ಭೂಮಿಯ ಮೇಲೆ ಬಲಹೀನ ಸಮುದಾಗಳು ಇರಲೇ ಬಾರದೇ? ಬೇಡುತ್ತೇವೆ, ಕೂಲಿ ಮಾಡುತ್ತೇವೆ. ಹುಟ್ಟಿದರೆ ಉಣ್ಣುತ್ತೇವೆ ಹುಟ್ಟದಿದ್ದರೆ ಉಪವಾಸ ಮಲಗುತ್ತೇವೆ. ಉಳಿಯೋಕೆ ಒಂದು ಅಂಗೈ ಅಗಲ ಭೂಮಿ ಕೊಟ್ಟರೆ ಸಾಕು. ಸತ್ತ ಮೇಲೆ ತೀರಾ ನಾಯಿ ನರಿ ತಿಂದೋಗಲಿ, ಬಯಲು ಮೇಲೆ ಬಿಸಾಡುವ ಈ ದೇಹವನ್ನು. ಬದುಕಿರುವಾಗಲೇ ಬೆಲೆ ಇಲ್ಲದ ಈ ದೇಹಕ್ಕೆ ಸತ್ತ ಮೇಲೆ ಇನ್ಯಾತರ ಬೆಲೆ ನಾಯಿ ನರಿಗಳಿಗಾದರೂ ಒಪ್ಪೊತ್ತಿ ಕೂಳಿನ ಪಾಡು ಈಡೇರಲಿ. ಒಂದು ಕಡೆ ಇರೋಕೇ ಜಾಗ ಕೊಡದ ಸರ್ಕಾರ ಊಳೋಕೆ ಮಶಾಣ ಕೊಟ್ಟೀತೆ. ಎಂದು ಕಂಡಕಂಡವರನ್ನು ದೈಮೋ ಎಂದು ಬೇಡುತ್ತಿವೆ ಅಲೆಮಾರಿ ಸಮುದಾಯಗಳು ಚಿಕ್ಕನಾಯಕನಹಳ್ಳಿ ಸೀಮೆಯೂ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ.
ಅವದೂತ ಮಹಲಿಂಗಪ್ಪ ತಾತ, ಅವದೂತ ಬುಡೇನ್ ಸಾಬ್ ಮಠಪರಂಪರೆಯೊಳಗೆ ದಿನದ ಮಟ್ಟಿಗೆ ಅಲೆಮಾರಿಗಳ ಜೊತೆಯಲ್ಲಿ ಮಾತುಕತೆ ಮಾಡಿ ಹುಳಿಯಾರು ಪಟ್ಟಣಕ್ಕೆ ಭೇಟಿ ನೀಡಿದಾಗ ಅವರ ಬದುಕು ದಿನದೂಡುವ ಇರುಸ್ಥಿತಿಯನ್ನು ಕಂಡು ಹೀಗೆನ್ನಿಸಿತು. ಅಲೆಮಾರಿ ಬುಡಕಟ್ಟು ಮಹಾಸಭಾ ಗೌರವಾಧ್ಯಕ್ಷರು ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರು ಹಾಗು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು ಸಿ. ಎಸ್ ದ್ವಾರಕಾನಾಥ್, ರಾಜ್ಯ ಅಲೆಮಾರಿ ಬುಡಕಟ್ಟು ಮಹಾ ಸಭಾ ಅಧ್ಯಕ್ಷರು ಹನುಮಂತಪ್ಪ, ಕಾರ್ಯದರ್ಶಿಯ ವಕೀಲ ನಾಗರಾಜ್, ಹಿರಿಯ ಪತ್ರಕರ್ತರು ದಿಲಾವಾರ್ ರಾಮದುರ್ಗ, ಪತ್ರಕರ್ತರು ಶಿವಮೊಗ್ಗ ಪದ್ಮ ಕಳೆದ ಭಾನುವಾರ ಅಲ್ಲಿಗೆ ಭೇಟಿ ನೀಡಿದ್ದರು. ಹುಳಿಯಾರು ಅಮಾನಿ ಕೆರೆಯ ಪಕ್ಕದ ಕಂದಾಯ ಭೂಮಿಯಲ್ಲಿ ದಶಕದಿಂದಲೂ ದುಸ್ತರವಾಗಿ ಜೀವಣಿಸುತ್ತಿರು ಅಲೆಮಾರಿಗಳ ಜೊತೆಯಲ್ಲಿ ಸೇರಿಕೊಂಡು ಮಾತುಕತೆ ನಡೆಸಿದರು.
