ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಸಂಪಾದಿಸಿದ ಆದಿಲಶಾಹೀ ಸಾಹಿತ್ಯದ ೧೯ ಸಂಪುಟಗಳ ಬಗ್ಗೆ ಶೈಕ್ಷಣಿಕ ಹಿನ್ನೆಲೆ ಇಲ್ಲದ, ವಿಕೃತ ಮನಸ್ಸಿನ ಕೆಲವರು ಅಸಂಬದ್ಧವಾಗಿ ಏನೇನೋ ಬರೆದಿದ್ದಾರೆ ಎಂಬುದನ್ನು ತಿಳಿದು ಈ ಟಿಪ್ಪಣಿ ಯನ್ನು ಬರೆಯುತ್ತಿದ್ದೇನೆ. ವಿದ್ವತ್ ಕೆಲಸಗಳನ್ನು ಬೆಂಬಲಿಸುವುದು ನನ್ನ ಕರ್ತವ್ಯ.
ಕೃಷ್ಣ ಕುಲಕರ್ಣಿಯವರು ವಿದ್ವತ್ ಲೋಕದ ಧ್ರುವ ತಾರೆ. ಅವರು ಮಾಡಿದ ಕೆಲಸಗಳನ್ನು ಈ ಕಾಲದಲ್ಲಿ ನಿಂತು ಅರ್ಥಮಾಡಿಕೊಳ್ಳುವುದಕ್ಕೆ ವಿಶೇಷ ತಯಾರಿ ಬೇಕು. ಅವರ ಕೆಲಸಗಳಿಗೆ ಹಲವು ಆಯಾಮಗಳಿವೆ. ಸಾಹಿತ್ಯ, ಸಂಶೋಧನೆ, ಸಂಘಟನೆ, ಅನುವಾದ, ಇತಿಹಾಸ, ಸಂಗೀತ, ಕೃಷಿ, ನೀರಾವರಿ, ಜಾನಪದ, ಪರಿಸರ, ಭಾಷೆ, ವಾಸ್ತು ಶಿಲ್ಪ, ಗಮಕ, ಇತ್ಯಾದಿ ಕೆಲಸಗಳಲ್ಲಿ ಅವರು ಪರಿಣತರು. ಈ ಎಲ್ಲಾ ಚಟುವಟಿಕೆಗಳು ಕನ್ನಡ-ಕರ್ನಾಟಕವನ್ನು ಸಂವರ್ಧಿಸುವ ಪ್ರಾಮಾಣಿಕ ಕೆಲಸಗಳು. ಇಂಥ ಕೆಲಸಗಳ ಮಹತ್ವವನ್ನು ತಿಳಿಯಬೇಕಾದರೆ ನಾವು ಸಾಹಿತ್ಯ ಕೇಂದ್ರಿತವಾದ ಚಿಂತನಾ ಕ್ರಮವನ್ನು ಕ್ಷಣಕಾಲ ಬದಿಗಿರಿಸಿ ಸಂಸ್ಕೃತಿ ಕೇಂದ್ರಿತವಾದ ಒಂದು ಚೌಕಟ್ಟನ್ನು ಬೆಳೆಸಿಕೊಳ್ಳಬೇಕು.
ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರಿಗೆ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಬೆಳೆದುಬಂದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸವಲತ್ತುಗಳು ದೊರೆಯಲಿಲ್ಲ. ಅವರು ವಿಶ್ವವಿದ್ಯಾಲಯಗಳಲ್ಲಿ ಓದಲೂ ಇಲ್ಲ. ಕೊಲ್ಹಾರ, ವಿಜಾಪುರಗಳಲ್ಲಿ ಎಸ್.ಎಸ್.ಎಲ್.ಸಿ ಓದಿದ ಅವರು ಮುಂದೆ ಓದಿಗೇ ವಿದಾಯ ಹೇಳಿ, ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕಾಯಿತು. ಆದರೆ ಸ್ವಂತ ಆಸಕ್ತಿ ಮತ್ತು ಪ್ರಯತ್ನಗಳಿಂದ ಮುಕ್ತ ವಿಶ್ವವಿದ್ಯಾಲಯದಿಂದ ಎಂಎ ಪದವಿಯನ್ನೂ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನೂ ಪಡೆದರು. ಕನ್ನಡದ ಜೊತೆಗೆ ಅವರು ಹಿಂದಿ, ಮರಾಠಿ, ದಖನಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿಯೂ ಪರಿಣತಿ ಪಡೆದರು. ಇವತ್ತು ಕುಲಕರ್ಣಿಯವರು ದಾಸ ಸಾಹಿತ್ಯ, ಕಲಬುರ್ಗಿ ಸಮಗ್ರ ಸಾಹಿತ್ಯ, ಮತ್ತು ಅದಿಲ್ ಶಾಹಿ ಸಾಹಿತ್ಯ ಸಂಪುಟಗಳ ಮೂಲಕ ಕನ್ನಡವನ್ನು ಬೆಳೆಸಿದ ರೀತಿ ಅನುಪಮವಾದುದು. ಜೊತೆಗೆ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರಕ್ಕೆ ಅವರು ತಂದುಕೊಟ್ಟ ಗೌರವವೂ ಐತಿಹಾಸಿಕವಾದುದು.
