ಬೆಂಗಳೂರು: ಕೋವಿಡ್ ಸಾಂಕ್ರಮಿಕ ರೋಗದಿಂದ ಬಡವರು, ಮಧ್ಯಮ ವರ್ಗದವರು ಸಂಕಷ್ಟದಲ್ಲಿ ಇದ್ದಾರೆ. ಅವರ ಸಂಕಷ್ಟಕ್ಕೆ ಕಾಂಗ್ರೆಸ್ ಪಕ್ಷ ನೆರವಾಗಲಿದೆ ಎಂದು ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು.
ರಾಜಾಜಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶಿವನಗರ ಅರಸು ರೆಸಿಡೆಸ್ಸಿ ಸಭಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ಪಕ್ಷ ಬಡವರ ಪರ ಕಾಳಜಿಯುಳ್ಳ ಪಕ್ಷ. ನಮ್ಮ ಆಡಳಿತದ ಅವಧಿಯಲ್ಲಿ ದೇಶ ಬಹಳಷ್ಟು ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತಂದು, ದೇಶದ ಅಭಿವೃದ್ದಿಗೆ ಮಹತ್ವದ ಕೊಡುಗೆ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ಮಾಜಿ ಮೇಯರ್ ಜಿ.ಪದ್ಮಾವತಿ, ಕೋವಿಡ್-19 ಮೊದಲನೇ ಹಾಗೂ ಎರಡನೇ ಅಲೆಯಿಂದ ಸಂಕಷ್ಟದಲ್ಲಿ ಇದ್ದ ಬಡವರು, ಕೂಲಿಕಾರ್ಮಿಕರು ಮತ್ತು ಮಕ್ಕಳಿಗೆ ಪ್ರತಿ ದಿನ ಆಹಾರ ಪ್ಯಾಕೇಟ್ ಮತ್ತು ಬಡ ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಗಿದೆ ಎಂದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್ ಗಳಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬದವರ ಮನೆಗಳಿಗೆ ಭೇಟಿ ನೀಡಿ, ಸಾಂತ್ವನ ಹೇಳಿ ಆಹಾರ ಕಿಟ್ ಗಳನ್ನು ನೀಡಲಾಗಿದೆ ಎಂದರು.
ಕೋವಿಡ್ ನಿಂದ ಮೃತಪಟ್ಟ ಸೋಂಕಿತರ ಕುಟುಂಬಗಳಿಂದ ಪರಿಹಾರಧನಕ್ಕೆ ಅರ್ಜಿಗಳನ್ನು ಸ್ವೀಕರಿಸಿ, ಜಿಲ್ಲಾಧಿಕಾರಿಗಳಿಗೆ ತಲುಪಿಸಲಾಗುತ್ತಿದೆ. ಈಗಾಗಲೇ ಕೋವಿಡ್-19ನಿಂದ ಮೃತಪಟ್ಟ 80 ಕುಟುಂಬದವರನ್ನು ಭೇಟಿ ಮಾಡಲಾಗಿದೆ. ಸೋಮವಾರದಿಂದ ವಿವಿಧ ವಾರ್ಡ್ ಗಳಿಗೆ ಭೇಟಿ ನೀಡಲಾಗುವುದು ಎಂದರು.
ಮಾಜಿ ಶಾಸಕ ಚಂದ್ರಶೇಖರ್, ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶೇಖರ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಮಂಜುಳ ವಿಜಯಕುಮಾರ್ ಮತ್ತು ವಿಜಯಕುಮಾರ್ ಹಾಗೂ ಬ್ಲಾಕ್ ಅಧ್ಯಕ್ಷ ನಾಗರಾಜ್, ಕಾಂಗ್ರೆಸ್ ಮುಖಂಡರಾದ ಟಿ.ಎನ್.ರಾಧಕೃಷ್ಣ, ರಘುವೀರ್ ಗೌಡ, ಮನೋಹರ್, ಜನಾರ್ಧನ್ ಮೊದಲಾದವರು ಹಾಜರಿದ್ದರು.




