ನನ್ನ ನಿರ್ಧಾರಕ್ಕೆ ನಾನು ಬದ್ಧ: ಆನಂದ್ ಸಿಂಗ್

5 years ago

ದೇವಸ್ಥಾನದಲ್ಲಿ ರಾಜಕೀಯ ವಿದಾಯದ ಸುಳಿವು

ಬೊಮ್ಮಾಯಿ ಸಂಪುಟದ ಮೊದಲ ವಿಕೆಟ್ ಪತನ!

ಹೊಸಪೇಟೆ: ರಾಜಕಾರಣಕ್ಕೆ ದುಡ್ಡು ಮಾಡಲು, ಸಂಪತ್ತು ಲೂಟಿ ಮಾಡಲು ನಾನು ಬಂದಿಲ್ಲ. ನನ್ನ ನಿರ್ಧಾರಕ್ಕೆ ನಾನು ಬದ್ಧ ಎಂದು ಆನಂದ್ ಸಿಂಗ್ ಹೇಳಿದ್ದಾರೆ.

ಈ ಮೂಲಕ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರಕ್ಕೆ ತಾವು ಬದ್ಧವಾಗಿರುವುದಾಗಿ ಹೇಳಿದಂತಾಗಿದೆ. ದೇವಸ್ಥಾನದಲ್ಲೇ ನಿಂತು ವೇಣುಗೋಪಾಲನ ಮೇಲೆ ಆಣೆ ಮಾಡುವೆ. ಪಕ್ಷಕ್ಕೆ ಗೌರವ ಕೊಡುವುದು ನನ್ನ ಧರ್ಮ. ನಾನು ನಾಲ್ಕು ಗೋಡೆ ಮಧ್ಯೆ ನನ್ನ ಭಾವನೆ, ಕಷ್ಟ, ನನ್ನ ಕ್ಷೇತ್ರದ ಭವಿಷ್ಯದ ಬಗ್ಗೆ ಯಾರಿಗೆ ಹೇಳಬೇಕೋ ಅಲ್ಲಿ ಹೇಳಿಕೊಂಡಿದ್ದೇನೆ. ನಾನು ಏನನ್ನೂ ಬಹಿರಂಗವಾಗಿ ಹೇಳಿಲ್ಲ ಎಂದರು.

ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವ ಆನಂದ್ ಸಿಂಗ್ ಸಚಿವ ಸ್ಥಾನ ಮತ್ತು ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸುವ ನಿರ್ಧಾರ ಕೈಗೊಂಡಿದ್ದಾರೆ. ಅವರು ಹೊಸಪೇಟೆಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಈ ವಿಚಾರವನ್ನು ಸ್ಪಷ್ಟಪಡಿಸಿದರು.

ಒಳ್ಳೆಯತನ, ಒಳ್ಳೆಯ ವಿಚಾರಕ್ಕೆ, ಕ್ಷೇತ್ರದ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ನೀನು ಇಟ್ಟ ಹೆಜ್ಜೆಯನ್ನು ಹಿಂದಿಡಬೇಡ, ನೀನು ಮುಂದುವರಿ ಎಂದು ಆ ಗೋಪಾಲಕೃಷ್ಣ ಹೇಳಿದ್ದಾನೆ. ನನಗೆ ರಾಜಕೀಯದಲ್ಲಿ ರಕ್ಷಕರಿಲ್ಲ. ಯಾವ ನಾಯಕರೂ ನನ್ನ ಬೆನ್ನಿಗೆ ಇಲ್ಲ. ಆದರೆ, ಆ ದೇವರು ನನಗೆ ರಕ್ಷಣೆ ಕೊಡುತ್ತಾನೆ ಎಂದು ಅವರು ಹೇಳಿದರು.

ಸಚಿವ ಸ್ಥಾನಕ್ಕಾಗಿ ಪೂಜೆ ನಾನು ಮಾಡಿಸಿಲ್ಲ. ವೇಣುಗೋಪಾಲಕೃಷ್ಣ ದೇವಸ್ಥಾನವನ್ನು ನಮ್ಮ ಅಜ್ಜ ಕಟ್ಟಿಸಿದ್ದರು. ಇದರ ಜೀರ್ಣೋದ್ಧಾರ ಕಾರ್ಯ ಮಾಡಲು ನನ್ನ ತಂದೆ ಬದುಕಿದ್ದಾಗಲೇ ನಿರ್ಧರಿಸಿದ್ದೆ. ಈ ದೇವರನ್ನು ನಾನು ಪೂರ್ಣ ನಂಬುತ್ತೇನೆ. ನನ್ನ ರಾಜಕೀಯ ಆರಂಭವೂ ಇಲ್ಲೇ, ಅಂತ್ಯವೂ ಇಲ್ಲೇ ಎಂದರು. ಈ ಮೂಲಕ ಪರೋಕ್ಷವಾಗಿ ತಮ್ಮ ರಾಜೀನಾಮೆ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಅವರು ಘೋಷಿಸಿದರು.

ಇದಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಮಾತುಕತೆ ನಡೆಸುವುದಾಗಿ ಹೇಳಿದರೆ, ರಾಜೂಗೌಡ ಗೊಂದಲ ಪರಿಹಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ್ದ ಶ್ರೀರಾಮುಲು, ಆನಂದ್ ಸಿಂಗ್ ಜೊತೆ ಮಾತಾಡುತ್ತೇನೆ. ನಾಳೆ ಬಳ್ಳಾರಿಗೆ ಹೋಗಿ ಮಾತಾಡುತ್ತೇನೆ. ಆನಂದ್ ಸಿಂಗ್ ಬೆಂಗಳೂರಿಗೆ ಬಂದರೆ ಇಲ್ಲಿಯೇ ಅವರೊಂದಿಗೆ ಮಾತಾಡುತ್ತೇನೆ ಎಂದಿದ್ದರು.

ಅಲ್ಲದೇ, ನಮ್ಮಲ್ಲಿ ಬೆಂಕಿಯೂ ಇಲ್ಲ, ಬಂಡಾಯವೂ ಇಲ್ಲ ಎಂದ ಅವರು, ನನಗೆ ಇಲಾಖೆ ಮುಖ್ಯವಲ್ಲ. ಕೊಟ್ಟ ಖಾತೆಯನ್ನು ನಿರ್ವಹಿಸುತ್ತೇನೆ ಎಂದು ಅವರು ಹೇಳಿದರು.

Leave a Reply