ಮಹಿಳೆಯರು, ಮಕ್ಕಳು, ವಯೋವೃದ್ಧರು, ವಿಕಲಚೇತನರು, ಅಲೆಮಾರಿಗಳು, ಅರೆ ಅಲೆಮಾರಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿಗಳು ಇವರೆಲ್ಲರ ಬದುಕು ನಿರುಮ್ಮಳಗಾಗಿದೆ ಕೆರೆಯ ಕಡೆ ನೀರು ಒತ್ತಲಿಸಿ. ನೀರು ತ್ಯಾಟೊಡೆದು ಅವರ ಸೂರುಗಳ ಸೊಂಟ ಮುರಿದಿವೆ. ಸೂರಿನ ಪಳೆಯುಳಿಕೆಗಳು ನೀರುಪಾಲಾಗಿ ಕೊಳೆಯುತ್ತಿವೆ. ನಿರುಪಯುಕ್ತವಾದ ಪರಿಕರಗಳು ಮರು ಬಳಕೆಗೆ ಬಾರದಂತಾಗಿರುವವು ಹುಳಿಯಾರು ಅಮಾನಿ ಕೆರೆಯ ನೀರಿನೊಂದಿಗೆ ಮುಳುಗೆದ್ದು.
ಓದುವ ಮಕ್ಕಳ ಪಾಡೇನು? ಹೂ, ಹುಂ. ಚಿಕ್ಕನಾಯಕನಹಳ್ಳಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಣ್ಣೆತ್ತಿ ನೋಡಿದಂತಿಲ್ಲ. ಅಂಗನವಾಡಿ ಮಕ್ಕಳ ಪಾಡೇನು? ಹೂ, ಹುಂ ಚಿಕ್ಕನಾಯಕನಹಳ್ಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಮನಿಸದಂತಿಲ್ಲ. ತಾಲ್ಲೂಕು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳೂ ಜೀವಂತವಾಗಿರುವಂತಿಲ್ಲ. ಹುಳಿಯಾರು ಪಟ್ಟಣ ಪಂಚಾಯತಿಯ ಪುನರ್ವಸತಿ ಕಾರ್ಯಕ್ರಮಗಳೇನು? ಈ ಮುಳುಗಡೆಯಾಗಿರುವ ಅಲೆಮಾರಿಗಳ ಬದುಕಿನ ಉಳುವಿಗೆ ಎಂಬುದು ಪ್ರಶ್ನಯಾಗಿಯೇ ಉಳಿದಿದೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಕೈಗೊಳ್ಳುವ ಸರ್ಕಾರದ ಕೆಲಸಗಳೂ ಇಲ್ಲಿ ನಡೆದಿಲ್ಲ.
