ರಮೇಶ್ ಬಾಬು ಪತ್ರಕ್ಕೆ ಸಿಎಂ ಸ್ಪಂದನೆ
ವಂಚಿತರಿಗೆ ಹೊಸ ಆಶಾಭಾವನೆ
ಬೆಂಗಳೂರು: ಕರ್ನಾಟಕ ಅಂಚೆ ಮತ್ತು ಟೆಲಿಕಾಂ ಉದ್ಯೋಗಿಗಳ ಗೃಹ ನಿರ್ಮಾಣ ಸಹಕಾರ ಸಂಘ ತನ್ನ ಸದಸ್ಯರಿಂದ ಹಣ ಸಂಗ್ರಹಿಸಿ ದುರುಪಯೋಗಪಡಿಸಿಕೊಂಡ ಅಕ್ರಮದ ಕುರಿತು ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಲವು ಗೃಹ ನಿರ್ಮಾಣ ಸಹಕಾರ ಸಂಘಗಳು ಸದಸ್ಯರಿಗೆ ನಿವೇಶನ ಹಂಚಿಕೆ ಮಾಡದೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲ್ಗೊಂಡು ನಿರಂತರ ಅಕ್ರಮಗಳನ್ನು ಎಸಗುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಆರೋಪಿಸಿದ್ದರು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ರಮೇಶ್ ಬಾಬು ಅವರು, ಕರ್ನಾಟಕ ಅಂಚೆ ಮತ್ತು ಟೆಲಿಕಾಂ ಉದ್ಯೋಗಿಗಳ ಗೃಹ ನಿರ್ಮಾಣ ಸಹಕಾರ ಸಂಘದಲ್ಲಾದ ಅಕ್ರಮದ ಕುರಿತು ಧ್ವನಿ ಎತ್ತಿದ್ದರು. ಹಿಂದೆ ಗೃಹ ನಿರ್ಮಾಣ ಸಹಕಾರ ಸಂಘಗಳ ಅವ್ಯವಹಾರದ ಸಂಬಂಧ ಹಿರಿಯ ಐಎಎಸ್ ಅಧಿಕಾರಿ, ಜಿ.ವಿ.ಕೆ.ರಾವ್ ಸರ್ಕಾರಕ್ಕೆ ವರದಿ ನೀಡಿದ್ದರು. ಹಲವಾರು ಗೃಹ ನಿರ್ಮಾಣ ಸಹಕಾರ ಸಂಘಗಳು ದೊಡ್ಡ ಮಟ್ಟದ ಅಕ್ರಮದಲ್ಲಿ ಶಾಮೀಲಾಗಿವೆ. ಹೀಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ರಮೇಶ್ ಬಾಬು ಜೂನ್ 17ರಂದು ಮನವಿ ಮಾಡಿಕೊಂಡಿದ್ದರು.
ಡೆಕನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ವರದಿಯಾಗಿರುವ ಕರ್ನಾಟಕ ಅಂಚೆ ಮತ್ತು ಟೆಲಿಕಾಂ ಉದ್ಯೋಗಿಗಳ ಗೃಹ ನಿರ್ಮಾಣ ಸಹಕಾರ ಸಂಘ, 316 ಕೋಟಿ ರೂಪಾಯಿಗಳ ಹಗರಣದಲ್ಲಿ ಭಾಗಿ ಆಗಿರುವ ಕುರಿತು ಮುಖಪುಟದಲ್ಲಿ ವರದಿಯನ್ನು ರಮೇಶ್ ಬಾಬು ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಸಹಕಾರ ಸಂಘವು ಸುಮಾರು 3,391 ಸದಸ್ಯರಿಂದ ಠೇವಣಿ ಸಂಗ್ರಹಿಸಿದ್ದು, ನಿಗದಿತ ಸಮಯದಲ್ಲಿ ಹಾಗೂ ನಿವೇಶನದ ದರವನ್ನು ಪಾವತಿ ಮಾಡಿದ ಸದಸ್ಯರಿಗೂ ನಿವೇಶನ ನೀಡದೆ ವಂಚನೆ ಎಸಗಲಾಗಿದೆ. ಸಂಘದ ಆಡಳಿತ ಮಂಡಳಿಯು ಖಾಸಗಿ ಅಭಿವೃದ್ಧಿದಾರರೊಂದಿಗೆ ಶಾಮೀಲಾಗಿ, ಕೋಟ್ಯಾಂತರ ರೂಪಾಯಿ ಹಣವನ್ನು ಕಾನೂನುಬಾಹಿರವಾಗಿ ವೆಚ್ಚ ಮಾಡಿ ಸದಸ್ಯರಿಗೆ ನಿವೇಶನ ನೀಡದೆ ವಂಚಿಸಿತ್ತು ಎಂದು ಪತ್ರದಲ್ಲಿ ಹೇಳಿದ್ದರು.
ಅಧಿಕಾರಿಗಳು ಈ ಸಹಕಾರ ಸಂಘದ ವಿರುದ್ಧ ತನಿಖೆ ಮಾಡಿದ್ದರೂ, ಸೂಕ್ತ ಕ್ರಮ ಕೈಗೊಂಡಿಲ್ಲ ಮತ್ತು ವಂಚನೆಗೆ ಒಳಗಾದ ಸದಸ್ಯರಿಗೆ ನಿವೇಶನ ನೀಡಿಲ್ಲ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಈ ಗೃಹ ನಿರ್ಮಾಣ ಸಹಕಾರ ಸಂಘದ ಅಕ್ರಮಗಳ ತನಿಖೆ ಮಾಡಿ ಅಲ್ಲಿನ ಸದಸ್ಯರಿಗೆ ನ್ಯಾಯ ಒದಗಿಸಬೇಕಾಗಿ ರಮೇಶ್ ಪತ್ರದಲ್ಲಿ ಒತ್ತಾಯಿಸಿದ್ದರು.
ತನಿಖೆಗೆ ಸಿಎಂ ಆದೇಶ: ರಮೇಶ್ ಬಾಬು ಅವರ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸಿದ್ದರಾಮಯ್ಯ ಕೂಡಲೇ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.




