ಒಂದು ಚಾರಿತ್ರಿಕ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಇಡೀ ರಾಜ್ಯದ ಒಂದು ಸಾವಿರಕ್ಕೂ ಹೆಚ್ಚು ಬ್ಯಾಂಕ್ ಗಳ ಮುಂದೆ ಇಂದು ಏಕಕಾಲಕ್ಕೆ ಪ್ರತಿಭಟನೆ ನಡೆಸಲಿದೆ. ಯಾವ ಬ್ಯಾಂಕ್ ಗಳಲ್ಲಿ ಕದ್ದುಮುಚ್ಚಿ ಹಿಂದಿದಿವಸ ಆಚರಿಸಲಾಗುತ್ತದೆಯೋ, ಯಾವ ಬ್ಯಾಂಕ್ ಗಳಲ್ಲಿ ಮರಾಮೋಸದಿಂದ ಕನ್ನಡಿಗರ ಹುದ್ದೆಗಳನ್ನು ಕಸಿದು ಹಿಂದಿಯನ್ನರಿಗೆ ಕೊಡಲಾಗಿದೆಯೋ ಅಲ್ಲಿ ಇಂದು ನಮ್ಮ ಪ್ರತಿಭಟನೆಗಳ ಬಿಸಿ ಮುಟ್ಟಲಿದೆ. ಈ ಐತಿಹಾಸಿಕ ಹೋರಾಟಕ್ಕಾಗಿ ರಾಜ್ಯ, ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟಗಳಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಇಂದು ಕರವೇ ಲಕ್ಷಾಂತರ ಸೇನಾನಿಗಳು ಏಕಕಾಲಕ್ಕೆ ರಾಜ್ಯದಾದ್ಯಂತ ಬೀದಿಗಿಳಿದು ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಿದ್ದಾರೆ.
ಬ್ಯಾಂಕುಗಳ ಮುಂದೆ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಒಂದು ಸ್ಪಷ್ಟ ಕಾರಣವಿದೆ. ಇಡೀ ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕರ್ನಾಟಕ ಕೊಟ್ಟ ಕೊಡುಗೆ ಅಪಾರ. ಆದರೆ ನಾವು ಕಟ್ಟಿದ ಬ್ಯಾಂಕುಗಳು ಈಗ ನಮ್ಮದಾಗಿ ಉಳಿದಿಲ್ಲ. ಬ್ಯಾಂಕುಗಳ ವಿಲೀನದ ಹೆಸರಲ್ಲಿ ನಮ್ಮ ಹಿರಿಯರು ಕಟ್ಟಿದ ಬ್ಯಾಂಕುಗಳ ಹೆಸರು ಇತಿಹಾಸ ಸೇರಿದೆ. ಬ್ಯಾಂಕ್ ಕೇವಲ ಭಾವನಾತ್ಮಕ ವಿಷಯವೂ ಅಲ್ಲ, ಅದರ ಸುತ್ತ ನಮ್ಮ ಬದುಕು ಹೆಣೆದುಕೊಂಡಿದೆ. ಬ್ಯಾಂಕಿನಲ್ಲಿ ಕುಳಿತ ಅಧಿಕಾರಿ ನಮ್ಮವನಲ್ಲದಿದ್ದರೆ ಅದರ ಸೌಲಭ್ಯಗಳೂ ನಮಗೆ ಅಷ್ಟು ಸುಲಭಕ್ಕೆ ದಕ್ಕುವುದಿಲ್ಲ. ಹಿಂದಿ ಬಾರದ ಗ್ರಾಮೀಣ ಭಾಗದ ಕನ್ನಡಿಗರು ಹಿಂದಿಯನ್ ಅಧಿಕಾರಿಗಳ ಜತೆ ಹೆಣಗಲಾಗದೆ ಅವಕಾಶ ವಂಚಿತರಾಗುತ್ತಿದ್ದಾರೆ. ಬ್ಯಾಂಕಿನಿಂದ ಕನ್ನಡ ದೂರವಾದಷ್ಟು ಬ್ಯಾಂಕ್ ಸೌಲಭ್ಯಗಳಿಂದ ಕನ್ನಡಿಗರು ವಂಚಿತರಾಗುತ್ತಿದ್ದಾರೆ. ಈ ಕಾರಣಗಳಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಬ್ಯಾಂಕುಗಳ ಮುಂದೆ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ.
