ದೇವರ ಹೆಸರಿನ ಸುಲಿಗೆಗಿಂತ ಮಾರೆಮ್ಮ ಟ್ರಸ್ಟ್ ಕೆಲಸ ಅಭಿನಂದನಾರ್ಹ

4 years ago

ಆ..36. ಹಾಸಿಗೆಗಳು..

ನೆನ್ನೆರಾತ್ರಿ ಮಾಲೂರು ಸರ್ಕಾರಿ ಆಸ್ಪತ್ರೆಗೆ ಹೋಗಬೇಕಾದ ಸಂದರ್ಭ ಬಂತು. ಹೋದೆ. ಸುತ್ತಲೂ ಕಣ್ಣಾಡಿಸಿದೆ. ದೂರದ ಹಳ್ಳಿಗಳಿಂದ ನಾನಾ ಖಾಯಿಲೆಗಳಿಂದಾಗಿ ಅಡ್ಮಿಟಾಗಿ ಬೆಡ್ ಮೇಲೆ ಮಲಗಿದ್ದ ಬಳಲಿದ ಮುಖಗಳು. ಬಹುಶಃ ಅಲ್ಲಿ ಮೂವ್ವತ್ತಕ್ಕೂ ಹೆಚ್ಚು ಹೊಚ್ಚ ಹೊಸದಾದ ಬೆಡ್ಡುಗಳಿದ್ದವು. ಆ ಬೆಡ್ಡಿನ ಮೇಲೆ “ಮಾರಿಕಾಂಬ ದೇವಾಲಯ” ಅಂತ ಬರೆದಿತ್ತು. ಮನಸ್ಸಿಗೆ ತುಂಬಾ ಖುಷಿ ಆಯಿತು.. ನನ್ನ ಮಡದಿ ಶ್ಯಾಮಲ ಬಾಲ್ಯದ ದಿನಗಳಿಂದ ಅವರಮ್ಮನ ಜೊತೆ ತಿಂಗಳಿಗೊಮ್ಮೆಯಾದರೂ ಮಾಲೂರಿನ ಮಾರೆಮ್ಮನ ಗುಡಿಗೆ ಹೋಗುವ ರೂಢಿ ಬೆಳಸಿಕೊಂಡಿದ್ದಳು. ಟೀಚರ್ ಟ್ರೈನಿಂಗ್ ದಿನಗಳಲ್ಲಿ ಅವರ ಅಮ್ಮ ಅನಾರೋಗ್ಯಕ್ಕೆ ತುತ್ತಾಗಿ ಈ ಮಣ್ಣಿಗೆ ಮರೆಯಾದಳು.. ಅನಿಕೇತನನ ಹೆರಿಗೆಯ ಬೇನೆಯಲ್ಲಿದ್ದಾಗ- “ಅಕ್ಕ (ತಾಯಿ) ಮಾರೆಮ್ಮ” ಈ ಎರಡು ಪದಗಳೇ ಅವಳ ನಾಲಿಗೆಯಲ್ಲಿ ಕಾಪಾಡುವಂತೆ ಸ್ತುತಿಸುವ ಪದಗಳಾಗಿತ್ತು.. ಎಲ್ಲವೂ ನಾರ್ಮಲ್ ಆಯ್ತು..
ಅವನು ಹುಟ್ಟಿದ ಒಂದು ವರ್ಷಕ್ಕೆ ಅವನ ಬರ್ತಡೆ ದಿನ ಮಾರೆಮ್ಮನ ಗುಡಿಗೆ ಹೋಗುವಂತೆ ಹಠ ತೊಟ್ಟಳು. ಆ ದಿನ ಬೈದು ಇವೆಲ್ಲಾ ಬ್ಯಾಡ ಅಂತ ಗದರಿದೆ. ಓದಿರೋ ನೀನು ಈತರ ಇವೆಲ್ಲಾ ಯಾಕೆ ಅಂದೆ. ಅವಳು ಸುಮ್ಮನಾಗಲಿಲ್ಲ. ನಿಮ್ಮೂರಲ್ಲಿ ದೇವಾಸ್ಥಾನಕ್ಕೆ ಬಿಡಲ್ಲ. ಅಲ್ಲಿ ನಾವೇ ಮುಟ್ಟಿ ತೊಳೆದು ಪೂಜೆ ಮಾಡ್ತಿವಿ. ಹಠಹಿಡಿದಳು. ಸ್ವಲ್ಪ ಕೋಪದಿಂದಲೇ ಹೋದೆ.. ಅವಳ ಮಾತು ನಿಜ ಆಗಿತ್ತು. ಮಾರೆಮ್ಮನ ಎರಡು ಶಿರಸ್ಸುಗಳು ನನಗೆ ಥೇಟ್ ಬುದ್ಧನ ಧ್ಯಾನಸ್ಥ ಮುಖಗಳಂತೆ ಕಾಣುತಿತ್ತು. ಜನರೇ ಮುಟ್ಟುವ ಈ ಜಾಗ ಜನರ ಶಕ್ತಿಕೇಂದ್ರವೇ ಆಗಿತ್ತು. ನಿತ್ಯವೂ ಜನಸಂದಣಿ. ಎಲ್ಲಾ ಮುಗಿಸಿ ವಾಪಸ್ಸಾಗುವಾಗ ಅವಳು ಹುಂಡಿಗೆ ಸಾವಿರ ರೂಪಾಯಿ ಹಾಕಿ ಹೊರಬರುತ್ತಿದ್ದಂತೆ ಕೆಂಡಾಮಂಡಲವಾದೆ. ದಾರಿಯುದ್ದಕ್ಕೂ ವಾಕ್ಸಮರ ನಡೆದಿತ್ತು. ಕಾರಣ ಇಷ್ಟೇ ನನಗಾಗ ಸಂಬಳ ಎಂಟುಸಾವಿರ ರೂಪಾಯಿ ಆಗಿತ್ತು. ಆಗ ಅವಳು ಒಂದು ಮಾತು ಹೇಳಿದ್ದಳು.. “ಮಾರಮ್ಮನ ಹುಂಡಿಕಾಕಿದರೆ ಏನೂ ಮೋಸ ಆಗಲ್ಲ” ಅಂತ ಹೇಳಿದ್ಲು. ಹತ್ತುವರ್ಷಗಳ ಹಿಂದೆ ಅವಳು ಹೇಳಿದ್ದ ಮಾತು ನನ್ನ ಕಣ್ಣಮುಂದೆ ನೆನ್ನೆ ರಾತ್ರಿ ನಿಜವೇ ಅನಿಸಿತ್ತು. ಮಾಲೂರು ಮಾರಮ್ಮ ಅಂದರೆ ಇದೀಗ ಅದು ಪ್ರೇಕ್ಷಣಿಯ ಕ್ಷೇತ್ರ ಅನ್ನೋ ಮಟ್ಟಿಗೆ ಪ್ರಸಿದ್ಧಿ ಪಡೆದಿದೆ. ಮಾಲೂರು ಟೌನಿಗೆ ಒಳಪಟ್ಟ ಅಂಗಡಿಯೋರು ಅಲ್ಲಿಂದ ಒಂದು ಹೂವು ತಂದು ಗಲ್ಲಾದೊಳಗಿಟ್ಟ ನಂತರವೇ ಅವರ ವ್ಯಾಪಾರ-ವಹಿವಾಟು. ಇದನ್ನ ಕಣ್ಣಾರೆ ಕಂಡಿದ್ದೇನೆ. ಜನರಿಂದ ಬಂದ ಹುಂಡಿಯ ಕಾಸಿಂದ ಬಡಬಗ್ಗರಿಗೆ ರಗ್ಗು, ಹೊದಿಕೆ, ಹಾಸಿಗೆಗಳು, ದಾನವಾಗಿ ಅಸ್ಪತ್ರೆ ಸೇರಿವೆ.