ಸುಂದರವಾದ ಕಲ್ಯಾಣ ಮಂಟಪಗಳಲ್ಲಿ, ಕಣ್ಣು ಕೋರೈಸುವ ಉತ್ಸವಗಳಲ್ಲಿ, ಕಣ್ಣಿಗೆ ಬೇಕಾದ ವಧು ವರರರನ್ನು ವರಿಸಿ, ಬೆಲೆಬಾಳುವ ಬಂಗಲೆಗಳಲ್ಲಿ ರಾಜಾಂಸತೂಲಿಕ ಶೃಂಗಾರ ಭರಿತವಾದ ಮಂಚಗಳೇರಿ, ಸಂಸಾರ ಹೂಡುವ ಅವಕಾಶವನ್ನು ಹೊಂಚಿಕೊಳ್ಳ ಬಯಸುವ ಆಳುವ ವರ್ಗದ ವಧೂವರರೇ ಒಮ್ಮೊಮ್ಮೆಯಾದರೂ ಗಮನಿಸಿ ಅಲೆಮಾರಿ ಸಮುದಾಯಗಳ ಜೀವನ ಕ್ರಮಗಳ ಪಾಡು ಫಲಗಳನ್ನು. ಎಲ್ಲರೂ ಸಂಸಾರ ವೂಡಲು ಫಸಲೀಕರಣ ಹೊಂದಲು ‘ತಾವು’ ಇರುವಾಗ ಅಲೆಮಾರಿಗಳು ಮಾತ್ರ ಮರದ ಕೆಳಗೆ ಮಲಗಿದರೆ ಹೇಗೆ? ಎಂಬುದು ಅರ್ಥವಾಗದ ಸತ್ಯವೇನಲ್ಲ. ಅದರೂ ಅವರ ಸಂತಾನಗಳು ಬೆಳೆದಿವೆ. ಅವರ ಮಕ್ಕಳು ಶಾಲೆ ಕಲಿಯಲಾದರೂ ಅವಕಾಶ ಮಾಡಿಕೊಡಿ. ಹೂಳಲು ಒಂದು ಕಂಬಳಿ ಅಗಲದ ಮಶಾಣ ಜಾಗ ಒದಗಿಸಿ. ಅತ್ತೊಂದು ಇತ್ತೊಂದು ಗುಜ್ಜು ನೆಟ್ಟು ಜೋಲಿ ಕಟ್ಟಲಾದರೂ ಅವರಿಗೊಂದು ಸ್ವಂತದ ಜಾಗ ಇಲ್ಲದಿದ್ದರೆ ಹೇಗೆ? ಎಂಬುದನ್ನು ಮನುಷ್ಯರಾಗಿ ಒಮ್ಮೆ ಚಿಂತಿಸಿ.
ಬಲಾಢ್ಯ ಸಮುದಾಯಗಳಲ್ಲಿ ಹುಟ್ಟದಿದ್ದಕ್ಕಾಗಿ ಹೀಗಾಗಿದೆ ಅಲೆಮಾರಿಗಳ ಪಾಡು ಎನ್ನುವುದಾದರೆ ಹುಟ್ಟೇನು ಇವರ ಕೈಯ್ಯಲ್ಲಿತ್ತೇ ಎಂದು ಆಡಳಿತವನ್ನು ಉಗಿದು ಕೇಳಬೇಕಾಗಿದೆ. ಅಲೆಮಾರಿಗಳು ಉಳಿಯುವ ವಸತಿಗಾಗಿ ರವಷ್ಟು ಜಾಗ ದೊರೆಯದಿದ್ದರೆ ಕಾಲಾವರಣ ಮಾಡುವುದಾದರೂ ಹೇಗೆ. ಉಳಿಯೋಕು ಜಾಗ ಕೇಳಬೇಕು, ಹೂಳೋಕು ಜಾಗ ಕೇಳಬೇಕು. ಜನುಮಾಪ್ಯಾ ಇದೇ ಬದುಕಾದರೆ, ಸಾಯೋ ತನಕ ಆಡಳಿತದ ಕಾಟ, ಇವರು ಬದುಕೋದು, ಇನ್ಯಾವಾಗ? ಇವರ ಮಕ್ಕಳು ಶಾಲೆಗೆ ಹೋಗುವುದು ಎಲ್ಲಿಂದಾ. ಬಯಲಿಗೆ ಸಮೀಪ ದೂರ ಎಂಬುದು ಇದೆಯೇ?
