ಚಾಯವಾಲಾ ವ್ಯಂಗ್ಯಚಿತ್ರವೂ ಮತ್ತು ಮತಾಂಧರ ಮತ್ಸರವೂ

3 years ago

#caricature #Chayawala #jealousy #fanatics #cartoon #bhakts

ಈ ಮತಾಂಧಭಕ್ತರು ಇದ್ದಾರಲ್ಲಾ ಅವರ ಅಂಧಶ್ರದ್ಧೆಯನ್ನು ವಿರೋಧಿಸಿ ಮಾತಾಡುವವರ ವಿರುದ್ಧ ಒಂದು ರೀತಿಯ ಅಸಹನೆ, ದ್ವೇಷವನ್ನು ಬೆಳೆಸಿಕೊಂಡೇ ಬದುಕುತ್ತಾರೆ‌. ನಿಂದನಾಸ್ತ್ರವನ್ನು ಸದಾ ಸನ್ನದ್ಧವಾಗಿರಿಸಿ ಯುದ್ಧಕ್ಕೆ ಸಿದ್ಧರಾದವರಂತೆ ದ್ವೇಷ ಕಾರುವ ಅವಕಾಶಕ್ಕಾಗಿ ಕಾಯ್ದಿರುತ್ತಾರೆ.

ಈಗ ಆಗಿದ್ದೂ ಹಾಗೆಯೇ. ಆಗಾಗ ಈ ಮತಾಂಧ ಭಕ್ತರು ನಂಬಿರುವ ಸುಳ್ಳು ತುಂಬಿರುವ ಭ್ರಮೆಯ ಬಲೂನನ್ನು ಕಲಾವಿದ ಪ್ರಕಾಶ ರೈರವರು ತಮ್ಮ ತೀಕ್ಷ್ಣ ಮಾತುಗಳಿಂದ ಒಡೆಯಲು ಪ್ರಯತ್ನಿಸುತ್ತಲೇ ಬಂದಿರುವುದನ್ನು ಸಹಿಸಲು ಸಾಧ್ಯವಾಗದೇ ಮೆದುಳಲ್ಲಿ ಸುಡು ಬೆಂಕಿಯ ಕೆಂಡವನ್ನು ಹೊತ್ತು ತಿರುಗುವ ಈ ಧರ್ಮಾಂಧ ಪಡೆ ಪ್ರಕಾಶರವರನ್ನು ನಿಂದಿಸುವ, ಪ್ರತಿರೋಧದ ದ್ವನಿಯನ್ನು ನಂದಿಸುವ ಕಾಯಕವನ್ನು ಶ್ರದ್ಧಾ ಭಕ್ತಿಯಿಂದ ಮಾಡಿ ಆತ್ಮತೃಪ್ತಿ ಪಡೆಯುತ್ತಾರೆ.

ಈಗ ಆಗಿದ್ದೂ ಅದೇನೇ. ಭಾರತದ ಮಹತ್ವಾಂಕಾಂಕ್ಷಿ ಯೋಜನೆ ಚಂದ್ರಯಾನ – 3 ರ ಯಶಸ್ಸಿಗೆ ಇನ್ನೊಂದು ಹೆಜ್ಜೆ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಚಂದ್ರನ ಮೇಲೆ ಚಾಯ್ ಮಾರುವ ವ್ಯಕ್ತಿಯ ವ್ಯಂಗ್ಯಚಿತ್ರವನ್ನು ಪ್ರಕಾಶ್ ರೈಯವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಚಂದ್ರನಿಂದ ಬಂದ ಮೊದಲ ಚಿತ್ರ ಎಂದು ಬರೆದುಕೊಂಡಿದ್ದಾರೆ. ಈ ಕೇಸರಿ ಕನ್ನಡಕದ ಭಕ್ತಗಣದ ಕಣ್ಣು ಕೆಂಪಾಗಿ ದ್ವೇಷ ದಾಂಗುಡಿ ಇಡಲು ಇದೊಂದು ಕಾರ್ಟೂನ್ ಚಿತ್ರ ಸಾಕಾಗಿತ್ತು. ಎಲ್ಲ ಕಡೆಯಿಂದ ನಿಂದನಾಸ್ತ್ರದ ಟ್ರೋಲ್ ಶುರುವಾಯಿತು. ಬಂಧುತ್ವ ಸಾರುವ ಪ್ರಕಾಶರ ಮೇಲೆ ಮತಾಂಧರು ಬಿದ್ದರು. ಇನ್ನು ಕೆಲವು ಮತಾಂಧ ಮೇಧಾವಿಗಳು ಚಂದ್ರನ ಮೇಲೆ ಚಂದ್ರನೌಕೆ ತಲುಪುವ ಮುಂಚೆಯೇ ಚಂದ್ರನಂಗಳದಲಿ ಜೈಶ್ರೀರಾಂ ಎಂದು ಹಿಂದಿಯಲ್ಲಿ ಬರೆದಿರುವ ಕೇಸರಿ ಬಾವುಟವನ್ನು ನೆಟ್ಟ ಚಿತ್ರವೊಂದನ್ನು ಹರಿಯಬಿಟ್ಟು ಪ್ರಕಾಶ ರೈರವರ ಕಾರ್ಟೂನಿಗೆ ಕೌಂಟರ್ ಕೊಟ್ಟು ತಮ್ಮ ಧರ್ಮಾಂಧತೆಯನ್ನು ಎತ್ತಿ ತೋರಿಸಿಕೊಂಡರು.

