“ದುಡಿಯೋನಿಗೆ ಗೊತ್ತು ಮಣ್ಣಿನ ಹಾಗೂ ಹಣದ ಬೆಲೆ
ಹೆತ್ತೋರಿಗೆ ಗೊತ್ತು ಹೆಣ್ಣಿನ ಬೆಲೆ
ಬಡವರಿಗೆ ಗೊತ್ತು ದುಡ್ಡಿನ ಹಾಗೂ ಊಟದ ಬೆಲೆ”
ಈ ಮೂರು ತಿಳಿದವರಿಗೆ ಗೊತ್ತು “ಜೀವನದ ಬೆಲೆ” ಅನ್ನುವ ಹಾಗೆ ಬಾಳಿದವರು ನಮ್ಮ ಈ ಎಂ.ಎನ್.ಮೂರ್ತಿ ನಾಯಕ್ಅವರು.

ಯಶಸ್ವಿ ಉದ್ಯಮಿ ಆಗಲು 5 ಕಾನೂನು ತಿಳಿದಿರಬೇಕು. ಅದು ವ್ಯವಹಾರಕ್ಕಾಗಿ ಒಂದು ಗುರಿ (Vision), ಜನ (People)ರ ನಾಡಿ ಮಿಡಿತ, ಪ್ರಕ್ರಿಯೆ (Prosess), ಗ್ರಾಹಕ(costomer)ರ ಬೇಡಿಕೆ ಮತ್ತು ಸಂಪನ್ಮೂಲ(resorce) ಜೊತೆಗೆ ವ್ಯವಹಾರ ಹೇಗೆ ಆರಂಭಿಸಬೇಕು, ವ್ಯವಹಾರದ ಗೆಲುವನ್ನು ಹೇಗೆ ಮಾಡಬೇಕು, ವಿವಿಧ ವ್ಯವಹಾರಗಳ ಐಡಿಯಾ ಏನು ಮುಂತಾಗಿ, ಯಶಸ್ಸನ್ನು ಸಾಧಿಸಲು ಹೆಚ್ಚು ಮಾತಾಡಬಾರದು. ಪ್ರಯೋಗವನ್ನು ಪ್ರಾರಂಭಿಸಬೇಕು ಎಂದು ನಂಬಿದವರು ಶ್ರೀ ಎಂ.ಎನ್ಮೂರ್ತಿ ನಾಯಕ್. ಇವರು ಸಣ್ಣ ಸಣ್ಣ ಕೆಲಸಗಳನ್ನೇ ‘ಒಂದು ಮನಸ್ಸಿನಿಂದ ಮಹಾನ್ ರೀತಿಯಲ್ಲಿ’ ಮಾಡುತ್ತಾ ಬಂದುದರ ಫಲವಾಗಿ ಇವರಿಗೆ ಗೆಲುವು ಸಿದ್ದಿಸಿದೆ. ಮೂರ್ತಿ ನಾಯಕ್ ಅವರು ಓದಿದ್ದು ಎಸ್.ಎಸ್.ಎಲ್.ಸಿ ಮಾತ್ರ. ಆದರೂ ಒಬ್ಬ ಯಶಸ್ವಿ ಉದ್ಯಮಿ, ಧರ್ಮದರ್ಶಿ, ಸಿನಿಮಾ ಫೈನಾನ್ಸರ್, ಹಲವು ಉದ್ಯಮಿಗಳ ಸಂಘಟನೆಗಳ ಪದಾಧಿಕಾರಿ, ಉತ್ತಮ ತಂದೆ, ಗಂಡ, ಸಂಬಂಧಿ, ಸಮಾಜಮುಖಿ ಕೆಲಸಗಾರ, ಸಹೃದಯಿ ಹಾಗೂ ನನಗೆ ದೂರದ ಸಂಬಂಧಿಯಾಗಿದ್ದಾರೆ.

ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರು ತಳ ಸಮುದಾಯಗಳು ವಿಶೇಷವಾಗಿ ದಲಿತರು, ಬುಡಕಟ್ಟುಗಳು, ಅಲೆಮಾರಿ ಸಮುದಾಯಗಳು ಶೈಕ್ಷಣಿಕವಾಗಿ ಇಂದು ಪ್ರಗತಿ ಸಾಧಿಸಿದ್ದರೂ ಕೂಡ ಕೈಗಾರಿಕೆ, ಉದ್ಯಮದ ಕ್ಷೇತ್ರದಲ್ಲಿಅದರಲ್ಲೂಆರ್ಥಿಕ ಪ್ರಗತಿಯಲ್ಲಿ ಯಶಸ್ಸು ಶೂನ್ಯ. ಇದಕ್ಕಾಗಿ ಸರಕಾರವನ್ನು ಜರಿಯುವುದೇ, ನಮ್ಮನ್ನಾಳುವವರನ್ನು ಗುರಿ ಮಾಡುವುದೇ ಅಥವಾ ನಮ್ಮನ್ನು ನಾವೇ ಜರಿದುಕೊಳ್ಳುವುದೇ ಎಂಬ ಪ್ರಶ್ನೆಮೂಡುತ್ತದೆ. ಇದಕ್ಕೆಲ್ಲಉತ್ತರವಾಗಿ ಇಂದು ನಮ್ಮ ಮುಂದೆ ಯಶಸ್ವಿ ಉದ್ಯಮಿಯಾಗಿ ನಿಂತಿರುವ ಎಮ್.ಎನ್. ಮೂರ್ತಿ ನಾಯಕರನ್ನು ದೊಡ್ಡ ಉದಾಹರಣೆಯಾಗಿ ನೋಡಬಹುದು. ಇವರು ಬಡತನದಲ್ಲೇ ಜನಿಸಿ, ಬೆಳೆದವರು. ತಂದೆ ಪೊಲೀಸ್ ಇಲಾಖೆಯಲ್ಲಿ ಸಣ್ಣ ಹುದ್ದೆಯಲ್ಲಿದ್ದರು.

ಮೂರ್ತಿ ನಾಯಕರ ಆರಂಭದ ದಿನಗಳ ಜೀವನ ಕಷ್ಟದ್ಧಾದರೂ ಸೋಲೊಪ್ಪಿಕೊಳ್ಳದೇ ನಗುತ್ತಲೇ ಮುಂದೊಂದು ದಿನ ನನ್ನ ಕಷ್ಟ ಸೋತು ನನ್ನಿಂದ ದೂರವಾಗುತ್ತದೆ ಎಂಬ ಭರವಸೆಯಿಂದ ಒಂದು ಸಣ್ಣ ಬಾಳೆ ಅಂಗಡಿಯಿಂದಲೇ ಜೀವನ ಆರಂಭಿಸುತ್ತಾರೆ. ಆದರೆ ಅಲ್ಲೂ ಸೋಲಾಗುತ್ತದೆ. ಯಶಸ್ಸು ಕಾಣಲಾರದೆ ಪದೇಪದೇ ಕಷ್ಟಗಳು ಬಂದಾಗ, ನನ್ನ ಹಣೆ ಬರಹ ಸರಿ ಇಲ್ಲಅಂತ ಸುಮ್ಮನೆ ಕೂರದೆ ಮುಂದೆ ನನಗೋಸ್ಕರ ತುಂಬಾ ಒಳ್ಳೆಯ ದಿನಗಳು ಕಾಯುತ್ತಿವೆ ಎಂದು ತಮ್ಮ ಕಾಯಕದಲ್ಲಿ ಎದೆಗುಂದದೆ ಮುನ್ನುಗಿದ್ದರು, ಆಶಾವಾದಿಯಾಗಿದ್ದರು. ಕಷ್ಟದಲ್ಲೂ ಅವಕಾಶವನ್ನು ಕಂಡುಕೊಂಡ ಯಶಸ್ವಿ ಉದ್ಯಮಿ ಎನಿಸಿದರು.

