ಬೆಂಗಳೂರು: ರಾಜಕಾರಣಿಗಳು, ಸಚಿವರು, ಅಧಿಕಾರಿಗಳು ಮತ್ತು ಬಿಸಿನೆಸ್ ಮನ್ ಗಳು ಎಂದರೆ ಬಿಡುವಿರದ ವೇಳಾಪಟ್ಟಿಯ ಜಂಜಾಟದಲ್ಲಿ ಸಿಲುಕಿದವರು ಎಂಬುದು ಸಾಮಾನ್ಯ ನಂಬಿಕೆ ಇಂತಹ ಬಿಡುವಿರದ ಒತ್ತಡದ ನಡುವೆ ಕೂಡ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಕ್ಕಳೊಡನೆ ಕೆಲ ಸಮಯವನ್ನು ಕಳೆದು ಮಕ್ಕಳಲ್ಲಿ ಹರ್ಷ ಮೂಡಲು ಕಾರಣರಾದರು.
ಈ ವಿಷಯ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, “ನನ್ನ ಮತ ಕ್ಷೇತ್ರದ ಮಕ್ಕಳನ್ನು ಆತ್ಮೀಯವಾಗಿ ಭೇಟಿಯಾದ ಸಂದರ್ಭ”. ಇಲಾಖೆಯ ಬಿಡುವಿಲ್ಲದ ಸಭೆ ಸಮಾರಂಭ, ಸಾರ್ವಜನಿಕರ ಭೇಟಿಯಲ್ಲಿ ತೊಡಗಿದ್ದ ನನಗೆ ಇಂದು ಅಪರೂಪದ ಅತಿಥಿಗಳು ಎದುರಾದರು ಎಂದಿದ್ದಾರೆ.
ಒಂದು ದಿನದ ಕ್ಷೇತ್ರ ಪ್ರವಾಸಕ್ಕಾಗಿ ಬೆಂಗಳೂರಿನ ನೆಹರು ತಾರಾಲಯ ಮತ್ತು ವಿಶ್ವೇಶ್ವರಯ್ಯ ಮ್ಯುಸಿಯಂ ವೀಕ್ಷಣೆಗೆ ಆಗಮಿಸಿದ್ದ ಮಂಡ್ಯ ಜಿಲ್ಲೆ, ನಾಗಮಂಗಲ ವಿಧಾನಸಭಾ ಕ್ಷೇತ್ರದ ಹೊಣಕೆರೆ ಹೋಬಳಿಯ ಚೀಣ್ಯ ಮತ್ತು ಹೊಣಕೆರೆ ಕ್ಲಸ್ಟರ್ ನ ಆರು ಸರ್ಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳು ವಿಕಾಸಸೌಧದ ನಮ್ಮ ಕಚೇರಿಯಲ್ಲಿ ನನ್ನ ಭೇಟಿಮಾಡಲು ಆಗಮಿಸಿದ್ದರು ಎಂದು ಹೇಳಿದ್ದಾರೆ.
ಅವರೆಲ್ಲರನ್ನೂ ಬರಮಾಡಿಕೊಂಡು, ಎಲ್ಲಾ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಆತ್ಮೀಯವಾಗಿ ಮಾತನಾಡಿ ಉತ್ತಮ ಶೈಕ್ಷಣಿಕ ಸಾಧನೆ ಮಾಡುವಂತೆ ತಿಳಿಸಿದೆ. ಅಲ್ಲದೆ ವಿಧಾನಸೌಧದ ವಿಕ್ಷಣೆಗೂ ಸಹ ಅವಕಾಶ ಕಲ್ಪಿಸಿ ನಮ್ಮ ಸಿಬ್ಬಂದಿಯನ್ನು ಅವರೆಲ್ಲರ ಜೊತೆಯಲ್ಲಿ ಕಳುಹಿಸಿ ಸುರಕ್ಷಿತವಾಗಿ ಅವರಿಗೆ ವೀಕ್ಷಿಸಲು ಅನುಕೂಲವಾಗುವಂತೆ ಸಹಕರಿಸಲು ತಿಳಿಸಿದೆ ಎಂದಿದ್ದಾರೆ.




