ಬೆಂಗಳೂರು: ಟೆಲಿಗ್ರಾಂ, ವಾಟ್ಸ್ ಅಪ್ ಮೊದಲಾದ ಸಾಮಾಜಿಕ ಜಾಲತಾಣಗಳ ಮೂಲಕ ನಿರುದ್ಯೋಗಿಗಳು, ಉತ್ತಮ ಉದ್ಯೋಗ ಹಾಗೂ ಅರೆಕಾಲಿಕ ಉದ್ಯೋಗ ಗಿಟ್ಟಿಸಲು ಯತ್ನಿಸುತ್ತಿರುವರನ್ನು ಸಂಪರ್ಕಿಸಿ ವಂಚಿಸುತ್ತಿದ್ದ ಗ್ಯಾಂಗ್ ಒಂದು ಈ ಕೃತ್ಯದಿಂದ ಬರೋಬ್ಬರಿ 158.94 ಕೋಟಿ ರೂಪಾಯಿ ಸಂಗ್ರಹಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ವಂಚನೆ ಕುರಿತು ಸಲ್ಲಿಕೆಯಾದ ಹಲವು ದೂರುಗಳ ಪ್ರಕರಣಗಳನ್ನು ಭೇದಿಸಿದ ಬೆಂಗಳೂರು ಪೊಲೀಸರು ಈ ಸಂಬಂಧ 11 ಖದೀಮರನ್ನು ಬಂಧಿಸಿ ಅವರಿಂದ ಅನೇಕ ದಾಖಲೆಗಳು, ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 158.94 ಕೋಟಿ ರೂ. ಮೊತ್ತಕ್ಕೂ ಅಧಿಕ ವಂಚನೆ ನಡೆಸಿರುವುದನ್ನು ನಗರ ಪೊಲೀಸರು ಪತ್ತೆಹಚ್ಚಿದ್ದಾರೆ.
ಈ ತಂಡದಲ್ಲಿದ್ದ ಅಮೀರ್, ಇನಾಯತ್, ನಯಾಜ್, ಮಿಥುಲ್, ಸತೀಶ್, ನಯನರಾಜ್, ಖರ್ಬಾಸ್ ಹಾಗೂ ತೆಲಂಗಾಣದ ಇಬ್ಬರು, ಹೈದರಾಬಾದ್ ನ ಮೂವರು, ಮಹಾರಾಷ್ಟ್ರದ ಇಬ್ಬರು ಸೇರಿ 11 ಖದೀಮರು ಬಂಧಿತರಲ್ಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಗ್ಯಾಂಗ್ ಕೇವಲ ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಕಾರ್ಯ ನಿರ್ವಹಿಸಿದೆ. ಜಾಲತಾಣಗಳ ಮೂಲಕ ಉದ್ಯೋಗ ಬೇಟೆಯಲ್ಲಿರುವರನ್ನು ಸಂಪರ್ಕಿಸಿ ಟೋಪಿ ಹಾಕಿದೆ. ಈ ಕುರಿತಂತೆ 28 ರಾಜ್ಯಗಳಿಂದ ಒಟ್ಟು 2143 ಪ್ರಕರಣಗಳು ಎನ್ ಸಿಆರ್ ಪಿ ಪೋರ್ಟಲ್ನಲ್ಲಿ ದಾಖಲಾಗಿದ್ದರೆ, ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 265 ಪ್ರಕರಣಗಳು, ನಗರದಲ್ಲಿ ವಿವಿಧ 14 ಪೊಲೀಸ್ ಠಾಣೆಗಳಿಂದ ಒಟ್ಟು 135 ಪ್ರಕರಣಗಳು ದಾಖಲಾಗಿರುತ್ತವೆ ಎಂದರು.
ಈ ಗ್ಯಾಂಗ್ ಬರೋಬ್ಬರಿ 2,143 ಪ್ರಕರಣಗಳಿಂದ 158.94 ಕೋಟಿ ರೂ.ಗೂ ಅಧಿಕ ಮೊತ್ತದ ಹಣ ವಂಚನೆ ಮಾಡಿದೆ. ಸಾರ್ವಜನಿಕರಿಂದ ವಂಚಿಸಿದ್ದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ ಬ್ಯಾಂಕ್ ಖಾತೆಗಳ ಪೈಕಿ ಈಗಾಗಲೇ 30 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದ್ದು, ಫ್ರೀಜ್ ಮಾಡಲಾಗಿರುವ ಮೊತ್ತ 62,83,300 ರೂ.ಗಳಾಗಿರುತ್ತದೆ ಎಂದರು.
ಅಲ್ಲದೆ ಕೃತಕ್ಕೆ ಬಳಸಿದ್ದ ವಿವಿಧ ಕಂಪನಿಯ 11 ಮೊಬೈಲ್ಗಳು 2 ಲ್ಯಾಪ್ಟಾಪ್ಗಳು, 15 ಸಿಮ್ ಕಾರ್ಡ್ಗಳು ಮತ್ತು 3 ಬ್ಯಾಂಕ್ ಚೆಕ್ ಬುಕ್ಗಳು ಹಾಗೂ ಇತರೇ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಆರೋಪಿಗಳು 2,143 ಅಕೌಂಟ್ ಗಳಿಂದ 158.94 ಕೋಟಿ ರೂ.ಗೂ ಅಧಿಕ ಹಣ ಎಗರಿಸಿದ್ದರು. ಸದ್ಯ ಸೈಬರ್ ಪೊಲೀಸರು 30 ಅಕೌಂಟ್ ಫ್ರೀಜ್ ಮಾಡಿದ್ದಾರೆ. 62.83 ಲಕ್ಷ ರೂ.ಗಳು ಬೆಂಗಳೂರು ಪೊಲೀಸರಿಂದ ಫ್ರೀಜ್ ಆಗಿದೆ. ಮನೆಯಿಂದಲೇ ಕೆಲಸ ಮಾಡಿ ದಿನಕ್ಕೆ ಸಾವಿರಾರು ರೂ. ಗಳಿಸಿ ಎಂದು ಈ ಗ್ಯಾಂಗ್ ನಂಬಿಸುತ್ತಿತ್ತು.
ಇನ್ಸ್ಟಾಗ್ರಾಂ ಅಕೌಂಟ್ ಗೆ ಲಿಂಕ್ ಕಳಿಸಿ ನಂತರ ಹಣ ಎಗರಿಸುತ್ತಿದ್ದು ಈ ಸಂಬಂಧ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದರು.