ಇವರುಎಲ್ಲರಂತೆ ನಮ್ಮ ಹಣೆ ಬರಹ ನಿರ್ಧರಿಸುವವನು ದೇವರು, ಅವನೇ ನನ್ನ ಹಣೆ ಬರಹ ಬದಲಿಸುತ್ತಾನೆ ಎಂದಿದ್ದರೆ ಇಂದಿನ ಮೂರ್ತಿ ನಾಯಕ್ ನಮಗೆ ಸಿಗುತ್ತಿರಲಿಲ್ಲ.
ಇವರು ಗಲ್ಲಿಗಲ್ಲಿಗಳಿಂದ ಖಾಲಿ ಬಾಟಲಿಗಳನ್ನು ಒಂದೊಂದಾಗಿ ಸಂಗ್ರಹಿಸಿ ತೊಳೆಯುತ್ತಾ ಅದೇ ಬೃಹತ್ಉದ್ಯಮವಾಗಿ ಬೆಳೆಸಿದ ಪರಿ, ದೊಡ್ಡದೊಡ್ಡ ಡಿಸ್ಟಲರಿಗಳೇ ಇವರನ್ನೇ ಅವಲಂಬಿಸುವಂತೆ ಮಾಡಿದ ಸಾಧನೆ ಅನನ್ಯವಾದುದು. ಇವರು ಯಾವ ಸರಕಾರದ ಸವಲತ್ತು ಕೇಳಲಿಲ್ಲ, ಲೋನ್ ಪಡೆಯಲಿಲ್ಲ, ಮೀಸಲಾತಿ ಕೋರಲಿಲ್ಲ ಆದರೂ ನೂರಾರು ಕೋಟಿಯ ಒಡೆಯರಾದ ಯಶೋಗಾಥೆ ದೊಡ್ಡದು, ಸಾವಿರಾರು ಜನರಿಗೆ ಉದ್ಯೋಗದಾತರಾದರು. ರಾಜ್ಯ ಅಂತರರಾಜ್ಯಗಳಲ್ಲಿ ದೊಡ್ಡದೊಡ್ಡ ಫ್ಯಾಕ್ಟರಿಗಳ, ಜಮೀನಿನ ಮಾಲೀಕರಾದರು. ಮಾಲೀಕರು ಯಾರೂ ಬೇಕಾದರು ಆಗಬಹುದು. ಆದರೆ ತನ್ನ ಹುಟ್ಟಿದ ಸಮಾಜಕ್ಕೂ, ಬಡವರಿಗೂ ಕೊಡುಗೈದಾನಿಯಾಗಿದ್ದು ವೀರಳವೆ, ಅದಕ್ಕೆಅಪವಾದ ಮೂರ್ತಿನಾಯಕರು. ಬಹುಶಃ ಇವರ ಹೆಸರು ಕೇಳದ ಬಂಜಾರರೇ ಇಲ್ಲ. ಇವರು ರಾಜ್ಯದ ತಬ್ಬಲಿ ಅಲೆಮಾರಿಗಳು, ಬುಡಕಟ್ಟುಗಳ ಸಂಘಟನೆಗೆ ಬಡವರಿಗೆ ನಾವು ಕೋರಿದಾಗ ತಮ್ಮ ಸಾಮ್ರಾಟ್ ಹೋಟಲ್ನಲ್ಲಿ ಉಚಿತ ಜಾಗ – ಊಟ ಆರ್ಥಿಕ ನೆರವು ಪದೇಪದೇ ನೀಡುತ್ತಿದ್ದವರು.
ಬಂಜಾರರ ಬಹುತೇಕ ಸಂಘಟನೆಗಳಿಗೆ, ವಿದ್ಯಾರ್ಥಿಗಳಿಗೆ, ಸಮುದಾಯ ಮುಖಂಡರಿಗೆ ಕಳೆದ 5 ದಶಕಗಳಿಂದಲೂ ನಿರಂತರ ಸಹಾಯಹಸ್ತ ನೀಡುತ್ತಾ ಬಂದರು. ಕಷ್ಟದಲ್ಲಿ ಇರುವವರಿಗೆ ಹಣ ನೀಡಲು ಹಿಂದೂಮುಂದು ನೋಡುತ್ತಿರಲಿಲ್ಲ.