ಅಲೆಮಾರಿಗಳ ಮಕ್ಕಳಿಗೆ ಯಾವ ಶಾಲೆ, ಯಾವ ಆಸ್ಪತ್ರೆ. ಎಲ್ಲಿ ಹೆರಿಗೆ, ಎಲ್ಲಿ ಬಾಣಂತನ. ಹೊತ್ತು ನಡೆಯುವುದೇ ಆಗಿದೆ ಇವರಿಗೆ ಬದುಕಿ ಗಜಗರ್ಭವನ್ನು. ಉಳಿಯೋಕೆ ಮನೆಯೇ ಇಲ್ಲ ಎಂದ ಮೇಲೆ ಭವಿಷ್ಯದ ಪಾಡು ಮೂರಾಬಟ್ಟೆಯಾಗದಿರಲಾರದು. ಇದು ಆಡಳಿತಕ್ಕೆ ಅರ್ಥವಾಗದಿದ್ದರೆ, ಅಂತಹ ಆಡಳಿತವನ್ನು ನಾಗರಿಕ ಸೇವಾ ಆಡಳಿತ ಎಂದು ಭಾವಿಸುವುದಾದರೂ ಹೇಗೆ?
ಅಲೆಮಾರಿಗಳು ಇವರು; ಮನೆ ಕಟ್ಟಿಕೊಳ್ಳಲು ಜಾಗ ಇಲ್ಲ, ಉತ್ತಾಕೊಂದು ಅಂಗೈ ಅಗಲ ಭೂಮಿ ಇಲ್ಲ, ಆಳುವ ದಣಿಗಳ ಸ್ವಾತಂತ್ರ್ಯೋತ್ಸವಗಳ ಸಾಲುಸಾಲು ಸಂದೇಶಗಳು ಹೊರಬಿದ್ದರೂ ಸಹ. ಸ್ವಂತ ವಿಳಾಸವೇ ಇಲ್ಲಾ ಎಂದ ಮೇಲೆ ಇವರ ಮೇಲೆ ಪೊಲೀಸ್ ಠಾಣೆಗಳಲ್ಲಿ ಇವರ ವಿರುದ್ಧ ಐಪಿಸಿ ಮತ್ತು ಸಿ ಆರ್ ಪಿ ಸಿ ಸೆಕ್ಷನ್ ಗಳ ಬರೆದು ಪ್ರಕರಣಗಳ ಹೇಗೆ ದಾಖಲಾಗುತ್ತವೆ. ಏಕೆ ಇವರನ್ನು ಕಾನೂನಿನ ಪರಿಧಿಯಲ್ಲಿ ತರಬೇಕು. ಹಾಗಾದರೆ ಬಿಟ್ಟು ಬಿಡಿ ಏನೋ ತಿಳಿಯದೋರು ಯಾಸಟ್ಟಿಗೆ ಎಂದು. ದೇಶದ ಊರು ಉದ್ಮಾನಗಳಲ್ಲಿ ಅಲೆಮಾರಿಗಳು ಸನಿವಾಸಿಗಳೇ ಅಲ್ಲವೆಂದ ಮೇಲೆ ಇವರ ವಿರುದ್ಧ ಕಾನೂನು ಪ್ರಕ್ರಿಯೆಗಳನ್ನು ಏಕೆ ಕೈಗೊಳ್ಳಬೇಕು? ಎನಿಸದವರಿಗೆ ಜೀವ ನೋಯುತ್ತದೆ.
ಸರ್ಕಾರ ಇವರನ್ನು ನಿಗಾ ಮಾಡದೆ ಇಡೀ ಇವರ ಬದುಕಿನ ಉದ್ದಕ್ಕೂ ಕಾನೂನಿನ ನಿಗಾ ಮಾತ್ರ ಇಟ್ಟು, ಇವರ ನಾಗರಿಕ ಬದುಕನ್ನು ಹತ್ತಿಕ್ಕುತ್ತಲೇ, ಇವರ ಬಗ್ಗೆ ತಾತ್ಸಾರ ತೋರುತ್ತಿದೆಯಲ್ಲ; ಸರ್ಕಾರದ ಇಂತಹ ನಡೆಯನ್ನು “ನಾಗರೀಕ ಸೇವೆ’ ಎಂದು ಹೇಗೆ ತಾನೆ ಒಪ್ಪುವುದು. ಅಲೆಮಾರಿಗಳಿಗೆ ಒಪ್ಪಾವರಣವಾದ ಬದುಕು ಸಾಗಿಸಲು ಒಂದು ಒಪ್ಪವಾದ ನೆಲೆ ಗೊತ್ತುಪಡಿಸದಿದ್ದರೆ ಅಲೆಮಾರಿಗಳು ವರ್ಷ ಒಪ್ಪೊತ್ತು ದಶಕಗಳ ದಿನ ದೂಡುವುದಾದರೂ ಹೇಗೆ? ಎಲ್ಲಿ?
ಜೀವಮಾನ ಇಡೀ ಅಲೆಮಾರಿಗಳ ಬದುಕು ಮೇಲಿಂದಮೇಲೆ ಎತ್ತಂಗಡಿಯಾಗುತ್ತಲೇಯಿರುತ್ತದೆ, ಕಾನೂನಾತ್ಮಕವಾಗಿಯೂ ಮತ್ತು ಪರಿಸ್ಥಿತಿಯ ಒತ್ತಡಕ್ಕಾಗಿಯೂ. ಇವರನ್ನೇನು ಹದ್ದು ಕಾಗೆಗಳು ಹೊರಗಿನಿಂದ ತಂದು ಬಿಸಾಡಿವೆಯೇನು? ಭಾರತದ ನೆಲದ ಮೇಲೆ. ಆಡಳಿತದ ಜವಾಬ್ದಾರಿಗಳನ್ನು ಹೊತ್ತವರು ಉತ್ತರಿಸಬೇಕು. ಕಛೇರಿಗಳಲ್ಲಿರುವವರು ಕಣ್ಣುಕವುರು ಕಳೆದುಕೊಂಡವರ ಹಾಗೆ ಅಂಡೊರೆಸಿಕೊಂಡು ಬೆನ್ನು ತೋರಿ ತಿರುಗಾಡಿದರೆ ಅಲೆಮಾರಿಗಳ ಬದುಕು ನೇರೂಪಾಗಲಾರದು. ಸಂಬಂಧಿಸಿದ ಅಧಿಕಾರಿಗಳು ಈ ಸಲುವಾಗಿ ನಿರುತ್ತರರಾದರೆ ಮುಂಬರುವ ದಿನಗಳಲ್ಲಿ ನ್ಯಾಯದ ಕಟ್ಟೆಯಲ್ಲಿ ನಿಂತು ಉತ್ತರಿಸಬೇಕಾದ ದಿನಗಳೂ ಅಧಿಕಾರಿಗಳಿಗೆ ಎದುರಾಗದಿರಲಾರವು ಎಂಬ ಎಚ್ಚರಿಕೆಯೂ ಅಧಿಕಾರ ವಹಿಸಿಕೊಂಡವರ ಎದೆಯಲ್ಲಿ ಸದಾ ಇರಬೇಕಾಗುತ್ತದೆ. ಅಲೆಮಾರಿಗಳವೇನು ಸರ್ಕಾರಿ ಅಧಿಕಾರಿಗಳು ಅಥವಾ ನೌಕರರುಗಳ ಕುಟುಂಬಗಳೇ, ಕೈ ಸವರಿಕೊಂಡು ಸುಮ್ಮನಾಗಲು.
