ಹೊಸ ಮದ್ಯದಂಗಡಿ ತೆರೆಯುವುದಿಲ್ಲ: ಸಿದ್ದರಾಮಯ್ಯ

3 years ago

Newliquorshop, Siddaramaiah,

ಚಿತ್ರದುರ್ಗ: ರಾಜ್ಯದಲ್ಲಿ ಹೊಸದಾಗಿ ಮದ್ಯದಂಗಡಿ ಆರಂಭಿಸಲು ಬೇಡಿಕೆ ಹೆಚ್ಚಾಗಿದೆ. ಇದನ್ನು ಭರಿಸುವ ದೃಷ್ಟಿಯಿಂದ ಹೊಸದಾಗಿ ಒಂದು ಸಾವಿರ ಮದ್ಯದಂಗಡಿ ತೆರೆಯುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಇದೀಗ ತನ್ನ ನಿಲುವಿನಿಂದ ಹಿಂದೆ ಸರಿದಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಗೂಡಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಹಲವಾರು ಅನಾಹುತಗಳು ಸಂಭವಿಸುತ್ತಿದ್ದು, ಇದನ್ನು ತಪ್ಪಿಸಲು ಹೊಸದಾಗಿ ಸಾವಿರ ಮದ್ಯದಂಗಡಿ ತೆರೆಯುವುದಾಗಿ ಪ್ರಕಟಿಸಲಾಗಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ವಲಯದಲ್ಲೇ ತೀವ್ರ ಸ್ವರೂಪದ ವಿರೋಧ ವ್ಯಕ್ತವಾಗಿತ್ತು.ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಂದು ಸಾವಿರ ಮದ್ಯದಂಗಡಿಗಳನ್ನು ತೆರೆಯುವುದಾಗಿ ಚಿಂತನೆ ನಡೆಸುತ್ತಿರುವುದಾಗಿ ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ ನಾವು ಯಾವುದೇ ಹೊಸ ಮದ್ಯದಂಗಡಿ ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದವರೇ ಹಾಳು ಮಾಡಿದ ಬಿಜೆಪಿಯವರು. ಈಗ ಸರ್ಕಾರ ಎಲ್ಲಾ ಹಣವನ್ನು ಗ್ಯಾರಂಟಿಗಳಿಗೆ ವಿನಿಯೋಗ ಮಾಡುತ್ತಿದ್ದು, ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲದಂತಾಗಿದೆ ಎಂದು ಹಾಸ್ಯಾಸ್ಪದ ಟೀಕೆ ಮಾಡುತ್ತಿದೆ ಎಂದು ದೂರಿದರು.

ಬಿಜೆಪಿಯವರಿಗೆ ಯಾವ ನೈತಿಕತೆ ಇದೆ. ನಮ್ಮ ಕಾಲದಲ್ಲಿ ಯಾವತ್ತೂ ಇಷ್ಟೊಂದು ಸಾಲ ಮಾಡಿರಲಿಲ್ಲ ಹಾಗೂ ಈ ಮೊತ್ತದ ಬದ್ಧತೆ ವೆಚ್ಚ ಇರಲಿಲ್ಲ. ಎಲ್ಲಾ ಹಾಳು ಮಾಡಿ ಈಗ ಹೇಳುತ್ತಾರೆ ಎಂದರು.

ಬಿಜೆಪಿ – ಜೆಡಿಎಸ್ ಮಾಡಿಕೊಂಡಿರುವುದು ಅಪವಿತ್ರ ಮೈತ್ರಿ. ಇದರ ಬಗ್ಗೆ ಎರಡೂ ಪಕ್ಷದ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಕಾಂಗ್ರೆಸ್ಸಿಗೆ ಬರುವ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಬಿಜೆಪಿ ಸತ್ಯ ಶೋಧನಾ ಸಮಿತಿ ಶಿವಮೊಗ್ಗಕ್ಕೆ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸತ್ಯ ಶೋಧನೆ ಮಾಡಲು ಏನಾಗಿದೆ ಯಾವುದರ ಬಗ್ಗೆ ಸತ್ಯ ಶೋಧನೆ ಮಾಡುತ್ತಾರೆ? ಈದ್-ಮಿಲಾದ್ ಸಂದರ್ಭದಲ್ಲಿ ಮುಸ್ಲಿಮರು ಮೆರವಣಿಗೆ ಮಾಡುತ್ತಿದ್ದ ಸಂದರ್ಭದಲ್ಲಿ, ಯಾರು ಕಲ್ಲು ಎಸೆದಿದ್ದಾರೋ ಅವರ ಮೇಲೆ ಕ್ರಮ ಜರುಗಿಸಲಾಗಿದೆ. ಅವರು ಯಾವ ಪಕ್ಷದವರೇ ಆಗಿದ್ದರೂ, ಯಾರೇ ಆಗಿದ್ದರೂ ಅವರನ್ನು ಬಿಡಬೇಡಿ, ಕಾನೂನು ಕೈಗೆತ್ತಿಕೊಳ್ಳಲು ಬಿಡಬೇಡಿ ಎಂದು ಬಹಳ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದರು.

Leave a Reply