ಉಪ್ಪಿನ ಸತ್ಯಾಗ್ರಹಕ್ಕೆ ೯೪ ವರ್ಷಗಳು

2 years ago


ವಸಾಹತು ಕಾಲದ ಬ್ರಿಟನ್ನಿನ ಸೈನ್ಯ ಬಲ ಅಗಾಧವಾಗಿತ್ತು. ಬ್ರಿಟಿಷ್‌ ಸೈನ್ಯಕ್ಕೆ  ಯಾವುದೇ ವಿರೋಧೀ ಸೈನ್ಯವನ್ನು ಸೋಲಿಸಲು ಬೇಕಾದ ಅನುಭವವಿತ್ತು. ೧೭, ೧೮ನೇ ಶತಮಾನದಲ್ಲಿ ಬ್ರಿಟಿಷ್‌ ಸೈನ್ಯವು ಕಡಲಿನ ಮೇಲೆಯೂ ತನ್ನ ಹಿಡಿತವನ್ನು ಸ್ಥಾಪಿಸಿತ್ತು.  ೧೯ ನೇ ಶತಮಾನದ ಆರಂಭದ ವೇಳೆಗೆ, ಕಂಪನಿ ಸೈನ್ಯವು ಭಾರತದಲ್ಲಿಯೇ ೨೫೦೦೦೦  ಸೈನಿಕರನ್ನು ಹೊಂದಿತ್ತು. ಜಗತ್ತಿನ ಎಲ್ಲೆಡೆಯೂ ಹೋರಾಡಿ ಅನುಭವವಿದ್ದ ಅವರನ್ನು ಸೋಲಿಸುವುದು ಯಾರಿಗೂ ಸುಲಭವಿರಲಿಲ್ಲ.

ಅಂಥ ಅಗಾಧ ಶಕ್ತಿಯನ್ನು ಸೋಲಿಸಲು ಗಾಂಧಿ ಕಂಡುಕೊಂಡ ಎರಡು ಅಸ್ತ್ರಗಳೆಂದರೆ ಸತ್ಯಾಗ್ರಹ ಮತ್ತು ಅಹಿಂಸೆ. ಬ್ರಿಟಿಷರ ಅಪಾರವಾದ ಮದ್ದುಗುಂಡುಗಳಿಗೆ ಗಾಂಧೀಜಿ ಕೊಟ್ಟ ಉತ್ತರ  ಒಂದು ಹಿಡಿ ಉಪ್ಪು, ಅದಕ್ಕೆ ಬ್ರಿಟಿಷರಲ್ಲಿ ಉತ್ತರವೇ ಇರಲಿಲ್ಲ.

ಡಿಸೆಂಬರ್ ೩೧, ೧೯೨೯ರ ಮಧ್ಯರಾತ್ರಿಯಲ್ಲಿ ಲಾಹೋರ್ ನಲ್ಲಿ  ಸ್ವತಂತ್ರ ಭಾರತದ ಧ್ವಜವನ್ನು ಹಾರಿಸಿದ ಆನಂತರ ಅಖಿಲ ಭಾರತ ಕಾಂಗ್ರೆಸ್‌ ಸಾಮೂಹಿಕ ಕಾನೂನು ಭಂಗ ಚಳುವಳಿಯನ್ನು ಕೈಗೆತ್ತಿಕೊಂಡಿತು. ಈ ಚಳುವಳಿಗೆ ಬಂದೂಕುಗಳ ಅವಶ್ಯಕತೆಯೇ ಇರಲಿಲ್ಲ. ಇದರಿಂದಾಗಿ ಲಕ್ಷಾಂತರ ಭಾರತೀಯರು ಆಂದೋಲನದಲ್ಲಿ ಸುಲಭವಾಗಿ ಭಾಗವಹಿಸುವಂತಾಯಿತು. ಇವನ್ನು ನಿರೀಕ್ಷೆಯೇ ಮಾಡದಿದ್ದ ಬ್ರಿಟಿಷ್‌ ಸೈನ್ಯವು ಮೊದಲ ಬಾರಿಗೆ ಕಂಗೆಟ್ಟಿತು. ಗಾಂಧೀಜಿಯವರು ಅಹಿಂಸಾತ್ಮಕ ಚಳುವಳಿಯಲ್ಲಿ ಮದ್ದುಗುಂಡುಗಳಿಗೆ ಯಾವುದೇ ಅವಕಾಶ ಇರಲಿಲ್ಲ. ಗುಂಡಿಗೆ ಗುಂಡು ಎಂಬ ರೀತಿಯಲ್ಲಿ ತರಬೇತು ಪಡೆದಿದ್ದ ಬ್ರಿಟಿಷ್‌ ಸೈನ್ಯ ಮೊದಲಬಾರಿಗೆ ತನ್ನ ನೈತಿಕ ಶಕ್ತಿಯನ್ನು ಕಳೆದುಕೊಂಡದ್ದು ಭಾರತದಲ್ಲಿ. ಅವರ ಮದ್ದುಗುಂಡುಗಳು ಸದ್ದಿಲ್ಲದೆ  ಮೂಲೆ ಸೇರಿದುವು.

ಗಾಂಧೀಜಿಯ ಈ ಹೊಸ ಪ್ರಯೋಗವು ನಿರೀಕ್ಷಿತ ಫಲ ನೀಡಿದ್ದು ಉಪ್ಪಿನ ಸತ್ಯಾಗ್ರಹದಲ್ಲಿ. ಬ್ರಿಟಿಷ್ ಸರ್ಕಾರವು ಸಾಮಾನ್ಯ ಜನರು ಬಳಸುವ ಉಪ್ಪಿನ ಮೇಲೆ ಕರ ವಿಧಿಸಿ, ತನ್ನ   ಬೊಕ್ಕಸವನ್ನು ತುಂಬಿಸಿಕೊಳ್ಳಲು ಹೊರಟಾಗ ಗಾಂಧೀಜಿ, ಉಪ್ಪಿನ ತೆರಿಗೆಯನ್ನು  ನಿರಾಕರಿಸುವ ಮೂಲಕ ತಮ್ಮ ಅಹಿಂಸಾತ್ಮಕ ಚಳುವಳಿಯನ್ನು ಆರಂಭಿಸಿದರು. ಪ್ರತಿಯೊಬ್ಬ ಭಾರತೀಯನೂ ಉಪ್ಪಿನ ಮೇಲಿನ ತೆರಿಗೆಯಿಂದ ಪ್ರಭಾವಿತನಾಗಿದ್ದರಿಂದ ಬ್ರಿಟಿಷರ ಹೊಸ ಕಾನೂನಿನ ವಿರುದ್ಧ ಜನರನ್ನು ಸಂಘಟಿಸುವುದು ಗಾಂಧೀಜಿಗೆ ಸುಲಭವಾಯಿತು. ಜನರು ಉಟ್ಟ ಬಟ್ಟೆಯಲ್ಲಿಯೇ ಹೋರಾಟಕ್ಕೆ ಸಿದ್ಧರಾದರು. 

ಮಾರ್ಚ್ ೨, ೧೯೩೦ರಂದು ಉಪ್ಪಿನ ಕಾನೂನನ್ನು ಬದಲಾಯಿಸುವಂತೆ ಕೋರಿ ಅಂದಿನ ವೈಸ್‍ರಾಯ್, ಲಾರ್ಡ್ ಇರ್ವಿನ್ ರಿಗೆ ಗಾಂಧಿ ಒಂದು ಪತ್ರ ಬರೆದರು. ಪತ್ರದ ಕೊನೆಯಲ್ಲಿ- “ಈ ನನ್ನ ಪತ್ರವು ನಿಮ್ಮ ಮನಸ್ಸನ್ನು ಬದಲಾಯಿಸದಿದ್ದಲ್ಲಿ, ಈ ತಿಂಗಳ ೧೧ನೇ ತಾರೀಖಿನಂದು ನಾನು ನನ್ನ ಆಶ್ರಮದ ಸಹಚರರೊಂದಿಗೆ ಈ ಕಾನೂನಿನ ನಿಯಮಗಳನ್ನು ಪಾಲಿಸದಿರಲು ಮುಂದಾಗುತ್ತೇನೆʼ ಎಂದರು. ಇದಕ್ಕೆ ಉತ್ತರ ಬರಲಿಲ್ಲ. ಆ ಪ್ರಕಾರ,   ಮಾರ್ಚ್ ೧೨, ೧೯೩೦ರಂದು ಗಾಂಧೀಜಿಯವರು ೭೮ ಮಂದಿ ಸಹ ಸತ್ಯಾಗ್ರಹಿಗಳೊಂದಿಗೆ ಸಬರಮತಿಯಿಂದ ಸುಮಾರು ೩೮೮ಕಿಮೀ ದೂರದ ಕಡಲ ತೀರದಲ್ಲಿನ ದಾಂಡಿ ಗ್ರಾಮಕ್ಕೆ ನಡೆಯಲು ಪ್ರಾರಂಭಿಸಿದರು. ಈ ನಡಿಗೆಯ ೨೩ ದಿನಗಳಲ್ಲಿ ನಾಲ್ಕು ಜಿಲ್ಲೆಗಳನ್ನೂ ೪೮ ಹಳ್ಳಿಗಳನ್ನೂ ಹಾಯ್ದು ಮುಕ್ತಾಯವಾಯಿತು. ಏಪ್ರಿಲ್ ೫ರಂದು ದಾಂಡಿ ತಲುಪಿದ ಗಾಂಧೀಜಿ ಮರುದಿನ, ಅಂದರೆ ಇಂದಿಗೆ ಸರಿಯಾಗಿ ೯೪ ವರ್ಷಗಳ ಹಿಂದೆ, ಎಪ್ರಿಲ್‌ ಆರರಂದು  ಒಂದು ಹಿಡಿ ಮಣ್ಣು ಮತ್ತು ಉಪ್ಪನ್ನು ಕೈಯಲ್ಲಿ ಹಿಡಿದು  “ಬ್ರಿಟೀಷ್ ಸಾಮ್ರಾಜ್ಯದ ಅಡಿಪಾಯವನ್ನು ನಾನು ಅಲುಗಾಡಿಸುತ್ತಿದ್ದೇನೆ” ಎಂದು ಘೋಷಿಸಿದರು. ಮುಂದಿನದು ಈಗ ಇತಿಹಾಸ. 

ಗಾಂಧೀಜಿ ಕೈಯಲ್ಲಿ ಹಿಡಿದ ಮುಷ್ಟಿ ಉಪ್ಪಿಗೆ ಬ್ರಿಟಿಷರ ಬಂದೂಕುಗಳಿಗೆ ಉತ್ತರಕೊಡಲಾಗಲಿಲ್ಲ ಎಂದು ಹೇಳಲಷ್ಟೇ ಇದನ್ನು ಬರೆದೆ.

– ಪುರುಷೋತ್ತಮ ಬಿಳಿಮಲೆ, ಹಿರಿಯ ಸಂಶೋಧಕರು

Leave a Reply