ರೈಲ್ವೆಯ ನಾಲ್ಕೂವರೆ ಸಾವಿರ ಡಿ ದರ್ಜೆ ಹುದ್ದೆಗಳಿಗೆ ಬಿಹಾರಿ, ಯುಪಿವಾಲಾಗಳನ್ನು ತುಂಬಲು ಹೊರಟಾಗ ಉಗ್ರಸ್ವರೂಪದ ಹೋರಾಟ ಸಂಘಟಿಸಿದ್ದು ಕರವೇ. ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಗಳಲ್ಲಿ ನಡೆಯುತ್ತಿದ್ದ ಪರೀಕ್ಷಾಕೇಂದ್ರಗಳಿಗೆ ನುಗ್ಗಿ ಪ್ರತಿಭಟಿಸಿ ಪರೀಕ್ಷೆಗಳು ನಡೆಯದಂತೆ ತಡೆದಿದ್ದು ಕರ್ನಾಟಕ ರಕ್ಷಣಾ ವೇದಿಕೆಯ ಕೆಚ್ಚೆದೆಯ ಹೋರಾಟಗಾರರು. ನೂರಾರು ಕೇಸುಗಳು ದಾಖಲಾದವು. ಆದರೆ ಪರೀಕ್ಷೆಗಳು ನಿಂತವು. ಒಕ್ಕೂಟ ಸರ್ಕಾರ ಹಿಂದಿ, ಇಂಗ್ಲಿಷ್ ನಲ್ಲೇ ನಡೆಸುತ್ತಿದ್ದ ಪರೀಕ್ಷೆಗಳನ್ನು ಕನ್ನಡ ಸೇರಿ ಎಲ್ಲ ದೇಶಭಾಷೆಗಳಲ್ಲೂ ನಡೆಸುವ ತೀರ್ಮಾನ ಕೈಗೊಂಡಿತು. ಮುಂದೆ ಪರೀಕ್ಷೆಗಳು ನಡೆದಾಗ ಕನ್ನಡಿಗರಿಗೆ ಆ ಉದ್ಯೋಗಗಳು ದಕ್ಕಿದವು. ಇದು ಪ್ರಾಮಾಣಿಕ ಹೋರಾಟದ ಪ್ರತಿಫಲ.
ನಮ್ಮ ಮೆಟ್ರೋದಲ್ಲಿ ಹಿಂದಿಯನ್ನು ತಂದು ತುರುಕಿದಾಗ ಅದರ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಹಲವು ಹಂತಗಳ ಶಾಂತಿಯುತ ಹೋರಾಟಕ್ಕೆ ಸರ್ಕಾರ ಮಣಿಯದೇ ಇದ್ದಾಗ, ಒಂದೇ ದಿನ ಬೆಳಗಿನ ಜಾವ ಸುಮಾರು ಮೂವತ್ತಕ್ಕೂ ಹೆಚ್ಚು ಕರವೇ ತಂಡಗಳು ಎಲ್ಲ ನಿಲ್ದಾಣಗಳಲ್ಲಿ ಏಕಕಾಲಕ್ಕೆ ಪ್ರತ್ಯಕ್ಷವಾಗಿ ಎಲ್ಲ ಹಿಂದಿ ಫಲಕಗಳಿಗೆ ಮಸಿಬಳಿದು ಪ್ರತಿಭಟನೆ ನಡೆಸಿದವು. ಅದರ ಪರಿಣಾಮವಾಗಿ ಸರ್ಕಾರ ಹಿಂದಿಬಳಕೆಯನ್ನು ನಿಲ್ಲಿಸಿತು. ಒಂದು ವೇಳೆ ನಾವು ನಮ್ಮ ಮೆಟ್ರೋದಲ್ಲಿ ಹಿಂದಿಯನ್ನು ಬಿಟ್ಟುಕೊಂಡಿದ್ದರೆ ಇಷ್ಟು ಹೊತ್ತಿಗಾಗಲೇ ಬಿಎಂಟಿಸಿ, ಕೆಎಸ್ ಆರ್ ಟಿಸಿ, ಬಿಬಿಎಂಪಿ ಹೀಗೆ ಎಲ್ಲ ಕಡೆಗಳಲ್ಲೂ ಹಿಂದಿ ಬಂದು ಕುಳಿತಿರುತ್ತಿತ್ತು.