ನೌಕರಿಗೊಂದು ಊರಲ್ಲ ಕೊಕ್ಕರೆಗೊಂದು ಕೆರೆಯಲ್ಲ ಎನ್ನುವಷ್ಟರ ಮಟ್ಟಿಗೆ ಅಲೆಮಾರಿಗಳ ಬದುಕು ಸಲೀಸಾಗಿಲ್ಲ ಹಾಗು ಸುಧಾರಿಸಿಲ್ಲ. ಅಲೆಮಾರಿಗಳ ಬಗ್ಗೆ ಮಾತನಾಡಲು ಆಡಳಿತದ ನಾಲಿಗೆ ಸೇದೋಗಿದೆ ಎಂದಾದರೆ ದೂರುಗಳ ಅರ್ಜಿಯಲ್ಲಿ ಅಲೆಮಾರಿಗಳು ತೋಡಿಕೊಂಡ ಸಮಸ್ಯೆಗಳಿಗೆ ಪರಿಹಾರ ಹುಡುಕುವವರನ್ನು ಕರೆತರುವುದಾದರೂ ಎಲ್ಲಿಂದ. ಏಕೆಂದರೆ ತಡವಾಗಿಯಾದರೂ ಅಲೆಮಾರಿಗಳ ಪರಿಸ್ಥಿತಿ ತಿಳಿದು ಆಡಳಿತದೊಳಗೆ ಯಾವೊಬ್ಬ ಮುಖ್ಯ ಸ್ಥಾನಿಕ ಅಧಿಕಾರಿಗಳೂ ಮಾತನಾಡುತ್ತಿಲ್ಲ. ನೋಡುವ ಕಣ್ಣು ಇಂಗಿಹೋಗಿರುವಂತಿವೆ ಅಧಿಕಾರಿಗಳಿಗೆ. ಅಲೆಮಾರಿಗಳು ದೈನಂದಿನ ಜೀವನದಲ್ಲಿ ಅವರು ಎದುರಿಸುವ ಕಷ್ಟಗಳನ್ನು ಕಣ್ಣೆತ್ತಿಯೂ ನೋಡಲಾರದೆ. ಅರ್ಜಿ ಹಿಡಿದು ಹೋದ ಅಲೆಮಾರಿಗಳ ಅನುಗಾಲದ ಅನುಗೊರಲೆಗಳನ್ನು ಕೇಳಲಾರದ ಮಟ್ಟಿಗೆ ಸರ್ಕಾರ ಕಿವುಡಾದರೆ, ಅಡವಿ ಮೇಲೆ ಜೋಲಿ ಕಟ್ಟಿ ಅದ್ವಾನವಾಗಿರುವ ಅಲೆಮಾರಿಗಳ ಬದುಕು ಬಾಣಂತನಗಳಂತಹ ವಿಕಲಚೇತನ ಸ್ಥಿತಿಯನ್ನು ನೆಟ್ಟಗೆ ಯಾರು ಮಾಡುತ್ತಾರೆಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಅರ್ಥಮಾಡಿಕೊಳ್ಳಲು ಕನಿಷ್ಠಪಕ್ಷ ಪ್ರಯತ್ನವಾದರೂ ಆಗಲೇ ಬೇಕಾಗುವುದು ಈಗಿನ ಇರುಸ್ಥಿತಿ.
ಇಲಾಖೆಯಿಂದ ಇಲಾಖೆಗೆ ಭೂಮಿ ಹಸ್ತಾಂತರವೇ ಆಗುವುದಿಲ್ಲ. ಆಗಲೇಬೇಕಾದ ಆಡಳಿತಾತ್ಮಕ ದಾಖಲಾತಿ ಪ್ರಕ್ರಿಯೆಗಳು ನಡೆಯದಿದ್ದರೂ ಗುತ್ತಿಗೆ ಕಂಪನಿಗಳಿಗೆ ಯೋಜನೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಭೂಮಿ ದೊರೆಯುತ್ತದೆ. ಬಂಡವಾಳ ಹೂಡಿಕೆಗೆ ಭೂಮಿ ನೀರು ವಿದ್ಯುತ್ ಇಲ್ಲಿ ದೊರೆಯುತ್ತವೆ. ಭೂ ಸ್ವಾಧೀನ ಮತ್ತು ಭೂಮಿ ಹಸ್ತಾಂತರವಾಗದೆ ಸಾವಿರಾರು ಕೋಟಿಗಳ ಬಿಲ್ ಗಳಾಗುತ್ತವೆ ಕಾಮಗಾರಿಗಳು ಮುಕ್ತಾಯಗೊಂಡು, ವರ್ಕ್ ಕಂಪ್ಲೀಟ್ ಸರ್ಟಿಫಿಕೇಟ್ ಗಳಾಗುತ್ತವೆ. ಅಲೆಮಾರಿ ಉಳಿಯಲು ಹೂಣಲು ಭೂಮಿ ದೊರೆಯದು ಹತ್ತಿರದ ತಹಶಿಲ್ದಾರರ ಕಛೇರಿಯಲ್ಲಿ. ಒಬ್ಬೊಬ್ಬ ತಹಶಿಲ್ದಾರರ ಅವಧಿಯಲ್ಲಿಯೂ ಬೇರೆ ಬೇರೆಯದೇ ವರಸೆಯಲ್ಲಿ ಭೂ ದುರ್ಬಳಕೆ ಮಾಡಿಕೊಂಡ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಏಕೆ? ದುರ್ಬಲವಾದ ಸಮುದಾಯಗಳಿಗೆ ಭೂ ಮುಂಜೂರಾತಿ ಮಾಡುವಾಗ ಇವರಿಗೆ ಬರಬಹುದಾದ ಎದೆ ನೋವಾದರೂ ಏನು ಎಂಬುದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕಾಗಿದೆ ಹಾಗು ಪರ್ಯಾಯ ಹೋರಾಟದ ಹಾದಿ ತುಳಿಯಬೇಕಾಗಿದೆ.
ಯೋಜನೆಗಳಿಗೆ ಭೂ ಸ್ವಾಧೀನ ಪ್ರಕ್ರಿಯೆಯ ಮೂಲಕ ಲಕ್ಷಾಂತರ ಹೆಕ್ಟೇರ್ ಅಭೂತಪೂರ್ವವಾದ ಬೇಸಾಯದ ಭೂಮಿಯನ್ನು ಪರಿಹಾರ ನೀಡಿ ಸರ್ಕಾರ ಒದಗಿಸುವುದಾದರೆ, ಅಲೆಮಾರಿಗಳಿಗೆ, ಯೋಜನಾ ನಿರಾಶ್ರಿತರಿಗೆ, ವಸತಿ ರಹಿತರಿಗೆ, ಭೂ ರಹಿತರಿಗೆ ಇದೇ ಪ್ರಕ್ರಿಯೆಯ ಮೂಲಕ ಭೂಮಿ ಒದಗಿಸಬಹುದಲ್ಲವೇ? ಏಕೆ ಸರ್ಕಾರಕ್ಕೆ ಜನರ ಹೀನಾಯ ಪರಿಸ್ಥಿತಿ ಆಡಳಿತದ ಸೌಂದರ್ಯವಾಗಿ ಕಾಣತೊಡಗಿದೆ.
ಕೊನೆಯ ಮಾತು, ಸರುವೊತ್ತಿನಲ್ಲಿ ಮಳೆ ಸುರಿದರೆ ಹಿಂಡೇನಾದವೋ ಎಂದು ಒಬ್ಬ ಸಾಮಾನ್ಯ ಸದಾ ಜಾಗೃತನಾಗಿರುವುದಾದರೆ; ಅದೇ ಮಳೆ, ಬಿಸಿಲು, ಬಿರುಗಾಳಿ ಬಂದಾಗ ಆಡಳಿತ ವ್ಯಾಪ್ತಿಯ ಜನರ ಬದುಕೇನಾಯಿತೋ ಎಂಬುವ ಅಂಗಲಾಪು, ಎಚ್ಚರಿಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಇರದಿದ್ದರೆ ಹೇಗೆ? ಪಡೆದ ವೇತನದಲ್ಲಿ ಉಂಡ ಅನ್ನ ಮೈಗತ್ತಿಸಿಕೊಳ್ಳುವುದಾದರೂ ಹೇಗೆ? ಹುಳಿಯಾರು ಪಟ್ಟಣದ ಅಲೆಮಾರಿಗಳ ಪಾಡು ಕಂಡಾಗ ಎಂತಹವರಿಗೂ ಹೀಗೆನಿಸದಿರಲಾರದು.
- ಉಜ್ಜಜ್ಜಿ ರಾಜಣ್ಣ, ಕವಿಗಳು




