ನಾನು ಮತ್ತು ಗೌರಿ ಮೇಡಂ – ಭಾಗ-೧ ಮೊದಲ ಮುಖಾಮುಖಿ…..
“ಓಹ್, ಒಳ್ಳೇ ಅವಕಾಶ ಅಲ್ಲವಾ ಸರ್… ಕಣ್ಮುಚ್ಚಿಕೊಂಡು ಒಪ್ಕೊಳೋದು ತಾನೆ?” ನನ್ನ ಹಳೇ ಆಫೀಸಿನ ಸಹೋದ್ಯೋಗಿಯೊಬ್ಬರು ಹಾಗೆ ಹೇಳಿದಾಗ, ನಾನಿನ್ನೂ ಆಳವಾದ ಗೊಂದಲದಲ್ಲಿದ್ದೆ. ಗೌರಿ ಲಂಕೇಶ್ ಅವರು ನಡೆಸುತ್ತಿದ್ದ ’ಗೈಡ್ ಮಾಸಪತ್ರಿಕೆಗೆ ಉಪಸಂಪಾದಕರು ಬೇಕಾಗಿದ್ದಾರೆ ಅನ್ನೋ ಜಾಹೀರಾತು ನೋಡಿ ನಾನೂ ಅರ್ಜಿ ಗುಜರಾಯಿಸಿದ್ದೆ. ಹೆಚ್ಚೇನು ನಿರೀಕ್ಷೆಗಳಿರಲಿಲ್ಲ. ಆದರೆ ಅವತ್ತೊಂದಿನ ಫೋನ್ ಬಂತು, “ಹಲೋ ಗಿರೀಶ್ ಅವ್ರ ಮಾತಾಡ್ತಾ ಇರೋದು? ನಾನು ಪಾರ್ವತೀಶ್ ಅಂತ ಗೈಡ್ ಪತ್ರಿಕೆಯ ಸಂಪಾದಕ. ನೀವು ಉಪಸಂಪಾದಕ ಪೋಸ್ಟಿಗೆ ಅರ್ಜಿ ಹಾಕಿದ್ರಲ್ವಾ, ನಿಮ್ಮ ಪ್ರೊಫೈಲ್ ನಮಗೆ ಓಕೆ ಆಗಿದೆ. ನೀವು ಇಂಟರ್‌ವ್ಯೂಗೆ ಬಂದು ಹೋಗ್ತೀರಾ?”.
ನಾನು ಈ ಮೊದಲು ಕೆಲಸ ಮಾಡುತ್ತಿದ್ದ ಉದ್ಯೋಗಸ್ಫೂರ್ತಿ ಪತ್ರಿಕೆಯನ್ನು ತೊರೆದು ಬರುವಂತಹ ಯಾವ ಕಿರಿಕಿರಿಯೂ ಅಲ್ಲಿರಲಿಲ್ಲ. ಒಳ್ಳೇ ಸಹೋದ್ಯೋಗಿಗಳು, ಅನುಕೂಲಕರ ವಾತಾವರಣ, ನನಗೆ ಪೂರಕವಾಗಿ ಸ್ಪಂದಿಸುತ್ತಿದ್ದ ಸಂಪಾದಕರು…. ಎಲ್ಲಾ ಇತ್ತಾದರೂ ಕಾರಣಾಂತರದಿಂದ ಕಚೇರಿ ದೂರದ ಪೀಣ್ಯಗೆ ಶಿಫ್ಟ್ ಆಯ್ತು. ನಾನಿದ್ದದ್ದು ಎಲೆಕ್ಟ್ರಾನ್ ಸಿಟಿಯ ದಿಕ್ಕಿನಲ್ಲಿರೋ ಬೊಮ್ಮನಹಳ್ಳಿಯಲ್ಲಿ. ಅಲ್ಲಿಂದ ಪೀಣ್ಯಕ್ಕೆ ಬೆಂಗಳೂರಿನ ಟ್ರಾಫಿಕ್ ನಡುವೆ ಏನಿಲ್ಲವೆಂದರು ಅಜಮಾಸು ಮೂರು ತಾಸಿನ ಪಯಣ. ಅದೂ ಬಿಎಂಟಿಸಿ ಬಸ್ಸಿನಲ್ಲಿ. ಹಾಗಾಗಿ ನನ್ನ ವಾಸಕ್ಕೆ ಸಮೀಪವಿದ್ದ ಗೈಡ್ ಪತ್ರಿಕೆಯ ಜಾಹೀರಾತು ನೋಡಿದಾಗ, ಒಂದು ಪ್ರಯತ್ನ ಮಾಡಿನೋಡೋಣ ಅಂತ ಅರ್ಜಿ ಹಾಕಿದ್ದೆ ಅಷ್ಟೆ. ಅತ್ತ ಕಡೆಯಿಂದ ಸಂದರ್ಶನಕ್ಕೆ ಬರುವಂತೆ ಫೋನ್ ಬಂದೇ ಬಿಟ್ಟಿತು. ಹೋಗುವುದೋ, ಬೇಡವೋ ಎಂಬ ತೊಳಲಾಟವನ್ನು ನನ್ನ ಸಹೋದ್ಯೋಗಿಯ ಮುಂದೆ ಆ ಹೇಳಿಕೊಂಡಾಗ ಅವರು ಮೇಲಿನಂತೆ ಪ್ರತಿಕ್ರಿಯಿಸಿದ್ದರು.
“ನಿಮ್ಮ ಮನೆಗೆ ಹತ್ರ ಆಗುತ್ತೆ ಅನ್ನೋದೊಂದೇ ಅಲ್ಲ ಸರ್, ಅಲ್ಲಿ ಹೋಗಿ ಸೇರಿಕೊಂಡ್ರೆ ನಾಳೆ ನಿಮಗೂ ಬೆಳಿಯೋಕ್ಕೆ ಅವಕಾಶ ಸಿಗಬಹುದು. ಹೋಗಿಬನ್ನಿ ಸಾರ್ ಅವರು ತಮ್ಮ ಅನಿಸಿಕೆಯ ಬೇರೆ ಆಯಾಮವನ್ನೂ ತೆರೆದಿಟ್ಟರು.
