ನಂದಿನಿ ಹಾಲಿನ ದರ ಮತ್ತು ಪ್ರಮಾಣ ಏರಿಕೆ: ಕಾಂಗ್ರೆಸ್ – ಬಿಜೆಪಿ ನಡುವೆ ಜಟಾಪಟಿ

2 years ago

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಮತ್ತೊಂದು ದರ ಏರಿಕೆಯ ಬರೆ ಬಿದ್ದಿದೆ. ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳ ವತಿಯಿಂದ ಮಾರಾಟವಾಗುವ ನಂದಿನಿ ಹಾಲು ಮಾರಟ ದರ ಹೆಚ್ಚಳ ಮಾಡಲಾಗಿದ್ದು, ನೂತನ ದರಗಳು ಇಂದಿನಿಂದ ಜಾರಿಗೆ ಬಂದಿವೆ.

ನಂದಿನಿ ಹಾಲಿನ ಅರ್ಧ ಮತ್ತು ಒಂದು ಲೀಟರ್ ಹಾಲಿನ ಪ್ಯಾಕೆಟ್ನಲ್ಲಿ 50 ಮಿಲಿ ಹೆಚ್ಚುವರಿ ಹಾಲನ್ನು ಸೇರಿಸಿದ್ದು, ಪ್ರತಿ ಲೀಟರ್ಗೆ 2 ರೂ.ನಂತೆ ಹೆಚ್ಚಳ ಮಾಡಿರುವುದಾಗಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಅಧ್ಯಕ್ಷ ಭೀಮಾನಾಯಕ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ಜತೆಗೆ 50 ಮಿಲಿ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿದ್ದು, ಹೆಚ್ಚುವರಿ ನೀಡಲಾಗುವ ಹಾಲಿಗೆ ತಗಲುವ ವೆಚ್ಚವನ್ನು ಮಾತ್ರ ಹೆಚ್ಚಳ ಮಾಡಲಾಗಿದೆಯೇ ಹೊರತು ಹಾಲಿನ ದರದಲ್ಲಿ ಏರಿಕೆ ಮಾಡಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ಪ್ರತಿ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ದರವನ್ನು 2 ರೂ. ಹೆಚ್ಚಳ ಮಾಡಲಾಗಿದೆ. ಇದರಿಂದ ಗ್ರಾಹಕರಿಗೂ ಹೆಚ್ಚುವರಿ ಹಾಲು ದೊರೆತಂತಾಗಿದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.

ಪ್ರತಿ ಅರ್ಧ ಲೀಟರ್ ಟೋನ್ಡ್ ಹಾಲಿನ ದರ 22 ರಿಂದ 24ರೂ., ಒಂದು ಲೀಟರ್ ಹಾಲಿನ ದರ 42 ರಿಂದ 44ರೂ., ಹೋಮೋಜಿನೈಸ್ಡ್ ಟೋನ್ಡ್ ಹಾಲಿನ ದರ ಅರ್ಧ ಲೀಟರ್ಗೆ 22 ರಿಂದ 24ರೂ., ಒಂದು ಲೀಟರ್ಗೆ 43ರೂ. ನಿಂದ 45ರೂ., ಹೋಮೋಜಿನೈಸ್ಡ್ ಹಸುವಿನ ಹಾಲು ಅರ್ಧ ಲೀಟರ್ಗೆ 24ರೂ. ನಿಂದ 26ರೂ., ಒಂದು ಲೀಟರ್ಗೆ 46ರೂ. ನಿಂದ 48ರೂ., ಸ್ಪೆಷಲ್ ಹಾಲು ಅರ್ಧ ಲೀಟರ್ಗೆ 25ರೂ. ನಿಂದ 27ರೂ., ಒಂದು ಲೀಟರ್ಗೆ 48ರೂ. ನಿಂದ 50ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದರು.

ಸಮೃದ್ಧಿ ಹಾಲು ಅರ್ಧ ಲೀಟರ್ಗೆ 26ರೂ. ನಿಂದ 28ರೂ., ಒಂದು ಲೀಟರ್ಗೆ 51ರೂ. ನಿಂದ 53ರೂ., ಹೋಮೋಜಿನೈಸ್ಡ್ ಶುಭಂ ಹಾಲು ಅರ್ಧ ಲೀಟರ್ಗೆ 25ರೂ. ನಿಂದ 27ರೂ., ಒಂದು ಲೀಟರ್ಗೆ 49ರೂ. ನಿಂದ 51ರೂ., ಸಂತೃಪ್ತಿ ಹಾಲು ಅರ್ಧ ಲೀಟರ್ಗೆ 28ರೂ. ನಿಂದ 30ರೂ., ಒಂದು ಲೀಟರ್ಗೆ 55ರೂ. ನಿಂದ 57ರೂ., ಶುಭಂ ಟೋನ್ಡ್ ಹಾಲು ಅರ್ಧ ಲೀಟರ್ಗೆ 26ರೂ.ನಿಂದ 28ರೂ., ಒಂದು ಲೀಟರ್ಗೆ 49ರೂ. ನಿಂದ 51ರೂ., ಡಬಲ್ ಟೋನ್‌್ಡ ಹಾಲು ಅರ್ಧ ಲೀಟರ್ಗೆ 21ರೂ. ನಿಂದ 23ರೂ., ಒಂದು ಲೀಟರ್ಗೆ 41ರೂ. ನಿಂದ 43ರೂ.ಗೆ ಹೆಚ್ಚಳ ಮಾಡಲಾಗಿದೆ

ಬೀದಿ ಹೋರಾಟದ ಎಚ್ಚರಿಕೆ: ಹೆಚ್ಚಿಸಿರುವ ಹಾಲಿನ ದರವನ್ನು ತಕ್ಷಣ ಹಿಂಪಡೆಯದಿದ್ದರೆ ರಾಜ್ಯಸರ್ಕಾರದ ವಿರುದ್ಧ ರಾಜ್ಯಾದ್ಯಂತ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.

ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್, ಮತದಾರರ ಮೇಲಿರುವ ಸಿಟ್ಟನ್ನು ಬೆಲೆ ಏರಿಕೆ ಮಾಡುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತದೆ ಎಂದು ಕಿಡಿಕಾರಿದೆ.

ಈ ಕುರಿತು ಹೇಳಿಕೆ ನೀಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮಗೆ ಬಡವರು, ಮಾಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶ ಹಿಂಪಡೆಯಿರಿ ಎಂದರು.

ಸಿದ್ದರಾಮಯ್ಯನವರೇ ಅಧಿಕಾರಕ್ಕೆ ಬಂದ ಮೇಲೆ ಕೇವಲ 13 ತಿಂಗಳಿನಲ್ಲಿ ಹಾಲಿನ ದರವನ್ನು ಎರಡು ಬಾರಿ ಹೆಚ್ಚಿಸಿದ್ದೀರಿ. ಕಳೆದ ವರ್ಷ ಆಗಸ್ಟ್ನಲ್ಲಿ 3 ರೂಪಾಯಿ ಹೆಚ್ಚಳವಾಗಿದ್ದ ಹಾಲಿನ ಬೆಲೆ ಈಗ ಮತ್ತೊಮೆ 2 ರೂಪಾಯಿ ಹೆಚ್ಚಾಗಿದೆ. ರಾಜ್ಯದ ಬಡವರು, ಮಾಧ್ಯಮ ವರ್ಗದ ಜನ ಈಗಾಗಲೇ ಪೆಟೋಲ್ ಡೀಸೆಲ್ ಬೆಲೆ ಏರಿಕೆ, ಗಗನಕ್ಕೇರಿರುವ ತರಕಾರಿ ಬೆಲೆಗಳಿಂದ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ ಮತ್ತೊಮ್ಮೆ ಬಡವರ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದರು.

ಬೆಲೆ ಏರಿಕೆ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?: ಇದರ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಂದಿನಿ ಹಾಲಿನ ಪ್ಯಾಕೇಟ್ಗಳಲ್ಲಿ ಹಾಲಿನ ಪ್ರಮಾಣವನ್ನು 50 ಎಂ.ಎಲ್ ಹೆಚ್ಚಳ ಮಾಡಿ, ಆ ಹೆಚ್ಚುವರಿ ಹಾಲಿಗೆ 2. ರೂ ದರ ನಿಗದಿಪಡಿಸಿ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆಯೇ ವಿನಃ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅರ್ಧಲೀಟರ್ ಹಾಲಿನ ಪ್ಯಾಕೇಟ್ನಲ್ಲಿ ಮುಂದೆ 550 ಎಂಎಲ್ ಹಾಲು ಹಾಗೂ ಲೀಟರ್ ಪ್ಯಾಕೇಟ್ ನಲ್ಲಿ 1,050 ಎಂಎಲ್ ಹಾಲು ಸಿಗಲಿದೆ. ಹಾಲು ಸಂಗ್ರಹಣಾ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ರೈತರು ಹೆಚ್ಚುವರಿಯಾಗಿ ತರುತ್ತಿರುವ ಹಾಲನ್ನು ನಿರಾಕರಿಸಬಾರದು ಎಂಬ ಸದುದ್ದೇಶದಿಂದ ಕೆಎಂಎಫ್ ಸಂಸ್ಥೆ ಪ್ಯಾಕೇಟ್ ಗಳಲ್ಲಿ ಹಾಲಿನ ಪ್ರಮಾಣ ಹೆಚ್ಚಳ ಮಾಡುವ ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ.

ಈವರೆಗೆ 1,000 ಮಿ.ಲೀ ಹಾಲಿಗೆ ರೂ.42 ಹಾಗೂ 500 ಮಿ.ಲೀ ಹಾಲಿಗೆ ರೂ.22 ದರವನ್ನು ನಿಗದಿಪಡಿಸಲಾಗಿತ್ತು, ಇನ್ನು ಮುಂದೆ 1,050 ಮಿ.ಲೀ ಹಾಗೂ 550 ಮಿ.ಲೀ ಹಾಲಿನ ಪ್ಯಾಕೇಟ್ ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಅದಕ್ಕೆ ಕ್ರಮವಾಗಿ ರೂ.44 ಹಾಗೂ ರೂ.24 ದರ ನಿಗದಿಪಡಿಸಲಾಗುತ್ತದೆ. ಇದು ನಾಡಿನ ಲಕ್ಷಾಂತರ ಹೈನುಗಾರರ ಹಿತದೃಷ್ಟಿಯಿಂದ ಕೆ.ಎಂ.ಎಫ್ ಸಂಸ್ಥೆ ತೆಗೆದುಕೊಂಡ ನಿರ್ಣಯವಾಗಿದ್ದು, ಹೆಚ್ಚುವರಿಯಾಗಿ ಉದ್ಪಾದನೆಯಾಗುತ್ತಿರುವ ಹಾಲನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವ ಸದುದ್ದೇಶ ಹೊಂದಿದೆ ಎಂದಿದ್ದಾರೆ.

Leave a Reply