9ರಂದು ಎನ್.ಡಿ.ಎ ಸಂಪುಟದ ಪ್ರಮಾಣ ವಚನ

2 years ago

ಎನ್‌ಡಿಎ ಸಂಸದೀಯ ಪಕ್ಷದ ನಾಯಕನಾಗಿ ನರೇಂದ್ರ ಮೋದಿ ಆಯ್ಕೆ

ಭಾನುವಾರ ಸಂಜೆ 6 ಗಂಟೆಗೆ ಪ್ರಮಾಣ ವಚನ

2024 ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 293 ಸ್ಥಾನ ಬಿಜೆಪಿಗೆ 240

ದೆಹಲಿ: ಎನ್ ಡಿ ಎ ಮೈತ್ರಿಕೂಟದ ಪಾಲುದಾರರಿಗೆ ಜೂನ್ 9 ರಂದು ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಬಿಜೆಪಿ ಸಂಸದ ಪ್ರಲ್ಹಾದ್ ಜೋಷಿ ಹೇಳಿದರು.

ಹಳೆಯ ಸಂಸತ್ ಭವನದಲ್ಲಿ ನಡೆದ ಎನ್‌ಡಿಎ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಜೂನ್ 9 ರಂದು (ಭಾನುವಾರ) ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದರು.

ಭಾನುವಾರ ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೈತ್ರಿಕೂಟದ ಪಾಲುದಾರರಿಗೆ ತಿಳಿಸಿದರು. ನರೇಂದ್ರ ಮೋದಿ ಅವರನ್ನು ಎನ್‌ಡಿಎ ನಾಯಕರನ್ನಾಗಿ ಆಯ್ಕೆ ಮಾಡಲು ಸಭೆ ನಡೆಯಿತು.

ಎನ್‌ಡಿಎ ಸಂಸದರಲ್ಲದೆ, ಮುಖ್ಯಮಂತ್ರಿಗಳು ಸೇರಿದಂತೆ ಮೈತ್ರಿಕೂಟದ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನರೇಂದ್ರ ಮೋದಿ ಅವರ ನಾಯಕತ್ವವನ್ನು ಬೆಂಬಲಿಸುವ ನಿರ್ಣಯವನ್ನು ಪ್ರಸ್ತಾಪಿಸಿದರು. ಮಿತ್ರಪಕ್ಷಗಳು ಮತ್ತು ಸಂಸದರು ಅದನ್ನು ಅನುಮೋದಿಸಿದರು. ಅದರ ಬೆನ್ನಲ್ಲೇ ನರೇಂದ್ರ ಮೋದಿ ಅವರು ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾದರು.

ನಂತರ, ಟಿಡಿಪಿಯ ಎನ್ ಚಂದ್ರಬಾಬು ನಾಯ್ಡು, ಜೆಡಿಯುನ ನಿತೀಶ್ ಕುಮಾರ್ ಮತ್ತು ಶಿವಸೇನೆಯ ಏಕನಾಥ್ ಶಿಂಧೆ ಸೇರಿದಂತೆ ಎನ್‌ಡಿಎಯ ಹಿರಿಯ ಸದಸ್ಯರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ಪ್ರಧಾನಿಯಾಗಿ ಆಯ್ಕೆಯಾದವರೊಂದಿಗೆ ಸೇರಿ ಸಂಸದರ ಪಟ್ಟಿಯನ್ನು ಅವರಿಗೆ ಸಲ್ಲಿಸಲಿದ್ದಾರೆ.

ವೇದಿಕೆಯಲ್ಲಿ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಮತ್ತು ಏಕನಾಥ್ ಶಿಂಧೆ ಅವರಲ್ಲದೆ, ಚಿರಾಗ್ ಪಾಸ್ವಾನ್, ಜಿತನ್ ರಾಮ್ ಮಾಂಝಿ, ಅನುಪ್ರಿಯಾ ಪಟೇಲ್ ಮತ್ತು ಪವನ್ ಕಲ್ಯಾಣ್ ಎನ್‌ಡಿಎ ನಾಯಕರು, ಹಿರಿಯ ಬಿಜೆಪಿ ನಾಯಕರೊಂದಿಗೆ ಉಪಸ್ಥಿತರಿದ್ದರು.

ಎನ್‌ಡಿಎ 293 ಸ್ಥಾನಗಳನ್ನು ಗೆದ್ದು, 543 ಸದಸ್ಯರ ಲೋಕಸಭೆಯಲ್ಲಿ ಬಹುಮತದ 272 ಅನ್ನು ಮೀರಿದೆ. ಎಕ್ಸಿಟ್ ಪೋಲ್ ಭವಿಷ್ಯವನ್ನು ಸುಳ್ಳಾಗಿಸಿ ಇಂಡಿಯಾ ಮೈತ್ರಿಕೂಟ 234 ಸ್ಥಾನಗಳನ್ನು ಗಳಿಸಿದೆ.

ಬಿಜೆಪಿ ಏಕಾಂಗಿಯಾಗಿ 240 ಸ್ಥಾನಗಳನ್ನು ಗೆದ್ದುಕೊಂಡಿದ್ದು, 2014 ಮತ್ತು 2019 ರಲ್ಲಿ ಕ್ರಮವಾಗಿ 282 ಮತ್ತು 303 ಸ್ಥಾನಗಳನ್ನು ಗೆದ್ದ ನಂತರ ಪಕ್ಷ ಬಹುಮತವನ್ನು ಹತ್ತು ವರ್ಷಗಳ ನಂತರ ಕಳೆದುಕೊಂಡಿದೆ.

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಮತ್ತು ಭೂತಾನ್ ದೊರೆ ಜಿಗ್ಮೆ ಖೇಸರ್ ನಾಂಗ್ಯೆಲ್ ವಾಂಗ್‌ಚುಕ್ ಸೇರಿದಂತೆ ವಿದೇಶಿ ನಾಯಕರು ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರನ್ನೂ ಆಹ್ವಾನಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಅಲ್ಲದೆ, ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು, ವಂದೇ ಭಾರತ್ ರೈಲು ಮತ್ತು ವಂದೇ ಮೆಟ್ರೋ ತಯಾರಿಕೆಯಲ್ಲಿ ಕೆಲಸ ಮಾಡುತ್ತಿರುವ ರೈಲ್ವೆಯ ಸಿಬ್ಬಂದಿ, ತೃತೀಯಲಿಂಗಿಗಳು, ಪೌರ ಕಾರ್ಮಿಕರು, ವಿಕಸಿತ್ ಭಾರತ್ ರಾಯಭಾರಿಗಳು ಮತ್ತು ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Leave a Reply