“ನೀನು ಬಡವನಾಗಿ
ಹುಟ್ಟಿದರೆ ಅದು ನಿನ್ನತಪ್ಪಲ್ಲ,
ಆದರೆ ನೀನು ಬಡವನಾಗಿ ಸತ್ತರೆ
ಅದು ಖಂಡಿತ ನಿನ್ನದೇ ತಪ್ಪು” ಎಂದ ಬಿಲ್ ಗೇಟ್ ಮಾತನ್ನು ಅಕ್ಷರಶಃ ಮೂರ್ತಿ ನಾಯಕರಿಗೆ ಅನ್ವಯಿಸಿ ಹೇಳಬಹುದು.
ಹೀಗೆ ಮೂರ್ತಿ ನಾಯಕರ ಔದ್ಯಮಿಕ ಪ್ರಯಾಣದಲ್ಲಿ ಸಣ್ಣ ಸಣ್ಣ ಕೆಲಸಗಳನ್ನೇ ಒಂದೇ ಮನಸ್ಥಿತಿಯಿಂದ ಮಹಾನ್ ರೀತಿಯಲ್ಲಿ ಮಾಡಿದುದರ ಫಲವಾಗಿ ಗೆಲವು ಸಾಧಿಸಿದರು.
ನಾನು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷನಾಗಿ ಚುನಾವಣೆಯಲ್ಲಿಆಯ್ಕೆಯಾದಾಗ, ರಾಜ್ಯದ ನಾಲ್ಕು ಜನ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರನ್ನು ಒಳಗೊಂಡಂತೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದೆ, ಆದರೆ ವಿದ್ಯಾರ್ಥಿ ಸಂಘದ ಉದ್ಘಾಟನೆಗೆ 1995ರಲ್ಲಿ ರಾಮಕೃಷ್ಣ ಹೆಗಡೆಯವರನ್ನುಉದ್ಘಾಟನೆಗೆ ಕರೆಸಿದಾಗ ಅವರ ಜೊತೆಯಲ್ಲಿ ನಾನು ನಮ್ಮ ಸಮುದಾಯದ ಪ್ರಥಮ ಉದ್ಯಮಿ ಮೂರ್ತಿ ನಾಯಕ್ ಅವರನ್ನು ಮುಖ್ಯಅತಿಥಿ ಮಾಡಿದ್ದೆ. ಇವರ ಜೊತೆ ಹೋರಾಟಗಾರ ಸಾ.ರಾಗೋವಿಂದು, ಈ ಸಂಜೆ ಪತ್ರಿಕೆ/ ಅರಗಿಣಿ ಮಾಲೀಕರಾರ ವೆಂಕಟೇಶ್ ಸಹ ಇದ್ದರು. ಮೂರ್ತಿ ನಾಯಕರು ನಾನು ಇಲ್ಲಿ(ಬೆಂ.ವಿ.ವಿ)ಗೆ ಏಕೆ ಬರಬೇಕು, ಇದರಿಂದ ನನಗೇನು ಲಾಭ ಎಂದರು. ನಾನು ಹೇಳಿದೆ ನಮ್ಮ ಸಮುದಾಯದ ಹೆಮ್ಮೆ ನೀವು, ಬಡ ವಿದ್ಯಾರ್ಥಿಗಳಿಗೆ ಶುಲ್ಕ ನೀಡುತ್ತೀರಿ, ಬಡವರಿಗೆ ಸಹಾಯ ಮಾಡುತ್ತೀರಿ, ನಾನು ಬಡತನದಿಂದ ಬಂದವ ಬಡವರ ನೋವು ನನಗೆ ಗೊತ್ತು, ಹೀಗಾಗಿ ನೀವೆ ನನ್ನ ಮುಖ್ಯಅತಿಥಿ ಎಂದೆ. ಆಗ ಮೂರ್ತಿ ನಾಯಕರು ಸುಮ್ಮನೆ ನಕ್ಕರು.
