ಸುರಪುರ: ತಾಲೂಕಿನ ಮಾಲಗತ್ತಿ ಗ್ರಾಪಂ ಎರಡನೇ ಅವಧಿಗೆ ಶುಕ್ರವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ತಿಪ್ಪನಟಗಿಯ ಕಾಂಗ್ರೆಸ್ ನ ಮುದಿನಂದಪ್ಪ ಪೂಜಾರಿ ಅಧ್ಯಕ್ಷರಾಗಿ, ಬಿಜೆಪಿಯ ಲಕ್ಷ್ಮೀಬಾಯಿ ನಿಂಗಣ್ಣ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಿವಕುಮಾರ ಘೋಷಿಸಿದರು.
ಗ್ರಾಮ ಪಂಚಾಯಿತಿಯ 17 ಸದಸ್ಯ ಬಲದ ಪೈಕಿ 11 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ಪರಿಶಿಷ್ಟ ಪಂಗಡಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ಘೋಷಿಸಿದರು.
ಇದೇ ವೇಳೆ ಮಾತನಾಡಿದ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮುದಿನಂದಪ್ಪ ಪೂಜಾರಿ, ನನ್ನನ್ನು ಆಯ್ಕೆ ಮಾಡಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಅನುಷ್ಠಾನವಾಗಬೇಕಿದೆ. ಕನಿಷ್ಠ ಸೌಲಭ್ಯಗಳಾದ ಸ್ವಚ್ಛತೆ, ನೀರು, ಬೀದಿದೀಪ, ಮನೆ ಸೇರಿದಂತೆ ನರೇಗಾದಲ್ಲಿ ಹೆಚ್ಚಿನ ಉದ್ಯೋಗ ಕಲ್ಪಿಸಲು ಕ್ರಮ ವಹಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶರಣಗೌಡ ಹಚ್ಚಡ, ಸಣ್ಣಕ್ಕೆಪ್ಪ ಸಾಹುಕಾರ, ಮಲ್ಲಣ್ಣ ಸಾಹುಕಾರ ಗೌಡಗೇರಾ, ಶಾಂತಗೌಡ ಮೇಟಿ, ಪರಶುರಾಮ ಬೇಟೆಗಾರ, ಭೀಮಣ್ಣ ದೊರೆ, ಆರ್.ಎಸ್ ಮಾಲಗತ್ತಿ, ನಿಂಗಣ್ಣ ಸಾಹುಕಾರ, ಭೀಮಣ್ಣ ಪೂಜಾರಿ ತಿಪ್ಪನಟಗಿ, ಭೀಮಣ್ಣ ಚೆನ್ನೂರ, ಯಲ್ಲಪ್ಪ ಆಂಜನೆಯ ಕ್ಯಾಂಪ್, ಪಿಡಿಓ ಪುತ್ರಪ್ಪಗೌಡ, ಬಿಲ್ ಕಲೆಕ್ಟರ್ ಗೊಲ್ಲಾಳಪ್ಪ ದೊರಿ ಸೇರಿದಂತೆ ಹಲವರು ಭಾಗವಹಿಸಿದ್ದರು.



