ಯಾವುದೇ ಆಸ್ಪತ್ರೆಗಳಿಗೂ ಪಾವತಿಸಬೇಕಾದ ಬಿಲ್ ಬಾಕಿ ಉಳಿಸಿಕೊಂಡಿಲ್ಲ: ಕೆ.ಎನ್.ರಾಜಣ್ಣ

2 years ago

#Nooutstanding #bill #hospital #KNRajanna #Session

ಬೆಳಗಾವಿ: ಸಹಕಾರ ಸಂಘಗಳ ಸದಸ್ಯರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಜಾರಿಗೊಳಿಸಿರುವ ಯಶಸ್ವಿನಿ ಯೋಜನೆ ಜಾರಿಯಾದ ನಂತರ ಒಪ್ಪಂದ ಮಾಡಿಕೊಂಡಿರುವ ಯಾವುದೇ ಆಸ್ಪತ್ರೆಗಳಿಗೂ ಪಾವತಿಸಬೇಕಾದ ಬಿಲ್ ಬಾಕಿ ಉಳಿಸಿಕೊಂಡಿಲ್ಲ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ವಿಧಾನಪರಿಷತ್ ನಲ್ಲಿ ಹೇಳಿಕೆ ನೀಡಿದರು.

ಪ್ರಶ್ನೋತ್ತರ ಕಲಾಪದಲ್ಲಿ ನಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2023ರಿಂದ ಈ ಯೋಜನೆಯನ್ನು ಹೊಸದಾಗಿ ಮರುಜಾರಿ ಮಾಡಲಾಗಿದೆ. ಸರ್ಕಾರದ ಮಾನದಂಡಗಳನ್ನು ಪಾಲನೆ ಮಾಡಿಕೊಂಡಿರುವ ಆಸ್ಪತ್ರೆಗಳ ಜೊತೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಯಾವ ಆಸ್ಪತ್ರೆಗಳಿಗೆ ಶುಲ್ಕ ನೀಡಬೇಕೊ ಅದನ್ನು ಹಂತಹಂತವಾಗಿ ನೀಡಲಾಗುತ್ತದೆ. ಈವರೆಗೂ ಯಾವ ಆಸ್ಪತ್ರೆಯ ಬಿಲ್ ಬಾಕಿ ಇಲ್ಲ ಎಂದರು.

2003ರಲ್ಲಿ ಯಶಸ್ವಿನಿ ಯೋಜನೆಯನ್ನು ಪ್ರಪ್ರಥಮ ಬಾರಿಗೆ ನಮ್ಮ ರಾಜ್ಯದಲ್ಲಿ ಜಾರಿ ಮಾಡಲಾಯಿತು. 2003-04ರಿಂದ 2017ರಿಂದ 18ರವರೆಗೆ ಈ ಯೋಜನೆ ಜಾರಿಯಲ್ಲಿತ್ತು. ನಂತರ ಯೋಜನೆಯನ್ನು ಸಹಕಾರಿ ಇಲಾಖೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಯಿತು. 1-6-2017ರಿಂದ 31-05-2018ವರೆಗೆ ಅನುಷ್ಠಾನ ಮಾಡಲಾಯಿತು. ಆದರೆ 1-6-1-2018ರಿಂದ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಸದನಕ್ಕೆ ಮಾಹಿತಿ ನೀಡಿದರು.

ಆಸ್ಪತ್ರೆಗಳು ಕಳುಹಿಸಿಕೊಡುವ ಪ್ರತಿಯೊಂದು ಬಿಲ್ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ನಮ್ಮ ಮಾನದಂಡಗಳನ್ನು ಪಾಲನೆ ಮಾಡಲಾಗಿದೆಯೇ? ಆಧಾರ್ ಕಾರ್ಡ್ ಲಿಂಕ್ ಹೀಗೆ ಎಲ್ಲ ನಿಯಮಗಳು ಕ್ರಮಬದ್ಧವಾಗಿದ್ದರೆ ಮಾತ್ರ ಬಿಲ್ ಪಾವತಿಯಾಗುತ್ತದೆ. ಕೆಲವು ತಾಂತ್ರಿಕ ಕಾರಣದಿಂದ ವಿಳಂಬವಾಗಿರಬಹುದು.ರಾಜ್ಯದಲ್ಲಿ 2023ರಿಂದ ಈ ಯೋಜನೆಯನ್ನು ಜಾರಿ ಮಾಡಿದ್ದು, ಇದು ಸಮರ್ಪಕವಾಗಿ ಅನುಷ್ಠಾನಗೊಂಡಿದೆ ಎಂದರು.

ಸಹಕಾರ ಸಂಘಗಳ ಅಕ್ರಮ: ಸಹಕಾರ ಸಂಘಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ನಿಯಂತ್ರಣ ಮಾಡಲು ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಲು ಹಿರಿಯ ತಜ್ಞರ ಸಮಿತಿಯನ್ನು ರಚನೆ ಮಾಡಲಾಗಿದ್ದು, ಮುಂದಿನ ಅಧಿವೇಶನದಲ್ಲಿ ವರದಿ ಮಂಡಿಸಲಾಗುವುದು ಎಂದು ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ರಾಜಣ್ಣ ಉತ್ತರಿಸಿದರು.

ಸಹಕಾರ ಸಂಘಗಳಲ್ಲಿ ಹಲವು ವರ್ಷಗಳಿಂದ ವ್ಯಾಪಕ ಭ್ರಷ್ಟಾಚಾರ ಮತ್ತು ಹಗರಣಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ಇದನ್ನು ನಿಯಂತ್ರಿಸಲು ಈಗಿರುವ ಕಾಯ್ದೆಗೆ ತಿದ್ದುಪಡಿ ತರಲು ಹಿರಿಯ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದರು.