“ನೀವೇಳೋದೇನೊ ನಿಜ. ಆದ್ರೆ ನನ್ನ ಕಾಡ್ತಾ ಇರೋ ಪ್ರಶ್ನೆಯೇ ಬೇರೆ. ಅವರು ತೀರಾ ಎಡಪಂಥದ ಮಂದಿ. ಬುದ್ದಿಜೀವಿಗಳು ಅನ್ನೋ ಲೇಬಲ್‌ನವರು. ನಾನೊ ತುಸು ಬಲಪಂಥದ ಕಡೆಗೆ ಸೆಳೆವಿರೋನು. ಅಕಸ್ಮಾತ್ ನಾನೇನಾದ್ರೂ ಅಲ್ಲಿ ಕೆಲಸಕ್ಕೆ ಸೇರಿಕೊಂಡ್ರೆ ಈ ಭಿನ್ನಾಭಿಪ್ರಾಯವೇ ಸಂಘರ್ಷಕ್ಕೆ ಕಾರಣವಾಗಿ, ಕಿರಿಕಿರಿ ಅನ್ನಿಸಲು ಶುರು ಮಾಡಿದ್ರೆ ಏನು ಮಾಡೋದು?” ನನ್ನ ಗೊಂದಲದ ಅಸಲೀ ಕಾರಣ ಇದು.
ಇವತ್ತು ನನ್ನ ವ್ಯಕ್ತಿತ್ವ, ನಿಲುವು, ಆಶಯಗಳನ್ನು ಅರ್ಥ ಮಾಡಿಕೊಂಡವರಿಗೆ ಸೋಜಿಗವೆನ್ನಿಸಬಹುದು, ಆದರೆ ನಾನು ಆರಂಭದಲ್ಲಿ ಹೀಗಿರಲಿಲ್ಲ ಎನ್ನುವುದು ವಾಸ್ತವ. ಇನ್ನೂ ಆಶ್ಚರ್ಯವೆಂದರೆ ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್ ಅವರ ಸಾಹಿತ್ಯವನ್ನು ಓದಿಕೊಂಡು, ಅವರನ್ನು ಅಪಾರವಾಗಿ ಅಭಿಮಾನಿಸುತ್ತಿದ್ದ ಹೊರತಾಗಿಯೂ ನಾನು ಆಂತರ್ಯದಲ್ಲಿ ಬಲಪಂಥದ ಆಲೋಚನೆಗಳಿಂದ ತುಂಬಿಹೋಗಿದ್ದೆ. ಯಾಕೆ ಹಾಗೆ? ಈ ವಿಚಾರ ನನಗೆ ಇದುವರೆಗೆ ಅರ್ಥವಾಗಿಲ್ಲ. ಇದು ನನ್ನೊಬ್ಬನ ಸಮಸ್ಯೆ ಅಂತನ್ನಿಸುವುದಿಲ್ಲ, ನನ್ನಂತಹ ಗೊಂದಲದ ಮನಸ್ಸಿನವರನ್ನು ಸಾಕಷ್ಟು ಮಂದಿ ನೋಡಿದ್ದೇನೆ. ತಮ್ಮ ಬರಹಗಳ ಮೂಲಕ ಮತ್ತು ತಾವು ಬದುಕುವ ರೀತಿಯ ಮೂಲಕ ಜನಮುಖಿ, ಸೌಹಾರ್ದಯುತ, ಜಾತಿಮುಕ್ತ ಸಿದ್ಧಾಂತವನ್ನು ಪ್ರತಿಪಾದಿಸುವ ಸಾಹಿತಿಗಳನ್ನು ಇಷ್ಟಪಟ್ಟು ಓದುವ, ಅವರನ್ನು ಅಭಿಮಾನಿಸುವ ಬಹಳಷ್ಟು ಮಂದಿ, ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ನೆಲೆಕಂಡುಕೊಂಡಿದ್ದಾರೆ! ನಾನು ಇತ್ತೀಚೆಗೆ ಅನುವಾದಿತ ಕಥನಗಳಿಗಿರುವ ‘ಸ್ವಾತಂತ್ರ್ಯಪೂರ್ವ ಶಿಕಾರಿ ಕತೆಗಳು’ ಅನ್ನೋ ಪುಸ್ತಕ ಬರೆದಾಗ, ಸಾಕಷ್ಟು ಓದುಗರು ಮೆಚ್ಚಿ ಫೋನ್ ಮಾಡಿ ಅಭಿನಂದಿಸಿದರು. ಹಾಗೆ ಫೋನ್ ಮಾಡಿದವರ ಪೈಕಿ ನಾಲ್ಕೈದು ಮಂದಿ “ಸಾರ್, ನಿಮ್ಮ ಪುಸ್ತಕ ಓದಿ ನಮಗೆ ತೇಜಸ್ವಿಯವರ ಪುಸ್ತಕಗಳೆಲ್ಲ ನೆನಪಾದವು. ನಾವು ತೇಜಸ್ವಿಯವರ ಅಭಿಮಾನಿಗಳು. ಅವರ ಕಾಡಿನ ಕತೆಗಳು, ಆಂಡರ್ಸನ್‌ರ ಅನುವಾದಗಳನ್ನು ಓದಿದ್ದೇವೆ. ಬಹಳ ದಿನಗಳ ನಂತರ ಮತ್ತೆ ಅಂತಹ ಪುಸ್ತಕವನ್ನು ಓದಿದ ಹಾಗಾಯ್ತು. ಅಭಿನಂದನೆಗಳು” ಅನ್ನೋ ಸಾರಾಂಶದಲ್ಲಿ ಮಾತಾಡಿದ್ದರು. ಕುತೂಹಲಕ್ಕೆ ಅವರ ಹಿನ್ನೆಲೆಗಳನ್ನು ವಿಚಾರಿಸಿದಾಗ, ಅವರು ಮೂವತ್ತೈದರಿಂದ ನಲವತ್ತರ ಆಸುಪಾಸಿನವರು. ಅಂದರೆ ನನ್ನ ವಯೋಮಾನದವರು. ಅದರಲ್ಲು ಒಬ್ಬರಂತೂ ಡಿಗ್ರಿ ವ್ಯಾಸಂಗ ಮುಗಿಸಿ, ಮಲೆನಾಡಿನಲ್ಲಿ ಕೃಷಿಕನಾಗಿ ಬದುಕು ಕಟ್ಟಿಕೊಂಡವರು. ಫೇಸ್‌ಬುಕ್ಕಿನಲ್ಲಿ ಅವರೊಟ್ಟಿಗೆ ಸ್ನೇಹಿತನಾಗೋಣ ಅಂತ, ಅವರ ಪ್ರೊಫೈಲುಗಳಲ್ಲಿ ಇಣುಕಿದಾಗ, ಕಡು ಬಲಪಂಥದ ಪೋಸ್ಟುಗಳೇ ರಾರಾಜಿಸುತ್ತಿದ್ದವು. ನನಗೆ ಆಶ್ಚರ್ಯವಾಗಲಿಲ್ಲ. ಯಾಕೆಂದರೆ ನಾನು ಸಹಾ ಹೀಗೇ ಇದ್ದು ಬಂದವನು.
