ಕಾರ್ಯನಿರ್ವಹಣೆ ಮಾನದಂಡವಾದರೆ ಮೋದಿ ಮೊದಲು ರಾಜೀನಾಮೆ ಕೊಡಬೇಕು: ಸಿದ್ದು

5 years ago

ಬೆಂಗಳೂರು: ಸಂಪುಟ ಪುನಾರಚನೆಗೆ ಸಚಿವರ ಕಾರ್ಯನಿರ್ವಹಣೆಯೇ ಮಾನದಂಡವಾಗಿದ್ದರೆ ಮೊದಲು ನರೇಂದ್ರ ಮೋದಿಯವರನ್ನು ಪ್ರಧಾನಿ ಪಟ್ಟದಿಂದ ಕಿತ್ತುಹಾಕಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೇಂದ್ರ ಸಚಿವ ಸಂಪುಟ ಪುನರ್ರಚನೆಯ ಹಿನ್ನೆಲೆಯಲ್ಲಿ 12 ಸಚಿವರಿಗೆ ಕೊಕ್ ನೀಡಿದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ,. ನೋಟ್ ಬ್ಯಾನ್ ನಿಂದ ಹಿಡಿದು ಕೊರೊನಾ ನಿಯಂತ್ರಣದವರೆಗೆ ಈ ಸರ್ಕಾರ ವಿಫಲಗೊಂಡಿದ್ದರೆ ಅದಕ್ಕೆ ನೇರ ಹೊಣೆ ನರೇಂದ್ರಮೋದಿಯವರು ಎಂದಿದ್ದಾರೆ.

ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಏಕವ್ಯಕ್ತಿ ಪ್ರದರ್ಶನವಾಗಿರುವ ಕೇಂದ್ರ ಸಚಿವ ಸಂಪುಟದ ವಿಸ್ತರಣೆಗೆ ಯಾವ ಮಹತ್ವವೂ ಇಲ್ಲ. ಮೋದಿಯವರ ಸಂಪುಟದಲ್ಲಿ ಯಾರು ಸಚಿವರಾದರೂ ಅವರೆಲ್ಲರೂ ನಾಮ್ ಕಾವಸ್ತೆ, ಹಣಕಾಸು, ಆರೋಗ್ಯ, ಶಿಕ್ಷಣ, ವಿದೇಶಾಂಗ ಯಾವುದೇ ಖಾತೆ ಇರಲಿ, ಅವುಗಳಿಗೆ ಸಂಬಂಧಿಸಿದ ನೀತಿ ನಿರ್ಧಾರಗಳನ್ನು ಪ್ರಕಟಿಸುವುದು ಮತ್ತು ಅದರ ಬಗ್ಗೆ ಮಾತನಾಡುವುದು  ನರೇಂದ್ರ ಮೋದಿಯವರೇ ಆಗಿರುವ ಕಾರಣ ಆ ಖಾತೆಗಳ ವೈಫಲ್ಯಕ್ಕೆ ಅವರೇ ಹೊಣೆ ಹೊರಬೇಕಾಗುತ್ತದೆ ಎಂದಿದ್ದಾರೆ.

ಕೊರೊನಾ ಕಾಲದಲ್ಲಿ ಹತ್ತಾರು ಬಾರಿ ಟಿವಿಗಳಲ್ಲಿ ಮೋದಿಯವರು ಕಾಣಿಸಿಕೊಂಡಿದ್ದಾರೆ. ಜಾಗಟೆ ಬಡಿದು, ದೀಪ ಹಚ್ಚಿ ಕೊರೊನಾ ವೈರಸ್ ಓಡಿಸಲು ಹೇಳಿದ ಮಹಾನುಭಾವ ಮೋದಿ. ಕೊರೊನಾ ಚಿಕಿತ್ಸೆ ಮತ್ತು ನಿಯಂತ್ರಣಕ್ಕೆ ರಾಜ್ಯಗಳಿಗೆ ಹಣ ನೀಡದೆ ಸತಾಯಿಸಿದವರು, ಕಾರ್ಮಿಕರು ವಲಸೆ ಹೋಗುತ್ತಿರುವಾಗ ಕಣ್ಣುಮುಚ್ಚಿ ಕೂತವರು, ಕೊರೊನಾ ಸೋಂಕು ಹರಡುತ್ತಿರುವಾಗಲೇ ಚುನಾವಣಾ ಪ್ರಚಾರ ಸಭೆ ನಡೆಸಿದವರು, ವ್ಯಾಕ್ಸಿನ್ ಬಗ್ಗೆ ಸುಳ್ಳು ಹೇಳಿದವರು, ನಮ್ಮಲ್ಲಿ ವ್ಯಾಕ್ಸಿನ್ ಕೊಡದೆ ವಿದೇಶಕ್ಕೆ ರಫ್ತು ಮಾಡಿದವರು ನರೇಂದ್ರ ಮೋದಿ ಎಂದು ಅವರು ಸರಣಿ ಪಟ್ಟಿಯನ್ನು ನೀಡಿದ್ದಾರೆ.

