4,860 ಕೋಟಿ ರೂ. ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ: ಸಿದ್ದರಾಮಯ್ಯ

3 years ago

ಚಿತ್ರದುರ್ಗ: ರಾಜ್ಯದಲ್ಲಿ ಮಳೆ ಅಭಾವದಿಂದಾಗಿ ತಲೆ ದೋರಿದ ಬರಪರಿಸ್ಥಿತಿಯಿಂದ ಸುಮಾರು 30 ಸಾವಿರ ಕೋಟಿ ರೂ. ಬೆಳೆಹಾನಿಯಾಗಿದೆ. ಈ ಹಾನಿಗೆ‌ ಪರಿಹಾರ ಹಾಗೂ ಅಗತ್ಯ ನೆರವು ಕಲ್ಪಿಸಲು ರಾಷ್ಟ್ರೀಯ ಪ್ರಾಕೃತಿಕ ವಿಕೋಪ ಮಾರ್ಗಸೂಚಿಯಂತೆ 4,860 ಕೋಟಿ ರೂಪಾಯಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಚಿತ್ರದುರ್ಗದ ಮುರುಘಾಮಠದ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಬರಪರಿಸ್ಥಿತಿಯ ಅಧ್ಯಯನಕ್ಕಾಗಿ ಬಂದಿರುವ ಕೇಂದ್ರ ಅಧ್ಯಯನ ತಂಡಕ್ಕೆ ಈ ಕುರಿತು ಎಲ್ಲಾ ಮಾಹಿತಿ ನೀಡಿರುವುದಾಗಿ ತಿಳಿಸಿದರು.

ಕೇಂದ್ರದ ಅಧ್ಯಯನ ತಂಡಕ್ಕೆ ರಾಜ್ಯದಲ್ಲಿ ತಲೆದೋರಿರುವ ಬರಪರಿಸ್ಥಿತಿಯ ವಸ್ತುಸ್ಥಿತಿಯನ್ನು ಈಗಾಗಲೇ ವಿವರಿಸಲಾಗಿದೆ. ಒಟ್ಟು 236 ತಾಲ್ಲೂಕುಗಳಲ್ಲಿ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಸುಮಾರು 30 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಬೆಳೆಹಾನಿ ಸಂಭವಿಸಿದೆ. 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ಶೇ. 52 ರಷ್ಟು ಬೆಳೆಹಾನಿಯಾಗಿದೆ. ಕೃಷ್ಣಾ ಮೇಲ್ದಂಡೆ ಹಾಗೂ ನಾರಾಯಣಪುರ ಜಲಾಶಯಗಳನ್ನು ಹೊರತುಪಡಿಸಿ , ಕಾವೇರಿ ಸೇರಿದಂತೆ ಇನ್ನುಳಿದ ಜಲಾನಯನ ಪ್ರದೇಶಗಳಲ್ಲಿ ನೀರಿಲ್ಲ ಎಂಬ ವಾಸ್ತವಿಕ ಸ್ಥಿತಿ ವಿವರಿಸಿರುವುದಾಗಿ ತಿಳಿಸಿದರು

ಈ ಪ್ರದೇಶದಲ್ಲಿ ಅಗತ್ಯ ಪರಿಹಾರ ಕಾಮಗಾರಿ ಕೈಗೊಳ್ಳಲು ಕೇಂದ್ರದ ಮಾರ್ಗಸೂಚಿಯಂತೆ 4860 ಕೋಟಿ ರೂ.ಗಳ ಪರಿಹಾರವನ್ನು ಕೋರಲಾಗಿದೆ ಎಂದರು.

ರಾಜ್ಯದಲ್ಲಿ ಈ ಬಾರಿ ಹಸಿರು ಬರ ಉಂಟಾಗಿದೆ. ಕೇಂದ್ರದ ಅಧ್ಯಯನ ತಂಡ ಮೂರು ತಂಡಗಳಲ್ಲಿ ರಾಜ್ಯದ 11 ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ಅವರು ‌ತಮ್ಮ ವರದಿ ಸಲ್ಲಿಸಿದ ನಂತರ ಅದರ ಆಧಾರದಲ್ಲಿ ಕೇಂದ್ರ ಪರಿಹಾರ ನೀಡಲಿದೆ ಎಂದು ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದಲ್ಲಿನ ವಿಳಂಬವಾಗುತ್ತಿದೆ. ಹಿಂದಿನ ಸರ್ಕಾರದವರು ಈ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿ, 5300 ಕೋಟಿ ರೂ. ಬಿಡುಗಡೆ ಮಾಡಲಿದೆ ಎಂದಿದ್ದರು. ಆದರೆ ಇದುವರೆಗೆ ಕೇಂದ್ರದಿಂದ ಯಾವುದೇ ಹಣ ಬಿಡುಗಡೆಯಾಗಿಲ್ಲ. ಈ ಮೊತ್ತವನ್ನು ಆದಷ್ಟು ಬೇಗನೆ ಬಿಡುಗಡೆಗೊಳಿಸುವಂತೆ ಕೇಂದ್ರಕ್ಕೆ ಮತ್ತೊಮ್ಮೆ ಕೋರಲಾಗಿದೆ ಎಂದು ಹೇಳಿದರು.

