ಗ್ರೇಟರ್ ಅಂತಲಾದ್ರೂ ಅನ್ನಿ ಸೂಪರ್ ಅಂತಲಾದ್ರೂ ಅನ್ನಿ… ಬೆಂಗಳೂರು ಮೈಂಟೆನೆನ್ಸ್ ಗೆ ಒತ್ತು ಕೊಡಿ
“ಬಿ.ಬಿ.ಎಂ.ಪಿ ಗ್ರೇಟರ್ ಬೆಂಗಳೂರ್ ಆಯಿತು… ರಾಮನಗರ ದಕ್ಷಿಣ ಬೆಂಗಳೂರು ಆಯಿತಲೇ ಪರಾಕ್…”
ಹಿಂದೆಲ್ಲಾ ಹುಟ್ಟೆಸ್ರು ಒಂದು. ಕಟ್ಟಿದ್ರೆಸು ಒಂದು. ಕರೆಯೋ ಹೆಸ್ರು ಒಂದು ಇರ್ತಿತ್ತು. ಈಗ ಹುಟ್ಟಿದ್ದು, ಕಟ್ಟಿದ್ದು, ಕರೆದಿದ್ದು ಎಲ್ಲಾ ಬಿಟ್ಟು ಸರ್ಕಾರ ಹೆಸರಿಡೋ ಆದೇಸ ಮಾಡ್ತೈತಿ !
ಇದ್ರಿಂದ ಅಂತಿಂಥಾ ಬದಲಾವಣೆ ಆಗಲ್ಲಾ ನೋಡ್ಕಳಿ… ಬೇಕಾದ್ರೆ ಜಾವದಲ್ಲಿ ಬರೋ ಬುಡುಬುಡುಕೆಯವನನ್ನ ಕೇಳಿ…
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಒಂದೊಳ್ಳೆ ಮಳೆಯನ್ನೂ ತಡೆದುಕೊಳ್ಳದ ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಅಂದಾಕ್ಷಣ ಫ್ಲಡ್ ನಿಲ್ಲಬಹುದೇ ?
ನಿಜವಾಗ್ಲೂ “ಗ್ರೇಟರ್” ಹೆಸರಿಗೆ ತಕ್ಕುದಾಗಿ ಯೋಚನೆ ಮಾಡುವ ಶಕ್ತಿ, ಯೋಗ್ಯತೆ, ಆತ್ಮಸಾಕ್ಷಿ ನಿಮಗಿದ್ದರೆ, ಮಳೆಗಾಲದಲ್ಲಿ ಫ್ಲಡ್ ಆಗುತ್ತಿರುವ ಎಲ್ಲಾ ಏರಿಯಾಗಳ ಪಟ್ಟಿ ಮಾಡಿ. ಈ ಹಿಂದೆ ಆ ಪ್ರದೇಶಗಳಲ್ಲಿ ಏನಿತ್ತು ಎಂಬುದನ್ನು ಅರಿಯಿರಿ. ಬಿದ್ದ ಮಳೆನೀರು ಹರಿದು ಹೋಗುವ ದೊಡ್ಡ ಕಾಲುವೆ, ಮಧ್ಯಮ ಹಾಗೂ ಸಣ್ಣ ಕಾಲುವೆಗಳು ಏನಾದವು ಎಂಬುದರ ಸ್ಟಾಕ್ ತೆಗೆದುಕೊಳ್ಳಿ… ಆಗ ನಿಮಗೇ ಅರಿವಿಗೆ ಬರುತ್ತದೆ. ಬಿದ್ದ ಮಳೆನೀರು ನೀವು ನಿರ್ಮಿಸಿರುವ ಬಡಾವಣೆಗಳಿಗೆ ನುಗ್ಗುತ್ತಿಲ್ಲ, ಬದಲಿಗೆ ಅದು ತನ್ನ ಎಂದಿನ ದಾರಿಯಲ್ಲಿಯೇ ಹರಿಯುತ್ತಿದೆ ಮತ್ತು ತನ್ನ ಜಾಗದಲ್ಲಿ ತಾನು ಬಂದು ನಿಲ್ಲುತ್ತಿದೆ…!
ಆಯ್ತಪ್ಪ. ಈಗ ಬಡಾವಣೆಗಳು ನಿರ್ಮಾಣ ಮಾಡಿ ಆಯ್ತು…. ಮತ್ತೆ ಕೆರೆ ಮಾಡೋಕಾಗುತ್ತಾ …!? ಆಗಲ್ಲ ಅಂದ ಮೇಲೆ ಮಳೆ ನೀರು ಸುರಿದು, ಬಸಿದು, ಅಳಿದುಳಿದ ಕೆರೆ, ಕಟ್ಟೆ, ಹಳ್ಳ, ಕೊಳ್ಳ, ತೊರೆಗಳತ್ತ ಚಲಿಸುವಂತೆ ಮಾಡಲೂ ನಿಮ್ಮಿಂದ ಸಾಧ್ಯವಿಲ್ಲವೇ ? ಈ ಪ್ರಶ್ನೆ ಬಂದು ಹೋದ, ಈಗಿರುವ ಮತ್ತು ಮುಂದೆ ಬರುವ ಎಲ್ಲಾ ಸರ್ಕಾರಗಳಿಗೂ ಅನ್ವಯ.