ಒಂದು ವ್ಯಂಗ್ಯಚಿತ್ರ ವನ್ನು ಆಸ್ವಾದಿಸುವ ಹಾಸ್ಯ ಪ್ರಜ್ಞೆಯನ್ನೂ ಕಳೆದುಕೊಂಡ ಈ ಕೋಮುವಾದಿಗಳು ಸೇಡನ್ನೇ ಮೈಮನ ಅಷ್ಟೇ ಅಲ್ಲಾ ರೋಮರೋಮಗಳಲ್ಲಿ ತುಂಬಿಕೊಂಡಿರುವುದು ಅತ್ಯಂತ ಕಳವಳಕಾರಿ. ಇಷ್ಟಕ್ಕೂ ಇದೇನೂ ಹೊಸದಾದ ತಮಾಷೆ ಏನಲ್ಲಾ. ಚಂದ್ರನ ಮೇಲೆ ಮನುಷ್ಯ ಮೊಟ್ಟ ಮೊದಲು ಕಾಲಿಟ್ಟಾಗಲೇ ಮಲಯಾಳಿಗಳ ಬಗ್ಗೆ ಈ ಜೋಕ್ ಹುಟ್ಟಿಕೊಂಡಿತ್ತು. ಕೇರಳದ ಮಲಯಾಳಿಗಳು ಈ ಪ್ರಪಂಚದಲ್ಲಿ ಎಲ್ಲಿದ್ದರೂ ಚಾಯ್ ಮಾರಿಯಾದರೂ ಬದುಕುತ್ತಾರೆ. ಹಾಗೆಯೇ ನಮ್ಮ ಉಡುಪಿ ಹೊಟೇಲಿಗರು ಜಗತ್ತಿನಲ್ಲಿ ಎಲ್ಲಿಯೇ ಜಾಗ ಸಿಕ್ಕರೂ ಹೊಟೇಲ್ ಇಟ್ಟು ನಡೆಸುತ್ತಾರೆ ಎಂಬುದು ಸರ್ವಮಾನ್ಯ ತಮಾಷೆಯ ಸಂಗತಿ. ಅದೇ ರೀತಿ ಚಂದ್ರ ಗ್ರಹದಲ್ಲಿ ಮಾನವ ಕಾಲಿಡುವ ಮೊದಲೇ ಈ ಮಲಯಾಳಿಗಳು ಚಾಯ್ ಮಾರಲು ಅಲ್ಲಿದ್ದರು ಎಂಬ ಜೋಕು ಮಲಯಾಳಿಗಳ ವ್ಯವಹಾರ ಕುಶಲತೆ ಹಾಗೂ ಬದುಕು ಕಟ್ಟಿಕೊಳ್ಳಲು ಅವರು ಮಾಡುವ ಸಾಹಸದ ದ್ಯೋತಕವಾಗಿದೆ. ಮೊದಲ ಸಲ ಹಿಮಾಲಯದ ಉತ್ತುಂಗದ ಶಿಖರವನ್ನು ತೇನ್ ಸಿಂಗ್ ಏರಿ ಸಾಹಸ ಮಾಡಿದಾಗಲೂ ಈ ಮಲಯಾಳಿ ಚಾಯವಾಲಾ ಜೋಕು ಪ್ರಚಲಿತದಲ್ಲಿತ್ತು.

