ಕರ್ನಾಟಕ ರಕ್ಷಣಾ ವೇದಿಕೆಯಿಂದ ರಾಜ್ಯದಾದ್ಯಂತ ಮಹಾಸಂಘರ್ಷ ಯಾತ್ರೆ

2 years ago

ಬೆಂಗಳೂರು: ರಾಜ್ಯದಲ್ಲಿ ಮಾರಾಟವಾಗುವ ಎಲ್ಲ ಉತ್ಪನ್ನಗಳ ಮೇಲೆ ಕನ್ನಡದ ಹೆಸರು, ಕನ್ನಡಿಗರಿಗೆ ಏಜೆನ್ಸಿ, ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮಾತ್ರ ಉದ್ಯೋಗ ಎನ್ನುವ ಮೂರು ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆಯಿಂದ ಇಂದು ರಾಜ್ಯದಾದ್ಯಂತ ಮಹಾಸಂಘರ್ಷ ಯಾತ್ರೆ ಆರಂಭಗೊಂಡಿದೆ.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಹಾಸಂಘರ್ಷ ಯಾತ್ರೆಗೆ ಚಾಲನೆ ನೀಡಿದ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಮೂರು ಹಕ್ಕೊತ್ತಾಯಗಳನ್ನು ಈಡೇರುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಮಾರಾಟವಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ 60ರಷ್ಟು ಬರಹಗಳು ಕನ್ನಡದಲ್ಲಿರಬೇಕು. ಅವುಗಳ ತಯಾರಿಕೆಗೆ ಏನನ್ನು ಬಳಸಲಾಗಿದೆ ಎನ್ನುವ ವಿಷಯಗಳು ಕನ್ನಡದಲ್ಲಿ ಕಡ್ಡಾಯವಾಗಿರಬೇಕು ಎಂದು ಆಗ್ರಹಿಸಿದರು.

ಅಂತರರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ (ಐಎಸ್ ಓ) ಉತ್ಪನ್ನಗಳ ಮೇಲೆ ಮುದ್ರಿಸುವ ಭಾಷೆ ಸ್ಥಳೀಯದ್ದೇ ಆಗಿರಬೇಕು, ಸ್ಥಳೀಯ ಜನರು ಓದಿ ಅರ್ಥ ಮಾಡಿಕೊಳ್ಳುವಂಥ ಭಾಷೆ ಆಗಿರಬೇಕು ಎಂದು ಶಿಫಾರಸು ಮಾಡುತ್ತದೆ ಎಂದರು.

ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯು ಟಿ ಓ) ಮಾರ್ಗಸೂಚಿಗಳು ಕೂಡ ಇದನ್ನೇ ಹೇಳುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರದ ಸಂದರ್ಭದಲ್ಲೂ ಉತ್ಪನ್ನಗಳ ಮೇಲಿನ ಬರೆಹಗಳು ಆಮದು ಮಾಡಿಕೊಳ್ಳುವ ದೇಶದ ಭಾಷೆಯಲ್ಲಿರಬೇಕು ಎಂದು ಅದು ಹೇಳುತ್ತದೆ. ಉದಾಹರಣೆಗೆ ಅಮೆರಿಕ ದೇಶವು ಚೀನಾದಿಂದ ಏನನ್ನಾದರೂ ಆಮದು ಮಾಡಿಕೊಳ್ಳುತ್ತಿದ್ದರೆ ಆ ಉತ್ಪನ್ನಗಳ ಮೇಲಿನ ಬರೆಹ ಚೀನೀ ಭಾಷೆಯಲ್ಲಿರಬಾರದು, ಬದಲಾಗಿ ಅಮೆರಿಕದವರಿಗೆ ಅನುಕೂಲವಾಗುವ ಹಾಗೆ ಇಂಗ್ಲಿಷ್ ಭಾಷೆಯಲ್ಲಿರಬೇಕು ಎಂದು ಹೇಳಿದರು.

ಕರ್ನಾಟಕದಲ್ಲಿ ಮಾರಾಟವಾಗುವ ಯಾವುದೇ ರೀತಿಯ ಉತ್ಪನ್ನಗಳ ಮೇಲೆ ಕನ್ನಡದ ಅಕ್ಷರಗಳನ್ನು ಬೂದುಗಾಜಲ್ಲಿ ಹುಡುಕಿದರೂ ಸಿಗುವುದಿಲ್ಲ. ಎಲ್ಲೋ ಬೆರಳೆಣಿಕೆಯ ಕೆಲವು ವಸ್ತುಗಳ ಮೇಲೆ ಕನ್ನಡ ಇರಬಹುದು. ನೂರಕ್ಕೆ 99 ರಷ್ಟು ವಸ್ತುಗಳ ಮೇಲಿನ ಬರೆಹಗಳು ಇಂಗ್ಲಿಷ್ ನಲ್ಲಿವೆ, ಕೆಲವು ವಸ್ತುಗಳ ಮೇಲೆ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ಕನ್ನಡವಿಲ್ಲ. ಹೀಗೇಕೆ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಭಾಗ ಕನ್ನಡವಿರಬೇಕು ಎಂದು ನೀತಿ ರೂಪಿಸಿದ ಹಾಗೆಯೇ ಕರ್ನಾಟಕದಲ್ಲಿ ಮಾರಾಟಗೊಳ್ಳುವ ಉತ್ಪನ್ನಗಳ ಮೇಲೆ ಶೇ. 60ರಷ್ಟು ಕನ್ನಡವಿರಬೇಕು ಎಂಬ ನೀತಿ ರೂಪಿಸಬೇಕು. ಇದನ್ನು ಜಾರಿಗೊಳಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ನಿಯಮ ಉಲ್ಲಂಘಿಸುವ ಉತ್ಪನ್ನಗಳ ಮಾರಾಟವನ್ನು ಕರ್ನಾಟಕದಲ್ಲಿ ನಿಷೇಧಿಸುವಂಥ ಕಾನೂನು ರೂಪಿಸಬೇಕು ಎಂದು  ಆಗ್ರಹಿಸಿದರು.

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಬಗೆಯ ರಾಷ್ಟ್ರೀಯ/ ಖಾಸಗಿ/ ಗ್ರಾಮೀಣ /ಸಹಕಾರಿ ಬ್ಯಾಂಕ್ ಗಳು, ಫೈನಾನ್ಸ್ ಗಳು, ಚಿನ್ನದ ಅಡಮಾನ ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು, ಆರೋಗ್ಯ ವಿಮಾ ಸಂಸ್ಥೆಗಳು ಮತ್ತು ಇತರ ಯಾವುದೇ ಸ್ವರೂಪದ ಹಣಕಾಸು ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ. 100ರಷ್ಟು ಹುದ್ದೆಗಳು ಮತ್ತು ಇತರೆ ಹುದ್ದೆಗಳಲ್ಲಿ ಶೇ. 60ರಷ್ಟು ಹುದ್ದೆಗಳು ಕನ್ನಡಿಗರಿಗೆ ನೀಡಬೇಕು. ಈ ಎಲ್ಲ ಸಂಸ್ಥೆಗಳು ಬಳಸುವ/ಗ್ರಾಹಕರಿಗೆ ನೀಡುವ ಎಲ್ಲ ದಾಖಲೆಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು ಎಂದು ಆಗ್ರಹಿಸಿದರು.

Leave a Reply