ಇದೀಗ. ಇಪ್ಪತ್ತು ಲಕ್ಷ ರೂಪಾಯಿ ಹುಂಡಿಹಣದಿಂದ ಆಸ್ಪತ್ರೆ ಅಭಿವೃದ್ಧಿ ಆಗುತ್ತಿದೆ ಎಂದು ಗೆಳೆಯರೊಬ್ಬರು ಕಾಮೆಂಟ್ ಬಾಕ್ಸಿಗೆ ಸುದ್ದಿ ಮುಟ್ಟಿಸಿದ್ದಾರೆ. ಇಂತದ್ದೇ ತಾನೇ ಆಗಬೇಕಿರುವುದು.. ತಾಲೂಕಿನ ಅದೆಷ್ಟೋ ಶ್ರಮಜೀವಿಗಳು, ಕೂಲಿಕಾರರು, ದಿಕ್ಕುದೆಸೆಯಿಲ್ಲದವರು ಈ ಹೊಸ ಬೆಡ್ಡುಗಳ ಮೇಲೆ ಪವ್ವಳಿಸಿದ್ದಾರೆ. ಎದೆ ತುಂಬಿ ಬಂತು.. ನೂರು ರೂಪಾಯಿಗೆ 5% ಬಡ್ಡಿ ಪಡೆವ ಧರ್ಮಸ್ಥಳ ಸಂಘದ ದೇವರ ಹೆಸರಿನ ಸುಲಿಗೆಗಿಂತ ಈ ಮಾರೆಮ್ಮ ಟ್ರಸ್ಟ್ ಪದಾಧಿಕಾರಿಗಳು ಮಾಡುತ್ತಿರುವ ಜನಪರ ಕೆಲಸಗಳನ್ನು ಪ್ರೀತಿಯಿಂದ ಅಭಿನಂದಿಸುತ್ತೇನೆ.

– ಗಂಗಪ್ಪ ತಳವಾರ್, ಕವಿ

Leave a Reply