ಈಗ ಮೊದಲ ಸಲ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ನೌಕೆ ಲ್ಯಾಂಡ್ ಆಗುತ್ತಿರುವ ಸಂದರ್ಭದಲ್ಲಿ ಮತ್ತೆ ಈ ಚಾಯ್ವಾಲಾ ಜೋಕು ಹಾಗೂ ವ್ಯಂಗ್ಯ ಚಿತ್ರ ಮುಂಚೂಣಿಗೆ ಬಂದಿದೆ. ಅದನ್ನೇ ಪ್ರಕಾಶ್ ರೈರವರು ಹಂಚಿಕೊಂಡಿದ್ದಾರೆ. ಇದರಲ್ಲಿ ಏನಿದೆ ತಪ್ಪು. ಇದೇ ವ್ಯಂಗ್ಯ ಚಿತ್ರವನ್ನು ಕೋಮುವ್ಯಾಧಿಗಳ ವಿರೋಧಿ ಸೆಲಿಬ್ರಿಟಿ ಅಲ್ಲದೇ ಬೇರೆ ಯಾರೇ ಹಂಚಿಕೊಂಡಿದ್ದರೂ ಈ ಮತಾಂಧರು ನೋಡಿ ಖುಷಿ ಪಡುತ್ತಿದ್ದರು ಅಷ್ಟೇ ಅಲ್ಲಾ ಶೇರ್ ಮಾಡಿ ಆನಂದಿಸುತ್ತಿದ್ದರು. ಆದರೆ ಯಾವಾಗ ಪ್ರಕಾಶ್ ರೈ ರವರು ಈ ಕಾರ್ಟೂನ್ ಹಂಚಿಕೊಂಡರೋ ಆಗ ಅಂಧಭಕ್ತರೊಳಗಿನ ಸೇಡಿನ ಕಿಡಿ ಕೆಂಡವಾಯಿತು. “ಅಯ್ಯೋ ನೋಡಿ ಭಾರತದ ಸಾಧನೆಯನ್ನು ಈ ನಟ ಅಣಕಿಸುತ್ತಿದ್ದಾನೆ. ಇವನೊಬ್ಬ ದೇಶದ್ರೋಹಿ” ಎನ್ನುವ ದ್ವೇಷದ ಮಾತುಗಳ ಜೊತೆಗೆ ನಿಂದನೆಗಳನ್ನು ಈ ಕೇಸರಿ ಟ್ರೋಲ್ ಪಡೆ ಶುರುಮಾಡಿಕೊಂಡಿತು.

ಬಹುಷಃ ಈ ಚಾಯ್ವಾಲಾನ ಕಾರ್ಟೂನ್ ನ್ನು ನೋಡಿದ ಕೂಡಲೇ ಈ ಮತಾಂಧರಿಗೆ ಅವರ ವಿಶ್ವಗುರುವಿನ ಪೂರ್ವಾಶ್ರಮದ ನೆನಪಾಗಿರಬೇಕು. ಸೋ ಕಾಲ್ಡ್ ವಿಶ್ವಗುರು ಬಾಲಕನಾಗಿದ್ದಾಗ ರೈಲ್ವೇ ನಿಲ್ದಾಣಗಳಲ್ಲಿ ಚಾಯ್ ಮಾರುತ್ತಿರುವ ಕಥೆ ಮತಾಂಧರ ಮೆದುಳಲ್ಲಿ ಮರುಕಳಿಸಿರಬಹುದು. ತಮ್ಮ ವಿಶ್ವಾರಾಧ್ಯರನ್ನು ಹೀಗೆ ಚಾಯ್ವಾಲಾಗೆ ಹೋಲಿಸಿ ಅಪಮಾನ ಮಾಡಲಾಗಿದೆ ಎಂಬ ಅಂತರಂಗದ ಆಕ್ರೋಶವೂ ಈ ಅಂಧಭಕ್ತರ ಉರಿಗೆ ಕಾರಣವಾಗಿರಬಹುದು. ಯಾಕೆಂದರೆ ಈ ವಿಶ್ವಗುರುವಿನ ಅಸಲಿ ಮುಖವನ್ನು ಬೆತ್ತಲುಗೊಳಿಸುವ ಕೆಲಸವನ್ನು ಪ್ರಕಾಶ್ ರೈರವರು ಮಾಡುತ್ತಲೇ ಬಂದಿರುವುದರಿಂದ ಈ ಚಾಯ್ವಾಲಾ ವ್ಯಂಗ್ಯಚಿತ್ರ ವಿಶ್ವಗುರುವಿನದ್ದೇ ಎಂಬ ನಿರ್ಧಾರಕ್ಕೆ ಬಂದಂತಿರುವ ಕೇಸರಿ ಟ್ರೋಲುಗಳು ಭುಗಿಲೆದ್ದಿವೆ.