ಆದರೆ ಒಂದು ಪ್ರಶ್ನೆ ಮಾತ್ರ ನನ್ನನ್ನು ಕಾಡುತ್ತಲೇ ಇದೆ. ಹಾಗಾದರೆ ಒಬ್ಬ ಸಾಹಿತಿಯ ಸಾಹಿತ್ಯದ ಓದಿನಿಂದ ನಾವು ಏನನ್ನು ಸ್ವೀಕರಿಸುತ್ತಿದ್ದೇವೆ? ಏನನ್ನು ರೂಢಿಸಿಕೊಳ್ಳುತ್ತಿದ್ದೇವೆ? ಕೇವಲ ಓದಿನ ‘ಪುಳಕ’ಕ್ಕಷ್ಟೇ ಸಾಹಿತ್ಯ ಸೀಮಿತವಾಗುತ್ತಿದೆಯೇ? ಕುವೆಂಪು ಅವರಾಗಲಿ, ತೇಜಸ್ವಿ-ಲಂಕೇಶ್ ಅವರಾಗಲಿ, ತಮ್ಮ ಸೈದ್ಧಾಂತಿಕ ನಿಲುವುಗಳನ್ನು ತಮ್ಮ ಬರಹ-ಬದುಕುಗಳಲ್ಲಿ ತುಂಬಾ ತೆಳುವಾಗಿ, ಗೊಂದಲಮಯವಾಗಿ ಪ್ರತಿಪಾದಿಸಿದವರಲ್ಲ. ಹೇಳಬೇಕಾದ್ದನ್ನು ಸಾಹಿತ್ಯದ ಪರಿಧಿಯಲ್ಲಿ ನಿರ್ದಿಷ್ಟವಾಗಿ, ತೀಕ್ಷ್ಣವಾಗಿ, ನೇರವಾಗಿ ಹೇಳಿದವರು. ಆದರೂ ಅವರನ್ನು ‘ಓದಿದ್ದೇವೆ’ ಎಂದು ಹೇಳಿಕೊಳ್ಳುವ ಹಲವರು ಅವರು ಹೇಳಿದ್ದನ್ನು ಕೇಳಿಸಿಕೊಂಡಿರುವುದೇ ಇಲ್ಲ. ಲಂಕೇಶರಂತೂ ಸಾಹಿತ್ಯದ ಆಯಾಮವಲ್ಲದೆ, ಪತ್ರಿಕೋದ್ಯಮದ ಮೂಲಕವೂ ತುಂಬಾ ಸ್ಪಷ್ಟವಾಗಿ ನಿಲುವನ್ನು ಖಚಿತಪಡಿಸಿದವರು. ಆದರೆ ಅವರ ಪತ್ರಿಕೆಯ ಓದುಗರು ಒತ್ತಟ್ಟಿಗಿರಲಿ, ಅವರ ಜೊತೆ ಕೆಲಸ ಮಾಡಿದ, ಅವರು ಪ್ರೀತಿ-ಅಭಿಮಾನ-ಪ್ರೋತ್ಸಾಹವೆರೆದು ಬೆಳೆಸಿದ ಕೆಲವು ಪತ್ರಕರ್ತರೇ, ಲಂಕೇಶರ ನಂತರ ಸೈದ್ಧಾಂತಿಕವಾಗಿ ಪತನಗೊಂಡಿರುವ ಆಳವನ್ನು ನೋಡಿದಾಗ ನನ್ನ ಈ ಪ್ರಶ್ನೆ ಇನ್ನಷ್ಟು ಕಟುವಾಗಿ ಕಾಡುತ್ತದೆ. ಯಾಕೆ ಹೀಗೆ? ಉತ್ತರದ ಹುಡುಕಾಟದಲ್ಲಿದ್ದೇನೆ.
ಅವತ್ತು ಗೌರಿ ಲಂಕೇಶ್ ಅವರ ಕಚೇರಿಯಿಂದ ಫೋನ್ ಬರುವುದಕ್ಕು ಮೊದಲು ನಾನು ಕೂಡಾ ಹೀಗೆ ಅಡ್ಡಾದಿಡ್ಡಿಯಾಗಿದ್ದವನು. ಬೇರೆಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ನನ್ನ ಹಳೆಯ ಬರಹಗಳೇನಾದರು ಈಗ ಓದಿದರೆ ನಿಮಗೇನು, ನನಗೇ ಆಘಾತವಾಗುತ್ತೆ! ಮೂಲತಃ ಕ್ರೌರ್ಯ ಎನ್ನುವುದು ನನ್ನ ವ್ಯಕ್ತಿತ್ವದ ಧಾತುವಲ್ಲ; ಇವತ್ತಿಗೂ ಮತ್ತು ಅವತ್ತಿಗೂ ಸಹಾ. ಆದಾಗ್ಯೂ, ‘ನಂಜು’ ಎನ್ನುವುದು ಮಾತ್ರ ನನ್ನೊಳಗೆ ಅದೇಗೆ ಜಾಗ ಮಾಡಿಕೊಂಡಿತು? ಬಹುಶಃ ಈ ಪ್ರಶ್ನೆಗೆ ನಾವು ಸಮರ್ಪಕ ಉತ್ತರ ಕಂಡುಕೊಂಡಿದ್ದೇ ಆದಲ್ಲಿ, ಯುವಪೀಳಿಗೆಯ ಮನಸ್ಸು ಎಲ್ಲಿ ಲಯ ತಪ್ಪುತ್ತಿದೆ ಅನ್ನೋದು ಅರ್ಥವಾದೀತೇನೊ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೇ ಗೊತ್ತಿಲ್ಲದೆ ನನ್ನೊಳಗೆ ನಂಜು ಪ್ರವೇಶಿಸಿತ್ತು. ಎಂಥಾ ನಂಜು? ಗಾಂಧಿಯನ್ನು ವಿನಾಕಾರಣ ದ್ವೇಷಿಸುವ ನಂಜು! ನನ್ನಂತಹ ಪ್ರತಿಭಾವಂತರಿಗೆ ಅನ್ಯಾಯವಾಗಲು ಅಂಬೇಡ್ಕರರೇ ಕಾರಣ ಎನ್ನುವ ನಂಜು! ನಮ್ಮವರಲ್ಲದ ಈ ಸಾಬರು ನಮ್ಮ ನೆಮ್ಮದಿಗೆ ಅಡ್ಡಿಯಾಗಿದ್ದಾರೆ ಅನ್ನೋ ನಂಜು! ಮೀಸಲಾತಿಯ ಲಾಭ ಮತ್ತು ಅಟ್ರಾಸಿಟಿ ಕೇಸಿನ ಬಲದಿಂದ ಈ ದಲಿತರು ಹದ್ದುಮೀರಿ ಹೋಗಿದ್ದಾರೆ ಅನ್ನೋ ನಂಜು! ಈ ಹಾಳಾದ ಪ್ರಗತಿಪರರು, ಬುದ್ದಿಜೀವಿಗಳ ಹಾವಳಿಯಿಂದಾಗಿ ನಮ್ಮ ಸಂಸ್ಕೃತಿ, ಪರಂಪರೆ ನಶಿಸಿಹೋಗುತ್ತಿವೆ ಎಂಬ ನಂಜು! ಇಂಥಾ ನಂಜುಗಳ ಜೊತೆಗೆ ಒಂದಷ್ಟು ಭ್ರಮೆಗಳೂ ಮಿಳಿತಗೊಂಡಿದ್ದವು. ನಮ್ಮ ದೇಶದ ಸಕಲ ಅನಿಷ್ಟಗಳಿಗೆ ಮೂಲ ಕಾರಣ ಕಾಂಗ್ರೆಸ್ ಅನ್ನೋ ಓಲೈಕೆ ರಾಜಕಾರಣದ ಪಕ್ಷ ಅನ್ನೋ ಭ್ರಮೆ. ಆ ಒಂದು ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆದುಬಿಟ್ಟರೆ ರಾತ್ರೋರಾತ್ರಿ ನನ್ನ ದೇಶ ಬದಲಾಗಿಬಿಡುತ್ತೆ ಅನ್ನೋ ಭ್ರಮೆ. ನಿರುದ್ಯೋಗ, ಭ್ರಷ್ಟಾಚಾರ, ಬಡತನಗಳೆಲ್ಲ ಒಂದೇ ಗುಕ್ಕಿಗೆ ಗತ ಸೇರಿಬಿಡುತ್ತವೆ ಎಂಬ ಭ್ರಮೆ.
ಸಾಮಾನ್ಯವಾಗಿ ಬಲಪಂಥವನ್ನು ಪ್ರತಿಪಾದಿಸುವ ಆರ್.ಎಸ್.ಎಸ್.ನ ಶಾಖೆಗೆ ಹೋಗಿಬಂದವರಲ್ಲಿ ಇಂಥಾ ಮನೋಲಕ್ಷಣಗಳನ್ನು ಕಾಣಬಹುದು. ಆದರೆ ನಾನು ಜೀವಮಾನದಲ್ಲಿ ಒಂದು ದಿನವೂ ಶಾಖೆಯ ಸಹವಾಸ ಮಾಡಿದವನಲ್ಲ! ನಾವು ಸಣ್ಣವರಿದ್ದಾಗ ಆರೆಸ್ಸೆಸ್ಸ್‌ನ ವ್ಯಾಪ್ತಿಯೇನಿದ್ದರೂ ಶಹರಗಳಿಗಷ್ಟೇ ಸೀಮಿತವಾಗಿತ್ತು. ನಾನು ಹುಟ್ಟಿಬೆಳೆದದ್ದು ಒಂದು ಸಣ್ಣ ಹಳ್ಳಿಯಲ್ಲಿ. ಗ್ರಾಮಗಳಿಗಿನ್ನೂ ಬೈಠಕ್‌ಗಳು ಪ್ರವೇಶ ಪಡೆದಿರಲಿಲ್ಲ. ಆದರೂ ಒಬ್ಬ ಪರಿಪಕ್ವ ‘ಶಾಖಾ’ಪಟು ತುಂಬಿಕೊಳ್ಳಬಹುದಾದಂತಹ ಆಲೋಚನೆಗಳು, ಭ್ರಮೆಗಳು ಒಬ್ಬ ಸಾಧಾರಣ ಹಳ್ಳಿ ಹುಡುಗನ ಮನಸ್ಸನ್ನು ಪ್ರವೇಶಿಸಿದ್ದು ಎಲ್ಲಿಂದ? ಈಗ ತಣ್ಣಗೆ ಕೂತು, ನನ್ನ ಬಾಲ್ಯದ ಮೇಲೆ ಪ್ರಭಾವ ಬೀರಿದ್ದ ಎಲ್ಲರನ್ನೂ ವಿಮರ್ಶೆಗೆ ಒಡ್ಡಿದಾಗಲೂ ಸಹ ನೇರ ದೋಷಿಗಳಾಗಿ ಯಾರೂ ಕಾಣಿಸುತ್ತಿಲ್ಲ. ಯಾಕೆಂದರೆ ನಂಜಿನ ಬೇರುಗಳು ಗಾಳಿಯಲ್ಲಿ ಬೆರೆತುಹೋಗಿದ್ದವು. ನೀರಿನಲ್ಲಿ ಮಿಳಿತವಾಗಿದ್ದವು. ಅರಳೀಕಟ್ಟೆಯಲ್ಲಿದ್ದವು. ಚಹಾದಂಗಡಿಯ ಬೆಂಚಿನ ಮೇಲಿದ್ದವು. ಶಾಲೆಯ ಆವರಣದೊಳಗೂ ಇದ್ದವು. ಹದವಾಗಿದ್ದವು! ಹಿತವಾಗಿದ್ದವು!!
ಮುನ್ನೋಟ, ವಿಮರ್ಶೆ ಯಾವುದೂ ಇಲ್ಲದೆ ಏಕಾಏಕಿ ಹಳೆಯದನ್ನು ಧಿಕ್ಕರಿಸಿ, ಹೊಸದಕ್ಕೆ ಜೋತುಬೀಳುವುದೇ ‘ಏಳಿಗೆ’, ‘ಮುಂಚಲನೆ’ ಎಂದುಕೊಳ್ಳುವುದು ನಾವು ಸಾಮಾನ್ಯವಾಗಿ ಮಾಡುವ ತಪ್ಪು. ಹಳೆಯದನ್ನು ಧಿಕ್ಕರಿಸುತ್ತಿರುವ ನಮ್ಮ ನಿಲುವು ಎಷ್ಟರಮಟ್ಟಿಗೆ ಸಮರ್ಥನೀಯವಾದುದು ಮತ್ತು ಹೊಸದರಲ್ಲಿ ಇದಕ್ಕೆ ಏನೆಲ್ಲ ಪರಿಹಾರಗಳಿವೆ ಎಂದು ಯೋಚಿಸುವ ವ್ಯವಧಾನ ಯುವಮನಸ್ಸುಗಳಿಗೆ ಇರುವುದಿಲ್ಲ. ಹಾಗಾಗಿ ‘ಹೊಸದ’ರ ಹೆಸರಿನಲ್ಲಿ ತೀರಾತೀರಾ ‘ಹಳೆಯ’ ತುಕ್ಕು ಸರಕನ್ನೂ ಅವರಿಗೆ ಗಂಟುಹಾಕಬಹುದು. ನಾನು ಸಹಾ ಅಂತಹ ಸರಕಿಗೆ ಸರಕಾಗಿದ್ದವನು. ಹಾಗಾಗಿಯೇ ನಂಜು ಮತ್ತು ಭ್ರಮೆಗಳು ನನ್ನೊಳಗೆ ಎರಕ ಹೊಯ್ದುಕೊಂಡಿದ್ದವು ಅನ್ನಿಸುತ್ತೆ.
ನನ್ನಂತವನು ಗೌರಿ ಲಂಕೇಶರ ಜೊತೆಗೆ ಕೆಲಸ ಮಾಡಲು ಸಾಧ್ಯವೇ? ಆ ಸಹೋದ್ಯೋಗಿಗೆ ವಿವರಿಸಿ ಅರ್ಥ ಮಾಡಿಸಲು ಯತ್ನಿಸಿದೆ. ಒಂದಷ್ಟು ಚರ್ಚೆಯ ನಂತರ ‘ಸಿದ್ಧಾಂತ’ಕ್ಕಿಂತ ‘ಬದುಕೇ’ ಅನಿವಾರ್ಯ ಅನ್ನೋ ತೀರ್ಮಾನಕ್ಕೆ ಬಂದೆ. ಒಂದು ಸಲ ಸಂದರ್ಶನಕ್ಕೆ ಹೋಗಿಬರೋಣ, ಅನುಭವವಾದರೂ ಆಗುತ್ತೆ ಅಂದುಕೊಂಡೆ. ಅಷ್ಟರಲ್ಲಾಗಲೇ ಲಂಕೇಶ್ ಪತ್ರಿಕೆ ಇಬ್ಭಾಗವಾಗಿ, ಮೂಲ ಲಂಕೇಶ್ ಪತ್ರಿಕೆಯ ಒಡೆತನ ಇಂದ್ರಜಿತ್ ಅವರ ತೆಕ್ಕೆಗೆ ಹೋಗಿತ್ತು. ಹಾಗಾಗಿ ಗೌರಿಯವರು ತಮ್ಮದೇ ಹೆಸರಿನ ‘ಗೌರಿ ಲಂಕೇಶ್ ಪತ್ರಿಕೆ ನಡೆಸುತ್ತಿದ್ದರು. ಅದರಾಚೆಗೆ ನನಗೆ ಹೆಚ್ಚು ಗೊತ್ತಿರಲಿಲ್ಲ. ನಾನು ಅಭಿಮಾನಿಸುತ್ತಿದ್ದ ಲಂಕೇಶ್ ಅವರ ಮೂಲ ಪತ್ರಿಕೆ ಗೌರಿಯವರದ್ದಲ್ಲ ಎಂಬುದಷ್ಟೇ ನನಗೆ ತಿಳಿದಿತ್ತು.
ಕೊನೆಗೂ ಧೈರ್ಯ ಮಾಡಿ, ಬಸವನಗುಡಿಯ ಕಚೇರಿಯ ಮುಂದೆ ಬಂದುನಿಂತೆ. ‘ಜಾಣಜಾಣೆಯರ ಲಂಕೇಶ್ ಪತ್ರಿಕೆ’ ಎಂಬ ಬೋರ್ಡು ಇನ್ನೂ ತೂಗಾಡುತ್ತಿತ್ತು. ಗೌರಿಯವರ ಕಚೇರಿಗೆ ಬರೋದು ಬಿಟ್ಟು, ನಾನು ಇಂದ್ರಜಿತ್ ಅವರ ಮೂಲ ಲಂಕೇಶ್ ಪತ್ರಿಕೆ ಆಫೀಸಿಗೆ ಬಂದೆನಾ ಎಂಬ ಅನುಮಾನ ಕಾಡಿತು. ಫೋನ್ ಮಾಡಿ ಖಾತ್ರಿ ಪಡಿಸಿಕೊಂಡು, ಮೊದಲನೇ ಮಹಡಿಗೆ ಹೋಗಿ, ಬಲಭಾಗಕ್ಕಿದ್ದ ವಿಶಾಲ ಹಜಾರದೊಳಕ್ಕೆ ಇಣುಕಿ ನೋಡಿದೆ. ಸಿಗರೇಟು ಹೊಗೆಯ ವಾಸನೆ ಘಮ್ಮನೆ ಮೂಗಿಗೆ ಬಡಿಯಿತು.
