ಯೋಗೇಶ್ ಕುಟುಂಬದ ಪಾರ್ಥಿವ ಶರೀರ ದೇಶಕ್ಕೆ ತರಲು ಅಗತ್ಯ ಕ್ರಮ: ಕೃಷ್ಣ ಬೈರೇಗೌಡ

3 years ago

#Necessary #action #bring #mortal #remains #Yogesh #family #country #KrishnaByregowda

ಬೆಂಗಳೂರು: ದಾವಣಗೆರೆ ಜಿಲ್ಲೆಯ ಹಾಲೇಕಲ್ ಗ್ರಾಮದವರಾದ ಯೋಗೇಶ್ (37), ಪತ್ನಿ ಪ್ರತಿಭಾ (35) ಹಾಗೂ ಪುತ್ರ ಯಶ್ (6) ಅವರು ಅಮೆರಿಕದಲ್ಲಿ ಸಂಶಯಾಸ್ಪದ ಸಾವಿಗೀಡಾಗಿರುವುದು ವಿಷಾದನೀಯ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಎಂಜಿನಿಯರ್‌ ಆಗಿದ್ದ ಯೋಗೇಶ್‌ ಕುಟುಂಬದೊಂದಿಗೆ ಕಳೆದ 9 ವರ್ಷಗಳಿಂದ ಅಮೆರಿಕದ ಬಾಲ್ಟಿಮೋರ್ನಲ್ಲಿ ನೆಲೆಸಿದ್ದರು. ಅವರ ಹಠಾತ್‌ ಸಾವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

‘ಬಾಲ್ಟಿಮೋರ್‌ನ ಪೊಲೀಸರು ಶನಿವಾರ ಮೃತರ ಕುಟುಂಬಕ್ಕೆ ಕರೆ ಮಾಡಿದ್ದು ಮೂವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಮಾಹಿತಿ ನೀಡಿದ್ದಾರೆ. ಅಲ್ಲದೆ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ’ ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಮೃತರ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಸಂಬಂಧ ನಿರಾಪೇಕ್ಷಣಾ ಪತ್ರ ಪಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲದೆ ಅಮೆರಿಕದ ರಾಯಭಾರ ಕಚೇರಿ, ಹೂಸ್ಟನ್ ಕಾನ್ಸುಲೇಟ್ ಜನರಲ್ ಹಾಗೂ ಕೇಂದ್ರ ವಿದೇಶಾಂಗ ಸಚಿವಾಲಯ ಹಿರಿಯ ಅಧಿಕಾರಿಗಳ ಜೊತೆಗೂ ನಿರಂತರ ಮಾತುಕತೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಕುಟುಂಬ-ಸಂಬಂಧಿಕರ ಜೊತೆಗೂ ಸಂಪರ್ಕ ಸಾಧಿಸಲಾಗಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೂ ಸೂಚನೆ ನೀಡಲಾಗಿದೆ. ಸ್ವತಃ ನಾನೂ ಸಹ ನಿರಂತರವಾಗಿ ಪ್ರಕರಣದ ಮಾಹಿತಿ ಪಡೆಯುತ್ತಿದ್ದೇನೆ. ಮೃತರ ಶರೀರವನ್ನು ಭಾರತಕ್ಕೆ ತರುವ ಕುರಿತು ಕುಟುಂಬ ಸದಸ್ಯರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು. ಈ ಸಂಬಂಧ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.

Leave a Reply