ಸಹಕಾರ ಸಂಘಗಳ ಸ್ಥಿತಿಗತಿಗಳನ್ನು ಕಲಂ 63ರಡಿ ಪ್ರತಿ ಸಹಕಾರಿ ಸಂಘದ ಲೆಕ್ಕ ಪರಿಶೋಧನೆಯನ್ನು ಸೆಪ್ಟಂಬರ್ 1ನೇ ತಾರೀಖಿನೊಳಗೆ ಮುಕ್ತಾಯಗೊಳಿಸಬೇಕೆಂಬ ನಿಯಮವಿದೆ. ಚಾರ್ಟರ್ಡ್ ಅಕೌಂಟೆಂಟ್ಗಳಿಗೆ ಹೆಚ್ಚಿನ ವೆಚ್ಚ ತಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ತಿದ್ದುಪಡಿಯಲ್ಲಿ ಇದು ಕೂಡ ಪ್ರಸ್ತಾವನೆಯಾಗಲಿದೆ ಎಂದರು.

ಸಹಕಾರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸಮಯ, ಸಂದರ್ಭ ಹಾಗು ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಭರ್ತಿ ಮಾಡಲು ಅವಕಾಶವಿದೆ. ಖಾಲಿ ಹುದ್ದೆಗಳನ್ನು ಆಡಳಿತ ಮಂಡಳಿಯವರೇ ಭರ್ತಿ ಮಾಡಿಕೊಳ್ಳುತ್ತಾರೆ ಎಂದರು.

ಸದಸ್ಯರ ಗೈರಿಗೆ ಸಭಾಪತಿ ಗರಂ: ಪರಿಷತ್ತಿನ ಎರಡನೆ ದಿನದ ಕಲಾಪಕ್ಕೂ ಸದಸ್ಯರ ಗೈರು ಹಾಜರಿ ಕಾಡಿತು.ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಪ್ರಶ್ನೋತ್ತರ ಕಲಾಪದಲ್ಲಿ ಇಲಾಖೆಗೆ ಸಂಬಂಧಿಸಿದ ಸಚಿವರು ಕಾಣುತ್ತಿಲ್ಲ. ಯಾರು, ಯಾವ ಇಲಾಖೆ ಸಚಿವರು ಗೈರಾಗುತ್ತಾರೆ ಎಂದು ಸರ್ಕಾರದ ಪರವಾಗಿ ಮುಖ್ಯ ಸಚೇತಕರು ಮಾಹಿತಿ ನೀಡಬೇಕು ಅಲ್ಲವೇ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.

ಆಯಾ ಸಚಿವರು ಅವರ ಇಲಾಖೆ ಕುರಿತು ಉತ್ತರಿಸಿದರೆ, ಒಳಿತು. ಒಂದು ವೇಳೆ ಗೈರಾದರೆ ಮಾಹಿತಿ ಮುಟ್ಟಿಸಿ. ನೀವೇ ಇಲಾಖೆ ಬದಲಾಯಿಸಿ ಉತ್ತರಿಸುವುದು ಸೂಕ್ತವೇ ಎಂದರು.

ಇದಾದ ನಂತರ ನೈಸ್ ಯೋಜನೆ ಕುರಿತ ಬಿಜೆಪಿ ಸದಸ್ಯ ಮುನಿರಾಜೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವ ಶರಣಬಸಪ್ಪ ದರ್ಶನಾಪುರ್, ಯೋಜನೆಗೆ ಹೆಚ್ಚುವರಿಯಾಗಿ ನೈಸ್ ಸಂಸ್ಥೆಗೆ ನೀಡಿರುವ 554 ಎಕರೆ ಜಮೀನನ್ನು ಹಿಂಪಡೆಯಲು ಸರ್ಕಾರ ಬದ್ಧವಾಗಿದೆ ಎಂದು ಮಾಹಿತಿ ನೀಡಿದರು.

ಬಿಎಂಐಸಿ ಯೋಜನೆಗೆ ಹೆಚ್ಚುವರಿ ಜಮೀನುಗಳನ್ನು ಹಿಂಪಡೆಯುವ ಕುರಿತು ಈಗಾಗಲೇ ಜಮೀನುಗಳನ್ನು ಗುರುತಿಸಿ ಸರ್ವೆ ನಂಬರ್ ಕೂಡ ನೀಡಲಾಗಿದೆ. ಈಗಾಗಲೇ ಕಾನೂನಿನ ಪ್ರಕ್ರಿಯೆಗಳು ಪ್ರಾರಂಭವಾಗಿದೆ. ಎಂದರು.

ಗಣಿ ಅಕ್ರಮಕ್ಕೆ ದಂಡ: ಜೆಡಿಎಸ್ ನ ಶಸರವಣ ಅವರ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವ ಚಲುವರಾಯ ಸ್ವಾಮಿ, ರಾಜ್ಯದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುವವರಿಂದ 87.51 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ ಎಂದರು.

ಅಕ್ರಮ ಗಣಿಗಾರಿಕೆ ತಡೆಗಟ್ಟಲು ರಾಜ್ಯದ ಎಲ್ಲಾ ಕಡೆ ಡ್ರೋನ್ ಮೂಲಕ ಸರ್ವೆ ನಡೆಸಿ ಕಾನೂನು ಉಲ್ಲಂಘನೆ ಮಾಡಿರುವವರ ಮೇಲೆ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದರಲ್ಲಿ ಯಾವುದೇ ಕಾರಣಕ್ಕೂ ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದು ಸರ್ಕಾರದ ನಿಲುವನ್ನು ಹೇಳಿದರು.

Leave a Reply