ಬೆಂಗಳೂರು: ರಾಜಕೀಯ ಮತ್ತು ಸಾಮಾಜಿಕ ಗಟ್ಟಿತನವನ್ನು ಮೈಗೂಡಿಸಿಕೊಂಡು ಸಾಂಸ್ಕೃತಿಕ ನಿಜ ಚಿಂತಕರಾಗಿ ಬೆಳೆದ ವ್ಯಕ್ತಿ ಎಂ.ಪಿ.ಪ್ರಕಾಶ್ ಎಂದು ಸಾಣೆಹಳ್ಳಿ ಶ್ರೀ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ರಂಗ ವಿಜಯ ಮತ್ತು ರಂಗ ಚಂದಿರ ಸಹಯೋಗದಲ್ಲಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ 81ನೇ ಹುಟ್ಟುಹಬ್ಬದ ಅಂಗವಾಗಿ ‘ಈಗ ಎಂ.ಪಿ.ಪ್ರಕಾಶ್ ನಮ್ಮ ಜೊತೆಯಲ್ಲಿ ಇರಬೇಕಿತ್ತು’ ಎಂಬ ಚಿಂತನೆ ಸಭೆಯನ್ನು ಆನ್ಲೈನ್ ಮೂಲಕ ಉದ್ಘಾಟಿಸಿ ಮಾತಾಡಿದ ಅವರು, ರಂಗ ಭೂಮಿಯ ಸಮಸ್ಯೆಗಳಿಗೆ ಬಹುಬೇಗ ಸ್ಪಂದಿಸಿ ಕಲಾವಿದರ ಕಷ್ಟಗಳಿಗೆ ಭಾಗಿಯಾಗಿ ಎಲೆಮರೆಯ ಕಾಯಿಯಂತಿದ್ದ ಅನೇಕ ಕಲಾವಿದರ ಬೆನ್ನುತಟ್ಟಿ ಧೈರ್ಯ ತುಂಬುತ್ತಿದ್ದ ಒಬ್ಬ ನಿಜವಾದ ಸಾಂಸ್ಕೃತಿಕ ಚಿಂತಕ ಎಂಪಿ ಪ್ರಕಾಶ್ ಎಂದರು.
ಅವರು ಈಗ ಇದ್ದಿದ್ದರೆ ಸಾಂಸ್ಕೃತಿಕ ಕ್ಷೇತ್ರ ಇನ್ನಷ್ಟು ಶ್ರೀಮಂತವಾಗಿ ಬೆಳೆಯುತ್ತಿತ್ತು. ರಾಜಕಾರಣ ಹಾಗೂ ಸಾಂಸ್ಕೃತಿಕ ನೆಲೆಗಟ್ಟನ್ನು ಹೊಂದಾಣಿಕೆ ಮಾಡಿಕೊಂಡು ಸಮಾಜದ ಬಗ್ಗೆ ಚಿಂತನೆ ಮಾಡಿ ಸದಾ ಜನರ ನಡುವೆ ಇದ್ದ ವ್ಯಕ್ತಿ ಎಂ ಪಿ ಪ್ರಕಾಶ್ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಎಂಪಿ ಪ್ರಕಾಶ್ ಅವರು ವೈವಿಧ್ಯಮಯ ವ್ಯಕ್ತಿಯಾಗಿದ್ದರು. ರಾಜಕಾರಣದೊಂದಿಗೆ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಕ್ಕೂ ಕಾಲಿಟ್ಟವರು, ಸಾಮಾನ್ಯ ಜನ ಮತ್ತು ಕಲಾವಿದರಿಗೆ ಬಹಳ ಬೇಗ ಹತ್ತಿರವಾಗುತ್ತಿದ್ದರು. ಮನುಷ್ಯನ ಬದುಕಿನ ಕಾಲಘಟ್ಟದಲ್ಲಿ ಇಂದು ಅವರು ಇರಬೇಕಿತ್ತು ಎಂದು ನೆನಪಿಸಿಕೊಳ್ಳುವ ಅನನ್ಯ ವ್ಯಕ್ತಿತ್ವ ಎಂಪಿ ಪ್ರಕಾಶ್ ರವರದ್ದು ಎಂದರು.
ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ ಎಸ್ ಮೂರ್ತಿ ಮಾತನಾಡಿ, ರಾಜಕಾರಣಿಗಳು ರಾಜಕೀಯದಲ್ಲಿ ಗೆಲ್ಲುತ್ತಾರೆ ಸೋಲುತ್ತಾರೆ. ಹಾಗೆಯೇ ಅತ್ಯುತ್ತಮ ಕೆಲಸ ಮಾಡಿದ ಎಂಪಿ ಪ್ರಕಾಶ್ ರಾಜಕಾರಣದಲ್ಲಿ ಸೋತಿರಬಹುದು. ಆದರೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರೆಂದೂ ಸೋಲಿಲ್ಲದ ಸರದಾರರಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದ ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಆರ್.ಸುದರ್ಶನ್, ಎಂ ಪಿ ಪ್ರಕಾಶ್ ಶಾಸಕರಾಗಿ ವಿವಿಧ ಶಾಖೆಗಳ ಮಂತ್ರಿಯಾಗಿ ಉಪಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಿದ್ದಾರೆ. ಅವರು ಬರಹಗಾರರಾಗಿ, ಕಲಾವಿದರಾಗಿ, ಕನಸುಗಾರರಾಗಿ, ಅನೇಕ ಸಾಧನೆಗಳನ್ನು ಮಾಡಿದ ಸಾಧಕರು ಎಂದರೆ ತಪ್ಪಾಗಲಾರದು. ಸಮಾಜಕ್ಕೆ ಇಂತಹ ವ್ಯಕ್ತಿಗಳ ಅವಶ್ಯಕತೆ ಇರುವುದರಿಂದ ಈಗಲೂ ಅವರು ಬದುಕಿರಬೇಕಿತ್ತು ಎನ್ನಿಸುತ್ತದೆ. ಸದನದಲ್ಲಿ ಮಾತನಾಡುವಾಗಲೂ ತಾರ್ಕಿಕ ನೆಲೆಗಟ್ಟು ಇರುತ್ತಿತ್ತು. ಸಂಕಷ್ಟ ಸಮಯದಲ್ಲಿ ಸಮರ್ಥವಾಗಿ ನಿರ್ವಹಿಸುವ ನಾಯಕರಾಗಿ ಎಂ ಪಿ ಪ್ರಕಾಶ್ ಕಾಣುತ್ತಾರೆ ಎಂದರು.
ಕಾರ್ಯಕ್ರಮದ ನಿರ್ವಹಣೆ ಹಾಗೂ ನಿರೂಪಣೆಯನ್ನು ಮಾಜಿ ನಾಟಕ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ್ ಜಿ ಕಪ್ಪಣ್ಣ ನಿರ್ವಹಿಸಿದರೆ, ಖ್ಯಾತ ಗಾಯಕ ಟಿ ಲಕ್ಷ್ಮೀನಾರಾಯಣ ರಂಗಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು. ಸ್ವಾಗತ ಭಾಷಣ GPO ಚಂದ್ರು ನಡೆಸಿಕೊಟ್ಟರೆ ವಂದನಾರ್ಪಣೆಯನ್ನು ಮಾಲೂರು ವಿಜಿ ನೆರವೇರಿಸಿದರು.