ಇತ್ತೀಚೆಗೆ ನಟಿ ಕಾಜಲ್ ರವರು “ಅವಿದ್ಯಾವಂತರನ್ನು ಪ್ರಜಾಪ್ರತಿನಿಧಿಗಳನ್ನಾಗಿ ಮಾಡಬಾರದು” ಎಂದು ಹೇಳಿಕೆ ಕೊಟ್ಟರು. ಅಷ್ಟೇ ಈ ಮತಾಂಧರು ಮುಕಳಿ ಬಡಿದುಕೊಂಡು ಆ ನಟಿಯ ಚಾರಿತ್ರ್ಯವಧೆಗೆ ಇಳಿದರು. ಯಾಕೆಂದರೆ ಇವರ ವಿಶ್ವಗುರುವಿನ ಮೇಲೆ ಅವಿದ್ಯಾವಂತ ಅಂದರೆ ಅನ್ ಎಜುಕೇಟೆಡ್ ಎನ್ನುವ ಆರೋಪ ಇದೆಯಲ್ಲಾ ಅದನ್ನು ಲೇವಡಿ ಮಾಡಲಾಗಿದೆ ಎಂದು ಈ ಭಕ್ತಪಡೆ ನಂಬಿ ಕಾಜೋಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದೊಂಬಿ ಎಬ್ಬಿಸಲು ಪ್ರಯತ್ನಿಸಿತು. ಈ ಮತಾಂಧರ ವ್ಯಕ್ತಿ ಪೂಜೆ ಎಷ್ಟು ಅಪಾಯಕಾರಿ ಮಟ್ಟ ಮುಟ್ಟಿದೆಯೆಂದರೆ ಯಾರೇ ಏನೇ ಟೀಕೆ ಟಿಪ್ಪಣೆ ವಿಡಂಬನೆ ಮಾಡಿದರೂ ಅದು ತಮ್ಮ ನೇತಾರನ ಕುರಿತೇ ಎನ್ನುವ ತೀರ್ಮಾನಕ್ಕೆ ಬರುವಷ್ಟು. ಹಿಟ್ಲರ್ ಸಹ ಜರ್ಮನಿಯಲ್ಲಿ ಇಂತಹುದೇ ಮತಾಂಧ ಪಡೆಯನ್ನು ಹುಟ್ಟುಹಾಕಿದ್ದು. ಅದೇ ನಾಜಿಜಂ ಸಂತಾನಗಳು ಈಗ ವಿಶ್ವಗುರುವಿನ ಕಾಲಾಳುಗಳಾಗಿ ದೇಶಾದ್ಯಂತ ದ್ವೇಷದ ವಾತಾವರಣ ಸೃಷ್ಟಿಸುತ್ತಿವೆ.