ಈಗ ಕೊರೊನಾ ನಿಯಂತ್ರಣದಲ್ಲಿನ ವೈಫಲ್ಯಕ್ಕೆ ಯಾರೋ ಡಾ.ಹರ್ಷವರ್ಧನ್ ಎಂಬ ಆರೋಗ್ಯ ಸಚಿವರನ್ನು ಕಿತ್ತುಹಾಕಿದ್ದಾರಂತೆ. ನಿಜವಾಗಿ ಮೋದಿಯವರು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹಿಂದಿನ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಸ್ವತಃ ವೈದ್ಯರಾಗಿದ್ದರೆ, ಹೊಸ ಆರೋಗ್ಯ ಸಚಿವ ಮನಸೂಕ್ ಮಾಂಡವೀಯ ರಾಜಕೀಯ ಶಾಸ್ತ್ರದಲ್ಲಿ ಪದವೀಧರ. ಕೊರೊನಾ ಕಾಲದಲ್ಲಿ ಆರೋಗ್ಯ ಖಾತೆಯಲ್ಲಿಯೇ ಕೈತುಂಬಾ ಕೆಲಸ ಇರುವಾಗ ಹೊಸ ಆರೋಗ್ಯ ಸಚಿವರಿಗೆ ಹೆಚ್ಚುವರಿಯಾಗಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ನೀಡಲಾಗಿದೆ. ಇವರಿಂದ ಯಾವ ಸಾಧನೆಯನ್ನು ನಿರೀಕ್ಷಿಸಬಹುದು? ಎಂದು ಪ್ರಶ್ನಿಸಿದ್ದಾರೆ.

ಸಾಧನೆಯೇ ಮಾನದಂಡವಾಗಿದ್ದರೆ  ಮೊದಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಿತ್ತುಹಾಕಬೇಕಿತ್ತಲ್ವಾ? ಆರೋಗ್ಯ ಕ್ಷೇತ್ರಕ್ಕಿಂತಲೂ ಹೆಚ್ಚಿನ ವೈಫಲ್ಯ ಕಾಣುವುವುದು ಆರ್ಥಿಕ ಕ್ಷೇತ್ರದಲ್ಲಿ. ನೋಟ್ ಬ್ಯಾನ್, ಜಿಎಸ್ ಟಿ, ಕೊರೊನಾ ಪರಿಹಾರ ಹೀಗೆ ಹಣಕಾಸು ಖಾತೆಗೆ ಸಂಬಂಧಿಸಿದ ವೈಫಲ್ಯಗಳಿಂದಾಗಿಯೇ ದೇಶ ಇಂದಿನ ದುಸ್ಥಿತಿಗೆ ಬಂದಿದೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅದೇ ಖಾತೆಯಲ್ಲಿ ಮುಂದುವರಿದಿದ್ದಾರೆ ಎಂದಿದ್ದಾರೆ.

ಬಹಳ ಮಂದಿ ಸಚಿವರನ್ನು ಕೈಬಿಟ್ಟಿರುವ ಸುದ್ದಿ ಕೇಳಿಯೇ ಅವರೆಲ್ಲ ಸಂಪುಟದಲ್ಲಿದ್ದರೆಂದು ದೇಶದ ಜನರಿಗೆ ಗೊತ್ತಾಗಿರುವುದು. ಈಗ ಹೊಸದಾಗಿ ಸೇರ್ಪಡೆಯಾದ ಸಚಿವರದ್ದೂ ಇದೇ ಕತೆ. ಇವರಲ್ಲಿ ಬಹಳಷ್ಟು ಮಂದಿ ಹೊಸಬರು. ದೇಶ ಎದುರಿಸುತ್ತಿರುವ ಇಂದಿನ ಸಂಕಷ್ಟದ ಕಾಲದಲ್ಲಿ ಈ ಹೊಸಬರನ್ನು ಕಟ್ಟಿಕೊಂಡು ಮೋದಿಯವರು ಏನು ಮಾಡುತ್ತಾರೋ ಗೊತ್ತಿಲ್ಲ. ಸಾಮಾನ್ಯವಾಗಿ ಅಸಮರ್ಥರು ಅಸಮರ್ಥರನ್ನೇ ಆಯ್ಕೆ ಮಾಡಿಕೊಂಡು ಜೊತೆಯಲ್ಲಿಟ್ಟುಕೊಳ್ತಾರೆ. ಹಾಗಿದೆ ಹೊಸ ಸಂಪುಟ ಎಂದು ವ್ಯಂಗವಾಗಿ ಪ್ರತಿಕ್ರಿಯಿಸಿದ್ದಾರೆ.

