ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳಿ

10 months ago

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಆರೋಪ ಪ್ರಕರಣ‌ ಇದೀಗ ಕೋಲಾಹಲಕಾರಿ ತಿರುವು ಪಡೆದುಕೊಂಡಿದೆ. ಈ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿದ ಆರೋಪದಲ್ಲಿ ಬಳ್ಳಾರಿ ಕಾಂಗ್ರೆಸ್ ಸಂಸದ ಹಾಗೂ ಅವಳಿ ಜಿಲ್ಲೆಗಳ ಕಾಂಗ್ರೆಸ್ ಶಾಸಕರು ಮತ್ತು ಅವರ ಆಪ್ತರ ನಿವಾಸ, ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಅಲ್ಲದೆ ಹಣ ದುರ್ಬಳಕೆ ಆರೋಪ ಪ್ರಕರಣದಲ್ಲಿ ಬಳ್ಳಾರಿ ಕ್ಷೇತ್ರದ ಸಂಸದ ಕಾಂಗ್ರೆಸ್ ನಾಯಕ ತುಕಾರಾಂ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮೂಲಕ ಫಲಾನುಭವಿಗಳಿಗೆ ನೀಡಬೇಕಿದ್ದ ಸುಮಾರು 21 ಕೋಟಿ ಹಣವನ್ನು ಚುನಾವಣೆಗೆ ಬಳಸಿದ ಆರೋಪದಲ್ಲಿ ಸಂಸದ ತುಕಾರಾಂ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು 8 ತಂಡಗಳಾಗಿ ಬಳ್ಳಾರಿ ಜಿಲ್ಲೆಯ ಸಂಸದ ತುಕಾರಾಂ, ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್‌, ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ.ಎನ್‌.ಟಿ.ಶ್ರೀನಿವಾಸ್‌‍, ಬಳ್ಳಾರಿ ನಗರ ಕ್ಷೇತ್ರದ ಶಾಸಕ ಭರತ್‌ರೆಡ್ಡಿ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ನಾಗೇಂದ್ರ ಹಾಗೂ ಅವರ ಆಪ್ತ ಸಹಾಯಕ ಗೋವರ್ಧನ್‌ ಮನೆಗಳ ಮೇಲೆ ಮತ್ತು ಬೆಂಗಳೂರಿನ ಕಚೇರಿಗಳಲ್ಲಿ ದಾಳಿ ನಡೆಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ 94 ಕೋಟಿ ರೂ.ಗಳನ್ನು ಯೂನಿಯನ್‌ ಬ್ಯಾಂಕ್‌ನ ಅಧಿಕಾರಿಗಳ ಸಹಕಾರದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುವ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಅದನ್ನು ನೆರೆಯ ತೆಲಂಗಾಣ ವಿಧಾನಸಭೆ ಚುನಾವಣೆ, ಬಳ್ಳಾರಿಯ ಲೋಕಸಭೆ ಚುನಾವಣೆಯಲ್ಲಿ ಖರ್ಚು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಬಗ್ಗೆ ಅಕ್ರಮ ಲೇವಾದೇವಿ ಆರೋಪದಲ್ಲಿ ಪ್ರಕರಣ ದಾಖಲಿಸಿದ ಜಾರಿ ನಿರ್ದೇಶನಾಲಯ ಹಲವರನ್ನು ವಿಚಾರಣೆಗೆ ಒಳಪಡಿಸಿತ್ತು ಮಾಜಿ ಸಚಿವ ನಾಗೇಂದ್ರ ಅವರನ್ನು ಬಂಧಿಸಿತ್ತು. ಈ ವಿಚಾರಣೆ ವೇಳೆ ದೊರೆತ ಡೈರಿಯೊಂದರಲ್ಲಿ ಕಂಪ್ಲಿ ಗಣೇಶ್‌ ಅವರಿಗೆ 3 ಕೋಟಿ ರೂ., ತುಕಾರಾಂ ಅವರಿಗೆ 10 ಕೋಟಿ ರೂ., ಡಾ. ಎನ್‌.ಟಿ. ಶ್ರೀನಿವಾಸ್‌‍ ಅವರಿಗೆ ಒಂದಿಷ್ಟು ಹಣ ರವಾನೆ ಮಾಡಿದ್ದಾಗಿ ಬರೆದಿಟ್ಟಿದ್ದ ಚೀಟಿ ದೊರೆತಿತ್ತು ಎಂದು ಹೇಳಲಾಗಿದೆ.

ಸದರಿ ಮಾಹಿತಿ ಆಧರಿಸಿ ಜಾರಿ ನಿರ್ದೇಶನಾಲಯ ವಿಚಾರಣೆ ಮುಂದುವರೆಸಿದ್ದು, 2ನೇ ಸುತ್ತಿನ ದಾಳಿ ನಡೆಸಲಾಗಿದೆ. ಈ ವೇಳೆ ಕೆಲವು ದಾಖಲಾತಿಗಳನ್ನು ಜಪ್ತಿ ಮಾಡಲಾಗಿದ್ದು, ಬ್ಯಾಂಕ್‌ ಖಾತೆ ಹಣಕಾಸು ವಹಿವಾಟು, ಆಪ್ತರ ಖಾತೆಗಳಲ್ಲಿನ ಹಣದ ವಹಿವಾಟು ಸೇರಿದಂತೆ ಹಲವಾರು ಅಂಶಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಈ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಇಡಿ  ಅಧಿಕಾರಿಗಳು, ಬಳ್ಳಾರಿ,ವಿಜಯನಗರ ಜಿಲ್ಲೆಗಳ ಕಾಂಗ್ರೆಸ್ ಸಂಸದರು ಹಾಗೂ ಕೆಲ ಶಾಸಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ನಿಗಮದ ಸುಮಾರು 21 ಕೋಟಿ ರೂಪಾಯಿ ಹಣವನ್ನು ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ, ಸಂಡೂರು, ಕಂಪ್ಲಿ ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಗೆ ಹಂಚಿರುವ ಆರೋಪದ ಮೇಲೆ ಏಕಕಾಲದ ದಾಳಿ ನಡೆಸಿ ಶೋಧ ನಡೆಸಲಾಗಿದೆ.

Leave a Reply