ಟೋಬಿ, ಜೆನ್ನಿಯಂತಹ “ರಸ್ತೆ ನಕ್ಷತ್ರ”ಗಳ ಬದುಕುಗಳು ಬೆಳ್ಳಿತೆರೆಗೆ ಬರಬೇಕು ಅಂದ್ರೆ ಟೋಬಿ ಗೆಲ್ಲಬೇಕು

3 years ago

breaking, Lives, streetstars like, Toby, Jenny, silver, screen, win

“ನಮ್ಮೊಳಗೊಬ್ಬ ಟೋಬಿ”

ಸಾಮಾಜಿಕವಾದ ಅಸಮಾನತೆಯು ಒಂದು ತಳವರ್ಗದ ಕುಟುಂಬವನ್ನು ಹೇಗೆ “ಕ್ರಿಮಿನಲೈಸ್” ಮಾಡುತ್ತದೆ ಎಂಬುದನ್ನು ಕನ್ನಡದ ಟೋಬಿ ಸಿನೇಮಾ ಮನಮುಟ್ಟುವಂತೆ ಹೇಳುತ್ತದೆ. ನಾವು ಕತೆಗಾರ ಟಿ ಕೆ ದಯಾನಂದ ಅವರ ರಸ್ತೆ ನಕ್ಷತ್ರ ಪುಸ್ತಕವನ್ನು ಓದಿದ ಬಳಿಕ ಅವರ ಟೋಬಿ ಕತೆಯನ್ನು ಸಿನೇಮಾವಾಗಿ ನೋಡಿದರೆ ಅದು ನಿಮ್ಮೂರಿನ ತಳವರ್ಗದ್ದೋ, ತುಳಿಯಲ್ಪಟ್ಟ ಜನರದ್ದೋ ಅಥವಾ ನಿರ್ಲಕ್ಷ್ಯಕ್ಕೊಳಪಟ್ಟ ಕುಟುಂಬದ್ದೇ ಕತೆಯೇನೋ ಅನ್ನಿಸಿಬಿಡುತ್ತದೆ.

ಟೋಬಿ ಒಂದು ಹೊಡಿ ಬಡಿ, ಮಚ್ಚು ಲಾಂಗುಗಳ ಕಮರ್ಷಿಯಲ್ ಸಿನೇಮಾ ಅಷ್ಟೆ ಎಂದು ನಮ್ಮೊಳಗೆ ಭಾವನೆ ಬಂದರೆ ನಮಗೆ ಮಾನವೀಯ ಸಂವೇದನೆಯ ಕೊರತೆ ಇದೆ ಎಂದು ಅರ್ಥ. ಸಿನೇಮಾದಲ್ಲಿ ಟೋಬಿಯ ಜಾತಿಯನ್ನೂ, ಆತ ಅನುಭವಿಸಿದ ಸಾಮಾಜಿಕ ಅಸಮಾನತೆಯನ್ನು ನೇರವಾಗಿ ಹೇಳದೆಯೇ, ಪಾದ್ರಿ ಪಾತ್ರದ ಮೂಲಕ ಹಿಂದೂ ಸಮಾಜದ ಜಾತಿಯನ್ನು ಸೂಚ್ಯವಾಗಿ ಹೇಳಲಾಗಿದೆ.