ಹಿಂದಿ ಹೇರಿಕೆ ಎಂಬುದು ಇದೇ ರೀತಿ ಮಹಾಮೋಸದ ಕುತಂತ್ರ. ಅವರು ಟೆಸ್ಟ್ ಡೋಸ್ ಕೊಡುತ್ತಾರೆ, ನೀವು ಸುಮ್ಮನಿದ್ದರೆ ಎಲ್ಲ ಕಡೆ ತುರುಕಿಕೊಂಡು ಬರುತ್ತಾರೆ. 2014ಕ್ಕೂ ಮುನ್ನ ಬ್ಯಾಂಕಿಂಗ್ ಉದ್ಯೋಗಗಳನ್ನು ಪಡೆಯುವವರು ಹತ್ತನೇ ತರಗತಿವರೆಗೆ ಕನ್ನಡವನ್ನು ಒಂದು ವಿಷಯವನ್ನಾಗಿ ಕಲಿತಿರಬೇಕಿತ್ತು. ಈ ನಿಯಮವನ್ನು 2014ರಲ್ಲಿ ಕಿತ್ತುಹಾಕಿದ ಪರಿಣಾಮವಾಗಿ ಕಳೆದ ಏಳು ವರ್ಷಗಳಲ್ಲಿ ಸುಮಾರು 21,000 ಬ್ಯಾಂಕಿಂಗ್ ಹುದ್ದೆಗಳ ಪೈಕಿ 19,000ಕ್ಕೂ ಹೆಚ್ಚು ಹುದ್ದೆಗಳು ಹಿಂದಿಯನ್ನರು ಮತ್ತು ಇತರ ಭಾಷಿಕರ ಪಾಲಾಗಿವೆ. ಕನ್ನಡದ ಮಕ್ಕಳಿಗೆ ಕರ್ನಾಟಕದಲ್ಲೇ ಉದ್ಯೋಗವಿಲ್ಲ. ಇದನ್ನು ನಾವು ಎಷ್ಟು ದಿನ ಸಹಿಸಿಕೊಳ್ಳುವುದು?
ಇಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಎಲ್ಲ ಶಾಸಕರು, ಸಂಸದರಿಗೆ ನಮ್ಮ ಹಕ್ಕೊತ್ತಾಯಗಳ ಆಗ್ರಹಪತ್ರಗಳನ್ನು ನೀಡಲಿದ್ದಾರೆ. ನಮ್ಮ ಧ್ವನಿಯನ್ನು ಅವರು ಶಾಸನಸಭೆಗಳಲ್ಲಿ ಮೊಳಗಿಸಬೇಕು ಎಂಬುದು ನಮ್ಮ ಆಗ್ರಹ. ಹಿಂದಿಯನ್ನು ರಾಜಭಾಷೆಯನ್ನಾಗಿ ಕಾಣುವ ಭಾರತಸಂವಿಧಾನದ 343ನೇ ಪರಿಚ್ಛೇದದಿಂದ 351ನೇ ಪರಿಚ್ಛೇದದವರೆಗೆ ತಿದ್ದುಪಡಿಯಾಗಬೇಕು. ಕನ್ನಡಕ್ಕೂ ಒಕ್ಕೂಟ ಸರ್ಕಾರದ ಆಡಳಿತ ಭಾಷೆಯ ಸ್ಥಾನಮಾನ ದೊರೆಯಬೇಕು. ಹಿಂದಿಗೆ ನೀಡಲಾಗಿರುವ ಎಲ್ಲ ರೀತಿಯ ಹೆಚ್ಚುಗಾರಿಕೆಯನ್ನು ನಿಲ್ಲಿಸಬೇಕು. ಇದು ನಮ್ಮ ಆಗ್ರಹ.