ಹೈ ಟೆನ್ಷನ್ ಪವರ್ ಲೈನ್ ಕೆಳಗೆ ಮನೆಗಳನ್ನು ನಿರ್ಮಿಸಲು ಅವಕಾಶವಿಲ್ಲ. ಇದು ಕಾನೂನು. ಬೆಂಗಳೂರಿನಲ್ಲಿ ಹೈ ಟೆನ್ಷನ್ ಪವರ್ ಲೈನ್ ಗಳ ಕೆಳಗೆ ಅದೆಷ್ಟು ಕಟ್ಟಡಗಳಿವೆ ಎಂಬುದನ್ನೊಮ್ಮೆ ಗ್ರೇಟರ್ ಬೆಂಗಳೂರು ಮಾಡಲು ಹೊರಟಿರುವ ಸರ್ಕಾರ ಒಮ್ಮೆ ಸ್ಟಾಕ್ ತೆಗೆದುಕೊಳ್ಳಲಿ. ಪ್ರಾಯಶಃ ಕಾನೂನಿನ ಪ್ರಕಾರ ಬೆಂಗಳೂರಿನ ಅರ್ಧ ಮನೆಗಳನ್ನು ಕೆಡವಬೇಕಾದೀತು.
ಅಂತೆಯೇ ವಾಟರ್ ಬಾಡೀಸ್ ಯಾವುದೇ ಕಾರಣಕ್ಕೆ ಒತ್ತುವರಿ ಮಾಡುವಂತಿಲ್ಲ. ಇದೂ ಕೂಡಾ ಕಾನೂನು. ಅದರನ್ವಯ ಬೆಂಗಳೂರಿನ ಕೆರೆ ಕಟ್ಟೆಗಳಲ್ಲಿ ನಿರ್ಮಾಣಗೊಂಡಿರುವ ಎಷ್ಟು ಬಡಾವಣೆಗಳನ್ನು ರಸ್ತೆಗಳನ್ನು ಕೆಡವಬೇಕಾದೀತು ಯೋಚಿಸಿ…
ಬೇಸಿಕ್ ಕಸ ವಿಲೇವಾರಿ, ಹಳ್ಳಗಳಿಲ್ಲದ ರಸ್ತೆಗಳು, ಸುರಕ್ಷಿತ ಹಾಗೂ ಗುಣಮಟ್ಟದ ವಿದ್ಯುತ್ ಹಾಗೂ ನೀರು, ಸಮರ್ಪಕ ಡ್ರೈನೇಜ್ ಸಿಸ್ಟಂ ಕೂಡಾ ಇನ್ನೂ ಬೆಂಗಳೂರಿಗರಿಗೆ ಕನಸಾಗಿದೆ. ಹೀಗಿರುವಾಗ ಯಾವ ಅರ್ಥದಲ್ಲಿ ಗ್ರೇಟರ್ ಬೆಂಗಳೂರು ಮಾಡುತ್ತಿರುವುದು?
ಹಿಂದೆ ಬೆಂಗಳೂರು ಮಹಾನಗರ ಪಾಲಿಕೆ ಹೋಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಿದಿರಲ್ಲಾ ಅದೇ ಮಾದರಿಯಲ್ಲಿ ಇದೀಗ ಇನ್ನಷ್ಟು ಹೆಚ್ಚಿನ, ಬೆಂಗಳೂರಿನ ಹೊರವಲಯದ ಪ್ರದೇಶಗಳನ್ನು ಬೆಂಗಳೂರಿನ ತೆಕ್ಕೆಗೆ ತೆಗೆದುಕೊಂಡು ಅದನ್ನು ಗ್ರೇಟರ್ ಬೆಂಗಳೂರು ಎನ್ನುತ್ತಿದ್ದೀರಿ ತಾನೆ? ಇದೂ ಒಂದರ್ಥದಲ್ಲಿ ಸಾಮ್ರಾಜ್ಯ ವಿಸ್ತರಣೆಯೇ..!
ಬೆಂಗಳೂರಿನಲ್ಲಿ ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ ಇದ್ದದ್ದು ೧೯೭೬ ರಲ್ಲಿ ಬೆಂಗಳೂರು ಡೆವಲ್ಪ್ಮೆಂಟ್ ಅಥಾರಿಟಿ ಎಂದು ಮರು ನಾಮಕರಣ ಮಾಡಿದಾಗ ಪ್ರೊ ಎಂಡಿಎನ್ ಅದರ ವಿರುದ್ಧ ಪ್ರೊಟೆಸ್ಟ್ ಮಾಡಬೇಕು. ನಮಗೆ ಬೇಕಿರುವುದು ಬೆಂಗಳೂರು ಮೈಂಟೆನೆನ್ಸ್ ಅಥಾರಿಟಿ, ಡೆವಲಪ್ಮೆಂಟ್ ಅಲ್ಲಾ ಎಂದು ಹೇಳಿದ್ದರು ಎಂಬುದಾಗಿ ಟಿ ಎನ್ ಸೀತಾರಮ್ ಬರೆದುಕೊಂಡಿದ್ದು ನೆನೆಪಾಗ್ತಿದೆ.
ಈ ಹಿನ್ನೆಲೆಯಲ್ಲಿ ಗ್ರೇಟರ್ ಅಂತಾನಾದ್ರೂ ಅನ್ನಿ,,, ಏನಾದ್ರೂ ಅನ್ನಿ ಬೆಂಗಳೂರು ಮೈಂಟೆನೆನ್ಸ್ ಬಗ್ಗೆ ಒತ್ತು ಕೊಡಿ. ಬೆಂಗಳೂರನ್ನು ಕನಿಷ್ಠ ಬದುಕಲು ಸಹ್ಯವಾಗಿಸಿ…
ಓವರ್ ಟು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್
– ನಾಗೇಶ್ ಕಾಳೇನಹಳ್ಳಿ, ಹಿರಿಯ ಪತ್ರಕರ್ತರು