ಸ್ತ್ರೀವಾದದ ನೆಲೆಯಲ್ಲೂ ಟೋಬಿ ಸಿನೇಮಾವನ್ನು ನೋಡುವುದು ಮುಖ್ಯವಾಗುತ್ತದೆ. ತನ್ನ ಗೆಳತಿ ಸೆಕ್ಸ್ ವರ್ಕರ್ ಎಂದು ಗೊತ್ತಿದ್ದೂ ಮಹಾಕೋಪಿಷ್ಟ, ಓದು ಬರಹ ಇಲ್ಲದ ಟೋಬಿ ಅವಳ ಜೊತೆ ಹೇಗೆ ನಡೆದುಕೊಳ್ಳುತ್ತಾನೆ ಎನ್ನುವ ದೃಶ್ಯಗಳು ಸಮಾಜಕ್ಕೊಂದು ಸಂದೇಶವಾಗಿದೆ. ಸೆಕ್ಸ್ ವರ್ಕರ್ ಗಳಿಗೆ ಪ್ರೇಮಿಯೋ, ಸಂಗಾತಿಯೋ ಇರುತ್ತಾರೆ. ಅಂತಹ ಪ್ರೇಮಿಯೇ ಎಷ್ಟೋ ಬಾರಿ ಸೆಕ್ಸ್ ವರ್ಕರ್ ಮೇಲೆ ಹಣಕ್ಕಾಗಿ ದೌರ್ಜನ್ಯ ನಡೆಸುತ್ತಾರೆ. ಪೊಲೀಸರೂ ಸೆಕ್ಸ್ ವರ್ಕರ್ ಗಳನ್ನು ಬೇರೆಬೇರೆ ಕಾರಣಕ್ಕೆ ದುರುಪಯೋಗ ಮಾಡುತ್ತಾರೆ. ಇವೆಲ್ಲವನ್ನು ಮೀರಿ ಸೆಕ್ಸ್ ವರ್ಕರ್ ಗಳನ್ನು ಮನುಷ್ಯರಂತೆ ನೋಡುವುದು ಹೇಗೆ ಎನ್ನುವುದನ್ನು ಟೋಬಿ ಸಿನೇಮಾ ನಮಗೆ ಕಲಿಸುತ್ತದೆ. ಇಡೀ ಸಿನೇಮಾದಲ್ಲಿ ವೇಶ್ಯಾವೃತ್ತಿಯನ್ನು ಅಶ್ಲೀಲತೆ(?)ಯ ಸೋಂಕಿಲ್ಲದೆ, ಮಕ್ಕಳೂ ಸಂವಾದ ಮಾಡಬಹುದಾದಷ್ಟು ಸಂವೇದನೆಯಿಂದ ದೃಶ್ಯಕಾವ್ಯವನ್ನು ಹೆಣೆಯಲಾಗಿದೆ. ಸಂವೇದನಾಶೀಲ ನಟಿ ಚೈತ್ರ ಆಚಾರ್, ಸಂಯುಕ್ತ ಹೊರನಾಡು ಜೊತೆಗೆ ಪುಟ್ಟ ಹುಡುಗಿ ಇದಕ್ಕೆ ನ್ಯಾಯ ಒದಗಿಸಿದ್ದಾರೆ.

“ನಾನು ಮೈಮಾರಿ ಬದುಕುವವಳು. ಮದುವೆ ಆಗೋಲ್ಲ” ಎಂದು ಸೆಕ್ಸ್ ವರ್ಕರ್ ಹೇಳುವಾಗ “ಏನಾದರೂ ಮಾರ್ಕೋ. ಟೋಬಿಯನ್ನು ಮದುವೆಯಾಗು” ಎಂದು ಹೇಳುವ ಪುಟ್ಟ ಮಗು ಮತ್ತದರ ನಟನೆ ನಿಮ್ಮ ಸ್ಮೃತಿಪಟಲದಿಂದ ಮರೆಯಾಗಲು ಸಾಧ್ಯವೇ ಇಲ್ಲ. ಸಮಾಜದ ಅಸಮಾನತೆಗೆ ಸಿಲುಕುವ ಕುಟುಂಬವೊಂದರ ಕತೆಯನ್ನು ಮಾಸ್ ಚಿತ್ರವನ್ನಾಗಿಸುವುದು ಸುಲಭವಲ್ಲ. ಅಂತಹ ಪ್ರಯತ್ನದಲ್ಲಿ ಟಿ ಕೆ ದಯಾನಂದ್ ಯಶಸ್ವಿಯಾಗಿದ್ದಾರೆ. ಇನ್ನಷ್ಟು, ಮತ್ತಷ್ಟು ಟೋಬಿ, ಜೆನ್ನಿಯಂತಹ “ರಸ್ತೆ ನಕ್ಷತ್ರ”ಗಳ ಬದುಕುಗಳು ಬೆಳ್ಳಿತೆರೆಗೆ ಬರಬೇಕು ಅಂದ್ರೆ ಟೋಬಿ ಗೆಲ್ಲಬೇಕು.

  • ನವೀನ್ ಸೂರಿಂಜೆ, ಪತ್ರಕರ್ತರು

Leave a Reply