ಇವರ ನಗರದ ಯಶವಂತಪುರ ಸರ್ಕಲ್ನಲ್ಲಿರುವ ಸಾಮ್ರಾಟ್ ಹೋಟಲಿನ ಸಹ ಮಾಲೀಕ ಇತ್ತೀಚೆಗೆ ಇವರಿಗೆ ತೊಂದರೆ ಕೊಟ್ಟಾಗ, ನಾನು ನಮ್ಮ ಗೆಳೆಯರೊಟ್ಟಿಗೆ ಧಾವಿಸಿ ಹೋಟಲಿನಲ್ಲಿ ತಂಗಿ ಇವರಂತಹವರಿಗೆ ಯಾರು ತೊಂದರೆಕೊಡಬಾರದು ಎಂದು ಬೆಂಬಲಕ್ಕೆ ನಿಂತೆವು. ತೊಂದರೆ ಬಗೆಹರಿಯಿತು. ಇಂತಹ ವ್ಯಕ್ತಿಗಳು ನಮ್ಮ ಸಮಾಜಕ್ಕೆ ಬೇಕು. ಹಾಗೆ ಒಮ್ಮೆಇವರು ನಂಬಿದ್ದ ‘ಭೀಮಾಸತಿ ತೀತಾರಾಜ’ದೇವಸ್ಥಾನದ ಬಗ್ಗೆ ಸಾಕ್ಷ್ಯಚಿತ್ರ ಮಾಡಿಕೊಡಿ ಗೋವಿಂದಸ್ವಾಮಿ ಎಂದರು. ನಾನು ಮಾಡಿಕೊಟ್ಟಿದ್ದೆ. ಚಿತ್ರಿಕರಣಕ್ಕಾಗಿ ಇವರ ಫ್ಯಾಕ್ಟರಿಯಿಂದ ಒಂದು ನೀರಿನ ಬಕೆಟ್ ಪಡೆದು ಹಿಂದಿರುಗಿಸಲು ಆಗಿರಲಿಲ್ಲ, ಆಗ ಇವರು ಫೋನಾಯಿಸಿ ನೀವು ಒಂದು ಬಕೆಟ್ ಹಿಂದಿರುಗಿಸಿಲ್ಲ ತಂದುಕೊಡಿ ಎಂದರು. ಒಬ್ಬ ಕೋಟ್ಯಾಧಿಪತಿಗೆ ಹತ್ತಾರು ರೂಪಾಯಿಯ ಬಕೆಟ್ ದೊಡ್ಡದೇ ಎಂದು ಯೋಚಿಸಿ, ನಂತರ ಚಿಂತಿಸಿದೆ ಹೀಗೆ ಒಬ್ಬ ವ್ಯಕ್ತಿಗೆ ಶಿಸ್ತು, ಪ್ರಾಮಾಣಿಕತೆ, ಸಣ್ಣ ಸಣ್ಣ ವಸ್ತುವಿಗೂ ಬೆಲೆ ಕೊಡುವುದು, ಆಡಂಬರ ಮಾಡದೆ ಸರಳವಾಗಿ ಬಡವರಂತೆ ಬದುಕುವುದು ದೊಡ್ಡದು. ಹೀಗಿದ್ದಾಗ ಮಾತ್ರ ದೊಡ್ಡದು ಸಾಧಿಸಲು ಸಾಧ್ಯ ಎಂದು ಇವರಿಂದ ನಾನು ಕಲಿತೆ.