ನರೇಂದ್ರ ಮೋದಿಯವರು ಮೊದಲು ಅಧಿಕಾರಕ್ಕೆ ಬಂದಾಗ  ‘Minimum Government Maximum Governence’ ಎಂಬ ಘೋಷಣೆ ಕೂಗುತ್ತಿದ್ದರು. ಈಗಿನ ಸಚಿವ ಸಂಪುಟದಲ್ಲಿ 77 ಸದಸ್ಯರಿದ್ದಾರೆ. ಇದೇನಾ Minimum Government? ಹೇಳುವುದೊಂದು, ಮಾಡುವುದೊಂದು. ಇದಕ್ಕಾಗಿಯೇ ನಾನು ಮೋದಿಯವರ ಮನೆದೇವರೇ ಸುಳ್ಳು ಎಂದು ಹೇಳುತ್ತಿರುವುದು ಎಂದಿದ್ದಾರೆ.

ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮೋದಿಯವರು ಸೋಷಿಯಲ್ ಎಂಜನಿಯರಿಂಗ್ ಮಾಡಿದ್ದಾರೆ, ಸಾಮಾಜಿಕ ನ್ಯಾಯವನ್ನು ಪಾಲಿಸಿದ್ದಾರೆ ಎಂದೆಲ್ಲ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಕರ್ನಾಟಕದಿಂದ ಆರು ಮಂದಿ ಈಗ ಕೇಂದ್ರ ಸಚಿವರಾಗಿದ್ದಾರೆ. ಇವರಲ್ಲಿ ಒಬ್ಬರೇ ಒಬ್ಬರು ಹಿಂದುಳಿದ ಜಾತಿಗೆ ಸೇರಿದವರಿಲ್ಲ. ಮೂವರು ಬ್ರಾಹ್ಮಣರು, ಒಕ್ಕಲಿಗ, ಲಿಂಗಾಯತ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ತಲಾ ಒಬ್ಬರು ಸಚಿವರಾಗಿದ್ದಾರೆ. ಯಾವ ಜಾತಿಗೆ ಕೊಟ್ಟರೂ ನನ್ನ ಆಕ್ಷೇಪ ಇಲ್ಲ. ಅರ್ಧಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಸಮುದಾಯಗಳಿಗೆ ಪ್ರಾತಿನಿಧ್ಯ ನಿರಾಕರಿಸುವುದು ಯಾವ ಸೋಷಿಯಲ್ ಎಂಜನಿಯರಿಂಗ್? ಯಾವ ಸಾಮಾಜಿಕ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಿಂದ ಸಚಿವರು ಆರಾಗಲಿ, ಹನ್ನೆರಡಾಗಲಿ ಅದರಿಂದ ರಾಜ್ಯಕ್ಕೆ ಏನೂ ಲಾಭವಾಗದು ಎನ್ನುವುದು ಈಗಾಗಲೇ ಸಾಬೀತಾಗಿದೆ. ಹೊಸಬರಲ್ಲಿ ಯಾರೂ ಸಂಪುಟ ದರ್ಜೆಯ ಸಚಿವರಿಲ್ಲ. ಮಹತ್ವದ ಖಾತೆಗಳೂ ಇಲ್ಲ. ಮಹತ್ವದ ಖಾತೆಗಳನ್ನು ಕೊಟ್ಟರೂ ಇವರಿಗೆ ನಿಭಾಯಿಸುವ ಸಾಮರ್ಥ್ಯವೂ ಇಲ್ಲ ಎಂದು ನರೇಂದ್ರ ಮೋದಿಯವರಿಗೆ ಗೊತ್ತಾಗಿರಬೇಕು ಎಂದಿದ್ದಾರೆ.

ಆದ್ದರಿಂದ ಈ ಸಂಪುಟ ವಿಸ್ತರಣೆ, ಪುನರ್ರಚನೆಯಿಂದ ರಾಜ್ಯಕ್ಕೆ ಯಾವ ಲಾಭವೂ ಇಲ್ಲ. ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನಿ ಎದುರು ಬಾಯಿಬಿಡುವ ಶಕ್ತಿ ಇಲ್ಲ, 25 ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ. ಹೀಗಿರುವಾಗ  ಹೊಸದಾಗಿ ಸಚಿವ ಖಾತೆಯ ಕಿರೀಟ ಇಟ್ಟುಕೊಂಡು ಇವರೇನು ಮಾಡಬಹುದು? ಎಂದು ಪ್ರಶ್ನಿಸಿದ್ದಾರೆ.

Leave a Reply