ಮಂಗಳೂರು: ದೇಶದ ಸಂವಿಧಾನದ ಮೂಲ ಆಶಯಗಳಾದ ಜಾತ್ಯಾತೀತವಾದ, ಪ್ರಜಾಪ್ರಭುತ್ವ, ಸೌಹಾರ್ದತೆ ತೀರಾ ಅಪಾಯದಲ್ಲಿದೆ ಎಂದು ಡಿ ವೈ ಎಫ್ ಐ ನಾಯಕ ಸುನಿಲ್ ಕುಮಾರ್ ಬಜಾಲ್ ಹೇಳಿದರು.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಗುರುಪುರ ವಲಯ ಸಮಿತಿಯ ಆಶ್ರಯದಲ್ಲಿ ಗಾಂಧಿ ಹುತಾತ್ಮ ದಿನಾಚರಣೆಯ ಅಂಗವಾಗಿ ಸೌಹಾರ್ದತಾ ದಿನಾಚರಣೆಯನ್ನು ತಾರಿಗುಡ್ಡೆ ಬೊಂಡಂತಿಲದ ಸಂಗಾತಿ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಸಂವಿಧಾನದ ಬುಡಕ್ಕೆ ಕೊಡಲಿ ಪೆಟ್ಟು ನೀಡುವ ಕೋಮುವಾದವನ್ನು ಇಲ್ಲಿನ ಸರಕಾರಗಳು ಪ್ರಜ್ಞಾಪೂರ್ವಕವಾಗಿ ಪೋಷಿಸುತ್ತಿವೆ. ರಾಜಕೀಯಕ್ಕಾಗಿ ಧರ್ಮದ ಬಳಕೆಯಾಗುವ ಮೂಲಕ ಪ್ರಸ್ತುತ ರಾಜಕಾರಣವು ಸರಳತೆಯನ್ನೂ, ಸಜ್ಜನಿಕೆಯನ್ನೂ ಮರೆತಿದೆ. ಈ ಸಂದರ್ಭದಲ್ಲಿ ಗಾಂಧಿ ಹಾಗೂ ಅವರ ಆದರ್ಶಗಳನ್ನು ದೇಶವು ಸದಾ ನೆನಪು ಮಾಡಿಕೊಳ್ಳಬೇಕಿದೆ ಎಂದರು.
ಇಂದಿನ ಯುವಜನತೆ ಗಾಂಧಿ ಆದರ್ಶಗಳನ್ನು ಅಣಕಿಸುತ್ತಿದ್ದು, ಕೊಲೆಗಡುಕ ಗೋಡ್ಸೆಯ ವಿಚಾರಗಳತ್ತ ಅರಿವಿನ ಕೊರತೆಯಿಂದ ಒಲವು ತೋರುತ್ತಿದೆ. ಇದು ದೇಶಕ್ಕೆ ತೀರಾ ಅಪಾಯವನ್ನು ತಂದೊಡ್ಡಲಿದೆ.ಗಾಂಧಿಯ ಚಿಂತನೆಗಳು ಈ ದೇಶಕ್ಕೆ ಸದಾ ಪೂರಕವಾಗಿದ್ದರೆ, ಗೋಡ್ಸೆಯ ಚಿಂತನೆಗಳು ದೇಶಕ್ಕೆ ಮಾರಕವಾಗಿದೆ ಎಂದರು.
ಸಭೆಯಲ್ಲಿ ಸಿಪಿಐಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್ ರವರು ಮಾತನಾಡುತ್ತಾ, ದೇಶದ ಸ್ವಾತಂತ್ರ್ಯ ಚಳುವಳಿಯನ್ನು ಮುನ್ನಡೆಸಿ ತನ್ನದೇ ಆದ ಛಾಪನ್ನು ಮೂಡಿಸಿದ ಗಾಂಧೀಜಿಯವರ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಇಡೀ ಜಗತ್ತೇ ಕೊಂಡಾಡಿದೆ. ಆದರೆ ಸಂಘ ಪರಿವಾರವು ಮಾತ್ರ ತನ್ನ ಹುಟ್ಟಿನಿಂದಲೇ ಗಾಂಧೀಜಿಯವರ ವಿರುದ್ದ ದ್ವೇಷ ಸಾಧಿಸುತ್ತಲೇ ಬಂದಿದೆ. ಮಾತ್ರವಲ್ಲದೆ 8 ಬಾರಿ ಕೊಲೆಯತ್ನವನ್ನೂ ನಡೆಸಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ CPIM ದ.ಕ.ಜಿಲ್ಲಾ ಸಮಿತಿ ಸದಸ್ಯ ಮನೋಜ್ ವಾಮಂಜೂರು, ಗಾಂಧೀಜಿಯವರ ಆಶಯಗಳನ್ನು ಮಣ್ಣುಪಾಲು ಮಾಡಿ ದೇಶವನ್ನು ಮತ್ತೆ ಧರ್ಮದ ಆಧಾರದಲ್ಲಿ ವಿಭಜಿಸಲು ಹೊರಟ ಮತಾಂಧ ಶಕ್ತಿಗಳು ನಾಥೂರಾಂ ಗೋಡ್ಸೆಯನ್ನು ಮಹಾನ್ ನಾಯಕನಂತೆ ಬಿಂಬಿಸುತ್ತಿದೆ.ಇಂತಹ ದುಷ್ಕ್ರತ್ಯಗಳಿಗೆ ಕುಮ್ಮಕ್ಕು ನೀಡುವ ಸಂಘಪರಿವಾರ ನಿಜಕ್ಕೂ ಭಯೋತ್ಪಾದಕ ಸಂಘಟನೆಯಾಗಿದೆ ಎಂದರು
ಕಾರ್ಯಕ್ರಮದಲ್ಲಿ CPIM ಗುರುಪುರ ವಲಯ ಸಮಿತಿ ಸದಸ್ಯರಾದ ಕೆ.ಗಂಗಯ್ಯ ಅಮೀನ್,ನೋಣಯ್ಯ ಗೌಡ, ಹೊನ್ನಯ್ಯ ಅಮೀನ್,CPIM ಸ್ಥಳೀಯ ನಾಯಕರಾದ ಜಯಶೀಲ ಕರ್ಕೇರ, ಶೇಖರ ಗಂಪ,ಭವಾನಿ ಮುಂತಾದವರು ಉಪಸ್ಥಿತರಿದ್ದರು.



