ಬೆಂಗಳೂರು: ಇಂದಿನಿಂದಲೇ ಜಾರಿಗೆ ಬರುವಂತೆ ಬಿಎಂಆರ್ಸಿಎಲ್ ಮೆಟ್ರೋ ಸಂಚಾರದ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಜೊತೆಗೆ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುವ ವೇಳೆ ಕೋವಿಡ್ 19 ನಿಬಂಧನೆಗಳನ್ನು ಪಾಲಿಸುವಂತೆ ಆದೇಶಿಸಿದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಮೆಟ್ರೋ ರೈಲುಗಳು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಸಂಚರಿಸಲಿವೆ. ನೂತನ ಅಧಿಸೂಚನೆ ಪ್ರಕಾರ ದಿನದ ಕೊನೆಯ ಮೆಟ್ರೋ ರೈಲುಗಳು ರಾತ್ರಿ 9:30ಕ್ಕೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಹಾಗೂ ಸಿಲ್ಕ್ ಇನ್ಸ್ಟಿಟ್ಯೂಟ್ ಟರ್ಮಿನಲ್ನಿಂದ ಹೊರಡಲಿವೆ. ಕೋವಿಡ್ 19 ಪ್ರಕರಣಗಳು ಏರುಗತಿ ತಲುಪಿದ ನಂತರ ಮೆಟ್ರೋ ರೈಲುಗಳು ಬೆಳಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಸಂಚರಿಸುತ್ತಿದ್ದವು.
ಇದೀಗ ವಾರದ ದಿನಗಳಲ್ಲಿ ಜನಸಂದಣಿ ಹೆಚ್ಚಿರುವ ಸಮಯದಲ್ಲಿ ಮೆಟ್ರೋ ರೈಲುಗಳು ನಡುವೆ 5 ನಿಮಿಷದ ಅಂತರದಲ್ಲಿ ಸಂಚರಿಸಲಿವೆ. ಜನದಟ್ಟಣೆ ಇಲ್ಲದ ಸಮಯದಲ್ಲಿ 10 ನಿಮಿಷಗಳ ಅಂತರದಲ್ಲಿ ನೇರಳೆ ಮಾರ್ಗದ ಬೈಯಪ್ಪನಹಳ್ಳಿ – ಮೈಸೂರು ರಸ್ತೆಯ ನಡುವೆ ಹಾಗೂ ಹಸಿರು ಮಾರ್ಗದ ಯಲಚೇನಹಳ್ಳಿ – ನಾಗಸಂದ್ರ ನಿಲ್ದಾಣಗಳ ನಡುವೆ ಮೆಟ್ರೋ ರೈಲುಗಳು ಸಂಚರಿಸಲಿವೆ.