ಬೆಳಿಗ್ಗೆ ಹತ್ತು ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂಬ ಟ್ವಿಟರ್ ಆಂದೋಲನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕರೆ ನೀಡಿದೆ. ಕರವೇ ಹೋರಾಟ ನ್ಯಾಯಯುತವಾಗಿದೆ ಎಂದು ನಿಮಗೆ ಅನಿಸಿದರೆ ದಯಮಾಡಿ ಟ್ವಿಟರ್, ಫೇಸ್ ಬುಕ್ ಗಳಲ್ಲಿ ಈ ಹ್ಯಾಶ್ ಟ್ಯಾಗ್ ಗಳನ್ನು ಬಳಸಿ ಎಷ್ಟು ಸಾಧ್ಯವೋ ಅಷ್ಟು ಬರೆಯಿರಿ. ಕನ್ನಡಿಗರ ಧ್ವನಿ ದಿಲ್ಲಿಗೆ ತಲುಪಲಿ. ಬೆಳಿಗ್ಗೆ ಹತ್ತು ಗಂಟೆಯಿಂದ ಕ್ಲಬ್ ಹೌಸ್ ನ ಕರ್ನಾಟಕ ರಕ್ಷಣಾ ವೇದಿಕೆ ಗುಂಪಿನಿಂದ ಸಂಜೆಯ ವರೆಗೆ ಸತತ ಚರ್ಚೆ ಇರುತ್ತದೆ. ಹಾಗೆಯೇ ಇವತ್ತಿನ ಸಾವಿರಾರು ಪ್ರತಿಭಟನೆಗಳ ಲೈವ್ ಕಮೆಂಟರಿ ಕೂಡ ಇರುತ್ತದೆ. ಅದರಲ್ಲೂ ತಪ್ಪದೇ ಪಾಲ್ಗೊಳ್ಳಿ.
ಕೆಳಗಿನ ಚಿತ್ರ ಗಮನಿಸಿ, ಇದು ನಿಜವಾದ ಭಾರತ. ಈ ಎಲ್ಲ ಅಕ್ಷರಗಳೂ ಅಳಿಸಿಹೋಗಿ ಹಿಂದಿಯೊಂದೇ ಆಗುವುದು ಎಷ್ಟು ಸರಿ? ಬನ್ನಿ, ಹಿಂದಿ ಸಾಮ್ರಾಜ್ಯಶಾಹಿಗಳ ಹುನ್ನಾರವನ್ನು ವಿಫಲಗೊಳಿಸೋಣ. ಸದೃಢ ಭಾಷಾಭಾರತವನ್ನು ನಿರ್ಮಿಸೋಣ. ದೇಶದ ಐಕ್ಯತೆಯನ್ನು ಕಾಪಾಡೋಣ.
– ದಿನೇಶ್ ಕುಮಾರ್ ಎಸ್.ಸಿ., ಮುಖ್ಯಸ್ಥರು, ಸಾಮಾಜಿಕ ಜಾಲತಾಣ, ಕರ್ನಾಟಕ ರಕ್ಷಣಾ ವೇದಿಕೆ