ಮ್ಯಾನೇಜರ್ ರಾಜು ಅವರ ಟೇಬಲ್ಲಿನ ತುಂಬಾ ಇಸ್ಟೀಟು ಎಲೆಗಳು ಹರಡಿಕೊಂಡಿದ್ದವು. ನನಗೆ ಮುಖ ಮಾಡಿ ಕೂತಿದ್ದ ಅವರು ಮ್ಯಾನೇಜರ್ ಅನ್ನೋದು ಆಗಿನ್ನೂ ನನಗೆ ತಿಳಿದಿರಲಿಲ್ಲ. ಆದರೆ ನನಗೆ ಬೆನ್ನು ಮಾಡಿ ಕೂತಿದ್ದ ಗೌರಿ ಲಂಕೇಶರನ್ನು ಪತ್ತೆ ಮಾಡುವುದು ಕಷ್ಟವೇನೂ ಆಗಲಿಲ್ಲ. ಬೆರಳುಗಳ ನಡುವೆ ಎಲೆಗಳನ್ನು ಕದಲಾಡಿಸುತ್ತಾ, ಮತ್ತೊಂದು ಕೈಯಲ್ಲಿ ಸಿಗರೇಟೊಂದಕ್ಕೆ ದಹನಶಿಕ್ಷೆ ನೀಡುತ್ತಾ ಕೂತಿದ್ದ ಅವರನ್ನು ನಾನು ಮುಖಾಮುಖಿ ಭೇಟಿಯಾಗುತ್ತಿರೋದು ಅದೇ ಮೊದಲ ಸಲ. ಅವರ ಪಕ್ಕದಲ್ಲಿ ಆಸೀನರಾಗಿದ್ದ ಪಾರ್ವತೀಶ್ ಅವರೂ ಸಿಗರೇಟು ಮತ್ತು ಇಸ್ಪೀಟು ಎಲೆಗಳ ನಡುವೆ ಅಷ್ಟೇ ತಲ್ಲೀನರಾಗಿದ್ದರು.
ಮ್ಯಾನೇಜರ್ ರಾಜು ಅವರದು, ಎದುರಿನವರನ್ನು ಗಾಬರಿ ಬೀಳಿಸುವಂತಹ ಮ್ಯಾನರಿಸಮ್ಮು. ವಾಸ್ತವದಲ್ಲಿ ಅವರು ‘ಕೇಡಿ’ ವ್ಯಕ್ತಿಯಲ್ಲ. ಆದರೆ ಅವರ ದೇಹ, ಭಾಷೆ, ಚಹರೆ, ನೋಟ ಇವೆಲ್ಲವೂ ಅವರದಲ್ಲದ ‘ಕೇಡಿ’ ವ್ಯಕ್ತಿತ್ವವನ್ನು ಅವರಿಗೆ ಆರೋಪಿಸಿಬಿಡುತ್ತವೆ. ಸ್ವಲ್ಪ ಕಾಲ ಅವರ ಜೊತೆ ಒಡನಾಡಿದರೆ ನಾವೆಷ್ಟು ಮೋಸಹೋಗಿದ್ದೆವು ಅನ್ನೋದು ಮನದಟ್ಟಾಗುತ್ತೆ. ಅಷ್ಟು ಕಾಲ ಒಡನಾಡುವ ‘ಭಾಗ್ಯ ಇಲ್ಲದ ಬಹಳಷ್ಟು ಮಂದಿ, “ಗೌರಿ ಲಂಕೇಶರು ಆಫೀಸಿನಲ್ಲಿ ಸರಿಯಾದ ಬಾಡಿಗಾರ್ಡನ್ನೇ ಜೊತೆಗಿಟ್ಟುಕೊಂಡಿದ್ದಾರೆ” ಅಂದುಕೊಂಡು ಹೋಗುವ ಸಂಭವವೇ ಹೆಚ್ಚು. ಅವತ್ತು ನನಗೆ ಅನ್ನಿಸಿದ್ದು ಕೂಡಾ ಹಾಗೆಯೇ. ಬಾಗಿಲಿನಲ್ಲಿ ಇಣುಕಿದ ಆಗುಂತಕನ ಮುಖದತ್ತ ಕತ್ತೆತ್ತಿ ನೋಡಿದ ಅವರ ನೋಟದಲ್ಲಿ ಸೀಳಿ, ಸಿಗಿದು ಹಾಕಿಬಿಡುವ ವೇಗವಿತ್ತು!
ನಾನು ಅಕ್ಷರಶಃ ತಬ್ಬಿಬ್ಬಾಗಿ ಹೋಗಿದ್ದೆ. ಬಲಪಂಥದ ಬಹಳಷ್ಟು ಪೂರ್ವಗ್ರಹಗಳನ್ನು ತುಂಬಿಕೊಂಡು ಅಪನಂಬಿಕೆಯಲ್ಲೇ ಬಂದಿದ್ದ ನಾನು ‘ಹೆಂಗಸರು ಸಿಗರೇಟು ಸೇದೋದಾ? ಇಸ್ಪೀಟು ಆಡೋದಾ? ಅದೂ ಆಫೀಸಿನಲ್ಲಿ ಕೂತು?’ ಎಂಬಿತ್ಯಾದಿ ಪ್ರಶ್ನೆಗಳಲ್ಲೆ ಹೂತು ಹೋಗಿರುವ ಹೊತ್ತಿಗೆ ಸರಿಯಾಗಿ ಸರಕ್ಕನೆ ತಿವಿದ ರಾಜು ಅವರ ನೋಟದಿಂದ ಮತ್ತಷ್ಟು ಕಂಗಾಲಾದೆ. ನಾನೇನು ಪತ್ರಿಕಾ ಆಫೀಸಿಗೆ ಬಂದಿದ್ದೇನೊ ಅಥವಾ ಯಾವುದಾದರು ಹಳೇ ಜಮಾನದ ವಿಲನ್ನುಗಳ ಅಡ್ಡದಂತಹ ಸಿನಿಮಾ ಸೆಟ್ಟಿನೊಳಕ್ಕೆ ಕಾಲಿರಿಸಿದ್ದೇನೊ ಗೊತ್ತಾಗದೆ ತಡವರಿಸಿದೆ. ಆ ಕ್ಷಣಕ್ಕೆ ರಾಜು ಅವರು ನನ್ನ ಪಾಲಿಗೆ ಮಿಸ್ಟರ್ ಇಂಡಿಯಾದ ಮುಗ್ಯಾಂಬೋ ಥರವೇ ಕಾಣಿಸಿದರು.
