮಪತ್ರಗಳು ಪುರಸ್ಕೃತಗೊಂಡಿದ್ದರೆ, 4 ನಾಮಪತ್ರಗಳು ತಿರಸ್ಕೃತವಾಗಿವೆ.

ಹಾಸನ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳ 26 ನಾಮಪತ್ರಗಳು ಪುರಸ್ಕೃತವಾಗಿದ್ದು, 3 ನಾಮಪತ್ರಗಳು ತಿರಸ್ಕೃತಗೊಂಡಿವೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳ 20 ನಾಮಪತ್ರಗಳು ಪುರಸ್ಕೃತವಾಗಿದ್ದರೆ, 2 ನಾಮಪತ್ರಗಳು ತಿರಸ್ಕೃತವಾಗಿವೆ.

ಚಿತ್ರದುರ್ಗ ಕ್ಷೇತ್ರದಲ್ಲಿ 24 ಅಭ್ಯರ್ಥಿಗಳ 32 ನಾಮಪತ್ರಗಳು ಪುರಸ್ಕೃತವಾಗಿದ್ದು, 4 ನಾಮಪತ್ರಗಳು ತಿರಸ್ಕೃತಗೊಂಡಿವೆ. ತುಮಕೂರು ಕ್ಷೇತ್ರದ 22 ಅಭ್ಯರ್ಥಿಗಳ 31 ನಾಮಪತ್ರಗಳು ಕ್ರಮಬದ್ಧವಾಗಿವೆ.

ಮಂಡ್ಯ ಕ್ಷೇತ್ರದ 19 ಅಭ್ಯರ್ಥಿಗಳ 27 ನಾಮಪತ್ರಗಳು ಸಿಂಧುವಾಗಿದ್ದರೆ, 10 ನಾಮಪತ್ರಗಳು ತಿರಸ್ಕೃತಗೊಂಡಿವೆ. ಮೈಸೂರು ಕ್ಷೇತ್ರದ 24 ಅಭ್ಯರ್ಥಿಗಳ 32 ನಾಮಪತ್ರಗಳು ಪುರಸ್ಕೃತವಾಗಿದ್ದು, 5 ನಾಮಪತ್ರಗಳು ತಿರಸ್ಕಾರಗೊಂಡಿವೆ.

ಚಾಮರಾಜನಗರ ಕ್ಷೇತ್ರದ 22 ಅಭ್ಯರ್ಥಿಗಳ 31 ನಾಮಪತ್ರಗಳು ಪುರಸ್ಕೃತಗೊಂಡಿದ್ದು, 5 ನಾಮಪತ್ರಗಳು ತಿರಸ್ಕಾರವಾಗಿವೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ 27 ಅಭ್ಯರ್ಥಿಗಳ 38 ನಾಮಪತ್ರಗಳು ಕ್ರಮವಾಗಿದ್ದು, ಏಳು ನಾಮಪತ್ರಗಳು ತಿರಸ್ಕಾರವಾಗಿವೆ.

ಬೆಂಗಳೂರು ಕೇಂದ್ರ ಕ್ಷೇತ್ರದ 28 ಅಭ್ಯರ್ಥಿಗಳು 36 ನಾಮಪತ್ರಗಳು ಪುರಸ್ಕೃತವಾಗಿದ್ದು, 4 ನಾಮಪತ್ರಗಳು ತಿರಸ್ಕಾರವಾಗಿವೆ. ಬೆಂಗಳೂರು ಉತ್ತರ ಕ್ಷೇತ್ರದ 21 ಅಭ್ಯರ್ಥಿಗಳ 30 ನಾಮಪತ್ರಗಳು ಸಿಂಧುವಾಗಿದ್ದು, 6 ಅಭ್ಯರ್ಥಿಗಳ ನಾಮಪತ್ರಗಳು ಅಸಿಂಧುವಾಗಿವೆ.

ಚಿಕ್ಕಬಳ್ಳಾಪುರ ಕ್ಷೇತ್ರದ 32 ಅಭ್ಯರ್ಥಿಗಳ 39 ನಾಮಪತ್ರಗಳು ಪುರಸ್ಕೃತವಾಗಿದ್ದು, ನಾಲ್ಕು ನಾಮಪತ್ರ ತಿರಸ್ಕಾರಗೊಂಡಿದ್ದರೆ, ಕೋಲಾರ ಕ್ಷೇತ್ರದ 19 ಅಭ್ಯರ್ಥಿಗಳ 27 ನಾಮಪತ್ರಗಳು ಕ್ರಮಬದ್ಧವಾಗಿದ್ದು, 6 ನಾಮಪತ್ರಗಳು ತಿರಸ್ಕೃತಗೊಂಡಿವೆ. ಏ.26ರಂದು 14 ಕ್ಷೇತ್ರಗಳಲ್ಲೂ ಮತದಾನ ನಡೆಯಲಿದೆ.

Leave a Reply