ಬೆಂಗಳೂರು: ಬೆಳಗಾವಿಯಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿವೇಶನ ನಡೆದು ಕಳೆದ ವರ್ಷಕ್ಕೆ ಶತಮಾನ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಬಂಧ ಇಂದು ʻಗಾಂಧಿ ಭಾರತ ಶತಮಾನೋತ್ಸವʼ ಸಮಿತಿಯ ಸಭೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಿ, ಸಲಹೆ, ಸೂಚನೆಗಳನ್ನು ನೀಡಿದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಗಾಂಧೀಜಿಯವರ ವಿಚಾರಧಾರೆಗಳು, ಆದರ್ಶಗಳನ್ನು ಪ್ರಚುರಪಡಿಸುವ ಅಗತ್ಯ ಇಂದು ಎಂದಿಗಿಂತಲೂ ಹೆಚ್ಚಿದೆ ಎನ್ನುವುದನ್ನು ಅರಿತು ನಮ್ಮ ಸರ್ಕಾರ ಗಾಂಧಿ ಭಾರತವೆಂಬ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ ಇದರ ಯಶಸ್ಸು ಅಡಗಿದೆ. ಹೀಗಾಗಿ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವೂ ಇರಲಿ ಎಂದು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡರು.
ʻಗಾಂಧಿ ಭಾರತ ಶತಮಾನೋತ್ಸವʼ ಸಮಿತಿ ಸಭೆ ನಡೆಸಿ, ಕಾರ್ಯಕ್ರಮಗಳ ಆಯೋಜನೆ ಕುರಿತು ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದರು.
ಗಾಂಧಿ ಭಾರತ ಶತಮಾನೋತ್ಸವ ಅಂಗವಾಗಿ ಕಳೆದ ಡಿಸೆಂಬರ್ 26 ರಂದು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದ್ದು, ಡಿಸೆಂಬರ್ 26, 2025 ರಂದು ಗಾಂಧಿ ಭಾರತ ಶತಮಾನೋತ್ಸವ ಕಾರ್ಯಕ್ರಮ ಸಮಾಪನೆಗೊಳ್ಳಲಿದೆ. ಈ ಅವಧಿಯಲ್ಲಿ ನಿರಂತರ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆಯಡಿ ಮಹಾ ಪಂಚಾಯತ್ ಸಮ್ಮೇಳನವನ್ನು ನವೆಂಬರ್ 14ರಂದು ಆಯೋಜಿಸಲಾಗುವುದು. ಈ ಬೃಹತ್ ಸಮ್ಮೇಳನದಲ್ಲಿ ಭಾಗವಹಿಸಲು ಗ್ರಾಮ ಪಂಚಾಯತ್‌ಗಳ ಮಾಜಿ ಹಾಗೂ ಹಾಲಿ ಸದಸ್ಯರನ್ನು ಆಹ್ವಾನಿಸಬೇಕು ಎಂದರು.
ಡಿಸೆಂಬರ್ ತಿಂಗಳಲ್ಲಿ ಪಂಚಾಯತ್ ರಾಜ್ ಕಾಯ್ದೆ ಮತ್ತು ಗ್ರಾಮ ಸ್ವರಾಜ್ ಕುರಿತಾಗಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗುವುದು ಎಂದರು.
ಗಾಂಧೀಜಿ ಅವರು ಭೇಟಿ ನೀಡಿರುವ ಸ್ಮರಣಾರ್ಥ ರಾಜ್ಯದ 120 ಸ್ಥಳಗಳಲ್ಲಿ ಸ್ತಂಭಗಳನ್ನು ನವೆಂಬರ್ ಕೊನೆಯ ಒಳಗಾಗಿ ನಿರ್ಮಿಸಲಾಗುವುದು ಎಂದರು.
ಗಾಂಧಿ ಭಾರತ ಅಂಗವಾಗಿ ರಾಜ್ಯಾದ್ಯಂತ ಜ್ಯೋತಿ ಯಾತ್ರೆಗಳನ್ನು ಆಯೋಜಿಸಲಾಗುವುದು. ಮಹಾತ್ಮ ಗಾಂಧೀಜಿ ಅವರ ಧ್ಯಾನಸ್ಥ ಭಂಗಿಯ ಭಾವಚಿತ್ರ ಹಾಗೂ ಅವರು ಬೋಧಿಸಿದ ಸಪ್ತ ಸಾಮಾಜಿಕ ಪಾತಕಗಳನ್ನು ಎಲ್ಲಾ ಶಾಲೆಗಳಲ್ಲಿ ಬರೆದು ಅಳವಡಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ರಂಗಾಯಣದ ವತಿಯಿಂದ ಗಾಂಧಿ ವರ್ಸಸ್ ಗಾಂಧಿ, ಪಾಪು-ಬಾಪು ಹಾಗೂ ಮಹಾತ್ಮರ ಬರುವಿಗಾಗಿ ಎಂಬ ಮೂರು ನಾಟಕಗಳನ್ನು ನಿರ್ಮಿಸಿ ರಾಜ್ಯಾದ್ಯಂತ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಜ್ಯದ 16 ಜಿಲ್ಲೆಗಳಲ್ಲಿ ಈಗಾಗಲೇ ಗಾಂಧಿ ಭವನ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ನಿವೇಶನ ಇನ್ನೂ ಸಿಗದ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ಸ್ಥಳ ಗುರುತಿಸಿ ಕಾಮಗಾರಿ ಆರಂಭಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ನಿರಂತರವಾಗಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.