“ಯಾರು? ಯಾರ್ ಬೇಕಿತ್ತು!?” ಕೊಂಚವೂ ಚೌಕಾಶಿಯಿಲ್ಲದೆ, ಸೌಜನ್ಯ ಎನ್ನುವುದನ್ನು ಸಿಟಿ ಬಸ್ಸಿನಲ್ಲೆಲ್ಲೋ ಉದುರಿಸಿಕೊಂಡು ಬಂದ ಸಂತ್ರಸ್ತನಂತೆ ರಾಜು ಅವರ ಗಡಸು ದನಿ ನನ್ನ ಮೇಲೆ ವಿಚಾರಣೆಗಿಳಿಯಿತು. Destiny demolished me; ಆ ಕ್ಷಣಕ್ಕೆ ನನಗೆ ಅನ್ನಿಸಿದ್ದು ಇಷ್ಟೇ! ಇಂತವರ ಸಹವಾಸ ಬೇಕಿತ್ತಾ ನನಗೆ? ಆದಷ್ಟು ಬೇಗ ಇಲ್ಲಿಂದ ಕಾಲ್ಕಿತ್ತು ಹೊರಟುಬಿಡೋಣ ಎಂದುಕೊಳ್ಳುವಷ್ಟರ ಹೊತ್ತಿಗೆ, ರಾಜು ಅವರ ದಿಢೀರ್ ಪ್ರಶ್ನಾವಳಿಯಿಂದ ನನಗಿಂತಲೂ ಹೆಚ್ಚು ಗಾಬರಿಬಿದ್ದ ಗೌರಿ ಮತ್ತು ಪಾರ್ವತೀಶ್ ಇಬ್ಬರೂ ಬಾಗಿಲಿನತ್ತ ತಿರುಗಿದರು.
“ಓಹ್, ಗಿರೀಶ್ ತಾನೇ, ಬನ್ನಿ, ಬನ್ನಿ….” ಪಾರ್ವತೀಶರು ಹಾಗೆ ನನ್ನನ್ನು ಸಂತೈಸದೆ ಹೋಗಿದ್ದರೆ ನಾನು ವಾಪಾಸು ಹೋಗುತ್ತಿದ್ದೆನೋ, ಅಲ್ಲೇ ಕುಸಿದು ಬೀಳುತ್ತಿದ್ದೆನೋ ಗೊತ್ತಿಲ್ಲ. ಅಂತೂ ಸಾವರಿಸಿಕೊಂಡು ಒಳಹೋದೆ. ತಮ್ಮ ಆಟವನ್ನು ಮುಂದುವರೆಸಿಕೊಂಡೇ, ನನಗೆ ಕೂರಲು ಕುರ್ಚಿಯೊಂದನ್ನು ಎಳೆದುಕೊಟ್ಟರು. ನನಗೂ ತುಸು ವಿಶ್ರಾಂತಿ ಬೇಕಿತ್ತು. ಸಾಧ್ಯವಾದಷ್ಟು ರಾಜು ಅವರತ್ತ ದೃಷ್ಟಿ ಹರಿಯದಂತೆ ಎಚ್ಚರಿಕೆ ವಹಿಸುತ್ತಾ ಮುದುಡಿ ಕುಳಿತೆ.
ನನ್ನ ಅರ್ಜಿ, ರೆಸ್ಯೂಮು, ಅನುಭವಗಳನ್ನೆಲ್ಲ ಪರಿಶೀಲಿಸಿದ್ದ ಪಾರ್ವತೀಶರು ಪುಟ್ಟದಾಗಿ ನನ್ನ ಬಗ್ಗೆ ಗೌರಿ ಲಂಕೇಶರಿಗೆ ಪರಿಚಯ ಮಾಡಿಕೊಟ್ಟರು. ನನ್ನತ್ತ ನೋಡಿ ಮುಗುಳ್ನಕ್ಕ ಗೌರಿಯವರು, ಛೇಡಿಸುವ ಮುಖಭಾವದೊಂದಿಗೆ “ಏನ್ರೀ, ಏನಪ್ಪಾ ಇವ್ರು ಆಫೀಸ್ನಲ್ಲೆ ಸಿಗರೇಟ್ ಸೇದ್ಕೊಂಡು, ಕಾರ್ಡ್ಸ್ ಆಡ್ತಾ ಕೂತಿದಾರೆ ಅಂತ ಶಾಕ್ ಆಗ್ತಾ ಇದೆಯಾ? ಹಿಂಗೆ ಕಣ್ರೀ ನಾವು, ಸ್ವಲ್ಪ ವಿಚಿತ್ರ ಜನ. ನಮ್ಮ ಸವಾಸ ಮಾಡೋಕೆ ಭಯ ಆಗ್ತಿದೆಯಾ?” ಎಂದು ತಮಾಷೆಯಾಗಿ ಕೇಳಿದರು. ವಾಸ್ತವದಲ್ಲಿ ನನಗೆ ಶಾಕ್ ಆಗಿದ್ದೂ ನಿಜ, ಇವರು ವಿಚಿತ್ರ ಜನ ಅನ್ನಿಸಿದ್ದೂ ನಿಜ, ಇವರ ಸವಾಸ ಬೇಡ ಕಣಪ್ಪಾ ಅಂತ ನನ್ನ ಒಳಮನಸ್ಸು ಒಂದಕ್ಷಣ ಆಚೆ ಬಂದು ನನಗೆ ಬುದ್ದಿಮಾತು ಹೇಳಿದ್ದೂ ನಿಜ. ಆದ್ರೆ ಅನ್ನಿಸಿದ್ದನ್ನೆಲ್ಲ ಹೇಳಕ್ಕಾಗುತ್ತಾ…. “ಹಂಗೇನೂ ಇಲ್ಲ ಮೇಡಂ” ಸಲೀಸಾಗಿ ಒಂದು ಸುಳ್ಳು ಹೇಳಿದೆ.
ಅಷ್ಟಕ್ಕೆ ನನ್ನ ಅವರ ಮೊದಲ ಭೇಟಿ ಮುಕ್ತಾಯವಾಯ್ತು. “ಮಿಕ್ಕಿದ್ದನ್ನೆಲ್ಲ ಪಾರ್ವತೀಶರು ನಿಮ್ಮ ಜೊತೆ ಮಾತಾಡ್ತಾರೆ. ಆಮೇಲೆ ಸಿಗೋಣ” ಅಂತ ಹೇಳಿ, ಎದ್ದು ತಮ್ಮ ಚೇಂಬರಿನೊಳಕ್ಕೆ ಹೊರಟುಹೋದರು. ಪಾರ್ವತೀಶರು ನನ್ನನ್ನು ತಮ್ಮ ಚೇಂಬರಿನೊಳಕ್ಕೆ ಕರೆದೊಯ್ದರು. ಮುಗ್ಯಾಂಬೋ ಅಡ್ಡೆಯಿಂದ ಹೊರಹೋದರೆ ಸಾಕು, ಉಸಿರಾಡಲು ಒಂದಷ್ಟು ತಣ್ಣನೇ ಆಕ್ಸಿಜನ್ ಸಿಗಬಹುದೇನೊ ಅಂತ ಕಾದು ಕೂತಿದ್ದ ನಾನು, ಪಾರ್ವತೀಶರು ಕರೆದಿದ್ದೇ ತಡ ಅವರ ಹಿಂದೆ ಹೆಜ್ಜೆ ಹಾಕಿ, ಅವರ ಕ್ಯಾಬಿನ್ ಸೇರಿಕೊಂಡೆ. ಕೊಂಚ ರಿಲ್ಯಾಕ್ಸ್ ಅನ್ನಿಸಿತು.
