ಮಂಗಳೂರು: ಉತ್ತರಪ್ರದೇಶ ಲಖಿಂಪುರ್ ಬೇರಿ ಜಿಲ್ಲೆಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರ ಸಚಿವರ ಬೆಂಗಾವಲು ವಾಹನ ಹರಿಸಿ 4 ರೈತರ ಹತ್ಯೆ ಮಾಡಿರುವುದನ್ನು ಖಂಡಿಸಿ, ವಿವಿಧ ರೈತ ಕಾರ್ಮಿಕ ದಲಿತ ಸಂಘಟನೆಗಳ ಜಂಟಿ ನೇತ್ರತ್ವದಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯ ನಾಯಕ ರವಿಕಿರಣ್ ಪೂನಚ, ರೈತ ವಿರೋಧಿ ಕೃಷಿ ಕಾಯಿದೆಗಳ ವಿರುದ್ದ ಕಳೆದ 10 ತಿಂಗಳಿನಿಂದ ದೇಶದ ರೈತರು ಧೀರ ಹೋರಾಟದಲ್ಲಿ ತೊಡಗಿದ್ದರೂ ಕನಿಷ್ಠ ರೈತರ ಅಹವಾಲನ್ನು ಆಲಿಸಲು ಸಿದ್ದವಿಲ್ಲದ ನರೇಂದ್ರ ಮೋದಿ ಸರಕಾರ ರೈತ ಹೋರಾಟವನ್ನು ಅಪಹಾಸ್ಯ ಮಾಡುತ್ತಿದೆ ಎಂದರು.
ಹೋರಾಟದ ವಿರುದ್ಧ ಇಲ್ಲಸಲ್ಲದ ಅಪಪ್ರಚಾರವನ್ನು ಮಾಡುತ್ತಿದೆ. ಮಾತ್ರವಲ್ಲದೆ ಹೋರಾಟದ ಹಾದಿಯನ್ನು ತಪ್ಪಿಸಲು ಹಿಂಸೆಗೆ ಪ್ರಚೋದಿಸುವ ದುರುದ್ದೇಶದಿಂದಲೇ ಕೇಂದ್ರ ಸಚಿವರ ಬೆಂಗಾವಲು ವಾಹನ ರೈತರ ಮೇಲೆಯೇ ಹರಿದು ರೈತರನ್ನು ಹತ್ಯೆ ನಡೆಸಿರುವ ಫ್ಯಾಸಿಸ್ಟ್ ಮೋದಿ ಸರಕಾರ ಹಾಗೂ ಗೂಂಡಾ ರಾಜ್ಯವಾದ ಯೋಗಿ ಸರಕಾರಗಳ ಅಮಾನವೀಯ ಕೃತ್ಯವನ್ನು ದೇಶದ ಜನತೆ ಒಂದಾಗಿ ಖಂಡಿಸಲೇಬೇಕಾಗಿದೆ ಎಂದು ಕರೆ ನೀಡಿದರು.
CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಸ್ವಾತಂತ್ರ್ಯ ಚಳುವಳಿಯ ಬಳಿಕ ದೀರ್ಘಕಾಲದ ಐತಿಹಾಸಿಕ ಹೋರಾಟವಾಗಿ ಹೊರಹೊಮ್ಮಿದ ರೈತರ ಹೋರಾಟ ದೇಶ ಉಳಿಸುವ ದೇಶಪ್ರೇಮಿ ಹೋರಾಟವಾಗಿ ಪರಿವರ್ತನೆಗೊಂಡಿದೆ. ಇಂತಹ ರೈತರ ಹೋರಾಟವನ್ನು ವಿರೋಧಿಸುವ, ಅಪಹಾಸ್ಯ ಮಾಡುವ, ವಿನಾ ಕಾರಣ ಅಪಪ್ರಚಾರ ಮಾಡುವವರು ನಿಜಕ್ಕೂ ದೇಶದ್ರೋಹಿಗಳು. ಬದಲಾಗಿ ರೈತ ವಿರೋಧಿಯಾದ ಕೃಷಿ ಕಾಯಿದೆಗಳನ್ನು ವಿರೋಧಿಸುವವರು ದೇಶದ್ರೋಹಿಗಳೆಂದು ಜರಿಯುವ ಪ್ರಧಾನಿಗಳ ಹೇಳಿಕೆ ತೀರಾ ಖಂಡನೀಯ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ರೈತ ಸಂಘಟನೆಗಳ ಮುಖಂಡ ಕೃಷ್ಣಪ್ಪ ಸಾಲ್ಯಾನ್, ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್, ರೆನ್ನಿ ಡಿಸೋಜ ಮಾತನಾಡಿದರು. ರೈತರ ಹತ್ಯೆಗೆ ಕಾರಣವಾದ ಕೇಂದ್ರದ ನರೇಂದ್ರ ಮೋದಿ ಸರಕಾರ ಹಾಗೂ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರಗಳ ರೈತ ವಿರೋಧಿ ನಡೆಯನ್ನು ಪ್ರಬಲವಾಗಿ ಖಂಡಿಸಿದರು.
ಈ ಹೋರಾಟದಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರಾದ ರಾಮಣ್ಣ ವಿಟ್ಲ, ವಾಸುದೇವ ಉಚ್ಚಿಲ್, ಶೇಖರ್ ಕುತ್ತಾರ್, ಶಾಹುಲ್ ಹಮೀದ್, ಶಬೀರ್ ಅಹಮ್ಮದ್, ಜಾತ್ಯತೀತ ಜನತಾದಳದ ಜಿಲ್ಲಾ ನಾಯಕ ಸುಮತಿ ಎಸ್ ಹೆಗ್ಢೆ, ಅಲ್ತಾಪ್ ತುಂಬೆ, CITU ಜಿಲ್ಲಾ ನಾಯಕ ಯೋಗೀಶ್ ಜಪ್ಪಿನಮೊಗರು, DYFI ನಾಯಕರಾದ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ನಿತಿನ್ ಬಂಗೇರ, ನಿತಿನ್ ಕುತ್ತಾರ್, ಸಾಮಾಜಿಕ ಚಿಂತಕರಾದ ಪ್ರಮೀಳಾ ದೇವಾಡಿಗ ಮುಂತಾದವರು ಭಾಗವಹಿಸಿದ್ದರು.




