ನನ್ನ ಗಮನ ಪಕ್ಷ ಹಾಗೂ ಸರ್ಕಾರದ ಹಿತಾಸಕ್ತಿ ಕಾಪಾಡುವುದರತ್ತ ಮಾತ್ರ ಇದೆ: ಡಿ.ಕೆ. ಶಿವಕುಮಾರ್

9 months ago

ಬೆಂಗಳೂರು: ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಘೋಷಿಸಿದ ಬೆನ್ನಲ್ಲೇ ಪಕ್ಷ, ನನಗೆ ಸಂಘಟನೆ ಹಾಗೂ ಡಿಸಿಎಂ ಹುದ್ದೆ ನೀಡಿದ್ದು, ನನ್ನ ಗಮನ ಪಕ್ಷ ಹಾಗೂ ಸರ್ಕಾರದ ಹಿತಾಸಕ್ತಿ ಕಾಪಾಡುವುದರತ್ತ ಮಾತ್ರ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ದೆಹಲಿಯಿಂದ ಹಿಂತಿರುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಭೇಟಿಗೂ ಮುನ್ನ 5 ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಅವರು ಹೇಳಿರುವುದು ಎಷ್ಟು ಬಾರಿ ಎಂದು ಕೇಳಿದ ಪ್ರಶ್ನೆಗೆ, ನಿಮ್ಮ ಪ್ರಶ್ನೆಯಲ್ಲಿಯೇ ಉತ್ತರ ಅಡಗಿದೆ ಎಂದು ಜಾಣ್ಮೆ ಮೆರೆದರು. 

ಈ ಯಾವುದೇ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಪಕ್ಷ ಕೊಟ್ಟಿರುವ ಜವಾಬ್ದಾರಿ ಮುಂದುವರಿಸಿಕೊಂಡು ಹೋಗುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ದೀಕ್ಷೆ ನೀಡಿದ್ದು, ನಾವೆಲ್ಲರೂ ಅದನ್ನು ಸಂತೋಷವಾಗಿ ಸ್ವೀಕರಿಸಿದ್ದೇವೆ. ಇದರ ಹೊರತಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ದೆಹಲಿ ಪ್ರವಾಸದ ವೇಳೆ ನಾವು ಸುರ್ಜೆವಾಲ ಅವರ ಹೊರತಾಗಿ ಬೇರೆ ಯಾವುದೇ ಹೈಕಮಾಂಡ್ ನಾಯಕರನ್ನು ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಉಸ್ತುವಾರಿಗಳ ಜೊತೆ ನಮ್ಮ ಕಾರ್ಯಕರ್ತರಿಗೆ ಕೆಲವು ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ. ಸುರ್ಜೇವಾಲ ಅವರ ಬಳಿ ಎಲ್ಲಾ ಶಾಸಕರು ತಮ್ಮ ಅಭಿಪ್ರಾಯ ಸಲ್ಲಿಸಿದ್ದಾರೆ. ಸಚಿವರ ಅಭಿಪ್ರಾಯ ಸಂಗ್ರಹಿಸಬೇಕಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಶ್ರಮಿಸಿರುವವರಿಗೆ ಹಾಗೂ ಕೆಲವರಿಗೆ ನಾವು ಕೊಟ್ಟಿರುವ ಮಾತಿಗೆ ಬದ್ಧವಾಗಿ ಸ್ಥಾನಮಾನ ನೀಡಬೇಕಿದೆ ಎಂದರು.

ಈ ಪ್ರಕ್ರಿಯೆ ಈಗಾಗಲೇ ತಡವಾಗಿದೆ. ಇದು ಅಂತಿಮ ಹಂತಕ್ಕೆ ಬಂದಿದೆ. ಅಧ್ಯಕ್ಷನಾಗಿ ನಾನು ಪಕ್ಷದ ಸಂಘಟನೆಗೆ ಶ್ರಮಿಸಿದವರ ಹೆಸರನ್ನು ಸೇರಿಸಿ ಇದರ ಪ್ರಸ್ತಾವನೆಯನ್ನು ಮತ್ತೊಮ್ಮೆ ದೆಹಲಿಗೆ ಕಳುಹಿಸಿ ಅನುಮತಿ ಪಡೆಯಲಾಗುವುದು ಎಂದರು.

ನಾನು ಪಕ್ಷದ ರಾಜ್ಯ ಅಧ್ಯಕ್ಷ. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆ. ನಾನು ನಿನ್ನೆ ಬ್ಯುಸಿ ಇದ್ದೆ. ಅದರ ಮಧ್ಯೆ ಮುಖ್ಯಮಂತ್ರಿಗಳ ಹೇಳಿಕೆ ನೋಡಿದೆ. ನಿಮ್ಮ ಪ್ರಶ್ನೆಗಳಿಗೆ ಅವರೇ ಉತ್ತರ ನೀಡಿದ್ದಾರೆ. ಅವರು ಉತ್ತರ ನೀಡಿದ ಮೇಲೆ ನಾವು ಮತ್ತೆ ಆ ವಿಚಾರ ಚರ್ಚೆ ಮಾಡುವುದು ಸೂಕ್ತವಲ್ಲ. ನೀವುಗಳು ಸಹ ಮತ್ತೆ ಆ ವಿಚಾರವಾಗಿ ಪ್ರಶ್ನೆ ಮಾಡುವುದು ಸೂಕ್ತವಲ್ಲ ಎಂದರು.

Leave a Reply