ನಾನು ಕೂತಿದ್ದ ಜಾಗದಿಂದ ತುಸು ಹಿಂದಕ್ಕೆ ಬಾಗಿ ನೋಡಿದೆ. ಗೌರಿ ಮೇಡಂ ಅವರ ರೂಮು ಕಾಣಿಸಿತು. ತಮ್ಮ ಕುರ್ಚಿಯಲ್ಲಿ ಕೂತು, ಕಂಪ್ಯೂಟರ್‌ನಲ್ಲಿ ಅದೇನನ್ನೋ ಹುಡುಕಾಡುತ್ತಿದ್ದರು. ಅವರ ಪಕ್ಕದಲ್ಲಿ ಇನ್ನೊಂದು ಕುರ್ಚಿ ಖಾಲಿಯಿತ್ತು. ಅದು ಅತಿಥಿಗಳಿಗಾಗಿ ಇರಿಸಲಾದ ಕುರ್ಚಿಯಂತೆ ಇರಲಿಲ್ಲ. ಮತ್ತೊಬ್ಬ ’ಬಾಸ್ ಬಂದು ಕೂರುವ ಕುರ್ಚಿಯಂತಿತ್ತು. ಹಾಗಾದರೆ ಈ ಆಫೀಸಿಗೆ ಇನ್ನೂ ಒಬ್ಬರು ಬಾಸ್ ಇದ್ದಾರಾ? ಹೆಚ್ಚು ತಲೆ ಕೆಡಿಸಿಕೊಳ್ಳದೆ ಪಾರ್ವತೀಶರ ಜೊತೆ ನನ್ನ ವ್ಯವಹಾರದ ಮಾತುಕತೆ ಮುಗಿಸಿಕೊಂಡು ಹೊರಬಂದೆ.
ಆಮೇಲೆ ನನ್ನ ಹಳೇ ಆಫೀಸಿನ ಹಿರಿಯ ಸಹೋದ್ಯೋಗಿಯೊಬ್ಬರಿಂದ ಗೊತ್ತಾದದ್ದೇನೆಂದರೆ, ಅದು ನಾನು ಅತಿಯಾಗಿ ಅಭಿಮಾನಿಸುತ್ತಿದ್ದ ಲಂಕೇಶರು ಕೂರುತ್ತಿದ್ದ ಕುರ್ಚಿಯೆಂಬುದು. ತಮ್ಮ ತಂದೆಯ ನೆನಪಿಗಾಗಿ ಅದನ್ನು ಅವರು ಕೊನೇವರೆಗೂ ತಮ್ಮ ಪಕ್ಕ ಖಾಲಿ ಉಳಿಸಿಕೊಂಡಿದ್ದರು. ‘ಲಂಕೇಶ್ ಪತ್ರಿಕೆ’ಯ ಟೈಟಲ್, ಇಂದ್ರಜಿತ್ ಅವರ ಪಾಲಿಗೆ ಹೋದದ್ದು ಬಿಟ್ಟರೆ, ಲಂಕೇಶರು ಬದುಕಿದ್ದ, ಓಡಾಡಿದ್ದ, ಸರ್ಕಾರಗಳನ್ನೇ ನಡುಗಿಸಿದ್ದ ಆಫೀಸಿನ ಕಟ್ಟಡ ಗೌರಿಯವರ ಬಳಿಯೇ ಉಳಿದಿತ್ತು. ಈಗ ನಾನು ಹೋಗಿ ಬಂದದ್ದು, ಅದೇ ಆಫೀಸಿಗೆ ಎಂಬುದು ಗೊತ್ತಾದ ಮೇಲೆ ನನಗಾದ ಥ್ರಿಲ್ಲು ಅಷ್ಟಿಷ್ಟಲ್ಲ. ಲಂಕೇಶರು ಕೂರುತ್ತಿದ್ದ ಆ ಖಾಲಿ ಕುರ್ಚಿ ನನ್ನನ್ನು ಕೈಬೀಸಿದಂತಾಯಿತು. ನನ್ನೆಲ್ಲ ಗೊಂದಲಗಳ ನಡುವೆಯೂ, ನಿರೀಕ್ಷೆಯ ಮಟ್ಟದ ಸಂಬಳದೊಂದಿಗೆ ಕೆಲಸ ಸಿಗುವುದೇ ಆದರೆ, ಕೆಲಸಕ್ಕೆ ಸೇರಿಬಿಡೋಣ, ಹೇಗೂ ನಾನು ಕೆಲಸ ಮಾಡಬೇಕಿರೋದು ಗೈಡ್‌ಗೆ ತಾನೆ, ಅಲ್ಲಿ ಸಿದ್ದಾಂತಕ್ಕೇನು ಬದನೆಕಾಯಿ ಕ್ಯಾಮೆ! ಲಂಕೇಶರು ಓಡಾಡಿದ ಈ ಕರ್ಮಭೂಮಿಯಲ್ಲಿ ನಾನೂ ಒಂದಷ್ಟು ಕೆಲಸ ಮಾಡಿದ ತೃಪ್ತಿಯಾದರೂ ಸಿಗುತ್ತೆ ಎಂಬ ತೀರ್ಮಾನಕ್ಕೆ ಬಂದೆ. ಆದರೆ ನನಗಾಗ ದೊಡ್ಡ ಅಡ್ಡಿಯಾಗಿ ಕಂಡದ್ದು ಮುಗ್ಯಾಂಬೋ ಮಾತ್ರ!!
- ಗಿರೀಶ್ ತಾಳಿಕಟ್ಟೆ