ಅದಿಲಶಾಹಿ ಸಾಹಿತ್ಯ ಸಂಪುಟಗಳು:
ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯರು ವಿಜಾಪುರದ ವಚನ ಪಿತಾಮಹ ಫ ಗು ಹಳಕಟ್ಟಿ ಸಂಶೋಧನ ಕೇಂದ್ರದ ಮೂಲಕ ಪ್ರಕಟಿಸಿದ ಆದಿಲಶಾಹಿ ಸಾಹಿತ್ಯದ ೧೯ ಸಂಪುಟಗಳು ಪ್ರಕಟವಾಗುವಂತೆ ಮಾಡಲು ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಈ ಸಂಪುಟಗಳ ಅಕರ ಸಂಗ್ರಹಕ್ಕಾಗಿ ಅವರು ಮುಂಬಯಿ, ಹೈದರಾಬಾದ್, ದೆಹಲಿ, ಔರಂಗಾಬಾದ್ ಪುಣೆ ಮತ್ತಿತರ ಸ್ಥಳಗಳಿಗೆ ತಮ್ಮ ಇಳಿ ವಯಸ್ಸಿನಲ್ಲಿ ಓಡಾಡಿದ್ದಾರೆ.
ಆದಿಲ್ ಶಾಹಿ ವಂಶವು ೧೪೮೯ ರಿಂದ ೧೬೮೬ರ ವರೆಗೆ ಬಿಜಾಪುರವನ್ನು ಕೇಂದ್ರವಾಗಿರಿಕೊಂಡು ಆಳ್ವಿಕೆ ನಡೆಸಿತು. ಇವರ ಕಾಲದಲ್ಲಿ ಲಲಿತಕಲೆಗಳು ಬಹಳ ಅಭಿವೃದ್ಧಿಯಾದುವು. ಬಿಜಾಪುರಕ್ಕೆ ಬೇರೆ ಬೇರೆ ದೇಶಗಳಿಂದ ವಿದ್ವಾಂಸರೂ ಕಲಾವಿದರೂ ಅಗಮಿಸಿದ್ದರು. ಇದರಿಂದ ಕನ್ನಡ ಸಂಸ್ಕೃತಿಗೆ ಹೊಸ ಅಯಾಮ ದೊರಕಿತು. ಇಂಡೋ ಸಾರ್ಸೆನಿಕ್ ಶೈಲಿಯ ಅವರ ಕಟ್ಟಡಗಳು ಕರ್ನಾಟಕ ವಾಸ್ತು ಶಿಲ್ಪಕ್ಕೆ ಸಾಕಷ್ಟು ಮೆರುಗು ನೀಡಿತು. ೧೫೭೯ರಿಂದ ೧೬೨೬ರವರೆಗೆ ಆಳಿದ ಎರಡನೆಯ ಇಬ್ರಾಹಿಂ ಆದಿಲ್ ಶಾ ಜಗದ್ಗುರು ಎಂದೇ ಖ್ಯಾತನಾಗಿದ್ದ. ಈತ ‘ಕಿತಾಬ್-ಎ-ನೌರಸ’ ಎಂಬ ಕೃತಿಯನ್ನು ರಚಿಸಿ ವಿಶ್ವಖ್ಯಾತಿಯನ್ನು ಪಡೆದ. ಆತನ ಆಸ್ಥಾನದಲ್ಲಿ ೩೦೦ಕ್ಕೂ ಅಧಿಕ ಕವಿ-ಸಾಹಿತಿಗಳಿದ್ದರು ಎಂದು ಹೇಳಲಾಗಿದೆ. ಇಬ್ರಾಹಿಂನ ಮಗ ಅಲಿ ಆದಿಲ್‌ಶಾಹಿಯ ಹೆಂಡತಿ ಚಾಂದಬೀಬಿ ಸುಪ್ರಸಿದ್ಧ ಕಲಾವಿದೆ ಹಾಗೂ ಕವಿಯತ್ರಿ.
ಕುಲಕರ್ಣಿಯವರು ಸಂಪಾದಿಸಿಕೊಟ್ಟ ಈ ೧೯ ಸಂಪುಟಗಳನ್ನು ಓದುವುದೆಂದರೆ ವಿಜಯಪುರದ ಭವ್ಯ ಇತಿಹಾಸಕ್ಕೆ ಮರಳಿ ಪ್ರವೇಶ ಪಡೆದಂತೆ. ಇದಕ್ಕೆ ಕಾರಣ ಕರ್ತರಾದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರಿಗೆ ಎಲ್ಲ ಕನ್ನಡಿಗರ ಪರವಾಗಿ ಅಭಿನಂದನೆಗಳು.
– ಪ್ರೊ. ಪುರುಷೋತ್ತಮ ಬಿಳಿಮಲೆ, ಹಿರಿಯ ವಿದ್ವಾಂಸರು