ನಮ್ಮ ಸರ್ಕಾರವು ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ವಿಶೇಷ ಪ್ರಾಧಾನ್ಯತೆ ನೀಡಲಾಗುವುದು. ಪ್ರಸಕ್ತ ವರ್ಷ ಹಾಗೂ ಮುಂದಿನ ವರ್ಷವೂ ಕೂಡ ಈ ಯೋಜನೆಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಸಂಶೋಧನೆಯ ಲಾಭ: ನಂತರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬಬ್ಬೂರು ಫಾರಂನ ಶತಮಾನೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಳೆದ ಬೆಳೆಗೆ ಬೆಲೆ ಇಲ್ಲ. ಅತಿವೃಷ್ಟಿ, ಅನಾವೃಷ್ಠಿ, ಬರಗಾಲ ರೈತರನ್ನು ಕಾಡುತ್ತಿದೆ. ಹೀಗಾಗಿ ಬದಲಾದ ವಾತಾವರಣಕ್ಕೆ ತಕ್ಕಂತೆ ವಿಶ್ವವಿದ್ಯಾಲಯಗಳಲ್ಲಿ ರೈತ ಪರವಾದ ಸಂಶೋದನೆಗಳು ನಡೆಯಬೇಕು ಎಂದು ಹೇಳಿದರು.

ಕೃಷಿ ವಿವಿಗಳಿಂದ ಎಷ್ಟು ಪದವೀಧರರು ಹೊರಗೆ ಬಂದರು ಎನ್ನುವುದು ಮುಖ್ಯವಲ್ಲ. ಎಷ್ಟು ತಳಿಗಳನ್ನು ಅಭಿವೃದ್ಧಿ ಪಡಿಸಿದ್ದೀರಿ ಎನ್ನುವುದು ಮುಖ್ಯ. ಸಂಶೋಧನೆಗಳಿಗೆ ಸಕಲ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದರು.

ಚಿತ್ರದುರ್ಗ ಮೊದಲೇ ಬರ ಪೀಡಿತ ಜಿಲ್ಲೆ. ಈಗ ಇನ್ನಷ್ಟು ಬರಗಾಲಕ್ಕೆ ತುತ್ತಾಗಿದೆ. ಕೇಂದ್ರ ಸರ್ಕಾರ ಎಷ್ಟಾದರೂ ಪರಿಹಾರ ನೀಡಲಿ. ನಮ್ಮ ಸರ್ಕಾರ ಮಾತ್ರ ಜನರಿಗೆ, ರೈತರಿಗೆ, ರಾಸುಗಳಿಗೆ, ಗೋವುಗಳಿಗೆ ಏನೂ ತೊಂದರೆ ಆಗದಂತೆ ನೋಡಿಕೊಳ್ಳಲು ಬದ್ಧವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಕೃಷಿ, ತೋಟಗಾರಿಕಾ ವಿವಿಗಳಲ್ಲಿ ಸಂಶೋಧನೆಗಳು ಹೆಚ್ಚೆಚ್ಚು ಆಗಬೇಕು. ಹವಾಮಾನ ಬದಲಾವಣೆಯಲ್ಲಿ ಯಾವ ಬೆಳೆಗೆ ಹೆಚ್ಚು ಮಹತ್ವವಿದೆ, ರೈತರಿಗೆ ಯಾವ ಬೆಳೆಯಿಂದ ಅನುಕೂಲವಾಗಲಿದೆ ಎನ್ನುವುದರ ಕುರಿತು ಅಧ್ಯಯನ ನಡೆಸಬೇಕು. ಕೃಷಿ ವಿವಿಗಳಿಂದ ಎಷ್ಟು ಪದವೀಧರರು ಹೊರಗೆ ಬಂದರು ಎನ್ನುವುದು ಮುಖ್ಯವಲ್ಲ. ಎಷ್ಟು ತಳಿಗಳನ್ನು ಅಭಿವೃದ್ಧಿ ಪಡಿಸಿದ್ದೀರಿ ಎನ್ನುವುದು ಮುಖ್ಯ ಎಂದರು.

Leave a Reply