ನಾವು ಬೇರೆಯವರ ತಪ್ಪಿನಿಂದಲೂ ಕಲಿಯಬಹುದು ಯಶಸ್ಸಿನಿಂದಲೂ ಪಾಠಕಲಿಯಬಹುದು. ಒಬ್ಬ ವ್ಯಕ್ತಿ ಕಷ್ಟದಲ್ಲಿ ವ್ಯಾಸಂಗ ಮಾಡಿ ಪದವಿಗಳಿಸಿ ಕೆಲಸ ಪಡೆಯುತ್ತಾನೆ. ಹಾಗೆ ಇನ್ನೊಬ್ಬರು ರಾಜಕೀಯ ಪ್ರವೇಶ ಮಾಡುತ್ತಾರೆ. ಮತ್ತೆ ಕೆಲವರು ಔದ್ಯಮಿಕ ವಲಯಕ್ಕೆ ಬರುತ್ತಾರೆ. ಬಹುತೇಕರ ಉದ್ದೇಶ ದೊಡ್ಡದಾಗಿ ಆಸ್ತಿ ಮಾಡಬೇಕು, ಹೆಸರು ಮಾಡಬೇಕು, ತಾನು ಮತ್ತು ತನ್ನ ಕುಟುಂಬ ಮಾತ್ರ ಚೆನ್ನಾಗಿ ಇರಬೇಕೆನ್ನುವವರ ನಡುವೆ “Feed Back to Society and relatives” ಅನ್ನೋ ಹಾಗೆ ಮೂರ್ತಿ ನಾಯಕರು ಎಂದಿಗೂ ಒಳಿತನ್ನೇ ಬಯಸಿ, ಒಳಿತನ್ನೇ ಮಾಡಿದ್ದಾರೆ. ಇವರ ಸಾಧನೆಗೆ ಪದವಿಗಳು, ಸಂಶೋಧನಾ ಪದವಿಗಳು ಸಾಟಿಯೇ? ಓದಿದರೆ ಮಾತ್ರ ಬುದ್ಧಿವಂತರಲ್ಲ.ಕೌಶಲ್ಯವೂ ಪದವಿಯೇ ಎಂದು ತಿಳಿಯಬೇಕು.
ಇತ್ತೀಚೆಗೆ ನಾಯಕರಿಗೆ ಆರೋಗ್ಯ ಕೆಟ್ಟಾಗ ಬೇಜಾರಾಯಿತು, ಸುಧಾರಿಸಿಕೊಂಡು ಇಂದು ಓಡಾಡುತ್ತಿದ್ದಾರೆ ಹೀಗೆ ನೂರ್ಕಾಲ ಬಾಳಲಿ. ಮೊನ್ನೆ ಸಮುದಾಯದ ಶಾಸಕರು ಸಚಿವರಿಗೆ ಶಾಸಕರ ಭವನದಲ್ಲಿ ಸನ್ಮಾನ ಮಾಡುವಾಗ ಒಬ್ಬರೆ ಮೂಲೆಯಲ್ಲಿ ಸಾಮಾನ್ಯರಂತೆ ಕುಳಿತ್ತಿದ್ದರು. ಯಾರು ಇವರತ್ತ ಗಮನಿಸಲೇ ಇಲ್ಲ. ಕಾರಣ ಗಡ್ಡಬಿಟ್ಟಿದ್ದರು, ಮಾಸಲು ಟೀಷರಟು ತೊಟ್ಟಿದ್ದರು. ನಾನು ಸಹ ಗುರುತು ಹಿಡಿಯಲಿಲ್ಲ. ಹತ್ತಿರ ಹೋದಾಗ ನನ್ನ ಕಂಡು ನಕ್ಕರು, ತಕ್ಷಣ ನಾನು ಗುರುತು ಹಿಡಿದು ತಡಕಾಡಿ ಅಯ್ಯೋ ನೀವೇ! ಎಂದು ವೇದಿಕೆಗೆ ಕರೆತಂದೆ. ಇವರು ಬೇಡ ಬರುವುದಿಲ್ಲ ಎಂದರು. ಇವರನ್ನು ಗುರುತಿಸಿದ ಉಪ ಸಭಾವತಿ ರುದ್ರಪ್ಪ ಲಮಾಣಿ ನನಗೆ ಹೇಳಿದರು, ಗೋವಿಂದಸ್ವಾಮಿ ನನ್ನಒಂದು ಪೋಟೋ ಇವರ ಜೊತೆ ತೆಗೆದುಕೊಡಿ ಇಟ್ಟುಕೊಳ್ಳುವೆ ಎಂದರು. ಹೀಗೆ ಸರಳ ಸಜ್ಜನ ಎಲ್ಲರಿಗೂ ಆಪ್ತ ವ್ಯಕ್ತಿಇವರು, ಇಂತಹವರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
ಇಂದಿನ ಜನಸಂಖ್ಯೆಯಲ್ಲಿ ಯಾರಿಗೂ ಕೆಲಸ ಸಿಗುವ ಸ್ಥಿತಿ ಇಲ್ಲ. ಖಾಸಗೀಕರಣದ ಮಾತು ಎಲ್ಲೆಡೆ ಇದೆ. ಈ ಕಾಲಕ್ಕೆ ಮೂರ್ತಿ ನಾಯಕರಂತೆ ಎಲ್ಲರೂ ಸಾಧಿಸಬೇಕು ಎಂಬುದು ನನ್ನ ಈ ಬರಹದ ಒಳಗುಟ್ಟು, ಎಲ್ಲಾ ಸಾಧಕರ ಕಥೆ ನಮ್ಮ ಮುಂದಿದೆ, ಬಿಲ್ಗೇಟ್, ನಾರಾಯಣ ಮೂರ್ತಿ, ರತನ್ಟಾಟಾ ಸೋತುಗೆದ್ದ ಯಶಸ್ವಿ ಉದ್ಯಮಿ, ಲೀಲಾ ಪ್ಯಾಲೇಸ್ ಮಾಲೀಕ ಇವರೆಲ್ಲ ಹೀಗೆ ಸಣ್ಣದಾಗಿ ಬಂದು ದೊಡ್ಡದಾಗಿ ಸಾಧಿಸಿದ್ದಾರೆ. ನಿವೃತ್ತಿ ನಂತರ ಒಬ್ಬರು ಲೀಲಾ ಪ್ಯಾಲೇಸ್ ಅನ್ನುಅಂತರರಾಷ್ಟ್ರೀಯ ಮಟ್ಟಕ್ಕೆ ಕಟ್ಟಿದ್ದಾರೆ ಎಂದರೆ ಸಾಧಿಸುವುದು ಮುಖ್ಯ. ಸಾಧನೆಗೆ ಯಾವುದೇ ವಯಸ್ಸಿನ ಅಡ್ಡಿಆತಂಕ ಸಹ ಇಲ್ಲ. ದೃಢ ಮನಸ್ಸಿರಬೇಕು.
ಇಂದಿನ ಯುವಕರೇ, ಪ್ರಯತ್ನಗಳಲ್ಲಿ ಸೋಲಾದರೆ ಪರವಾಗಿಲ್ಲ.ಆದರೆ ಪ್ರಯತ್ನಗಳನ್ನೇ ಮಾಡದೇ ಉಳಿಯುವುದು ಜೀವನದಲ್ಲಿ ನಾವು ಪಡೆಯುವ ದೊಡ್ಡ ಸೋಲಾಗುತ್ತದೆ. ಹಾಗಾಗಿ ನಾವು ತಿಳಿಯಬೇಕು ಮೂರ್ತಿ ನಾಯಕರಂತೆ ನಡೆದಷ್ಟು ದಾರಿ ಇದೆ, ಪಡೆದಷ್ಟು ಭಾಗ್ಯವಿದೆ ಎಂದು ಸದಾ ಪ್ರಯತ್ನಿಸಿ, ಅಡ್ಡದಾರಿ ಬಿಡಿ ನಿಮ್ಮದೇ ದಾರಿಯಲ್ಲಿ ಸಾಗಿ, ಸ್ವಾಭಿಮಾನಿಗಳಾಗಿ, ಸಂಯಮಿಗಳಾಗಿ, ಬೌದ್ಥಿಕ ಕೌಶಲ್ಯಗಳಿಸಿ, ಆಡಂಬರ ಬಿಡಿ, ಸರಳವಾಗಿರಿ, ಸಾಮಾನ್ಯರಲ್ಲಿ ಸಾಮಾನ್ಯರಾಗಿ,ಕರುಣಾಮಯಿಗಳಾಗಿ, ಗುರಿ ದೊಡ್ಡದಿರಲಿ, ಸಾಮರ್ಥ್ಯವೇ ವೃತ್ತಿಯಾಗಲಿ, ಹಣಕ್ಕಾಗಿಯೇ ದುಡಿಯಬೇಡಿ, ಆತ್ಮತೃಪ್ತಿಗಾಗಿಯೂ, ಹೃದಯವಂತಿಕೆಗಾಗಿಯೂ ದುಡಿಯುರಿ, ಅದೇ ನಿಮ್ಮ ಆಸ್ತಿ-ಅಂತಸ್ತು ಆಗಬಹುದು. ಸ್ನೇಹಿತರ ಸಹಭಾಗಿತ್ವ ಮುಖ್ಯ. ಸದಾಲವಲವಿಕೆಯಿಂದ (Smile to forever for your progress)ಇರಿ, ಕ್ರೀಯಾಶೀಲವಾಗಿ ನಗುನಗುತ್ತಾ ಕೆಲಸ ಮಾಡಿ. ಬಡತನವೇ ಬದಕನ್ನು ಕಲಿಸುವ ಪಾಠಶಾಲೆಯಾಗುತ್ತದೆ. ನೂತನ ಸವಾಲುಗಳನ್ನು, ಬದಲಾವಣೆಗಳನ್ನು ಪ್ರತಿ ಹೆಜ್ಜೆಯಲ್ಲೂ ಎದುರಿಸಿ. ಸಾಯುವ ಮುನ್ನ ಸಾಧಿಸಿ-ಸಾವನ್ನು ಗೆಲ್ಲಬಹುದು. ಹೀಗಾದಾಗ ಅಜರಾಮರವಾಗಬಹುದಲ್ಲವೆ. ಹೀಗಾಗಿ ನೀವು ನಮ್ಮ ಸಮುದಾಯದ ಮಾದರಿ ಉದ್ಯಮಿ ಎನಿಸಿರುವ ಎಂ.ಎನ್ ಮೂರ್ತಿ ನಾಯಕರಂತಾಗಿ ಎಂದು ಹೇಳುತ್ತೇನೆ. ಇವರು ಯುವಕರಿಗೆ ಸದಾ ಮಾದರಿ ಉದ್ಯಮಿಯಾಗಿದ್ದಾರೆ, ಮೂರ್ತಿ ನಾಯಕರ ಆತ್ಮಚರಿತ್ರೆ ಇತರರಿಗೂ ಸ್ಪೂರ್ತಿಯಾಗಲಿ. ಆತ್ಮಚರಿತ್ರೆಯನ್ನು ಉತ್ತಮವಾಗಿ ಅಕ್ಷರ ರೂಪದಲ್ಲಿ ದಾಖಲಿಸುತ್ತಿರುವ ಹಿರಿಯ ಬರಹಗಾರರು, ಮಾದರಿ ನಿವೃತ್ತ ಪ್ರಾಂಶುಪಾಲರಾದ ನಾಗರಾಜ್ ಅವರಿಗೂ ಧನ್ಯವಾದಗಳು. ಸತ್ಯವಾದ, ಪಾರದರ್ಶಕವಾದ ಬದುಕು ನಮ್ಮೆಲ್ಲರದಾಗಲಿ ನಮಸ್ಕಾರಗಳು.
- ಡಾ.ಎ.ಆರ್.ಗೋವಿಂದಸ್ವಾಮಿ, ರಂಗತಜ್ಞರು