ಪ್ರಕಾಶ್ ರೈ, ಕಮಲ್ ಹಾಸನ್ ಹಾಗೂ ಕಾಜೋಲ್ ರಂತಹ ಜನಪರ ಕಲಾವಿದರು ಇಲ್ಲಿ ನೆಪ ಮಾತ್ರ. ಸಿನೆಮಾದ ಸೆಲಿಬ್ರಿಟಿಗಳ ಮಾತುಗಳನ್ನು ಜನರು ನಂಬುವ ಸಾಧ್ಯತೆ ಹೆಚ್ಚಿರುವುದರಿಂದ ಅಂತವರ ಚಾರಿತ್ರ್ಯವಧೆ ಮಾಡುವುದರ ಮೂಲಕ ಅಂತಹ ಧ್ವನಿಗಳನ್ನು ದಮನಿಸಲೇಬೇಕು ಎನ್ನುವುದು ಈ ಅಂಧಭಕ್ತರು ಹಾಗೂ ಅವರ ಪೋಷಕರ ಉದ್ದೇಶವಾಗಿದೆ. “ಯಾರಾದರೂ ನಮ್ಮ ವಿಶ್ವಗುರುವಿಗಾಗಲಿ ಇಲ್ಲವೇ ಅವರು ಪ್ರತಿಪಾದಿಸುವ ಹಿಂದುತ್ವವಾದಿ ಫ್ಯಾಸಿಜಂ ಸಿದ್ಧಾಂತಗಳಿಗಾಗಲೀ ವಿರುದ್ಧವಾಗಿ ಮಾತಾಡಿದರೆ ನಾವು ಸುಮ್ಮನಿರುವುದಿಲ್ಲಾ, ಅಂತವರ ಚಾರಿತ್ರ್ಯವಧೆ ಮಾಡದೇ ವಿರಮಿಸುವುದಿಲ್ಲ” ಎಂಬ ಎಚ್ಚರಿಕೆಯನ್ನು ಕೊಡಲು ಮತಾಂಧರು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಆದರೆ ಈ ಮತಾಂಧ ಮೂರ್ಖರಿಗೆ ಹಿಟ್ಲರ್ ನಿಗಾದ ಗತಿ ಏನು, ಮುಸಲೋನಿಗೆ ಒದಗಿದ ದುಃಸ್ಥಿತಿ ಏನು ಎಂಬುದರ ಅರಿವಿಲ್ಲ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ನಮ್ಮದು ಶಾಂತಿ ಅಹಿಂಸೆ ಸಹಬಾಳ್ವೆಯನ್ನು ಬೋಧಿಸಿದ ಬುದ್ದ ಬಸವ ಅಂಬೇಡ್ಕರ್ ಗಾಂಧೀಜಿಯವರ ದೇಶ. ಇಲ್ಲಿ ಅಸಹನೆ, ದ್ವೇಷಗಳಿಗೆ ದೀರ್ಘಾವಧಿ ಆಯಸ್ಸಿಲ್ಲ. ಮತಾಂಧತೆ ದೀರ್ಘಕಾಲ ಚಾಲನೆಯಲ್ಲಿ ಇರಲು ಸಾಧ್ಯವೂ ಇಲ್ಲ. ಹುಟ್ಟಿಸಲಾದ ಭ್ರಮೆಗಳು, ಸೃಷ್ಟಿಸಲಾದ ಸುಳ್ಳುಗಳು ಹೆಚ್ಚು ಕಾಲ ನೆಲೆ ನಿಲ್ಲಲೂ ಆಗುವುದಿಲ್ಲ. ಈ ನಾಡಿನ ಜನತೆ ಪ್ರೀತಿ ಶಾಂತಿ ಅಹಿಂಸೆಯನ್ನೇ ಬಯಸುತ್ತಾರೆ. ಇಂದಿಲ್ಲಾ ನಾಳೆ ದ್ವೇಷದ ವಿರುದ್ದ ತಿರುಗಿ ಬೀಳುತ್ತಾರೆ.

ಮಾತಾಂಧರ ದ್ವೇಷದ ಬಜಾರಿನಲ್ಲಿ ಪ್ರೀತಿಯನ್ನು ಹಂಚುವ ಅಂಗಡಿಗಳು ಹೆಚ್ಚಾಗಲಿ. ಸುಳ್ಳುಗಳೇ ಸುಳಿದಾಡುವ ಸಮಯದಲಿ ಸತ್ಯವನ್ನು ಹೇಳುವ ಪ್ರಕಾಶ್ ರೈ ರವರಂತಹ ದಿಟ್ಟ ದ್ವನಿಗಳು ಇನ್ನೂ ಗಟ್ಟಿಯಾಗಿ ಮೊಳಗಲಿ.

  • ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿ

Leave a Reply